ಬೆಂಗಳೂರು [ನ.28]:  ರಾಜ್ಯಪಾಲ ವಜುಭಾಯಿ ವಾಲಾ (80) ಅವರು ಹೃದಯ ಸಮಸ್ಯೆಯಿಂದ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. ಶಸ್ತ್ರಚಿಕಿತ್ಸೆ ಬಳಿಕ ರಾಜ್ಯಪಾಲರ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದ್ದು, ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಮುಂದುವರೆಸಲಾಗಿದೆ.

ನವೆಂಬರ್‌ ಮೊದಲ ವಾರದಲ್ಲಿ ಫೋರ್ಟಿಸ್‌ (ದಕ್ಷಿಣ) ಆಸ್ಪತ್ರೆಯಲ್ಲಿ ರಾಜ್ಯಪಾಲರಿಗೆ ಆ್ಯಂಜಿಯೋಗ್ರಾಂ ನಡೆಸಲಾಗಿತ್ತು. ಇತ್ತೀಚೆಗೆ ಅವರ ಆರೋಗ್ಯದಲ್ಲಿ ಮತ್ತೆ ಏರುಪೇರು ಉಂಟಾದ ಹಿನ್ನೆಲೆಯಲ್ಲಿ ನ.25ರ ಸೋಮವಾರ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಈ ವೇಳೆ ಆರೋಗ್ಯ ಪರೀಕ್ಷೆ ನಡೆಸಿದ್ದ ವೈದ್ಯರು, ಅಪಧಮನಿಯಲ್ಲಿ ಉಂಟಾಗಿದ್ದ ಬ್ಲಾಕ್‌ಗಳಿಗೆ ಬೈಪಾಸ್‌ ಶಸ್ತ್ರಚಿಕಿತ್ಸೆ ನಡೆಸಿದ್ದಾರೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.

ಫೋರ್ಟಿಸ್‌ (ದಕ್ಷಿಣ) ಹೃದ್ರೋಗ ತಜ್ಞ ಡಾ. ವಿವೇಕ್‌ ಜವಳಿ ನೇತೃತ್ವದ ವೈದ್ಯರ ತಂಡ ಯಶಸ್ವಿಯಾಗಿ ಕೊರೊನರಿ ಆರ್ಟರಿ ಬೈಪಾಸ್‌ ಗ್ರಾಫ್ಟಿಂಗ್‌ (ಸಿಎಬಿಜಿ) ಶಸ್ತ್ರಚಿಕಿತ್ಸೆ ನಡೆಸಿದೆ. ಮಂಗಳವಾರ ಹಾಗೂ ಬುಧವಾರ ಕುಟುಂಬದ ಸದಸ್ಯರು ಭೇಟಿ ಮಾಡಿ ಮಾತುಕತೆ ನಡೆಸಿದರು. ವಾಲಾ ಅವರು ಸೂಕ್ತವಾಗಿ ಸ್ಪಂದಿಸುತ್ತಿದ್ದಾರೆ. ಆದರೂ ಮುನ್ನೆಚ್ಚರಿಕಾ ಕ್ರಮವಾಗಿ ದಿನದ 24 ಗಂಟೆ ನಿಗಾ ಘಟಕದಲ್ಲಿ ಚಿಕಿತ್ಸೆ ಮುಂದುವರೆಸಲಾಗಿದೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ರಾಜ್ಯಪಾಲರಿಗೆ ಮಧುಮೇಹ ಹಾಗೂ ಎಂಡೋಕ್ರೈನ್‌ ಸಮಸ್ಯೆಯೂ ಇದೆ. ಹೀಗಾಗಿ ಅನಾರೋಗ್ಯ ಸಮಸ್ಯೆಯಿಂದ ಕೆಲವು ವಾರಗಳಿಂದ ಅವರು ಆರೋಗ್ಯ ಪರೀಕ್ಷೆಗಳಿಗೆ ಒಳಪಟ್ಟಿದ್ದರು. ತಪಾಸಣೆ ನಡೆಸಿದ್ದ ವೈದ್ಯರ ತಂಡ ಶಸ್ತ್ರಚಿಕಿತ್ಸೆ ಅಗತ್ಯವಿದೆ ಎಂದು ಹೇಳಿತ್ತು. ಇದೇ ಕಾರಣಕ್ಕಾಗಿ ನ.23ರಂದು ರಾಷ್ಟ್ರಪತಿ ಭವನದಲ್ಲಿ ನಡೆದ ರಾಜ್ಯಪಾಲರ ಸಭೆಯಲ್ಲಿ ಭಾಗಿಯಾಗಿರಲಿಲ್ಲ. ಪ್ರಸ್ತುತ ಶಸ್ತ್ರಚಿಕಿತ್ಸೆ ಬಳಿಕ ಅವರ ಆರೋಗ್ಯ ಸಾಕಷ್ಟುಸುಧಾರಿಸಿದೆ ಎಂದು ತಿಳಿದುಬಂದಿದೆ.

ಸಿಎಂ ಭೇಟಿ, ಆರೋಗ್ಯ ವಿಚಾರಣೆ:  ರಾಜ್ಯಪಾಲ ವಜುಭಾಯಿ ವಾಲಾ ಅವರನ್ನು ಆಸ್ಪತ್ರೆಯಲ್ಲಿ ಭೇಟಿ ಮಾಡಿದ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು ಆರೋಗ್ಯ ವಿಚಾರಿಸಿ ಶೀಘ್ರ ಗುಣಮುಖರಾಗುವಂತೆ ಹಾರೈಸಿದರು.

ಬಳಿಕ ಟ್ವೀಟರ್‌ನಲ್ಲೂ ಹಂಚಿಕೊಂಡಿರುವ ಅವರು, ಅನಾರೋಗ್ಯದ ಕಾರಣದಿಂದ ಖಾಸಗಿ ಆಸ್ಪತ್ರೆಗೆ ದಾಖಲಾಗಿರುವ ರಾಜ್ಯಪಾಲ ವಜುಭಾಯಿ ವಾಲಾ ಅವರನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸಿದ್ದೇನೆ. ಅವರು ಶೀಘ್ರ ಗುಣಮುಖರಾಗಲೆಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದಿದ್ದಾರೆ.