ಕೈಕೊಟ್ಟಮುಂಗಾರು ಮಳೆ, ಮುಂಡರಗಿ ರೈತರ ಚಿತ್ತ ಮುಗಿಲಿನತ್ತ!
ತಾಲೂಕಿನಲ್ಲಿ ಮಳೆ ಇಂದು ಬರಬಹುದು, ನಾಳೆ ಬರಬಹುದು ಎಂದು ರೈತರು ಮುಗಿಲಿನತ್ತ ಮುಖ ಮಾಡಿದ್ದಾರೆ.
ಶರಣು ಸೊಲಗಿ
ಮುಂಡರಗಿ (ಜೂ.16) ತಾಲೂಕಿನಲ್ಲಿ ಮಳೆ ಇಂದು ಬರಬಹುದು, ನಾಳೆ ಬರಬಹುದು ಎಂದು ರೈತರು ಮುಗಿಲಿನತ್ತ ಮುಖ ಮಾಡಿದ್ದಾರೆ.
ಈಗಾಗಲೇ ಅಶ್ವಿನಿ, ಭರಣಿ, ಕೃತಿಕಾ, ರೋಹಿಣಿ ನಾಲ್ಕು ಮಳೆಗಳು ಹೋಗಿ 5ನೇ ಮಳೆ ಮೃಗಶಿರಾ ಪ್ರಾರಂಭವಾಗಿದೆ. ಈ ವೇಳೆಗೆ ಸಂಪೂರ್ಣವಾಗಿ ರೈತರ ಬಿತ್ತನೆ ಕಾರ್ಯಗಳು ಪೂರ್ಣಗೊಂಡಿರುತ್ತವೆ. ಇವೆಲ್ಲವೂ ರೈತನ ಕೃಷಿ ಚಟುವಟಿಕೆಗಳಿಗೆ ಅತ್ಯಂತ ಅವಶ್ಯವಾಗಿರುವ ಮಳೆಗಳಾಗಿದ್ದು, ಪ್ರಸ್ತುತ ಇವ್ಯಾವು ಮಳೆಗಳೂ ಆಗಿಲ್ಲ. ಅಶ್ವಿನಿ, ಭರಣಿ ಮಳೆಯಾದರೆ ರೈತ ಭೂಮಿಯನ್ನು ಸಂಪೂರ್ಣವಾಗಿ ಹದ ಮಾಡಿಕೊಳ್ಳುತ್ತಾನೆ. ಕೃತಿಕಾ ಮಳೆಗೆ ಹೆಸರು, ಸೂರ್ಯಕಾಂತಿ, ಜೋಳ, ಶೇಂಗಾ, ಎಳ್ಳು ಸೇರಿದಂತೆ ಅನೇಕ ಬೆಳೆಗಳಿಗಾಗಿ ಬಿತ್ತನೆ ಕಾರ್ಯ ನಡೆಸುತ್ತಾನೆ. ಆದರೆ ಇದೀಗ ಮಳೆಯಾಗದ ಕಾರಣ ಇವ್ಯಾವೂ ಬಿತ್ತನೆ ಆಗಿಲ್ಲ.
ಮೋದಿ ಅಕ್ಕಿ ಕೊಡದಿದ್ರೇನು? ನೀವೇ ಜೋಳ ರಾಗಿ ಕೊಡಿ: ರೈತ ಸಂಘ ಆಗ್ರಹ
ನಿಮ್ಮೂರಾಗ ಮಳಿಯಾಗೈತೇನೋ ಕಾಕಾ, ಇಲ್ಲ ಬಿಡೋ ಮಾರಾಯಾ ಆಗಿಲ್ಲ. ನಿಮ… ಊರಾಗರ ಆಗೈತೆನು..? ನಮ್ಮೂರಾಗೂ ಆಗಿಲ… ಬಿಡೋ. ಕೆಟ್ಟಗಾಳಿ ಹೊಡಿಯಾಕತೈತಿ. ನಾವ್ ನೋಡಿದ್ರ ಕೈಯಾಗಿನ್ ರೊಕ್ಕಾ ಖರ್ಚು ಮಾಡ್ಕೊಂಡು ಭೂಮಿ ಹದಾ ಮಾಡ್ಸಿ ಮಳಿ ಸಲುವಾಗಿ ಕಾಯಾಕತ್ತೀವಿ ಎಂದು ಮುಂಡರಗಿ ತಾಲೂಕಿನ ಬಹುತೇಕ ಗ್ರಾಮಗಳಲ್ಲಿನ ರೈತರು ನಿತ್ಯ ಪರಸ್ಪರವಾಗಿ ಮಾತನಾಡಿಕೊಳ್ಳುತ್ತಿದ್ದಾರೆ.
ಜೂನ್ ಮೊದಲ ವಾರದಲ್ಲಿ ಮುಂಗಾರು ಮಳೆ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಹೇಳಿದ್ದರಿಂದಾಗಿ ಖುಷಿಯಾಗಿದ್ದ ರೈತರು ಮಳೆಯಾಗದೇ ಇರುವುದರಿಂದ ಮತ್ತೊಮ್ಮೆ ಚಿಂತಾಕ್ರಾಂತರಾಗಿದ್ದಾರೆ. ಮುಂಡರಗಿ ತಾಲೂಕಿನಲ್ಲಿ ಜೂ. 12ರ ವರೆಗೆ ವಾಡಿಕೆ ಮಳೆ 145 ಮಿಲಿ ಮೀಟರ್ ಆಗಬೇಕಾಗಿತ್ತು. ಆದರೆ 73 ಮಿಲಿ ಮೀಟರ್ ಮಳೆ ಮಾತ್ರಆಗಿದ್ದು, ಶೇ. 48ರಷ್ಟುಮಳೆ ಕೊರತೆ ಇದೆ. ಇದುವರೆಗೂ ತಾಲೂಕಿನಲ್ಲಿ 47620 ಹೆಕ್ಟೇರ್ ಬಿತ್ತನೆ ಪ್ರದೇಶದ ಗುರಿ ಹೊಂದಲಾಗಿತ್ತು. ಆದರೆ ಅದರಲ್ಲಿ ಪ್ರಸ್ತುತ ಕೇವಲ ಶೇ.10ರಷ್ಟು, ಅಂದರೆ 4700 ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ಬಿತ್ತನೆಯಾಗಿದ್ದು, ಮುಂಡರಗಿ ತಾಲೂಕಿನಲ್ಲಿ ಮತ್ತೊಮ್ಮೆ ಬರದ ಛಾಯೆ ಎದ್ದು ಕಾಣುತ್ತಿದೆ.
ಮುಂಡರಗಿ ಹಾಗೂ ಡಂಬಳ ರೈತ ಸಂಪರ್ಕ ಕೇಂದ್ರದಲ್ಲಿ ರೈತರಿಗೆ ಬಿತ್ತನೆಗೆ ಬೇಕಾದ ಮೆಕ್ಕೆ ಜೋಳ 450 ಕ್ವಿಂಟಾಲ… ದಾಸ್ತಾನು ಇದ್ದು, ಇದುವರೆಗೂ ರೈತರು 45 ಕ್ವಿಂಟಾಲ… ಬೀಜಗಳನ್ನು ತೆಗೆದುಕೊಂಡು ಹೋಗಿದ್ದು, 400 ಕ್ವಿಂಟಾಲ… ಉಳಿದಿದೆ. ತೊಗರಿ ಬೀಜ 86 ಕ್ವಿಂಟಾಲ… ದಾಸ್ತಾನು (ಸ್ಟಾಕ್) ಇದ್ದು, ಅದರಲ್ಲಿ 6 ಕ್ವಿಂಟಾಲ… ತೆಗೆದುಕೊಂಡು ಹೋಗಿದ್ದು, 80 ಕ್ವಿಂಟಾಲ… ಇದೆ. ಹೆಸರು 83 ಕ್ವಿಂಟಾಲ…ನಲ್ಲಿ 3 ಕ್ವಿಂಟಾಲ… ಹೋಗಿದ್ದು, 80 ಕ್ವಿಂಟಾಲ… ಸ್ಟಾಕ್ ಇದೆ. ಸೂರ್ಯಕಾಂತಿ 61 ಕ್ವಿಂಟಾಲ… ನಲ್ಲಿ 1 ಕ್ವಿಂಟಾಲ… ಹೋಗಿದ್ದು, 60 ಕ್ವಿಂಟಾಲ… ಇದೆ. ಜೋಳ 20 ಕ್ವಿಂಟಾಲ… ಹೋಗಿದ್ದು ಹೆಚ್ಚಿನ ಪ್ರಮಾಣದಲ್ಲಿ ಹಾಗೆ ಉಳಿದಿದೆ. ರಸಗೊಬ್ಬರ ಯೂರಿಯಾ 730 ಟನ್ ಸ್ಟಾಕ್ ಇದೆ, ಡಿಎಪಿ 764 ಟನ್ ಇದೆ, ಪೋಟ್ಯಾಸಿಯಂ 155 ಟನ್ ಸೇರಿ ಇತರೆ 450 ಟನ್ ರಸಗೊಬ್ಬರ ಸ್ಟಾಕ್ ಇದೆ.
ಈಗಾಗಲೇ ನಾವು ಮೆಕ್ಕೆಜೋಳ ಹಾಗೂ ಶೇಂಗಾ ಬಿತ್ತನೆಗೆ ತಯಾರಿ ಮಾಡಿಕೊಂಡು ಕುಳಿತಿದ್ದು, ಉತ್ತಮವಾಗಿ ಮಳೆಯಾಗದ ಕಾರಣ ಮಳೆಗಾಗಿ ಕಾಯುತ್ತಿದ್ದೇವೆ. ಬೇಗನೆ ಮಳೆಯಾಗದೇ ಹೋದಲ್ಲಿ ರೈತರು ಬಿತ್ತಿದ ಬೀಜಗಳೂ ಸಹ ಮರಳಲಾರದಂತಹ ಪರಿಸ್ಥಿತಿ ಎದುರಾಗಿದೆ. ಆದಷ್ಟುಬೇಗನೆ ಮಳೆರಾಯ ನಮ್ಮ ಮೇಲೆ ಕರುಣೆ ತೋರಿಸಬೇಕು. ಅಂದರೆ ರೈತರ ಬಿತ್ತನೆಗೆ ಅನುಕೂಲವಾಗುತ್ತದೆ.
-ಮೌನೇಶ್ವರ ಬಡಿಗೇರ ಬೂದಿಹಾಳ ಗ್ರಾಮದ ರೈತ
Karnataka monsoon: ಮುಂಗಾರು ಮಳೆ ಮಂದಗತಿ, ರೈತರ ಸ್ಥಿತಿ ಅಧೋಗತಿ!
ಪ್ರಸ್ತುತ ವರ್ಷ ವಾಡಿಕೆಗಿಂತ ಶೇ. 48ರಷ್ಟುಮಳೆ ಕಡಿಮೆಯಾಗಿದೆ. ಹೀಗಾಗಿ ಬಿತ್ತನೆ ಪ್ರಮಾಣವೂ ಸಹ ಅತ್ಯಂತ ಕಡಿಮೆಯಾಗಿದೆ. ಇಲಾಖೆಯಲ್ಲಿ ರೈತರಿಗೆ ಬೇಕಾದ ಎಲ್ಲ ಬೀಜಗಳು, ರಸಗೊಬ್ಬರಗಳು ಸಾಕಷ್ಟುಪ್ರಮಾಣದಲ್ಲಿ ಸಂಗ್ರಹವಿದ್ದು, ಯಾವುದೇ ರೀತಿಯ ಕೊರತೆ ಇಲ್ಲ.
-ವೆಂಕಟೇಶಮೂರ್ತಿ ಟಿ.ಸಿ. ತಾಲೂಕು ಸಹಾಯಕ ಕೃಷಿ ನಿರ್ದೇಶಕರು ಮುಂಡರಗಿ