JDSಗೆ ದೊಡ್ಡ ಆಘಾತ : ಇಬ್ಬರ ಅನರ್ಹತೆಗೆ ಮುಂದಾದ ರಾಜ್ಯ ಸರ್ಕಾರ
ರಾಜ್ಯದಲ್ಲಿ ಅಧಿಕಾರ ಕಳೆದುಕೊಂಡ ಜೆಡಿಎಸ್ ಗೆ ಇದೀಗ ಮತ್ತೊಂದು ದೊಡ್ಡ ಆಘಾತ ಎದುರಾಗಿದೆ.ಇಬ್ಬರ ಅನರ್ಹತೆಗೆ ಸರ್ಕಾರ ಮುಂದಾಗಿದೆ.
ಮಂಡ್ಯ [ಸೆ.19]: ಮನ್ಮುಲ್ ಚುನಾವಣೆಯಲ್ಲಿ 8 ಸ್ಥಾನ ಗೆಲ್ಲುವ ಮೂಲಕ ಅಧಿಕಾರ ಹಿಡಿಯುವ ಹುಮ್ಮಸ್ಸಿನಲ್ಲಿದ್ದ ಜೆಡಿಎಸ್‌ಗೆ ದೊಡ್ಡ ಅಘಾತ ಎದುರಾಗಿದೆ.ತಾಂತ್ರಿಕ ನೆಪವೊಡ್ಡಿ ಇಬ್ಬರು ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳ ಸದಸ್ಯತ್ವ ಅನರ್ಹ ಮಾಡಲು ರಾಜ್ಯ ಸರ್ಕಾರ ಮುಂದಾಗಿದೆ.
ಜೆಡಿಎಸ್ ಸದಸ್ಯರಾದ ನಲ್ಲಿಗೆರೆ ಬಾಲು ಮತ್ತು ಎಚ್.ಟಿ. ಮಂಜುನಾಥ್‌ಗೆ ಸಹಕಾರ ಸಂಘಗಳ ಉಪ ನಿಬಂಧಕರಿಂದ ನೋಟಿಸ್ ಬಂದಿದ್ದು,ಚುನಾವಣೆ ಷರತ್ತನ್ನು ಪಾಲಿಸಿಲ್ಲ ಎಂದು ನೋಟಿಸ್ ನೀಡಿದ್ದಾರೆ.
ಈ ಮೂಲಕ ಜೆಡಿಎಸ್ ನಾಯಕರ ಅಧಿಕಾರದ ಕನಸು ಕಮರಿ ಹೋಗಿದೆ. ಸದಸ್ಯ ನಲ್ಲಿಗೆರೆ ಬಾಲು ಸಹೋದರ ಮನ್ ಮುಲ್ ನ ವ್ಯಾಪ್ತಿಯ ಹಾಲು ಉತ್ಪಾದಕರ ಸಹಕಾರ ಸಂಘದ ಕಾರ್ಯದರ್ಶಿಯಾಗಿ ನಿರ್ವಹಿಸುತ್ತಿದ್ದು ಇದು ಕಾನೂನು ಬಾಹಿರ ಎನ್ನಲಾಗಿದೆ. ಸಂಘದ ಬೈಲಾ ಪ್ರಕಾರ ಸಂಬಂಧಿಕರು ಕೆಲಸ ನಿರ್ವಹಿಸುವಂತಿಲ್ಲ ಎಂಬ ಷರತ್ತು ಇದ್ದು, ಈ ಷರತ್ತು ಉಲ್ಲಂಘನೆಯ ಕಾರಣ ನೀಡಿ ಸದಸ್ಯತ್ವ ರದ್ದತಿಗೆ ನೋಟಿಸ್ ನೀಡಲಾಗಿದೆ.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಇನ್ನು ಕೆ.ಆರ್.ಪೇಟೆಯ ಎಚ್.ಟಿ. ಮಂಜುನಾಥ್ 180 ದಿನ ಸಹಕಾರ ಸಂಘಕ್ಕೆ ಹಾಲು ಪೂರೈಕೆ ಮಾಡಿಲ್ಲ ಎಂಬ ಕಾನೂನಿನ ನಿಯಮ ಹೇಳಿ ಸದಸ್ಯತ್ವ ರದ್ದು ಮಾಡಲು ಸರ್ಕಾರ ಮುಂದಾಗಿದೆ. ಈ ವಿಚಾರ ತಿಳಿದ ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಇಂದು ಸಹಕಾರ ಸಂಘದ ಕಚೇರಿಗೆ ತೆರಳಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ನಮ್ಮ ಸದಸ್ಯರನ್ನು ಅನರ್ಹ ಮಾಡುವ ಮೂಲಕ ಜೆಡಿಎಸ್ ಗೆ ಅಧಿಕಾರ ತಪ್ಪಿಸಲು ಸರ್ಕಾರ ಮತ್ತು ಅಧಿಕಾರಿಗಳು ಮುಂದಾಗಿದ್ದಾರೆ ಎಂದು ಆಕ್ರೋಶ ಹೊರ ಹಾಕಿದರು.