ಮೈಸೂರು, (ಆ.22): ಬಿಜೆಪಿ ನಾಯಕರು ತಮ್ಮ ರಾಜಕೀಯ ಪ್ರತಿಷ್ಠಗಾಗಿ ಮೈಸೂರು ಜಿಲ್ಲಾಧಿಕಾರಿ ಅಭಿರಾಮ್.ಜಿ.ಶಂಕರ್ ಅವರನ್ನು ಎತ್ತಂಗಡಿ ಮಾಡಿಸಿದ್ದಾರೆ.ಮೈಸೂರು ಜಿಲ್ಲಾಧಿಕಾರಿ ಅಭಿರಾಮ್.ಜಿ.ಶಂಕರ್ ಅವರನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಇಂದು (ಗುರುವಾರ) ಆದೇಶ ಹೊರಡಿಸಿದೆ.  

"

ದಸರಾ ಗಜಪಯಣದಲ್ಲಿ ಬಿಜೆಪಿ ಭಿನ್ನಮತ ಸ್ಫೋಟ; ಎರೆಡೆರಡು ಬಾರಿ ಪೂಜೆ!

ವಾಣಿಜ್ಯ ತೆರಿಗೆ ಇಲಾಖೆ ಜಾರಿ ವಿಭಾಗದ ಸಹಾಯಕ ಆಯುಕ್ತರಾಗಿದ್ದ ನಿತೀಶ್ ಪಾಟೀಲ್ ಅವರನ್ನು ಈಗ ಮೈಸೂರು ಹೊಸ ಡಿಸಿಯಾಗಿ ವರ್ಗಾಹಿಸಲಾಗಿದೆ. ನಿತೀಶ್ ಜಾಗಕ್ಕೆ ಅಭಿರಾಮ್ ಜಿ. ಶಂಕರ್ ವರ್ಗಾವಣೆ ಮಾಡಲಾಗಿದೆ.

ರಾಜಕೀಯ ಪ್ರತಿಷ್ಠಗೆ ಮೈಸೂರು ಡಿಸಿ ತಲೆದಂಡ
ಹೌದು...ಮೈಸೂರು ಜಿಲ್ಲಾಧಿಕಾರಿ ಶಂಕರ್ ಅವರ ಎತ್ತಂಗಡಿಯಿಂದ ರಾಜಕೀಯ ವಾಸನೆ ಕೇಳಬಂದಿದೆ. ಗಜಪಯಣ ಕಾರ್ಯಕ್ರಮಕ್ಕೆ ಸ್ಥಳೀಯ ಬಿಜೆಪಿ ಶಾಸಕ ರಾಮ್‌ದಾಸ್‌ ಅವರು ಪೂಜೆ ಮಾಡಿದ್ದಾರೆ. 

ನಂತರ ಸಚಿವರಾದ ಆರ್. ಅಶೋಕ್ ಹಾಗೂ ವಿ. ಸೋಮಣ್ಣ ತಡವಾಗಿ ಬಂದು ಮತ್ತೆ ಪೂಜೆ ಮಾಡಿದ ಪ್ರಸಂಗ ನಡೆಯಿತು. ಈ ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ಜಿಲ್ಲಾಧಿಕಾರಿ ಅಭಿರಾಮ್.ಜಿ.ಶಂಕರ್ ವರ್ಗಾವಣೆ ಮಾಡಿರುವುದು ಹಲವು ಚರ್ಚೆಗಳಿಗೆ ಗ್ರಾಸವಾಗಿದೆ. 

ಗಜಪಯಣ ಕಾರ್ಯಕ್ರಮಕ್ಕೆ ನಿಯೋಜನೆಯಾಗಿದ್ದ ಮಂತ್ರಿ ಬರುವುದಕ್ಕೂ ಮುಂಚೆ ಪೂಜೆ ಮಾಡಿರುವುದಕ್ಕೆ ಜಿಲ್ಲಾಧಿಕಾರಿ ಶಂಕರ್ ಅವರನ್ನು ಹೊಣೆ ಮಾಡಿ ಟ್ರಾನ್ಸ್‌ಫರ್ ಮಾಡಲಾಗಿದೆ ಎನ್ನುವುದು ಮೇಲ್ನೋಟಕ್ಕೆ ತಿಳಿದುಬಂದಿದೆ.

ಈ ಬಾರಿ ದಸರಾವನ್ನು ಅದ್ಧೂರಿಯಾಗಿ ಆಚರಿಸಬೇಕೆಂದು ಜಿಲ್ಲಾಡಳಿತ ಸಕಲ ಸಿದ್ಧತೆ ನಡೆಸಿತ್ತು. ಇದರ ಬೆನ್ನಲ್ಲೇ ಜಿಲ್ಲಾಧಿಕಾರಿಗಳನ್ನು ವರ್ಗಾವಣೆ ಮಾಡಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಒಟ್ಟಿನಲ್ಲಿ ಬಿಜೆಪಿ ನಾಯಕರು ತಮ್ಮ ರಾಜಕೀಯ ಪ್ರತಿಷ್ಠೆಗೆ ಡಿಸಿ ಅಭಿರಾಮ್ ಜಿ. ಶಂಕರ್ ಬಲಿಯಾಗಿರುವುದು ವಿಷಾದನೀಯ.