ಮೈಸೂರು (ಆ.15): ಪ್ರಧಾನ ಮಂತ್ರಿಗಳಾದ ಶ್ರೀ ನರೇಂದ್ರ ಮೋದಿಯವರು ಆತ್ಮ ನಿರ್ಭರ ಭಾರತ ಅಂದರೆ ಸ್ವಾವಲಂಬಿ ಭಾರತ ನಿರ್ಮಾಣಕ್ಕೆ ಒತ್ತು ನೀಡುತ್ತಿದ್ದಾರೆ. ಇದರ ಅಂಗವಾಗಿ ಎಲ್ಲ ಕ್ಷೇತ್ರಗಳಲ್ಲೂ ದೇಶೀಯ ಉತ್ಪಾದನೆಗೆ ಹೆಚ್ಚು ಒತ್ತು ನೀಡಲಾಗುತ್ತಿದೆ. ಆ ನಿಟ್ಟಿನಲ್ಲಿ ನಮ್ಮ ಕೊಡುಗೆಯೂ ಇರಲಿ ಎಂದು ಸಹಕಾರ ಮತ್ತು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ತಿಳಿಸಿದರು.

ಮೈಸೂರಿನ ಬನ್ನಿಮಂಟಪ ಪಂಜಿನ ಕವಾಯತು ಮೈದಾನದಲ್ಲಿ 74ನೇ ಸ್ವಾತಂತ್ರ್ಯೋತ್ಸವ ಸಮಾರಂಭದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಸಚಿವರು, ಸ್ವಾತಂತ್ರ್ಯಕ್ಕಾಗಿ ಹಲವಾರು ದೇಶಭಕ್ತರು ಗುಂಡೇಟಿಗೆ ಎದೆಕೊಟ್ಟರು. ನೇಣುಗಂಬವೇರಿ ಜೀವಬಿಟ್ಟರು, ಕೆಲವರು ತಮ್ಮ ಬದುಕನ್ನೇ ಜೈಲುವಾಸದಲ್ಲಿ ಕಳೆದರು. ಸ್ವತಂತ್ರ ಭಾರತದ ಪ್ರಜೆಗಳಾದ ನಾವು ಅವರು ಕಂಡ ಸದೃಢ ಭಾರತದ ಕನಸು ನನಸು ಮಾಡುವ ಜವಾಬ್ದಾರಿಯನ್ನು ಹೊತ್ತಿದ್ದೇವೆ ಎಂದು ಹೇಳುವ ಮೂಲಕ ಸಮಾಜದ ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿಯನ್ನು ನೆನಪಿಸಿದರು. 

ಯುವ ಸಂಪನ್ಮೂಲ ಬಳಸಿಕೊಳ್ಳೋಣ

ಭಾರತಕ್ಕೆ ಸ್ವಾತಂತ್ರ್ಯ ಬಂದು 73 ವರ್ಷಗಳು ಕಳೆದಿವೆ. ಇಂದು ವಿಶ್ವಮಟ್ಟದಲ್ಲಿ ಭಾರತ ಗುರುತಿಸಿಕೊಂಡು ದೇಶದಲ್ಲಿರುವ ವೈಜ್ಞಾನಿಕ ಸಂಪನ್ಮೂಲ, ನೈಸರ್ಗಿಕ ಸಂಪನ್ಮೂಲ ಮಾನವ ಸಂಪನ್ಮೂಲ ಅದರಲ್ಲೂ ಯುವ ಸಂಪನ್ಮೂಲವನ್ನು ಬಳಸಿಕೊಂಡು ಎಲ್ಲ ಕ್ಷೇತ್ರದಲ್ಲಿ ಅಭಿವೃದ್ಧಿ ಸಾಧಿಸಿ ಹೆಚ್ಚು ಬಲಶಾಲಿಯಾಗುತ್ತಿದ್ದು, ಈ ನಿಟ್ಟಿನಲ್ಲಿ ಸಾಗೋಣ ಎಂದು ಸಚಿವರು ಕರೆ ಕೊಟ್ಟರು.

ವಿಶ್ವಕ್ಕಂಟಿದ ಕೊರೊನಾ ವೈರಸ್ ರಾಜ್ಯಕ್ಕೂ ತಗುಲಿದ್ದು, ಕೇಂದ್ರ ಸರ್ಕಾರದ ಮಾರ್ಗದರ್ಶನದಲ್ಲಿ ಮುಖ್ಯಮಂತ್ರಿಗಳಾದ ಬಿ.ಎಸ್. ಯಡಿಯೂರಪ್ಪ ಅವರ ನೇತೃತ್ವದಲ್ಲಿ ನಮ್ಮ ಸರ್ಕಾರ ಈ ಸೋಂಕು ನಿಯಂತ್ರಣಕ್ಕೆ ಎಲ್ಲ ಕ್ರಮಗಳನ್ನು ಯುದ್ಧೋಪಾದಿಯಲ್ಲಿ ಕೈಗೊಳ್ಳುತ್ತಿದೆ.  ಸಚಿವರ ಕಾರ್ಯಪಡೆ, ಪರಿಣಿತ ವೈದ್ಯರು ಮತ್ತು ಅಧಿಕಾರಿಗಳ ಕಾರ್ಯಪಡೆ ರಚಿಸಿ ರಾಜ್ಯ, ಜಿಲ್ಲಾ ಮಟ್ಟದಲ್ಲಿ ಪರಿಸ್ಥಿತಿ ನಿಭಾಯಿಸಲಾಯಿತು ಎಂದು ಸಚಿವರು ತಿಳಿಸಿದರು.

ಕೇಂದ್ರ/ರಾಜ್ಯ ಸರ್ಕಾರ/ಸಹಕಾರ ಇಲಾಖೆಗಳ ಕ್ರಮ

*  ಆತ್ಮ ನಿರ್ಭರ ಭಾರತ ಅಂಗವಾಗಿ ಕೊರೊನಾ ಸೋಂಕು ತಡೆಗೆ ಬಳಸುವ ಪರ್ಸನಲ್ ಪ್ರೊಟೆಕ್ಷನ್ ಇಕ್ವಿಪ್ಮೆಂಟ್ ಅನ್ನು ಭಾರತವೇ ಉತ್ಪಾದಿಸುವಂತಾಗಿದೆ.

* ಲಾಕ್ಡೌನ್ನಿಂದಾಗಿ ಆರ್ಥಿಕ ಮತ್ತು ಸಾಮಾಜಿಕ ಚಟುವಟಿಕೆಗೆ ಕಡಿವಾಣ ಬಿದ್ದು, ಆರ್ಥಿಕ ವ್ಯವಸ್ಥೆ ಹದಗೆಟ್ಟರೂ ಅದನ್ನು ಸರಿದಾರಿಗೆ ತರಲು ಯತ್ನಿಸಿದ್ದಲ್ಲದೆ,  ನೆರೆ ರಾಜ್ಯಗಳಲ್ಲಿ ಸರ್ಕಾರಿ ನೌಕರರ ಸಂಬಳವನ್ನು ಕಡಿತಗೊಳಿಸಿದಂತೆ ಇಲ್ಲಿ ಮಾಡದೆ  ಸಕಾಲದಲ್ಲಿ ಸರ್ಕಾರಿ ನೌಕರರಿಗೆ ವೇತನ ಪಾವತಿದಲಾಗಿದೆ.

*  ಕೋವಿಡ್ ಆಸ್ಪತ್ರೆಗಳಲ್ಲಿ ಕೆಲಸ ನಿರ್ವಹಿಸುವ ಗ್ರೂಪ್ ಡಿ ನೌಕರರಿಗೆ ಅವರ ವೇತನದ ಜೊತೆಗೆ 10 ಸಾವಿರ ರೂ.ಗಳ ಪ್ರೋತ್ಸಾಹಧನ ನೀಡಲಾಗಿದೆ.

* ಲಾಕ್ಡೌನ್ ಕ್ರಮದಿಂದಾಗಿ ಸಂಕಷ್ಟಕ್ಕೆ ಒಳಗಾದ ಕಾರ್ಮಿಕರು, ಕೃಷಿಕರು, ಕೈಗಾರಿಕೋದ್ಯಮಿಗಳು ಸೇರಿದಂತೆ ಅನೇಕ ವಲಯಗಳಿಗೆ ಒಟ್ಟು 2279 ಕೋಟಿ ರೂ. ಪ್ಯಾಕೇಜ್ ಘೋಷಿಸಲಾಗಿದೆ

* ಎಪಿಎಂಸಿ ಕಾಯ್ದೆಗೆ ತಿದ್ದಪಡಿ ತಂದ ಕೇಂದ್ರದ ಕ್ರಮಕ್ಕೆ ಬೆಂಬಲ ನೀಡಿ ರಾಜ್ಯದಲ್ಲಿಯೂ ಅನುಷ್ಠಾನ ಮಾಡಿ ರೈತರ ಬೆಳೆ ರೈತರ ಹಕ್ಕು ಎಂಬ ನಿಟ್ಟಿನಲ್ಲಿ ಕೆಲಸ ಮಾಡಲಾಗಿದೆ.

* 2020 -21 ನೇ ಸಾಲಿಗೆ ರಾಜ್ಯದ ರೈತರಿಗೆ 14500 ಕೋಟಿ ಬೆಳೆ ಸಾಲ ನೀಡುವ ಗುರಿ ಹೊಂದಲಾಗಿತ್ತು. ಇದರನ್ವಯ ಏ. 1 ರಿಂದ ಆ.14 ರ ವರೆಗೆ 10 ಲಕ್ಷ ರೈತರಿಗೆ 6,589.69 ಕೋಟಿ ರೂಪಾಯಿ ಬೆಳೆ ಸಾಲವನ್ನು ವಿತರಿಸಲಾಗಿದೆ. 

* ರಾಜ್ಯದ ಹೂ ಬೆಳೆಗಾರರಿಗೆ ನೆರವಾಗಲು ಹೆಕ್ಟೇರ್ ಗೆ ಗರಿಷ್ಠ 25 ಸಾವಿರ ರೂ.ಗಳಂತೆ ಪರಿಹಾರ 2.30 ಲಕ್ಷ ಕ್ಷೌರಿಕರಿಗೆ ಮತ್ತು 60  ಸಾವಿರ ಮಡಿವಾಳರಿಗೆ, 7.75 ಲಕ್ಷ ಟ್ಯಾಕ್ಸಿ ಮತ್ತು ಆಟೋ ಚಾಲಕರಿಗೆ ತಲಾ 5000 ರೂ.ಗಳ ಪರಿಹಾರ ನೀಡಲಾಗುತ್ತಿದೆ.

* ರಾಜ್ಯದ ಕೈಮಗ್ಗ ನೇಕಾರರಿಗೆ ಪ್ರತಿ ವರ್ಷ 2 ಸಾವಿರ ರೂ.ಗಳಂತೆ ಪ್ರೋತ್ಸಾಹ ಧನ ನೀಡುವ ನೇಕಾರರ ಸಮ್ಮಾನ್ ಯೋಜನೆಗೆ ಚಾಲನೆ ನೀಡಲಾಗಿದೆ.

* ಹಣ್ಣು ಮತ್ತು ತರಕಾರಿ ಬೆಳೆಗಾರರಿಗೆ ಹೆಕ್ಟೇರ್ಗೆ ಗರಿಷ್ಠ 15,000 ರೂ.ಗಳಂತೆ 137 ಕೋಟಿ ರೂ. ಪರಿಹಾರ ನೀಡಲಾಗುತ್ತಿದೆ.

* ಮೆಕ್ಕೆಜೋಳ ಬೆಳೆದಿರುವ ಸುಮಾರು ೧೦ ಲಕ್ಷ ರೈತರಿಗೆ ತಲಾ 5000 ರೂ.ಗಳಂತೆ ಒಟ್ಟು 500 ಕೋಟಿ ರೂ. ಪರಿಹಾರ ಘೋಷಿಸಿದೆ. ಅಲ್ಲದೆ ಕೆಎಂಎಫ್ ಮೂಲಕ 22,000 ಮೆಟ್ರಿಕ್ ಟನ್ ಮೆಕ್ಕೆಜೋಳವನ್ನು ಪ್ರತಿ ಕ್ವಿಂಟಾಲ್ ಗೆ 1760 ರೂ. ದರದಲ್ಲಿ ನೇರವಾಗಿ ಖರೀದಿಸಲು ಕ್ರಮ ವಹಿಸಲಾಗಿದೆ.

* ಕಿಸಾನ್ ಸಮ್ಮಾನ್ ಯೋಜನೆಯಡಿ ಭಾರತ ಸರ್ಕಾರ ರೈತರಿಗೆ 6 ಸಾವಿರ ರೂ.ಗಳ ಪ್ರೋತ್ಸಾಹಧನ ನೀಡುತ್ತಿದ್ದು, ಜೊತೆಗೆ ಕರ್ನಾಟಕ ಸರ್ಕಾರ ಕೂಡ ಹೆಚ್ಚುವರಿಯಾಗಿ 4 ಸಾವಿರ ರೂ.ಗಳನ್ನು ಎರಡು ಕಂತುಗಳಲ್ಲಿ ನೀಡಿ, ರೈತರ ನೆರವಿಗೆ ಧಾವಿಸಿದೆ.

ಮೈಸೂರಿನಲ್ಲಿ ಅಭಿವೃದ್ಧಿ 

* ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಸ್ಮರಣಾರ್ಥವಾಗಿ ಅವರ ಹೆಸರಿನಲ್ಲಿ ಪ್ರತಿ ವರ್ಷ 10 ಮಂದಿ ಸಾಧಕರಿಗೆ ಪ್ರಶಸ್ತಿ ನೀಡಿ ಗೌರವಿಸುವ ಸತ್ಕಾರ್ಯವನ್ನು ಘೋಷಿಸಿದ್ದೇನೆ. ಈಗಾಗಲೇ ಪ್ರಶಸ್ತಿಗೆ ಗಣ್ಯರನ್ನು ಆಯ್ಕೆ ಮಾಡುವ ಸಂಬಂಧ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಸಮಿತಿ ರಚನೆ ಮಾಡಿದ್ದು, ಆಯ್ಕೆ ಪ್ರಕ್ರಿಯೆ ನಡೆಸಿದೆ.

* ಪರಿಪೂರ್ಣ ಲಾಕ್ಡೌನ್ನ ಮಧ್ಯಮಾವಧಿಯಲ್ಲಿ ಜನರು ಮನೆಯಿಂದ ಹೊರಬರಲು ಹೆದರುತ್ತಿದ್ದ ಆ ಸಂದರ್ಭದಲ್ಲಿ ನಂಜನಗೂಡಿನ ಜುಬಿಲೆಂಟ್ ಕಾರ್ಖಾನೆ ಹಾಗೂ ಅದರ ಸುತ್ತಮುತ್ತಲಿನ ಕಂಟೈನ್ಮೆಂಟ್ ಪ್ರದೇಶಗಳಿಗೆ ಭೇಟಿ ನೀಡಿ  ಜನರ ಸಮಸ್ಯೆಗಳನ್ನು ಖುದ್ದು ಪರಿಶೀಲಿಸಿ, ಆಹಾರ, ಔಷಧಿ ಮುಂತಾದ ಅತ್ಯಾವಶ್ಯಕ ಸಾಮಗ್ರಿಗಳು ಸಿಗುವಂತೆ ಖಾತರಿಪಡಿಸಿಕೊಳ್ಳಲು ಕ್ರಮವಹಿಸಲಾಗಿತ್ತು.

* ಲಾಕ್ಡೌನ್ನಿಂದಾಗಿ ಜನರಿಗೆ ದಿನಸಿ, ತರಕಾರಿ, ಹಾಲು, ಔಷಧಿ ಮುಂತಾದ ಅತ್ಯಾವಶಕ್ಯ ವಸ್ತುಗಳ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗದಂತೆ ಎಚ್ಚರವಹಿಸಲು ಜಿಲ್ಲೆಯ ಬಹುತೇಕ ಎಲ್ಲ
ತಾಲೂಕು ಕೇಂದ್ರಗಳಿಗೆ ಭೇಟಿ ನೀಡಿ, ಆಯಾ ವಿಧಾನಸಭಾ ಕ್ಷೇತ್ರದ ಶಾಸಕರ ನೇತೃತ್ವದ ತಾಲೂಕು ಮಟ್ಟದ ಟಾಸ್ಕ್ಫೋರ್ಸ್ ಸಮಿತಿ ಸದಸ್ಯರ ಸಭೆ ನಡೆಸಿ, ಸಲಹೆ ಸೂಚನೆ
ನೀಡಲಾಗಿದೆ.

* ಲಾಕ್ಡೌನ್ನಿಂದಾಗಿ ಹೋಟೆಲ್ ಗಳು ಇಲ್ಲವಾದ್ದರಿಂದ ರೈತರಿಗೆ ಹಾಗೂ ವರ್ತಕರಿಗೆ ಬಂಡಿಪಾಳ್ಯ ಎಪಿಎಂಸಿಯಲ್ಲಿ ಊಟೋಪಚಾರಕ್ಕೆ ತೊಂದರೆಯಾಗುತ್ತಿತ್ತು. ಹೀಗಾಗಿ ಮಾರುಕಟ್ಟೆ ಪ್ರಾಂಗಣದಲ್ಲಿ ಕ್ಯಾಂಟೀನ್ ಆರಂಭಕ್ಕೆ ಕ್ರಮವಹಿಸಲಾಯಿತು.

* ಮುಖ್ಯಮಂತ್ರಿಗಳಾದ ಬಿ.ಎಸ್. ಯಡಿಯೂರಪ್ಪ ಅವರು ರಾಜ್ಯಾದ್ಯಂತ ಎಲ್ಲ ಆಶಾ ಕಾರ್ಯಕರ್ತೆಯರಿಗೆ ತಲಾ 3000 ರೂ.ಗಳ ನೆರವು ಘೋಷಿಸಿದರು. ಇದರ ಅನುಷ್ಠಾನದ ಜವಾಬ್ದಾರಿಯನ್ನು ಸಹಕಾರ ಸಚಿವನಾದ ನನಗೆ ನೀಡಿದರು. ಹೀಗಾಗಿ ರಾಜ್ಯದಲ್ಲಿರುವ 41,711 ಆಶಾ ಕಾರ್ಯಕರ್ತೆಯರಿಗೆ ಪ್ರೋತ್ಸಾಹಧನ ವಿತರಿಸಲು ಎಲ್ಲ ಕ್ರಮ ಕೈಗೊಳ್ಳಲಾಗಿದೆ.

* ಈಗಾಗಲೇ 39592 ಆಶಾಕಾರ್ಯಕರ್ತೆಯರಿಗೆ 11,87,76,000 ರೂ. ಪ್ರೋತ್ಸಾಹದನ ವಿತರಣೆ ಮಾಡಿದ್ದು, ಇನ್ನು 2119 ಆಶಾಕಾರ್ಯಕರ್ತೆಯರಿಗೆ ಮಾತ್ರ ಪ್ರೋತ್ಸ್ಸಾಹಧನ ವಿತರಣೆ ಮಾಡಲಾಗಿದೆ.

ನೂತನ ರಾಷ್ಟ್ರೀಯ ಶಿಕ್ಷಣ ನೀತಿ: ರಾಜ್ಯದಲ್ಲೇ ಮೊದಲು ಜಾರಿ ...

* ಕೋವಿಡ್ನಿಂದ ಮೃಗಾಲಯ ಪ್ರವಾಸಿಗರು ಬಾರದೆ ಇರುವುದರಿಂದ ಆದಾಯವಿಲ್ಲದೆ ಸಮಸ್ಯೆಯಲ್ಲಿತ್ತು. ಯಶವಂತಪುರದ ಸಾರ್ವಜನಿಕರು, ಸ್ನೇಹಿತರು ಹಾಗೂ ಸಚಿವರು, ಜನಪ್ರತಿನಿಧಿಗಳಿಂದ ದೇಣಿಗೆ ಸಂಗ್ರಹಿಸಿ 3.45 ಕೋಟಿ ರೂ.ಗಳಿಗೂ ಹೆಚ್ಚು ಮೊತ್ತನ್ನು ಮೃಗಾಲಯಕ್ಕೆ ಹಸ್ತಾಂತರಿಸಲಾಗಿದೆ. 125 ವರ್ಷಗಳ ಇತಿಹಾಸದಲ್ಲಿ ಇಷ್ಟು ಬೃಹತ್
ಪ್ರಮಾಣದ ದೇಣಿಗೆ ಬಂದಿರುವುದು ಇದೇ ಮೊದಲು.

* ಮೈಸೂರಿನಲ್ಲಿ ಹಸಿರು ಸೌಂದರ್ಯ ಹೆಚ್ಚಿಸಲು ಅನೇಕ ಕ್ರಮ ಕೈಗೊಂಡಿದ್ದು, ಚಾಮುಂಡಿಬೆಟ್ಟದಲ್ಲಿ 1 ಲಕ್ಷ ಸಸಿಗಳನ್ನು ಬೆಳೆಸಲು ಯೋಜನೆ ಹಾಕಿಕೊಳ್ಳಲಾಗಿದೆ.

* ಮೈಸೂರಿನ ಹೊರವರ್ತುಲ ರಸ್ತೆಯಲ್ಲಿರುವ ಬೀದಿ ದೀಪಗಳಿಗೆ ಆಡಳಿತಾತ್ಮಕ ಸಮಸ್ಯೆಯಿಂದಾಗಿ ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದರಿಂದ ರಾತ್ರಿ ಸಂಚಾರಕ್ಕೆ ತೊಂದರೆಯಾಗಿತ್ತು. ವಿಷಯ ಗಮನಕ್ಕೆ ಬರುತ್ತಿದ್ದಂತೆ ಸಮಸ್ಯೆಯನ್ನು ಬಗೆಹರಿಸಿ, ವಿದ್ಯುತ್ ಸಂಪರ್ಕ ಕೊಡಿಸಿ, ಬೀದಿ ದೀಪಗಳನ್ನು ಬೆಳಗಿಸಲಾಗಿದೆ.

ಸ್ವಾತಂತ್ರ್ಯ ದಿನಾಚರಣೆಗೆ ಗಿಫ್ಟ್ ಆಫರ್ ಘೋಷಿಸಿದ ಒಕಿನಾವ ಎಲೆಕ್ಟ್ರಿಕ್ ಸ್ಕೂಟರ್!.

* ಮೈಸೂರು ಪ್ರವಾಸದ ದಿನಗಳಲ್ಲಿ ಸುಮಾರು 50ಕ್ಕೂ ಹೆಚ್ಚು ಸಭೆ, ಸಮಾರಂಭ ಹಾಗೂ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದೇನೆ. ಜನರು, ಜನಪ್ರತಿನಿಧಿಗಳ ಕುಂದುಕೊರತೆಗಳನ್ನು ಆಲಿಸಲಾಗಿದೆ. ಕೊರೊನಾ ವಿರುದ್ಧ ಹೋರಾಡುವ ಅಧಿಕಾರಿಗಳು ಹಾಗೂ ಪ್ರತಿಯೊಬ್ಬ ಸಿಬ್ಬಂದಿಯನ್ನು ಪ್ರೋತ್ಸಾಹಿಸಿರುವ ತೃಪ್ತಿ ಇದೆ.

* ಕೊರೊನಾ ಸೋಂಕು ಜಿಲ್ಲೆಯಲ್ಲಿ ಹರಡುವ ಮುನ್ನವೇ ಮೈಸೂರು ಜಿಲ್ಲಾಡಳಿತ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿತ್ತು. ಮೇಟಗಳ್ಳಿಯಲ್ಲಿ ಹೊಸದಾಗಿ ನಿರ್ಮಿಸಲಾಗಿದ್ದ ಜಿಲ್ಲಾಸ್ಪತ್ರೆಯನ್ನು ಕೋವಿಡ್ ಆಸ್ಪತ್ರೆಯಾಗಿ ಪರಿವರ್ತಿಸಿ, ಕೋವಿಡ್ ಚಿಕಿತ್ಸೆಗಾಗಿಯೇ ನಿಗದಿಪಡಿಸಲಾಯಿತು. 

* ಕೊರೊನಾ ಸೋಂಕಿತರ ಪ್ರಾಥಮಿಕ ಸಂಪರ್ಕದಲ್ಲಿದ್ದ ಸಾವಿರಾರು ಜನರು ಕ್ವಾರಂಟೈನ್ನಲ್ಲಿ ಇರಲು ತಿಳಿಸಿ, ಅವರೆಲ್ಲರಿಗೂ ದೂರವಾಣಿ ಕರೆ ಮಾಡಿ ಯೋಗಕ್ಷೇಮ ವಿಚಾರಿಸುವ ಪರಿಪಾಠವನ್ನು ಮೊದಲು ಮೈಸೂರಿನಲ್ಲಿ ಆರಂಭಿಸಲಾಯಿತು. ಈ ಮಾದರಿ ಮುಂದೆ ರಾಜ್ಯಾದ್ಯಂತ ವಿಸ್ತರಣೆಯಾಯಿತು.

* ಮತ್ತೆ ಪ್ರಕರಣಗಳ ಸಂಖ್ಯೆ ಹೆಚ್ಚಾದರೂ ಸಹ ಎಲ್ಲ ಸೋಂಕಿತರಿಗೆ ಚಿಕಿತ್ಸೆ ನೀಡಲು ಬೇಕಾದ ವ್ಯವಸ್ಥೆಯನ್ನು ಹೊಂದಿಸಿಕೊಳ್ಳಲಾಗಿದೆ. ಜಿಲ್ಲಾ ಕೋವಿಡ್ ಆಸ್ಪತ್ರೆ, ತಾಲೂಕು ಆಸ್ಪತ್ರೆಗಳು, ಸಮುದಾಯ ಆರೋಗ್ಯ ಕೇಂದ್ರಗಳು, ಇ.ಎಸ್.ಐ. ಆಸ್ಪತ್ರೆ, ಮೈಸೂರು ಮುಕ್ತ ವಿಶ್ವವಿದ್ಯಾಲಯಕ್ಕೆ ಸೇರಿದ ಕಟ್ಟಡ, ಖಾಸಗಿ ಆಸ್ಪತ್ರೆಗಳು ಸೇರಿದಂತೆ 23ಕ್ಕೂ ಹೆಚ್ಚು ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

* ಈ ಆಸ್ಪತ್ರೆಗಳ ಜೊತೆಗೆ ಹಾಸ್ಟೆಲ್ಗಳು, ಕಾರ್ಯನಿರ್ವಹಣೆ ಇಲ್ಲದೇ ಇದ್ದ ಆಸ್ಪತ್ರೆ/ನರ್ಸಿಂಗ್ ಹೋಂಗಳು, ಎಂ.ಸಿ.ಹೆಚ್. ಆಸ್ಪತ್ರೆ, ವಸತಿ ಶಾಲೆಗಳು, ಶಾಲೆಗಳು, ಆಯುಷ್ ಆಸ್ಪತ್ರೆಗಳು ಸೇರಿ 38 ಕೋವಿಡ್ ಕೇರ್ ಸೆಂಟರ್ಗಳನ್ನು ತೆರೆಯಲಾಗಿದೆ.

* ಗರ್ಭಿಣಿಯರಲ್ಲೂ ಸೋಂಕು ಕಂಡುಬರುತ್ತಿರುವ ಹಿನ್ನೆಲೆಯಲ್ಲಿ ವಿ.ವಿ.ಪುರಂನಲ್ಲಿರುವ ಲಕ್ಷ್ಮಿದೇವಮ್ಮ ಶಂಕರಶೆಟ್ಟಿ ಹೆರಿಗೆ ಆಸ್ಪತ್ರೆಯನ್ನು ಗರ್ಭಿಣಿಯರಿಗಾಗಿಯೇ  ಪ್ರತ್ಯೇಕ ಕೋವಿಡ್ ಆಸ್ಪತ್ರೆಯನ್ನಾಗಿ ಪರಿವರ್ತಿಸಿ, ಚಿಕಿತ್ಸೆ ನೀಡಿ,ಗುಣಪಡಿಸಲಾಗಿದೆ.