ಬೆಂಗಳೂರು[ಜ.23]:  ಅಕ್ರಮ ಬಾಂಗ್ಲಾ ವಲಸಿಗರ ತೆರವು ಕಾರ್ಯಾಚರಣೆ ಹೆಸರಲ್ಲಿ ನಗರದ ದೇವರಬೀಸನಹಳ್ಳಿ, ಕುಂದನಹಳ್ಳಿ, ಕರಿಯಮ್ಮನ ಅಗ್ರಹಾರ ಹಾಗೂ ಬೆಳ್ಳಂದೂರಿನ ವಿವಿಧ ಭಾಗಗಳಲ್ಲಿನ ಜೋಪಡಿಗಳನ್ನು ಯಾವ ಕಾನೂನಿನಡಿ ಹಾಗೂ ಯಾವ ಅಧಿಕಾರ ಬಳಸಿ ನೆಲಸಮ ಮಾಡಲಾಗಿದೆ ಎಂಬ ಬಗ್ಗೆ ವಿವರಣೆ ಒಳಗೊಂಡ ಪ್ರಮಾಣಪತ್ರ ಸಲ್ಲಿಸುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ ನಿರ್ದೇಶಿಸಿದೆ.

ಜೋಪಡಿಗಳನ್ನು ತೆರವುಗೊಳಿಸಿರುವ ಕ್ರಮ ಪ್ರಶ್ನಿಸಿ ‘ಪೀಪಲ್ಸ್‌ ಯೂನಿಯನ್‌ ಫಾರ್‌ ಸಿವಿಲ್‌ ಲಿಬರ್ಟೀಸ್‌-ಕರ್ನಾಟಕ’ (ಪಿಯುಸಿಎಲ್‌) ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್‌. ಓಕ ಅವರ ನೇತೃತ್ವದ ವಿಭಾಗೀಯ ನ್ಯಾಯಪೀಠ ಈ ಸೂಚನೆ ನೀಡಿತು.

ಅಲ್ಲದೇ, ಅರ್ಜಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ, ಗೃಹ ಇಲಾಖೆ ಪ್ರಧಾನ ಕಾರ್ಯದರ್ಶಿ, ವಸತಿ ಇಲಾಖೆ ಪ್ರಧಾನ ಕಾರ್ಯದರ್ಶಿ, ಬಿಬಿಎಂಪಿ ಆಯುಕ್ತರು, ನಗರ ಪೊಲೀಸ್‌ ಆಯುಕ್ತರು ಹಾಗೂ ಮಾರತ್‌ಹಳ್ಳಿ ಪೊಲೀಸ್‌ ಠಾಣಾ ಇನ್ಸ್‌ಪೆಕ್ಟರ್‌ಗೆ ನ್ಯಾಯಪೀಠ ನೋಟಿಸ್‌ ಜಾರಿಗೊಳಿಸಿತು. ಹಾಗೆಯೇ, ಮುಂದಿನ ತೆರವು ಕಾರ್ಯಾಚರಣೆಗೆ ಮಧ್ಯಂತರ ತಡೆಯಾಜ್ಞೆ ನೀಡಿ ವಿಚಾರಣೆಯನ್ನು ಜ.30ಕ್ಕೆ ಮುಂದೂಡಿತು.

ಸುವರ್ಣನ್ಯೂಸ್ ಸುದ್ದಿಗೆ ಬೆದರಿದ ಬೆಂಗಳೂರಿನ ಬಾಂಗ್ಲಾ..!...

ಅಕ್ರಮ ಬಾಂಗ್ಲಾ ವಲಸಿಗರು ನೆಲೆಸಿದ್ದಾರೆ ಎಂಬ ಕಾರಣ ನೀಡಿ ಮಾರತಹಳ್ಳಿ ಪೊಲೀಸ್‌ ಠಾಣಾ ವ್ಯಾಪ್ತಿಯ ವಾರ್ಡ್‌ ಸಂಖ್ಯೆ 151ರ ಮಂತ್ರಿ ಇಸ್ಪಾನ್‌ ಅಪಾರ್ಟ್‌ಮೆಂಟ್‌ ಬಳಿಯ ಕರಿಯಮ್ಮನ ಅಗ್ರಹಾರ, ದೇವರಬೀಸನಹಳ್ಳಿ, ಕುಂದನಹಳ್ಳಿ, ಬೆಳ್ಳಂದೂರು ಪ್ರದೇಶಗಳಲ್ಲಿನ ಜೋಪಡಿಗಳನ್ನು ನೆಲಸಮಗೊಳಿಸಲಾಗಿದೆ. ಆದರೆ, ಅಲ್ಲಿ ವಾಸ ಮಾಡುತ್ತಿದ್ದವರು ಅಕ್ರಮ ಬಾಂಗ್ಲಾ ವಲಸಿಗರು ಅಲ್ಲ. ರಾಯಚೂರು, ಹುಬ್ಬಳ್ಳಿ, ಧಾರವಾಡ ಸೇರಿದಂತೆ ಉತ್ತರ ಕರ್ನಾಟಕದ ಜಿಲ್ಲೆಯವರು ಹಾಗೂ ಆಸ್ಸಾಂ, ತ್ರಿಪುರಾ, ಪಶ್ಚಿಮ ಬಂಗಾಳ ಮತ್ತು ಬಿಹಾರದವರಾಗಿದ್ದಾರೆ. ಅವರು ಉದ್ಯೋಗ ಅರಸಿ ಬಂದವರು. ಕಳೆದ 5 ರಿಂದ 10 ವರ್ಷಗಳಿಂದ ಈ ಜಾಗದಲ್ಲಿ ವಾಸ ಮಾಡುತ್ತಿದ್ದಾರೆ. ತರಾತುರಿಯಲ್ಲಿ ನೋಟಿಸ್‌ ನೀಡಿ ತೆರವು ಕಾರ್ಯಾಚರಣೆ ನಡೆಸಲಾಗಿದೆ ಎಂದು ಅರ್ಜಿಯಲ್ಲಿ ದೂರಲಾಗಿದೆ.

 ಅಕ್ರಮ ವಲಸಿಗರೆಂದು ಹೇಗೆ ನಿರ್ಧರಿಸಿದ್ರೀ?:

ಇದಕ್ಕೂ ಮುನ್ನ ಜೋಪಡಿಗಳನ್ನು ತೆರವುಗೊಳಿಸುವ ಕ್ರಮ ಪ್ರಶ್ನಿಸಿದ ನ್ಯಾಯಪೀಠ, ವಿವಾದಿತ ಪ್ರದೇಶದಲ್ಲಿ ವಾಸ ಮಾಡುತ್ತಿದ್ದವರು ಅಕ್ರಮ ವಲಸಿಗರು ಎಂದು ಹೇಗೆ ನಿರ್ಧರಿಸಲಾಯಿತು. ಅದರ ಮಾಹಿತಿ ಮೂಲ ಯಾವುದು, ಅದಕ್ಕಿರುವ ದಾಖಲೆಗಳೇನು, ಸ್ಥಳ ಪರಿಶೀಲನೆ ನಡೆಸಿದ ಅಧಿಕಾರಿಗಳು ಯಾರು, ಪೊಲೀಸ್‌ ನೋಟಿಸ್‌ ಕೊಟ್ಟವರು ಯಾರು? ಯಾವ ಕಾಯ್ದೆಯಡಿ ಅಧಿಕಾರ ಚಲಾಯಿಸಿ ತೆರವು ಕಾರ್ಯಾಚರಣೆ ನಡೆಸಲಾಗಿದೆ ಎಂದು ಪ್ರಶ್ನಿಸಿ, ಮುಂದಿನ ವಿಚಾರಣೆ ವೇಳೆ ಆ ಕುರಿತು ವಿವರಣೆಯನ್ನೊಳಗೊಂಡ ಪ್ರಮಾಣ ಪತ್ರ ಸಲ್ಲಿಸುವಂತೆ ಸರ್ಕಾರ, ಬಿಬಿಎಂಪಿಗೆ ನಿರ್ದೇಶಿಸಿತು.