ಕೊಡಗು : ಸಾವಿರಾರು ಹೆಕ್ಟೇರ್ ಪ್ರದೇಶದ ಭತ್ತ ಕೃಷಿ ಮಣ್ಣುಪಾಲು!
ಕೊಡಗಿನಲ್ಲಿ ಸುರಿದ ಭಾರೀ ಮಳೆಯು ಸಾವಿರಾರು ಎಕರೆ ಭತ್ತದ ಭೂಮಿಯನ್ನು ಸರ್ವನಾಶ ಮಾಡಿದೆ. ಇದರಿಂದ ಜನರು ಹೊತ್ತಿನ ತುತ್ತಿನ ಚೀಲಕ್ಕಾಗಿ ಚಿಂತಿಸುವ ಸ್ಥಿತಿ ಎದುರಾಗಿದೆ.
ವಿಘ್ನೇಶ ಎಂ. ಭೂತನಕಾಡು
ಮಡಿಕೇರಿ[ಆ.27]: ಸತತ ಒಂದು ವಾರ ಸುರಿದ ಮಹಾ ಮಳೆಯಿಂದಾಗಿ ಜಿಲ್ಲೆಯಲ್ಲಿ ಅಂದಾಜು 3,730 ಹೆಕ್ಟೇರ್ ಪ್ರದೇಶದ ಭತ್ತದ ಕೃಷಿ ಮಣ್ಣುಪಾಲಾಗಿದ್ದು, ಮತ್ತೆ ಭತ್ತದ ಕೃಷಿಯಿಂದ ಕೊಡಗಿನ ಬೆಳೆಗಾರರು ಹಿಂದೆ ಸರಿಯುವಂತಹ ದುಸ್ಥಿತಿ ಎದುರಾಗಿದೆ.
ಜಿಲ್ಲೆಯ ಮಡಿಕೇರಿ, ಸೋಮವಾರಪೇಟೆ ಹಾಗೂ ವಿರಾಜಪೇಟೆ ಮೂರೂ ತಾಲೂಕಿನಲ್ಲಿ 30,500 ಹೆಕ್ಟೇರ್ ಪ್ರದೇಶದಲ್ಲಿ ಭತ್ತದ ಕೃಷಿ ಮಾಡಲು ಕೃಷಿ ಇಲಾಖೆ ಗುರಿ ಹೊಂದಿತ್ತು. ಆದರೆ ಈ ಬಾರಿ ಸತತ ಸುರಿದ ಮಳೆಗೆ ಭೀಕರ ಪ್ರವಾಹ ಉಂಟಾದ ಹಿನ್ನೆಲೆಯಲ್ಲಿ ಭತ್ತದ ಗದ್ದೆಗಳಲ್ಲಿ ತ್ಯಾಜ್ಯಗಳು, ಮರಳು ತುಂಬಿಕೊಂಡಿದ್ದು, ಇದೀಗ ಬೆಳೆಗಾರರು ಸಂಕಷ್ಟಅನುಭವಿಸುತ್ತಿದ್ದಾರೆ.
ಕಳೆದ ವರ್ಷ ಕೊಡಗು ಜಿಲ್ಲೆಯ ಹಲವೆಡೆ ಭೂಕುಸಿತ ಹಾಗೂ ಪ್ರವಾಹದ ಪರಿಣಾಮ ಅಪಾರ ಪ್ರಮಾಣದಲ್ಲಿ ಭತ್ತದ ಕೃಷಿ ಮಾಡಲು ಗದ್ದೆಗಳು ಯೋಗ್ಯವಲ್ಲದ ಸ್ಥಿತಿಯಲ್ಲಿತ್ತು. ಆದರೂ ಗದ್ದೆಗಳನ್ನು ಪಾಳು ಬಿಡಬಾರದೆಂಬ ನಿಟ್ಟಿನಲ್ಲಿ ಬೆಳೆಗಾರರು ಬತ್ತದ ನಾಟಿ ಮಾಡಿದ್ದರು. ಈ ಬಾರಿ ಆರಂಭದಲ್ಲೇ ಮುಂಗಾರು ಕೊರತೆ ಎದುರಿಸಿದ್ದ ಬೆಳೆಗಾರರು ಕೆರೆಯ ನೀರನ್ನು ಬಳಸಿ ತಡವಾಗಿಯೇ ನಾಟಿ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಆದರೆ ಆ.7ರಿಂದ ಸತತವಾಗಿ ಸುರಿದ ಮಹಾ ಮಳೆ ಭತ್ತದ ಗದ್ದೆಗಳನ್ನು ಕೆರೆಯಂತಾಗಿಸಿತು. ಸುಮಾರು ಒಂದು ವಾರಗಳ ಕಾಲ ನಾಟಿ ಮಾಡಿದ್ದ ಭತ್ತದ ಪೈರು ನೀರಿನಲ್ಲೇ ಕೊಳೆಯಿತು.
ಸಬ್ಸಿಡಿ ದರದಲ್ಲಿ ಬಿತ್ತನೆ ಬೀಜ:
ಜಿಲ್ಲೆಯಲ್ಲಿ ಪ್ರವಾಹದಿಂದಾಗಿ ನಾಟಿ ಮಾಡಿದ್ದ ಭತ್ತದ ಕೃಷಿಗೆ ಹಾನಿಯುಂಟಾಗಿರುವ ಹಿನ್ನೆಲೆಯಲ್ಲಿ ಇದೀಗ ಮತ್ತೆ ನಾಟಿ ಮಾಡುವ ನಿಟ್ಟಿನಲ್ಲಿ ಕೃಷಿ ಇಲಾಖೆಯಿಂದ ರೈತರಿಗೆ ಸಬ್ಸಿಡಿ ದರದಲ್ಲಿ ಬಿತ್ತನೆ ಬೀಜವನ್ನು ವಿತರಣೆ ಮಾಡಲಾಗುತ್ತಿದ್ದು, ಸಂಬಂಧಿಸಿದ ಬೆಳೆಗಾರರು ರೈತ ಸಂಪರ್ಕ ಕೇಂದ್ರಗಳಿಗೆ ಭೇಟಿ ನೀಡಿ ಬಿತ್ತನೆ ಬೀಜಗಳನ್ನು ಪಡೆದುಕೊಂಡು ಮತ್ತೆ ನಾಟಿ ಕೃಷಿಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬಹುದು ಎಂದು ಅಧಿಕಾರಿಗಳು ಹೇಳುತ್ತಾರೆ.
ಹೆಚ್ಚಿನ ಜಿಲ್ಲಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ
ಸರ್ವೆ ನಡೆಯಲಿದೆ: ಈಗಾಗಲೇ ಜಿಲ್ಲೆಯಲ್ಲಿ 17,000 ಹೆಕ್ಟೇರ್ ಪ್ರದೇಶದಲ್ಲಿ ನಾಟಿ ಕಾರ್ಯ ಪೂರ್ಣಗೊಂಡಿದೆ. ಇದೀಗ ಭತ್ತದ ಕೃಷಿ ಹಾನಿಯ ಸಂಬಂಧ ಸರ್ವೇ ಕಾರ್ಯ ನಡೆಯಲಿದೆ. ಪ್ರಾಥಮಿಕ ವರದಿಯಂತೆ ಜಿಲ್ಲೆಯಲ್ಲಿ 3,730 ಹೆಕ್ಟೇರ್ ಪ್ರದೇಶದಲ್ಲಿನ ಭತ್ತದ ಗದ್ದೆ ಹಾನಿಗೊಳಗಾಗಿದ್ದು, ಅಂದಾಜು ಕೋಟಿ ರು. ನಷ್ಟಸಂಭವಿಸಿದೆ ಎಂದು ಕೃಷಿ ಇಲಾಖೆ ಅಂದಾಜಿಸಿದೆ. ಇದೀಗ ರೈತರ ಭತ್ತದ ಗದ್ದೆಗಳಿಗೆ ಸಂಬಂಧಿಸಿದ ಅಧಿಕಾರಿಗಳು ತೆರಳಿ ಸರ್ವೇ ಕಾರ್ಯ ನಡೆಸಿ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಿದ್ದಾರೆ. ನಂತರ ನಿಯಮದಂತೆ ಕೃಷಿಕರಿಗೆ ಪರಿಹಾರ ದೊರಕಲಿದೆ.
ಮೇವಿನ ಸಮಸ್ಯೆ ಭೀತಿ: ಕೊಡಗು ಜಿಲ್ಲೆಯಲ್ಲಿ ಬಹುತೇಕ ಕೃಷಿಕರು ಬತ್ತದ ಕೃಷಿ ಮಾಡುವುದು ಜಾನುವಾರುಗಳ ಮೇವಿಗೆ. ಭತ್ತದ ಕೃಷಿಯಲ್ಲಿ ಬಂದ ಫಸಲನ್ನು ತಮ್ಮ ಸ್ವಂತ ಬಳಕೆಗೆ ಉಪಯೋಗಿಸುತ್ತಾರೆ. ಆದರೆ ಈ ಬಾರಿ ಪ್ರವಾಹದಿಂದಾಗಿ ಮುಂದಿನ ದಿನಗಳಲ್ಲಿ ರೈತರ ಜಾನುವಾರುಗಳಿಗೆ ಮೇವಿನ ಸಮಸ್ಯೆ ಕಂಡುಬರುವ ಸಾಧ್ಯತೆಯಿದೆ. ಮೇವಿಗೆ ಕೇರಳದಲ್ಲಿ ಬೇಡಿಕೆ ಇರುವುದರಿಂದ ಜಿಲ್ಲೆಯಲ್ಲಿ ಬೆಳೆದ ಮೇವನ್ನು ಕೇರಳಕ್ಕೆ ರಫ್ತು ಮಾಡಲಾಗುತ್ತದೆ. ಇದರಿಂದ ಒಂದಿಷ್ಟುಆದಾಯ ಪಡೆಯುವ ರೈತರಿಗೆ ಗದ್ದೆಗಳು ಹಾನಿಯಾಗಿರುವ ಪರಿಣಾಮ ಸಮಸ್ಯೆಯಾಗಿದೆ.
ಪ್ರವಾಹದಿಂದಾಗಿ ಜಿಲ್ಲೆಯಲ್ಲಿ ಪ್ರಾಥಮಿಕ ವರದಿಯಂತೆ ಸುಮಾರು 3,730 ಹೆಕ್ಟೇರ್ ಪ್ರದೇಶದ ಭತ್ತದ ಕೃಷಿ ನಾಶವಾಗಿದ್ದು, ಅಂದಾಜು 4 ಕೋಟಿ ರು. ಅಷ್ಟುನಷ್ಟಸಂಭವಿಸಿದೆ. ಈ ಬಾರಿ ಜಿಲ್ಲೆಯಲ್ಲಿ 30,500 ಹೆಕ್ಟೇರ್ ಪ್ರದೇಶದಲ್ಲಿ ಬತ್ತದ ಕೃಷಿ ಮಾಡಲು ಗುರಿ ಹೊಂದಲಾಗಿತ್ತು. ಈಗಾಗಲೇ 17,000 ಹೆಕ್ಟೇರ್ ಪ್ರದೇಶದಲ್ಲಿ ನಾಟಿ ಕಾರ್ಯ ಪೂರ್ಣಗೊಂಡಿದೆ. ಇದೀಗ ಭತ್ತದ ಕೃಷಿ ಹಾನಿಯ ಸಂಬಂಧ ಸರ್ವೇ ಕಾರ್ಯ ನಡೆಯಲಿದೆ.
ರಾಜು, ಉಪ ನಿರ್ದೇಶಕರು ಕೃಷಿ ಇಲಾಖೆ ಮಡಿಕೇರಿ
ಮಳೆಯಿಂದಾಗಿ ಒಂದು ವಾರ ಭತ್ತದ ಗದ್ದೆಯಲ್ಲಿ ನೀರು ತುಂಬಿಕೊಂಡ ಹಿನ್ನೆಲೆಯಲ್ಲಿ ನಾಟಿ ಮಾಡಿದ್ದ ಪೈರು ಸಂಪೂರ್ಣ ನಾಶವಾಗಿದೆ. ಕೊಳೆತ ಪೈರನ್ನು ಕಿತ್ತರೂ ಅದರ ಬೇರು ಬರುತ್ತಿಲ್ಲ. ಇದರಿಂದ ಮತ್ತೆ ನಾಟಿ ಮಾಡಲು ಸಮಸ್ಯೆಯಾಗಿದೆ. ಗದ್ದೆಯಲ್ಲಿ ಮರಳು ಹಾಗೂ ತ್ಯಾಜ್ಯಗಳು ತುಂಬಿಕೊಂಡಿದ್ದು, ಕೃಷಿ ಮಾಡಲು ಯೋಗ್ಯವಲ್ಲದಂತಿದೆ.
-ಮೋಹನ್ ದೇವಯ್ಯ ಬಳ್ಳಿಮಾಡ, ಬೆಸಗೂರು ಗ್ರಾಮಸ್ಥ
ಭಾರಿ ಮಳೆಯಿಂದಾಗಿ ಬೇತ್ರಿಯಲ್ಲಿ ಕಾವೇರಿ ನದಿ ಮೈದುಂಬಿ ಹರಿದ ಪರಿಣಾಮ ನಮ್ಮ ಭತ್ತದ ಗದ್ದೆಗಳು ಸಂಪೂರ್ಣ ಜಲಾವೃತಗೊಂಡಿತ್ತು. ಗದ್ದೆಯಲ್ಲಿ ನಾಟಿ ಮಾಡಲಾಗಿದ್ದ ಭತ್ತದ ಬೆಳೆ ಹಾನಿಯಾಗಿದೆ. ಮುಂದೆ ಕೃಷಿ ಮಾಡಲು ಸಮಸ್ಯೆಯಾಗಿದೆ.
ದಿಲೀಪ್, ಬೇತ್ರಿ, ಕಡಬಗೇರಿ ಗ್ರಾಮ, ಕೃಷಿಕರು