ಕೊರೋನಾ ಮಹಾಮಾರಿ ಹೆಚ್ಚಳ ಹಿನ್ನೆಲೆಯಲ್ಲಿ ಬಸ್ ಸೌಲಭ್ಯವನ್ನು ಸ್ಥಗಿತ ಮಾಡಲಾಗಿದೆ. ಎಲ್ಲಾ ಮಾಧರಿಯ ಬಸ್‌ಗಳ ಸಂಚಾರವು ನಿಂತಿದೆ.
ಹುಬ್ಬಳ್ಳಿ (ಏ.26): ಕೋವಿಡ್ ಎರಡನೇ ಅಲೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮಹಾರಾಷ್ಟ್ರಕ್ಕೆ ಹುಬ್ಬಳ್ಳಿಯಿಂದ ಎಲ್ಲ ಮಾದರಿಯ ಬಸ್‌ಗಳ ಸಂಚಾರವನ್ನು ತಾತ್ಕಾಲಿಕವಾಗಿ ರದ್ದುಪಡಿಸಲಾಗಿದೆ.
ಕೋವಿಡ್ ಪೂರ್ವದಲ್ಲಿ ಗೋವಾ, ಮಹಾರಾಷ್ಟ್ರ, ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡು ಮುಂತಾದ ಅಂತಾರಾಜ್ಯಗಳಿಗೆ ವೋಲ್ವೊ, ಸ್ಲೀಪರ್, ರಾಜಹಂಸ ಮತ್ತು ವೇಗದೂತ ಸಾರಿಗೆಗಳು ಸೇರಿ 65 ಬಸ್ಸುಗಳು ಸಂಚರಿಸುತ್ತಿದ್ದವು. ಅವುಗಳಲ್ಲಿ ಅತಿ ಹೆಚ್ಚು 38 ಬಸ್ಸುಗಳು ಮಹಾರಾಷ್ಟ್ರದ ವಿವಿಧ ಸ್ಥಳಗಳಿಗೆ ಹೋಗಿ ಬರುತ್ತಿದ್ದವು.
14 ದಿನ ಕರ್ನಾಟಕ ಲಾಕ್‌ಡೌನ್: ಏನಿರುತ್ತೆ? ಏನಿರಲ್ಲ? ಇಲ್ಲಿದೆ ಮಾಹಿತಿ ...
ಹುಬ್ಬಳ್ಳಿಯಿಂದ ನಿತ್ಯ 24 ವೇಗದೂತ, 2 ರಾಜಹಂಸ, 8 ಎಸಿ ಸ್ಲೀಪರ್ ಮತ್ತು 4 ಐರಾವತ ವೋಲ್ವೋ ಬಸ್ಸುಗಳು ಸಂಚರಿಸುತ್ತಿದ್ದವು. ಕೋವಿಡ್ ತೀವ್ರತೆ ಕಾರಣಕ್ಕಾಗಿ ಈಗಾಗಲೇ ಮುಂಬೈಗೆ ಹೋಗುತ್ತಿದ್ದ ಎಸಿ ಸ್ಲೀಪರ್ ಹಾಗೂ ಪಿಂಪ್ರಿ ಮತ್ತು ಶಿರಡಿಗೆ ಹೋಗುತ್ತಿದ್ದ ಐರಾವತ ಬಸ್‌ಗಳನ್ನು ರದ್ದುಗೊಳಿಸಲಾಗಿತ್ತು. ಇದೀಗ ಉಳಿದೆಲ್ಲ ಬಸ್‌ಗಳ ಸಂಚಾರವನ್ನೂ ರದ್ದುಪಡಿಸಿದಂತಾಗಿದೆ ಎಂದು ಹುಬ್ಬಳ್ಳಿ ಗ್ರಾಮೀಣ ವಿಭಾಗದ ನಿಯಂತ್ರಣಾಧಿಕಾರಿ ಎಚ್. ರಾಮನಗೌಡರ ತಿಳಿಸಿದ್ದಾರೆ.
