ಕೆ.ಆರ್‌.ನಗರ:(ಸೆ.20) ಜಿಲ್ಲಾಡಳಿತ ಮತ್ತು ಪ್ರವಾಸೋದ್ಯಮ ಇಲಾಖೆಯಿಂದ ಸೆ.21 ಮತ್ತು 22 ರಂದು ತಾಲೂಕಿನ ಚುಂಚನಕಟ್ಟೆ ಹೋಬಳಿ ಕೇಂದ್ರದಲ್ಲಿ ಕಾವೇರಿ ಜಲಪಾತೋತ್ಸವ ನಡೆಯಲಿರುವ ಹಿನ್ನೆಲೆ ಭರದ ಸಿದ್ಧತೆಗಳು ನಡೆಯುತ್ತಿವೆ.


ಜಲಪಾತೋತ್ಸವ ಕಾರ್ಯಕ್ರಮಕ್ಕೆ ಸಾಕಷ್ಟು ಸಂಖ್ಯೆಯಲ್ಲಿ ಜನರು ಪಾಲ್ಗೊಳ್ಳುವ ನಿರೀಕ್ಷೆಯಿದೆ. ಜಲಪಾತೋತ್ಸವ ವೀಕ್ಷಿಸಲು ಆಗಮಿಸುವ ಜನರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕಾವೇರಿ ನದಿ ದಂಡೆಯಲ್ಲಿರುವ ಶ್ರೀರಾಮ ದೇವಾಲಯದ ಹಿಂಭಾಗ ಹೊಸದಾಗಿ ನಿರ್ಮಾಣ ಮಾಡಿರುವ ಕಾವೇರಿ ಜಲಪಾತೋತ್ಸವ ವೇದಿಕೆಗೆ ಬೃಹತ್‌ ಪೆಂಡಾಲ್‌ ನಿರ್ಮಾಣ ಮಾಡುತ್ತಿದ್ದು, ಇದರ ಜತೆಗೆ 10 ಸಾವಿರ ಮಂದಿಗೆ ಆಸನದ ವ್ಯವಸ್ಥೆ ಮಾಡಲಾಗುತ್ತಿದೆ.

ಎರಡೂ ದಿನಗಳು ನಡೆಯುವ ಕಾರ್ಯಕ್ರಮಕ್ಕೆ ಪ್ರತಿ ದಿನ ಅಂದಾಜು 25 ಸಾವಿರ ಮಂದಿ ಸಾರ್ವಜನಿಕರು ಭಾಗವಹಿಸುವ ಸಾಧ್ಯತೆಯಿದ್ದು, ಕುಡಿಯುವ ನೀರು, ಪಾರ್ಕಿಂಗ್‌, ತಾತ್ಕಾಲಿಕ ಶೌಚಾಲಯ ಸೇರಿದಂತೆ ಇತರ ಅಗತ್ಯ ಮೂಲಭೂತ ಸವಲತ್ತುಗಳನ್ನು ಒದಗಿಸಲು ಸಮರೋಪಾದಿಯಲ್ಲಿ ಕೆಲಸ ನಡೆಯುತ್ತಿದೆ.

ಹೆಚ್ಚಿನ ಜಿಲ್ಲಾ ಮಾಹಿತಿಗಾಗಿ ಇಲ್ಲಿ ಕ್ಲಿಕ್ಕಿಸಿ

ಸೆ. 21ರ ಸಂಜೆ 6ಕ್ಕೆ ವೇದಿಕೆ ಕಾರ್ಯಕ್ರಮವನ್ನು ಜಿಲ್ಲಾ ಉಸ್ತುವಾರಿ ಸಚಿವ ವಿ. ಸೋಮಣ್ಣ ಉದ್ಘಾಟಿಸಲಿದ್ದು, ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಪ್ರವಾಸೋದ್ಯಮ ಸಚಿವ ಸಿ.ಟಿ. ರವಿ ಚಾಲನೆ ನೀಡುವರು. ಶಾಸಕ ಸಾ.ರಾ. ಮಹೇಶ್‌ ಅಧ್ಯಕ್ಷತೆ ವಹಿಸುವರು.

ಬಳಿಕ ರಾತ್ರಿ 7ಕ್ಕೆ ಸರಿಗಮಪ ಖ್ಯಾತಿಯ ಗಾಯಕರಾದ ಶ್ರೀಹರ್ಷ, ಇಂಪನಾ, ಸುಹಾನ ಸೈಯದ್‌, ಸುಪ್ರೀತ್‌ಫಲ್ಗುಣ, ಕಲಾವತಿ ಅರವಿಂದ್‌, ಶ್ರೀಕಾರ್‌ ಮತ್ತು ನೃತ್ಯ ತಂಡದವರಿಂದ ಸಂಗೀತ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.

8ಕ್ಕೆ ನಟಿ ಮಾನ್ವಿತ ಹರೀಶ್‌ ಮತ್ತು ಇತರ ಚಿತ್ರನಟರಿಂದ ವಿವಿಧ ಮನರಂಜನ ಕಾರ್ಯಕ್ರಮಗಳು ನೆರವೇರಲಿದ್ದು, 9ಕ್ಕೆ ಸೀರಿಯಲ್‌ ಸಂತೆ ಧಾರವಾಹಿ ಕಲಾವಿದರಾದ ದೀಪಿಕಾ ದಾಸ್‌, ರಶ್ಮಿ ಪ್ರಭಾಕರ್‌, ಯಶಸ್ವಿನಿ ಹಾಗೂ ನೃತ್ಯ ತಂಡದವರು ಭಾಗವಹಿಸಿ ಮನರಂಜನೆ ನೀಡುವರು.

ಸೆ.22ರ ಭಾನುವಾರ ಸಂಜೆ 6ಕ್ಕೆ ಸಮಾರೋಪ ಸಮಾರಂಭ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಚಾಲನಾ ಕಾರ್ಯಕ್ರಮ ನಡೆಯಲಿದ್ದು, ಸಚಿವ ಸಿ.ಟಿ. ರವಿ. ಶಾಸಕ ಸಾ.ರಾ. ಮಹೇಶ್‌, ಜಿಪಂ ಅಧ್ಯಕ್ಷೆ ಪರಿಮಳ ಶ್ಯಾಮ್‌, ಸಂಸದರಾದ ಸುಮಲತಾ ಅಂಬರೀಶ್‌, ಪ್ರತಾಪ್‌ ಸಿಂಹ ಮತ್ತು ವಿ. ಶ್ರೀನಿವಾಸಪ್ರಸಾದ್‌, ಜಿಲ್ಲೆಯ ಎಲ್ಲ ಶಾಸಕರು ಹಾಗೂ ತಾಲೂಕಿನ ಚುನಾಯಿತ ಜನಪ್ರತಿನಿಧಿಗಳು ಭಾಗವಹಿಸಲಿದ್ದಾರೆ.

ಆ ನಂತರ ಸಂಜೆ 6 ರಿಂದ ರಾತ್ರಿ 9 ರವರೆಗೆ ಹಿನ್ನೆಲೆ ಗಾಯಕರಾದ ಇಂದೂ ನಾಗರಾಜ್‌, ಶಶಾಂಕ್‌, ಶೇಷಗಿರಿ, ಚಿನ್ಮಯ, ಆತ್ರೇಯ, ಸಂಗೀತ ರವೀಂದ್ರನಾಥ್‌, ಅನಿರುದ್ದ ಶಾಸ್ತ್ರಿ, ದಿವ್ಯರಾಮಚಂದ್ರ ಮತ್ತು ನೃತ್ಯ ತಂಡದವರಿಂದ ಸಂಗೀತ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.

ಸ್ಯಾಂಡಲ್‌ವುಡ್‌ ಮ್ಯೂಸಿಕಲ್‌ನೈಟ್‌ ಜರುಗಲಿದೆ.

ರಾತ್ರಿ 9 ರಿಂದ 10ರವೆರೆಗೆ ಚಿತ್ರ ನಟಿಯರಾದ ಕಾವ್ಯಗೌಡ, ಅಶ್ವಿನಿ, ಅದ್ವಿತಿ, ಐಶ್ವರ್ಯ ಮತ್ತು ನೃತ್ಯ ತಂಡದವರಿಂದ ಸ್ಟಾರ್‌ನೈಟ್‌ ನಡೆಯಲಿದ್ದು, ವಾಸ್ತುಪ್ರಕಾರ ಖ್ಯಾತಿಯ ನಟಿ ಐಶಾನಿ ಶೆಟ್ಟಿ ಪಾಲ್ಗೊಳ್ಳುವರು.

ಜಲಪಾತೋತ್ಸವಕ್ಕೆ ಪ್ರಚಾರದ ಕೊರತೆ

ಕಾವೇರಿ ಜಲಪಾತೋತ್ಸವ ಕಾರ್ಯಕ್ರಮಕ್ಕೆ ಇನ್ನೆರಡು ದಿನಗಳು ಬಾಕಿ ಇದ್ದರೂ ಪ್ರವಾಸೋದ್ಯಮ ಇಲಾಖೆ ಮತ್ತು ಜಿಲ್ಲಾ ಹಾಗೂ ತಾಲೂಕು ಆಡಳಿತ ಯಾವುದೇ ಪ್ರಚಾರ ಕೈಗೊಳ್ಳದೆ ನಿರ್ಲಕ್ಷ್ಯ ವಹಿಸಿದೆ. 

ಗುರುವಾರ ಸಂಜೆಯವರೆಗೂ ಚುನಾಯಿತ ಜನಪ್ರತಿನಿಧಿಗಳು ಮತ್ತು ಮಾಧ್ಯಮದವರಿಗೆ ಆಹ್ವಾನ ಪತ್ರಿಕೆಯನ್ನು ನೀಡಿಲ್ಲ. ಇದಲ್ಲದೆ ಕಾರ್ಯಕ್ರಮದ ಸಿದ್ಧತೆ ಮತ್ತು ಇತರ ವಿಚಾರಗಳ ಬಗ್ಗೆ ಯಾವುದೇ ಅಧಿಕಾರಿಗಳು ಮಾಹಿತಿ ನೀಡದೆ ನಿರ್ಲಕ್ಷ್ಯ ತೋರುತ್ತಿದ್ದಾರೆ.

ಹೋಬಳಿ ಕೇಂದ್ರದಲ್ಲಿ ನಡೆಯುತ್ತಿರುವ ಇಂತಹ ಬೃಹತ್‌ ಸಾಂಸ್ಕೃತಿಕ ಕಾರ್ಯಕ್ರಮದ ವಿಚಾರದಲ್ಲಿ ಅಧಿಕಾರಿಗಳು ತೋರಿಸುತ್ತಿರುವ ಬೇಜವಾಬ್ದಾರಿ ವರ್ತನೆಯನ್ನು ಸಾರ್ವಜನಿಕರು ಖಂಡಿಸಿದ್ದು, ಜಿಲ್ಲಾಧಿಕಾರಿಗಳು ಮತ್ತು ಪ್ರವಾಸೋದ್ಯಮ ಇಲಾಖೆಯ ಅಧಿಕಾರಿಗಳು ಕೂಡಲೇ ವ್ಯಾಪಕ ಪ್ರಚಾರಕ್ಕೆ ಗಮನ ಹರಿಸಬೇಕೆಂದು ಆಗ್ರಹಿಸಿದ್ದಾರೆ.

ಈ ಹಿಂದೆ ನಡೆದ ಮೂರು ಜಲಪಾತೋತ್ಸವ ಕಾರ್ಯಕ್ರಮಗಳ ಪೂರ್ವಭಾವಿ ಸಭೆ ಮತ್ತು ಸ್ಥಳ ಪರಿಶೀಲನೆಯನ್ನು ಶಾಸಕ ಸಾ.ರಾ. ಮಹೇಶ್‌ ನಡೆಸಿ ಹೆಚ್ಚು ಪ್ರಚಾರವಾಗುವಂತೆ ನೋಡಿಕೊಂಡಿದ್ದರು. ಆದರೆ, ಈ ಬಾರಿ ಅವರೂ ಸಹ ಇತ್ತ ಗಮನ ಹರಿಸಿಲ್ಲ.