ಕಿಕ್ಕೇರಿ [ಸೆ.19]:  ಪಿಎಲ್‌ ಡಿ ಬ್ಯಾಂಕ್‌ ನಿರ್ದೇಶಕ ಬಿ.ಪಿ. ನಾಗೇಶ್‌ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಬ್ಯಾಂಕ್‌ ಆಡಳಿತ ಮಂಡಳಿ 5 ವರ್ಷ ಅವಧಿಯದ್ದಾಗಿದೆ. ಆದರೆ, ನಿರ್ದೇಶಕರಿಗೆ ಇಲ್ಲಿ ಬೆಲೆಯೇ ಇಲ್ಲವಾಗಿದೆ. 

ಈಗಾಗಲೇ 4.5 ವರ್ಷ ಅವಧಿ ಮುಗಿದಿದೆ. ಉಳಿಕೆ 6 ತಿಂಗಳು ಅವಧಿ ಇದೆ. ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆದಿಲ್ಲ. ಪರಿಣಾಮ ಗ್ರಾಹಕರು, ರೈತರು, ಷೇರುದಾರರು ಬ್ಯಾಂಕಿನ ವ್ಯವಸ್ಥೆ ವಿರುದ್ಧ ಸಿಟ್ಟಿಗೇಳುವಂತಾಗಿದೆ. 

ಈ ಎಲ್ಲ ಅವಸಾನದ ಸ್ಥಿತಿಗೆ ಬ್ಯಾಂಕಿನ ಕಾರ್ಯದರ್ಶಿ ಹಾಗೂ ಅಧ್ಯಕ್ಷರು ಕಾರಣರಾಗಿದ್ದಾರೆ ಎಂದು ಅವರು ದೂರಿದ್ದಾರೆ. ತಮ್ಮ ಅಧಿಕಾರವನ್ನು ದುರುಪಯೋಗಪಡಿಸಿಕೊಂಡು ಸಾರ್ವಜನಿಕರಿಗೆ ತೊಂದರೆ ನೀಡುತ್ತಿದ್ದಾರೆ. ಬ್ಯಾಂಕಿನ ಸ್ವತ್ತಿನ ಮಳಿಗೆಯನ್ನು ಯಾರಿಗೂ ತಿಳಿಸದೆ ಕಡಿಮೆ ಬೆಲೆಗೆ ತಮಗೆ ಬೇಕಿರುವವರಿಗೆ ಬಾಡಿಗೆ ನೀಡಿದ್ದಾರೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಕ್ಲಿಕ್ಕಿಸಿ

ಬ್ಯಾಂಕಿನಲ್ಲಿ ಹಲವಾರು ಸಮಸ್ಯೆಗಳು ಎದ್ದು ಕಾಣುತ್ತಿವೆ. ಬ್ಯಾಂಕಿನ ನಿಯಮ ನಿಬಂಧನೆಗಳನ್ನು ಗಾಳಿಗೆ ತೂರಿದ್ದಾರೆ. ಸಭೆಗಳು ನಾಮಕಾವಸ್ಥೆಗಾಗಿ ಕಾಟಾಚಾರಕ್ಕೆ ನಡೆಯುವಂತಾಗಿದೆ. ನಿರ್ದೇಶಕರ ಮನವಿಗೆ ಯಾವುದೇ ಸ್ಪಂದನೆ ಇಲ್ಲ. ಇದರಿಂದ ಬೇಸತ್ತು ರಾಜಿನಾಮೆ ನೀಡಿರುವುದಾಗಿ ತಿಳಿಸಿದ್ದಾರೆ.