ಕಾಂಗ್ರೆಸ್‌ ಶಾಸಕರ ಪರ ಮತದಾರರ ಒಲವು ಸಾಧ್ಯತೆ: ಬಿಜೆಪಿಗೆ ಆತಂಕ

ಮುನಿವೆಂಕಟೇಗೌಡ ಎನ್‌.

ಕೋಲಾರ(ಜು.27): ಕೋಲಾರ-ಚಿಕ್ಕಬಳ್ಳಾಪುರ ಸಹಕಾರಿ ಬ್ಯಾಂಕ್‌ನಿಂದ ಕಾಂಗ್ರೆಸ್‌ ನಾಯಕರನ್ನು ದೂರವಿಡದಿದ್ದರೆ 2023 ರ ಚುನಾವಣೆಯಲ್ಲಿ ಎರಡೂ ಜಿಲ್ಲೆಗಳಲ್ಲಿ ಬಿಜೆಪಿ ಗೆಲ್ಲುವುದು ಕಷ್ಟವಾಗುತ್ತದೆ. ಮಹಿಳಾ ಸಂಘಗಳಿಗೆ ಸಾಲ ಕೊಡುವುದನ್ನು ತಡೆದರೆ ನಮಗೂ ತೊಂದರೆಯಾಗುತ್ತದೆ. ಆದ್ದರಿಂದ ಸರ್ಕಾರದ ಮೇಲೆ ಒತ್ತಡ ತಂದು ಡಿಸಿಸಿ ಬ್ಯಾಂಕ್‌ ನೀಡುವ ಸಾಲ ಕಾರ್ಯಕ್ರಮದಲ್ಲಿ ಕಾಂಗ್ರೆಸ್‌ ಶಾಸಕರು ಹೋಗದಂತೆ ತಡೆಯಬೇಕು ಎಂದು ಜಿಲ್ಲಾ ಬಿಜೆಪಿಯಲ್ಲಿ ಚರ್ಚೆಗಳು ಆರಂಭವಾಗಿವೆ.

ಸೋಮವಾರ ಮುಖ್ಯಮಂತ್ರಿಗಳ ಒಂದು ವರ್ಷದ ಸಾಧನಾ ಸಮಾವೇಶಕ್ಕಾಗಿ ಶ್ರೀನಿವಾಸಪುರಕ್ಕೆ ಆರೋಗ್ಯ ಸಚಿವ ಕೆ.ಸುಧಾಕರ್‌ ಹಾಗೂ ವಿಧಾನ ಪರಿಷತ್‌ ಮುಖ್ಯ ಸಚೇತಕ ಡಾ.ವೈ.ಎ ನಾರಾಯಣಸ್ವಾಮಿ ಹಾಗು ಜಿಲ್ಲೆಯ ಬಿಜೆಪಿ ಮುಖಂಡರು ಆಗಮಿಸಿದ ವೇಳೆ ಜಿಲ್ಲಾಧ್ಯಕ್ಷ ಡಾ.ವೇಣುಗೋಪಾಲ್‌ ಮನೆಯಲ್ಲಿ ಏರ್ಪಡಿಸಲಾಗಿದ್ದ ಔತಣ ಕೂಟದ ನಂತರ ಡಿಸಿಸಿ ಬ್ಯಾಂಕ್‌ ಬಗ್ಗೆ ಬಿಜೆಪಿ ನಾಯಕರು ಚರ್ಚೆ ನಡೆಸಿದ್ದಾರೆ.

ಜಿ.ಟಿ. ದೇವೇಗೌಡರು ಜೆಡಿಎಸ್‌ನಲ್ಲೇ ಉಳಿಯುತ್ತಾರೆ: ಸಾ.ರಾ. ಮಹೇಶ್

ಶಾಸಕರ ಉಪಸ್ಥಿಗೆ ವಿರೋಧ

ಈ ವೇಳೆ ವಿಧಾನ ಪರಿಷತ್‌ ಮುಖ್ಯ ಸಚೇತಕ ವೈ.ಎ ನಾರಾಯಣಸ್ವಾಮಿ ಮಾತನಾಡಿ, ಸಾಲ ವಿತರಣೆ ಕಾರ್ಯಕ್ರಮದಲ್ಲಿ ಬ್ಯಾಂಕ್‌ ಅಧ್ಯಕ್ಷರು ಕಾಂಗ್ರೆಸ್‌ ಶಾಸಕರನ್ನು ಹೆಚ್ಚಾಗಿ ಬಳಸಿಕೊಳ್ಳುತ್ತಿದ್ದಾರೆ. ಇದರಿಂದ ಮುಂದಿನ 2023ರ ಚುನಾವಣೆಗೆ ತೊಂದರೆಯಾಗುತ್ತದೆ. ಆದ್ದರಿಂದ ಇದನ್ನು ನಿಲಿಲಸಬೇಕಿದೆ. ಈಗಾಗಲೇ ಜಿಲ್ಲಾ ಉಸ್ತುವಾರಿ ಸಚಿವ ಮುನಿರತ್ನ ಮೂಲಕ ಸಂತೋಷ್‌ ರವರಿಗೆ ತಿಳಿಸಲಾಗಿದೆ. ಅವರು ಮುಖ್ಯ ಮಂತ್ರಿಗಳ ಬಳಿ ಚರ್ಚಿಸುವುದಾಗಿ ತಿಳಿಸಿದ್ದಾರೆ ಎಂದರು.

ಇತ್ತೀಚೆಗೆ ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಗೋವಿಂದಗೌಡರ ಬಗ್ಗೆ ಮೃದು ಧೋರಣೆ ಹೊಂದಿರುವ ಸಚಿವ ಕೆ.ಸುಧಾಕರ್‌ ಅವರು, ರಮೇಶ್‌ ಕುಮಾರ್‌ ಸೇರಿದಂತೆ ಕಾಂಗ್ರೆಸ್‌ ಶಾಸಕರೇ ಗೋವಿಂದ ಗೌಡರಿಗೆ ಗೂಸಾ ನೀಡಿದ್ದಾರೆ. ನಾವೇನು ಮಾಡಬೇಕಾಗಿಲ್ಲ. ಅವರೇ ದೂರ ಸರಿಯುವ ದಿನಗಳು ದೂರವಿಲ್ಲ ಎಂದಾಗ, ಇಲ್ಲ ಸ್ವಾಮಿ ಇದನ್ನು ತಡೆಯಲೇ ಬೇಕು, ಇಲ್ಲದಿದ್ದರೆ ಬಿಜೆಪಿ ಕೋಲಾರ ಜಿಲ್ಲೆಯಲ್ಲಿ ಒಂದು ಸ್ಥಾನವನ್ನೂ ಗೆಲ್ಲಲು ಕಷ್ಟವಾಗುತ್ತದೆ ಎಂದು ಕೆಜಿಎಫ್‌ ಮಾಜಿ ಶಾಸಕ ವೈ ಸಂಪಂಗಿ ಹೇಳಿದರು. ಅದಕ್ಕೆ ಮಾಜಿ ಸಚಿವ ವರ್ತುರು ಪ್ರಕಾಶ್‌ ಸೇರಿದಂತೆ ಬಿಜೆಪಿ ಮುಖಂಡರು ಧ್ವನಿ ಗೂಡಿಸಿದ್ದಾರೆ.

ಸಚಿವ ಸುಧಾಕರ್‌ ಮೃದು ಧೋರಣೆ

ಡಿಸಿಸಿ ಬ್ಯಾಂಕ್‌ ಬಗ್ಗೆ ಸಂಸದ ಮುನಿಸ್ವಾಮಿ, ಮಾಜಿ ಶಾಸಕ ಸಂಪಂಗಿ, ಜೆಡಿಎಸ್‌ ಜಿಲ್ಲಾಧ್ಯಕ್ಷ ವೆಂಕಟಶಿವಾರೆಡ್ಡಿ, ಸಚಿವ ಸುಧಾಕರ್‌ ಎಲ್ಲರೂ ಮುಗಿ ಬೀಳುತ್ತಿದ್ದರು. ಕಳೆದ ಎಂಎಲ್‌ಸಿ ಚುನಾವಣೆಯ ನಂತರ ಸಚಿವ ಸುಧಾಕರ್‌ ಈ ಬಗ್ಗೆ ಸ್ವಲ್ಪ ಮೃದು ಧೋರಣೆ ತೋರಿಸುತ್ತಿದ್ದಾರೆ. ಆದರೆ ಈಗ ವಿಧಾನ ಪರಿಷತ್‌ ಮುಖ್ಯ ಸಚೇತಕ ವೈ.ಎ ನಾರಾಯಣಸ್ವಾಮಿ ಸಮರ ಸಾರಿದ್ದಾರೆ. ಈ ಬಗ್ಗೆ ಕನ್ನಡ ಪ್ರಭ ವೈ.ಎ ನಾರಾಯನಸ್ವಾಮಿಯವರನ್ನು ಸಂಪರ್ಕಿಸಿದಾಗ ಡಿಸಿಸಿ ಬ್ಯಾಂಕ್‌ ಕಥೆ ಚುನಾವಣೆ ಒಳಗಾಗಿ ಮುಗಿಯುತ್ತದೆ ಕಾದು ನೋಡಿ ಎಂದು ಮಾರ್ಮಿಕವಾಗಿ ನುಡಿದರು.