*   ನೂರಿನೀಸ್ಸಾ ಪ್ಯಾರಾ ಮೆಡಿಕಲ್‌ ಕಾಲೇಜು ಸೀಲ್‌ಡೌನ್‌*   ಆತಂಕಕ್ಕೊಳಗಾದ ಜಿಲ್ಲೆಯ ಜನತೆ*   ವರದಿ ನೀಡಲು ಸೂಚನೆ 

ಕೋಲಾರ/ಕೆಜಿಎಫ್‌(ಆ.30): ಕೆಜಿಎಫ್‌ ನಗರದ ಅಂಡ್ರಸನ್‌ ಪೇಟೆಯ ನೂರಿನೀಸ್ಸಾ ಪ್ಯಾರಾ ಮೆಡಿಕಲ್‌ ಕಾಲೇಜಿನ ವಸತಿ ನಿಲಯದಲ್ಲಿದ್ದ ಒಬ್ಬ ವಿದ್ಯಾರ್ಥಿ ಸೇರಿದಂತೆ 19 ವಿದ್ಯಾರ್ಥಿನಿಯರಿಗೆ ಕೊರೊನಾ ಪಾಸಿಟಿವ್‌ ದೃಢಪಟ್ಟಿರುವುದರಿಂದ ಇಡೀ ಜಿಲ್ಲೆಯೇ ಆತಂಕಗೊಂಡಿದೆ.

ಎರಡನೇ ಅಲೆ ಸಂಪೂರ್ಣ ಇಳಿಮುಖಗೊಂಡು ಜಿಲ್ಲೆಯ ಜನ ನೆಮ್ಮದಿಯಿಂದ ಇರುವಾಗಲೇ ಕೆಜಿಎಫ್‌ನಲ್ಲಿ ಕೇರಳದಿಂದ ಬಂದಿರುವ ವಿದ್ಯಾರ್ಥಿಗಳಲ್ಲಿ ಕೊರೋನಾ ಪಾಸಿಟಿವ್‌ ಕಾಣಿಸಿಕೊಂಡಿರುವುದು ಭೀತಿಯನ್ನುಂಟು ಮಾಡಿದೆ.
ಕೊರೋನಾ ಪಾಸಿಟಿವ್‌ ಕಾಣಿಸಿಕೊಂಡಿರುವ ಎಲ್ಲ ವಿದ್ಯಾರ್ಥಿಗಳ ಸ್ವಾಬ್‌ ಟೆಸ್ಟ್‌ನ್ನು ಮಾಡಿಸಿ ಕೊರೋನಾ ದೃಢಪಟ್ಟಿರುವ ವಿದ್ಯಾರ್ಥಿಗಳನ್ನು ಬಿಜಿಎಂಎಲ್‌ನ ಕೋವಿಡ್‌ ಕೇರ್‌ ಸೆಂಟರ್‌ಗೆ ಸೇರಿಸಲಾಗಿದೆ. ಮೂವರು ವಿದ್ಯಾರ್ಥಿಗಳನ್ನು ಕೆಜಿಎಫ್‌ನ ಸಾರ್ವಜನಿಕ ಕೊರೋನಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವುದಾಗಿ ತಾಲೂಕು ವೈದ್ಯಾಧಿಕಾರಿ ಡಾ.ಸುನಿಲ್‌ಕುಮಾರ್‌ ತಿಳಿಸಿದರು.

ಕೇರಳ ಮೂಲದ 19 ವಿದ್ಯಾರ್ಥಿಗಳು

ಪ್ಯಾರಾ ಮೆಡಿಕಲ್‌ ಕಾಲೇಜು ಪ್ರಾರಂಭವಾದ ಹಿನ್ನಲೆಯಲ್ಲಿ ನೂರಿ ವಿದ್ಯಾಸಂಸ್ಥೆಯ ಮಾಲೀಕರಾದ ನೂರಿ ಅನ್ವರ್‌ ಅವರು ಕಾಲೇಜಿನ ಬಸ್‌ ಮೂಲಕ ಕೇರಳದಿಂದ¨-ಕೆಜಿಎಫ್‌ 40 ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಬಸ್‌ ಮೂಲಕ ಕೆಜಿಎಫ್‌ ನಗರಕ್ಕೆ ಕರೆತಂದಿದ್ದಾರೆ. ಆದರೆ ಯಾರಿಗೂ ಕೋವಿಡ್‌ ಟೆಸ್ಟ್‌ ಮಾಡಿಸದೆ ನಿಯಮ ಉಲ್ಲಂಘಿಸಲಾಗಿದೆ. ವಸತಿ ನೀಲಯದಲ್ಲಿ ಒಂದು ಕೊಠಡಿಗೆ 4 ವಿದ್ಯಾರ್ಥಿಳನ್ನು ತುಂಬುವ ಮೂಲಕ ಸಾಮಾಜಿಕ ಅಂತರ ಕಡೆಗಣಿಸಲಾಗಿದೆ.

ಶ್ವಾಸಕೋಶದ ಕ್ಯಾನ್ಸರ್‌ ಇದ್ದವರಲ್ಲಿ ಕೋವಿಡ್‌ ಸೋಂಕಿನ ಅಪಾಯ ಹೆಚ್ಚು

ಕಾಲೇಜು, ಹಾಸ್ಟೆಲ್‌ ಸೀಲ್‌ಡೌನ್‌

ನಗರಸಭೆ ಪೌರಾಯುಕ್ತ ನವೀನ್‌ ಚಂದ್ರ ಅರೋಗ್ಯಧಿಕಾರಿಗಳು ಕಾಲೇಜು ಮತ್ತು ವಸತಿನೀಲಕ್ಕೆ ಬೀಗ ಜಡಿದು ಸೀಲ್‌ಡೌಲ್‌ ಮಾಡಿದ್ದಾರೆ. ಅಲ್ಲದೆ ಕಾಲೇಜಿನ ಮುಂಭಾಗದ ರಸ್ತೆಯನ್ನೂ ಬಂದ್‌ ಮಾಡಲಾಗಿದೆ.

ವರದಿ ನೀಡಲು ಸೂಚನೆ

ಕೇರಳದಿಂದ ಬರುವವರಿಗೆ ಕೊರೋನಾ ವ್ಯಾಕ್ಸಿನ್‌ ಆಗಿರಬೇಕೆಂಬ ನಿಯಮವಿದೆ. ಆದರೆ ನೂರ್‌ ಕಾಲೇಜಿನಲ್ಲಿ ಪಾಸಿಟಿವ್‌ ಬಂದಿರುವ ವಿದ್ಯಾರ್ಥಿನಿಯರು ವ್ಯಾಕ್ಸಿನ್‌ ತೆಗೆದುಕೊಂಡಿದ್ದಾರೆಯೇ ಇಲ್ಲವೇ ಎಂಬುದನ್ನು ಪರಿಶೀಲಿಸಿ ವರದಿ ಸಲ್ಲಿಸುವಂತೆ ಆರೋಗ್ಯ ಇಲಾಖೆಗೆ ಸೂಚನೆ ನೀಡಲಾಗಿದೆ. ಈ ವರದಿ ಬಂದ ನಂತರ ಮುಂದೆ ಏನು ಮಾಡಬೇಕು ಎನ್ನುವುದನ್ನು ಯೋಚಿಸಲಾಗುವುದು, ಒಂದು ವೇಳೆ ಈ ವಿದ್ಯಾರ್ಥಿಗಳು ವ್ಯಾಕ್ಸಿನ್‌ ತೆಗೆದುಕೊಳ್ಳದೆ ಇರುವುದು ಕಂಡು ಬಂದರೆ ಕಾಲೇಜು ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ತಿಳಿಸಿದ್ದಾರೆ.