* ಬೆಂಗಳೂರು ಬಿಟ್ಟು ಉಳಿದೆಡೆ ಎರಡಂಕಿಗೆ ಕುಸಿದ ಕೋವಿಡ್* ಕರ್ನಾಟಕದಲ್ಲಿ 1405 ಹೊಸ ಕೇಸ್, 26 ಸಾವು* ಶೇ. 1.91 ಪಾಸಿಟಿವಿಟಿ ದರ ಇದೆ* ಕೊರೋನಾ ಅಲೆ ನಿಯಂತ್ರಣದಲ್ಲಿ
ಬೆಂಗಳೂರು(ಫೆ. 16) ಕೋವಿಡ್ (Coronavirus) ಪ್ರಕರಣಗಳ ಇಳಿಕೆ ಮುಂದುವರಿದಿದ್ದು, ಬೆಂಗಳೂರು (Bengaluru) ನಗರ ಹೊರತುಪಡಿಸಿ ಉಳಿದೆಲ್ಲ ಜಿಲ್ಲೆಗಳಲ್ಲಿ ಸೋಂಕಿನ ಹೊಸ ಪ್ರಕರಣಗಳ ಸಂಖ್ಯೆ ಎರಡಂಕಿಗೆ ಕುಸಿದಿದೆ. ಮಂಗಳವಾರ 1,405 ಹೊಸ ಪ್ರಕರಣ ಪತ್ತೆಯಾಗಿದ್ದು 26 ಮಂದಿ ಮೃತರಾಗಿದ್ದಾರೆ. 5,762 ಮಂದಿ ಚೇತರಿಸಿಕೊಂಡಿದ್ದಾರೆ.
ಪಾಸಿಟಿವಿಟಿ ದರ ಶೇ. 2ಕ್ಕಿಂತ ಕಡಿಮೆ ಆಗಿದೆ. 73,286 ಕೋವಿಡ್ ಪರೀಕ್ಷೆ ನಡೆದಿದ್ದು, ಪಾಸಿಟಿವಿಟಿ ದರ ಶೇ. 1.91 ದಾಖಲಾಗಿದೆ. ಬೆಂಗಳೂರು ನಗರದಲ್ಲಿ 765 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. ರಾಜ್ಯದಲ್ಲಿ ಮಂಗಳವಾರ ಪತ್ತೆಯಾದ ಒಟ್ಟು ಪ್ರಕರಣಗಳಲ್ಲಿ ಶೇ.50ಕ್ಕೂ ಹೆಚ್ಚು ರಾಜ್ಯ ರಾಜಧಾನಿಯಲ್ಲೇ ಬೆಳಕಿಗೆ ಬಂದಿದೆ. ಉಳಿದಂತೆ ಮೈಸೂರು 66, ಉಡುಪಿ ಮತ್ತು ಬೆಳಗಾವಿಯಲ್ಲಿ ತಲಾ 50 ಪ್ರಕರಣಗಳು ವರದಿಯಾಗಿವೆ. ರಾಯಚೂರು (2), ಯಾದಗಿರಿ (4), ಬೀದರ್ (7), ಕೊಪ್ಪಳ (8), ದಾವಣಗೆರೆ (9) ಕಡಿಮೆ ಪ್ರಕರಣ ದಾಖಲಾಗಿದೆ.
ಬೆಂಗಳೂರು ನಗರದಲ್ಲಿ 6, ದಕ್ಷಿಣ ಕನ್ನಡ 4, ಬಳ್ಳಾರಿ 3, ಧಾರವಾಡ, ಹಾಸನ ಮತ್ತು ಉಡುಪಿ ತಲಾ 2, ಉತ್ತರ ಕನ್ನಡ, ವಿಜಯಪುರ, ಮೈಸೂರು, ರಾಯಚೂರು, ಕೋಲಾರ ಮತ್ತು ಬಾಗಲಕೋಟೆ ಜಿಲ್ಲೆಯಲ್ಲಿ ತಲಾ ಒಬ್ಬರು ಸಾವನ್ನಪ್ಪಿದ್ದಾರೆ. ರಾಜ್ಯದಲ್ಲಿ ಈವರೆಗೆ ಒಟ್ಟು 39.29 ಲಕ್ಷ ಮಂದಿಯಲ್ಲಿ ಕೋವಿಡ್ ಪತ್ತೆಯಾಗಿದ್ದು 38.63 ಲಕ್ಷ ಮಂದಿ ಚೇತರಿಸಿಕೊಂಡಿದ್ದಾರೆ. 26,832 ಸಕ್ರಿಯ ಪ್ರಕರಣಗಳಿವೆ. 39,691 ಮಂದಿ ಮರಣವನ್ನಪ್ಪಿದ್ದಾರೆ. ಮಂಗಳವಾರ 1.81 ಲಕ್ಷ ಮಂದಿ ಕೋವಿಡ್-19 ಲಸಿಕೆ ಪಡೆದಿದ್ದಾರೆ.
Corbevax Vaccine: 12-18 ವರ್ಷದ ಮಕ್ಕಳಿಗೆ ಕೋರ್ಬೆವ್ಯಾಕ್ಸ್ ಲಸಿಕೆ: ಅನುಮತಿ ಕೋರಿಕೆ
ಸುಳ್ಳು ಲೆಕ್ಕ ನೀಡಿ ಚೆನ್ನಾಗಿ ಕೋವಿಡ್ ನಿರ್ವಹಣೆ, ವೆಂಕಟೇಶ್ ಕಿಡಿ: ಕೊರೋನಾ ಸಾವು, ಪರಿಹಾರ ಧನ ವಿತರಣೆ ಕುರಿತು ಸುಳ್ಳು ಅಂಕಿ- ಅಂಶ ನೀಡುವ ಮೂಲಕ ಅತ್ಯುತ್ತಮವಾಗಿ ಕೊರೋನಾ ಸೋಂಕನ್ನು ನಿರ್ವಹಣೆ ಮಾಡಿದ್ದೇವೆ ಎಂದು ರಾಜ್ಯ ಸರ್ಕಾರ ಹೇಳಿಕೊಳ್ಳುತ್ತಿದೆ ಎಂದು ಕಾಂಗ್ರೆಸ್ ವಿಧಾನ ಪರಿಷತ್ ಸದಸ್ಯ ಯು.ಬಿ. ವೆಂಕಟೇಶ್ ಕಿಡಿಕಾರಿದರು.
ರಾಜ್ಯಪಾಲರ ಭಾಷಣಕ್ಕೆ ವಂದನಾ ನಿರ್ಣಯದ ಮೇಲೆ ಮಾತನಾಡಿದ ಅವರು, ಕೊರೋನಾ ಸೋಂಕಿನಿಂದ ಲಕ್ಷಾಂತರ ಮಂದಿ ಸಾವಿಗೀಡಾಗಿದ್ದಾರೆ. ಕೊರೋನಾ ಪರಿಹಾರ ಧನ ವಿತರಣೆಯಲ್ಲೂ ಭ್ರಷ್ಟಾಚಾರ ನಡೆಯುತ್ತಿದೆ. ಮೃತಪಟ್ಟಕೊರೋನಾ ವಾರಿಯರ್‌ಗಳ ಕುಟುಂಬಸ್ಥರಿಗೆ 30 ಲಕ್ಷ, ಉದ್ಯೋಗ ನೀಡಿಲ್ಲ. ಸದ್ಯ ಸೋಂಕು ಪರೀಕ್ಷೆಯನ್ನು ಕಡಿಮೆ ಮಾಡಿ ಸೋಂಕು ಕಡಿಮೆಯಾಗಿದೆ ಎಂದು ಹೇಳುತ್ತಿದೆ. ಹೀಗೆ, ಕೊರೋನಾ ನಿರ್ವಹಣೆಯ ಪ್ರತಿಯೊಂದು ಹಂತದಲ್ಲೂ ಸುಳ್ಳು ಮಾಹಿತಿ ನೀಡಿ, ಅವ್ಯವಹಾರ ಮಾಡಿರುವ ರಾಜ್ಯ ಸರ್ಕಾರವು ಕೊರೋನಾ ಖರ್ಚು- ವೆಚ್ಚ ಕುರಿತು ಶ್ವೇತಪತ್ರ ಹೊರಡಿಸಲು ಹಿಂದೇಟು ಹಾಕುತ್ತಿದೆ. ಆದರೆ, ರಾಜ್ಯಪಾಲರ ಭಾಷಣದಲ್ಲಿ ಕೊರೋನಾವನ್ನು ಸಮರ್ಥವಾಗಿ ನಿರ್ವಹಣೆ ಮಾಡಿದ್ದೇವೆ ಎಂದು ಹೇಳಿಕೊಂಡಿದೆ ಎಂದರು.
ವೈಫಲ್ಯ ಚಕಾರ ಎತ್ತಿಲ್ಲ: ಕಾಂಗ್ರೆಸ್ ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್ ಮಾತನಾಡಿ, ಶ್ರಮ ವಹಿಸಿ ಕೊರೋನಾ ವಿರುದ್ಧ ಹೋರಾಡಿದ ವಾರಿಯರ್‌ಗಳಿಗೆ ಅಪಾಯ ಭತ್ಯೆಯನ್ನು ರಾಜ್ಯ ಸರ್ಕಾರ ನೀಡಿಲ್ಲ. ಅಂಗವಿಕಲರ ಸಹಾಯಧನ ತಲುಪಿಲ್ಲ. ಗಂಗಕಲ್ಯಾಣ ಯೋಜನೆ ಸಾಕಷ್ಟುಮಂದಗತಿಯಲ್ಲಿದೆ. ಎತ್ತಿನ ಹೊಳೆ ಯೋಜನೆ ಕಾಮಗಾರಿ ಪೂರ್ಣಗೊಳ್ಳದೇ ಎರಡು ಟಿಎಂಸಿ ನೀರು ಹಂಚಿಕೆ ಬಗ್ಗೆ ಸರ್ಕಾರ ಉಲ್ಲೇಖಿಸಿದೆ. ಇಂತಹ ವೈಫಲ್ಯಗಳ ಬಗ್ಗೆ ರಾಜ್ಯಪಾಲರು ಚಕಾರ ಎತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಶಿವಮೊಗ್ಗದಲ್ಲೊಂದು ವಿಧಾನಸೌಧ ಕಟ್ಟಿಸಿ: ಕಾಂಗ್ರೆಸ್‌ನ ಅರವಿಂದಕುಮಾರ ಅರಳಿ ಮಾತನಾಡಿ, ರಾಜ್ಯ ಸರ್ಕಾರ ಬರೀ ಶಿವಮೊಗ್ಗ ಜಿಲ್ಲೆಗೆ ಆದ್ಯತೆ ನೀಡಿ ಉಳಿದ ಜಿಲ್ಲೆಗಳಿಗೆ ತಾರತಮ್ಯ ನೀತಿ ಅನುಸರಿಸಿದೆ. ಕೇವಲ ಸುಳ್ಳುಗಳನ್ನೇ ರಾಜ್ಯಪಾಲರಿಂದ ಹೇಳಿಸಿ ಶಹಬ್ಬಾಸ್ ಗಿರಿ ಗಿಟ್ಟಿಸಿಕೊಂಡಿದೆ. ಎಲ್ಲ ಯೋಜನೆಗಳು ಶಿವಮೊಗ್ಗ ಜಿಲ್ಲೆಗೆ ಸೀಮಿತವಾಗಿವೆ. ಹೀಗಾಗಿ, ಶಿವಮೊಗ್ಗವನ್ನೇ ರಾಜಧಾನಿ ಮಾಡಿ, ಅಲ್ಲಿಯೇ ಇನ್ನೊಂದು ವಿಧಾನಸೌಧ ಕಟ್ಟಿಬಿಡಿ ಎಂದು ಲೇವಡಿ ಮಾಡಿದರು.
ಇದಕ್ಕೂ ಮುನ್ನ ಅರುಣ್ ಶಹಾಪುರ ಅವರು ವಿಧಾನಪರಿಷತ್ತಿನ ಆಡಳಿತ ಪಕ್ಷದ ಪರವಾಗಿ ರಾಜ್ಯಪಾಲರ ಭಾಷಣಕ್ಕೆ ವಂದನೆ ಅರ್ಪಿಸಿದರು. ಬಿಜೆಪಿ ಪರಿಷತ್ ಸದಸ್ಯರಾದ ಡಿ.ಎಸ್.ಅರುಣ್, ಬಾಬಣ್ಣ ತಳವಾರ್ ರಾಜ್ಯಪಾಲರ ಭಾಷಣಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
‘ಅನೈತಿಕ’ ಅಪಸ್ವರ: ವಿಧಾನ ಪರಿಷತ್ ಸದಸ್ಯ ಯು.ಬಿ.ವೆಂಕಟೇಶ್ ರಾಜ್ಯಪಾಲರ ಭಾಷಣದ ವಂದನಾ ನಿರ್ಣಯದ ವೇಳೆ ‘ಅನೈತಿಕ ಸರ್ಕಾರ’ ಎಂದು ರಾಜ್ಯ ಸರ್ಕಾರಕ್ಕೆ ಲೇವಡಿ ಮಾಡಿದರು. ಕೂಡಲೇ ಭಾಷಣಕ್ಕೆ ವಿರೋಧ ವ್ಯಕ್ತಪಡಿಸಿದ ಸಚಿವರಾದ ಬೈರತಿ ಬಸವರಾಜ್, ಎಸ್.ಟಿ.ಸೋಮಶೇಖರ್, ಕೋಟ ಶ್ರೀನಿವಾಸ ಪೂಜಾರಿ, ಆಡಳಿತ ಪಕ್ಷದ ವಿಧಾನ ಪರಿಷತ್ ಸದಸ್ಯರಾದ ನಾರಾಯಣ ಸ್ವಾಮಿ, ಎಂ.ಕೆ.ಪ್ರಾಣೇಶ್ ಅವರು ಕಡತದಿಂದ ಅನೈತಿಕ ಸರ್ಕಾರ ಪದ ತೆಗೆದು ಹಾಕುವಂತೆ ಪಟ್ಟು ಹಿಡಿದರು. ಸಭಾಪತಿಗಳು ಮಧ್ಯೆ ಪ್ರವೇಶಿಸಿ ಅಸಂವಿಧಾನಿಕ ಪದ ಅಲ್ಲ ಎಂದು ಆಡಳಿತ ಪಕ್ಷಕ್ಕೆ ತಿಳಿಹೇಳಿ ಭಾಷಣ ಮುಂದುವರೆಸಲು ಅನುವು ಮಾಡಿಕೊಟ್ಟರು.
