ಕೆಜಿಎಫ್‌ ಮೀಸಲು ವಿಧಾನಸಭಾ ಕ್ಷೇತ್ರದ ಬಿಜೆಪಿ ಟಿಕೆಟ್‌ ಸ್ಥಳೀಯ ಅಭ್ಯರ್ಥಿ ವಿ.ಮೋಹನ್‌ ಕೃಷ್ಣಗೆ ನೀಡಬೇಕೆಂದು ಆಗ್ರಹಿಸಿ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಆಕ್ರೋಶ ಹೊರಹಾಕಿದರು.

ಕೆಜಿಎಫ್‌ : ಕೆಜಿಎಫ್‌ ಮೀಸಲು ವಿಧಾನಸಭಾ ಕ್ಷೇತ್ರದ ಬಿಜೆಪಿ ಟಿಕೆಟ್‌ ಸ್ಥಳೀಯ ಅಭ್ಯರ್ಥಿ ವಿ.ಮೋಹನ್‌ ಕೃಷ್ಣಗೆ ನೀಡಬೇಕೆಂದು ಆಗ್ರಹಿಸಿ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಆಕ್ರೋಶ ಹೊರಹಾಕಿದರು.

ಕೆಜಿಎಫ್‌ ನಗರದ ಬಿಜೆಪಿ ಕಚೇರಿ ಮುಂದೆ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಸೇರಿದಂತೆ 500ಕ್ಕೂ ಹೆಚ್ಚು ಕಾರ್ಯಕರ್ತರು ಸ್ಥಳೀಯ ಅಭ್ಯರ್ಥಿ ವಿ.ಮೋಹನ್‌ ಕೃಷ್ಣಗೆ ಬಿಜೆಪಿ ಟಿಕೆಟ್‌ ನೀಡಬೇಕೆಂದು ಆಗ್ರಹಿಸಿದರು.

ಪಕ್ಷ ಸಂಘಟನೆ ಮಾಡಿದ ನಾಯಕ

ಕೆಜಿಎಫ್‌ ತಾಲೂಕಿನ ಮಣ್ಣಿನ ಮಗನ ಮಗ ವಿ.ಮೋಹನ್‌ ಕೃಷ್ಣ ಸಮಾಜ ಸೇವೆಯ ಹೆಸರಿನಲ್ಲಿ ಸುಮಾರು 4-5 ವರ್ಷದಿಂದ ಸಮಾಜ ಸೇವೆ ಮಾಡುತ್ತಾ, ಬಿಜೆಪಿ ಪಕ್ಷ ಸಂಘಟನೆಗೆ ಪ್ರಾಮುಖ್ಯತೆ ನೀಡಿ ಸಾವಿರಾರೂ ಕಾರ್ಯಕರ್ತರನ್ನು ಸಂಘಟನೆ ಮಾಡಿದ್ದಾರೆ, ಇಂತಹವರನ್ನು ಬಿಜೆಪಿ ಪಕ್ಷ ಗುರುತಿಸಿ ಟಿಕೆಟ್‌ ನೀಡಿದಾಗ ಮಾತ್ರ ಕಾಂಗ್ರೆಸ್‌ ವಿರುದ್ಧ ಗೆದ್ದು ಬಿಜೆಪಿ ಬಾವುಟ ಹಾರಿಸಲು ಸಾಧ್ಯ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬೆಂಗಳೂರು ವ್ಯಕ್ತಿಗೆ ಟಿಕೆಟ್‌ ಬೇಡ

ಕೆಜಿಎಫ್‌ ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷತೀತವಾಗಿ ಈ ಭಾರಿ ಸ್ಥಳೀಯರನ್ನೇ ಶಾಸಕರನ್ನಾಗಿ ಆಯ್ಕೆ ಮಾಡಿಕೊಳ್ಳಬೇಕೆಂಬ ಕೂಗು ಎದಿದ್ದು, ಇಂತಹ ಸಂದರ್ಭದಲ್ಲಿ ಬಿಜೆಪಿ ಪಕ್ಷ ಬೆಂಗಳೂರು ಮೂಲದ ವೇಲು ನಾಯಕರ್‌ಗೆ (ವಲಸಿಗರಿಗೆ) ಟಿಕೆಟ್‌ ನೀಡಲು ಮುಂದಾಗಿರುವುದು ಯಾವ ಸಿದ್ಧಾಂತ ಎಂದು ಬಿಜೆಪಿ ಕಾರ್ಯಕರ್ತರು ಪ್ರಶ್ನಿಸಿದರು. ಕೆಜಿಎಫ್‌ ಕ್ಷೇತ್ರದ ಬಿಜೆಪಿ ರಾಜಕೀಯ ಲೆಕ್ಕಾಚಾರಗಳು ಸಂಪೂರ್ಣವಾಗಿ ಜಿಲ್ಲಾ ಉಸ್ತುವರಿ ಸಚಿವ ಮುನಿರತ್ನರಿಗೆ ತಿಳಿದಿದ್ದರು, ಏಕಾಏಕಿಯಾಗಿ ತಮ್ಮ ಆಪ್ತನನ್ನು ಬೆಂಗಳೂರಿನಿಂದ ಕೆಜಿಎಫ್‌ ಕ್ಷೇತ್ರಕ್ಕೆ ಕರೆತಂದಿರುವುದು ಯಾವ ನ್ಯಾಯ ಎಂದು ಪ್ರಶ್ನಿಸಿದರು.

ಬೆಂಗಳೂರಿನ ಬಿಬಿಎಂಪಿ ಸದಸ್ಯ ವೇಲು ನಾಯಕರ್‌ರನ್ನು ರಾತ್ರೋರಾತ್ರಿ ಕೆಜಿಎಫ್‌ ಕ್ಷೇತ್ರದ ಬಿಜೆಪಿ ಟಿಕೆಟ್‌ ಆಕಾಂಕ್ಷಿ ಎಂದು ಕರೆದಂದಿದ್ದು ಯಾಕೆ ಎಂದು ನಗರ ಘಟಕ ಅಧ್ಯಕ್ಷ ಕಮಲ್‌ನಾಥ್‌ ಹಾಗೂ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುರೇಶ್‌ ನಾರಾಯಣ್‌ ಕುಟ್ಟಿರನ್ನು ತರಾಟೆಗೆ ತೆಗೆದುಕೊಂಡರು.

ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧೆ

ಬಿಜೆಪಿ ಪಕ್ಷವು ಸಮಾಜ ಸೇವಕ ವಿ.ಮೋಹನ್‌ ಕೃಷ್ಣರಿಗೆ ಟಿಕೆಟ್‌ ನೀಡದಿದ್ದರೆ ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆಲ್ಲಿಸಿಕೊಳ್ಳುತ್ತೇವೆಂದು ಬಿಜೆಪಿ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು.

ಸರ್ಕಾರಿ ನೌಕರರ ಸಂಘದ ಮಾಜಿ ಅಧ್ಯಕ್ಷ ರವಿರೆಡ್ಡಿ, ತಾಪಂ ಮಾಜಿ ಅಧ್ಯಕ್ಷ ವೆಂಕಟರಾಮ್‌, ತಾಪಂ ಸದಸ್ಯ ಬಾಬು, ಗ್ರಾಪಂ ಅಧ್ಯಕ್ಷರಾದ ಶ್ರೀನಿವಾಸ ಸಂದ್ರ ರಘು, ರಾಮಸಾಗರ ಮುರಳಿ, ಮುಖಂಡರಾದ ಸುಧಾಕರ್‌ ರೆಡ್ಡಿ, ಚಲಪತಿ ನಾಯ್ಡು, ಗೋಪಾಲ್‌ ರೆಡ್ಡಿ, ಬಾಬು ರೆಡ್ಡಿ, ಓಂ ಸುರೇಶ್‌, ಗಂಗಿರೆಡ್ಡಿ, ಕೃಷ್ಣಪ್ಪ, ಶ್ರೀನಿವಾಸ್‌, ನಂದೀಶ್‌ ಗೌಡ, ಪಾರಂದಮ, ತೇಜು, ಶಿವ, ಗೋವಿಂದ್‌, ಬಾಲಚಂದ್ರ, ಗಂಗಪ್ಪ, ಕೇಶವ, ಲಕ್ಷ್ಮಪ್ಪ ಇದ್ದರು.

7ಕೆಎಲ್‌ಆರ್‌-3

ಕೆಜಿಎಫ್‌ ನಗರದ ಬಿಜೆಪಿ ಕಚೇರಿಯ ಮುಂಭಾಗ ಕ್ಷೇತ್ರದ ಬಿಜೆಪಿ ಟಿಕೆಟ್‌ ಆಕಾಂಕ್ಷಿ ವಿ.ಮೋಹನ್‌ ಕೃಷ್ಣಗೆ ಟಿಕೆಟ್‌ ನೀಡುವಂತೆ ಒತ್ತಾಯಿಸಿ ಪಕ್ಷದ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.