Madikeri: 21ರಿಂದ ನ.23ರ ತನಕ ಕಾವೇರಿ ನದಿ ಜಾಗೃತಿ ರಥಯಾತ್ರೆ
- 21ರಿಂದ ನ.23ರ ತನಕ ಕಾವೇರಿ ನದಿ ಜಾಗೃತಿ ರಥಯಾತ್ರೆ
- ರಥಯಾತ್ರೆಯಲ್ಲಿ 60ಕ್ಕೂ ಹೆಚ್ಚು ಮಂದಿ ಸಾಧುಸಂತರು ಭಾಗಿ
ಮಡಿಕೇರಿ (ಅ.20) : ಸ್ವಚ್ಛ ಕಾವೇರಿಗಾಗಿ ಅ.21ರಿಂದ 12ನೇ ವರ್ಷದ ಕಾವೇರಿ ಜಾಗೃತಿ ರಥಯಾತ್ರೆ ನಡೆಯಲಿದ್ದು, ನ.13ರಂದು ತಮಿಳುನಾಡಿನ ಪೂಂಪ್‌ಹಾರ್‌ನಲ್ಲಿ ಸಮಾರೋಪಗೊಳ್ಳಲಿದೆ.
ದಕ್ಷಿಣ ಗಂಗೆ ಕಾವೇರಿ ಮಾತೆಗೆ ಸಂಭ್ರಮದ ಆರತಿ
ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಮಿತಿ ಹಾಗೂ ಕಾವೇರಿ ರಿವರ್ ಸೇವಾ ಟ್ರಸ್ವ್ ಅಧ್ಯಕ್ಷ ಎಂ.ಎನ್. ಚಂದ್ರಮೋಹನ್ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಕಾರ್ಯಕ್ರಮ ವಿವರ ನೀಡಿದರು. ಜನರಿಗೆ ನದಿ ಸಂರಕ್ಷಣೆಯ ಬಗ್ಗೆ ಅರಿವು ಮತ್ತು ಜಾಗೃತಿ ಮೂಡಿಸುವ ಸಲುವಾಗಿ ಅಖಿಲ ಭಾರತ ಸನ್ಯಾಸಿ ಸಂಘ, ಕಾವೇರಿ ನದಿ ಸ್ವಚ್ಛತಾ ಆಂದೋಲನ, ಕಾವೇರಿ ರಿವರ್ ಸೇವಾ ಟ್ರಸ್ವ್‌ನ ಆಶ್ರಯದಲ್ಲಿ ಅ.21ರಿಂದ ನ.13ರ ವರೆಗೆ ತಲಕಾವೇರಿಯಿಂದ ಪೂಂಪ್‌ಹಾರ್ ತನಕ ಯಾತ್ರೆ ಕೈಗೊಳ್ಳಲಾಗಿದೆ. ಈ ಯಾತ್ರೆಯಲ್ಲಿ 60 ರಿಂದ 70 ಸಾಧು ಸಂತರು ಪಾಲ್ಗೊಳ್ಳಲಿದ್ದಾರೆ. ಅ.21 ರಂದು ಬೆಳಗ್ಗೆ 8.30ಕ್ಕೆ ತಲಕಾವೇರಿಯಿಂದ ಯಾತ್ರೆಗೆ ಚಾಲನೆ ದೊರೆಯಲಿದ್ದು, 10.30ಕ್ಕೆ ಭಾಗಮಂಡಲ ಸಂಗಮದಲ್ಲಿ ಆರತಿ, ಸಂಜೆ 4 ಗಂಟೆಗೆ ಕುಶಾಲನಗರ ಅಯ್ಯಪ್ಪ ಸ್ವಾಮಿ ದೇವಾಲಯದ ಬಳಿ ಆರತಿ ಜರುಗಲಿದೆ. ಕಾವೇರಿ ನದಿ ಹಬ್ಬ- ಕಾವೇರಿ ಜಾಗೃತಿ ರಥ ಯಾತ್ರೆ ಕುಶಾಲನಗರಕ್ಕೆ ಆಗಮಿಸಿದ ಬಳಿಕ ಕಾವೇರಿ ನೀರಾವರಿ ನಿಗಮದಿಂದ ಆಯೋಜಿರುವ ಕಾವೇರಿ ನದಿ ಹಬ್ಬ ವಿಶೇಷ ಕಾರ್ಯಕ್ರಮವೂ ನಡೆಯಲಿದೆ.
ಅ.22ರಂದು ರಾಮನಾಥಪುರ, ಕೃಷ್ಣರಾಜಸಾಗರ, ಶ್ರೀರಂಗಪಟ್ಟಣ, ರಾಮನಗರ, ಕನಕಪುರ ಮಾರ್ಗವಾಗಿ ತಮಿಳುನಾಡಿನ ಕಡೆಗೆ ಯಾತ್ರೆ ಸಾಗಲಿದೆ. ಮೂಲ ಕಾವೇರಿಯಿಂದ ಯಾತ್ರೆ ಸಾಗಲಿದೆ. ಮೂಲ ಕಾವೇರಿಯಿಂದ ಪವಿತ್ರ ಕಾವೇರಿ ತೀರ್ಥವನ್ನು ಸಂಗ್ರಹಿಸಿ ಪೂಜೆ ಸಲ್ಲಿಸಿ ಯಾತ್ರೆಯಲ್ಲಿ ಕೊಂಡೊಯ್ದು ನ.13 ರಂದು ಪೂಂಪ್‌ಹಾರ್ ಸಮುದ್ರ ಸಂಗಮದಲ್ಲಿ ವಿಶೇಷ ಪೂಜಾ ಕಾರ್ಯಕ್ರಮದೊಂದಿಗೆ ವಿಸರ್ಜನೆ ಮಾಡಲಾಗುವುದು. ಯಾತ್ರೆಯಲ್ಲಿ ಕಾವೇರಿ ನದಿ ಸಂರಕ್ಷಣಾ ಅಭಿಯಾನ ಸಂಯೋಜಕರಾದ ಡಾ. ಭಾನುಪ್ರಕಾಶ್ ಶರ್ಮ, ಹೊಗೇನಕಲ್ ಅಖಿಲ ಭಾರತೀಯ ಸನ್ಯಾಸಿ ಸಂಘ ಸ್ಥಾಪಕ ಶ್ರೀ ರಮಾನಂದ ಸ್ವಾಮೀಜಿ, ಪ್ರಧಾನ ಕಾರ್ಯದರ್ಶಿ ಆತ್ಮಾನಂದ ಸ್ವಾಮಿ, ಸಂಚಾಲಕ ವೇದಾನಂದ ಸ್ವಾಮಿ, ಉಪಾಧ್ಯಕ್ಷ ಕುಮಾರಗುರು ಸ್ವಾಮಿ, ಜಂಟಿ ಕಾರ್ಯದರ್ಶಿಗಳಾದ ಶಿವರಾಮನಂದ ಸ್ವಾಮಿ, ಶಿವಾನಂದ ವಾರಿಯರ್ ಸ್ವಾಮಿ, ಕುಮಾರ ಸ್ವಾಮಿತಂಬಿರಾನ್ ಮತ್ತು ದಕ್ಷಿಣ ಭಾರತ ರಾಜ್ಯಗಳ ಸಾಧು ಸಂತರು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.
ತಲಕಾವೇರಿ ತೀರ್ಥೋದ್ಭವ: ಕಣ್ತುಂಬಿಕೊಂಡ ಭಕ್ತ ಗಣ
ಕಾವೇರಿ ನದಿ ಸ್ವಚ್ಛತಾ ಆಂದೋಲನದ ಜಿಲ್ಲಾ ಸಂಚಾಲಕ ರೀನಾ ಪ್ರಕಾಶ್ ಮಾತನಾಡಿ, ಸುಮಾರು 800 ಕಿ.ಮೀ. ವರೆಗೆ ನಡೆಯುವ ರಥಯಾತ್ರೆಯಲ್ಲಿ ಕಾವೇರಿ ನದಿಯ ಮಹತ್ವದ ಬಗ್ಗೆ ಜಾಗೃತಿ ಮೂಡಿಸಲಾಗುತ್ತದೆ ಎಂದ ಅವರು, ಮುಂದಿನ ಜನವರಿ ಅಂತ್ಯಕ್ಕೆ ಅಥವಾ ಫೆಬ್ರವರಿಯಲ್ಲಿ ಪ್ರಧಾನಿ ಮೋದಿ ಅವರನ್ನು ನಿಯೋಗ ಭೇಟಿ ಮಾಡಲಿದ್ದು, ಗಂಗಾ ನದಿ ಶುದ್ಧೀಕರಣದ ರೀತಿಯಲ್ಲೇ ಕಾವೇರಿ ನದಿ ಶುದ್ಧೀಕರಣಕ್ಕೆ ಒತ್ತಾಯಿಸುವುದಾಗಿ ಚಂದ್ರಮೋಹನ್ ಮಾಹಿತಿ ನೀಡಿದರು.