ಬೆಂಗಳೂರು :  ಗಂಭೀರ ಹಾಗೂ ಮಾರಣಾಂತಿಕ ಕಾಯಿಲೆಗಳಿಗೆ ತುತ್ತಾದ ರಾಜ್ಯ ಸರ್ಕಾರಿ ನೌಕರರು ಹಾಗೂ ಅವರ ಕುಟುಂಬ ಸದಸ್ಯರಿಗೆ ನೋಂದಾಯಿತ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆಗಳಲ್ಲಿ ಉಚಿತವಾಗಿ ನಗದು ರಹಿತ ತೃತೀಯ ಹಂತದ ಆರೋಗ್ಯ ಸೇವೆ ಒದಗಿಸುವ ‘ಜ್ಯೋತಿ ಸಂಜೀವಿನಿ’ ಯೋಜನೆಗೆ ಆಯುಷ್ಮಾನ್‌ ಭಾರತ್‌ ಯೋಜನೆಯಡಿ ಒದಗಿಸುತ್ತಿರುವ ಹೆಚ್ಚುವರಿ ಚಿಕಿತ್ಸಾ ವಿಧಾನಗಳನ್ನೂ ಸೇರಿಸಿ ರಾಜ್ಯ ಆರೋಗ್ಯ ಇಲಾಖೆ ಆದೇಶಿಸಿದೆ.

ಈ ಮೂಲಕ 2014ರಿಂದ ‘ಜ್ಯೋತಿ ಸಂಜೀವಿನಿ’ ಯೋಜನೆಯಡಿ ತೃತೀಯ ಹಂತದ 449 ಗಂಭೀರ ಹಾಗೂ ಮಾರಣಾಂತಿಕ ಕಾಯಿಲೆಗಳ ಚಿಕಿತ್ಸೆ , 50 ತುರ್ತು ಚಿಕಿತ್ಸಾ ವಿಧಾನದ ಸೇವೆ ಪಡೆಯುತ್ತಿದ್ದ ಸರ್ಕಾರಿ ನೌಕರರಿಗೆ ರಾಜ್ಯ ಸರ್ಕಾರ ಬಂಪರ್‌ ಕೊಡುಗೆ ನೀಡಿದೆ. ಇನ್ನು ಮುಂದೆ ಆಯುಷ್ಮಾನ್‌ ಭಾರತ್‌ ಯೋಜನೆಯಲ್ಲಿ ಗುರುತಿಸಿರುವ 900 ತೃತೀಯ ಹಂತದ ಚಿಕಿತ್ಸಾ ವಿಧಾನ ಹಾಗೂ 169 ತುರ್ತು ಚಿಕಿತ್ಸಾ ವಿಧಾನಗಳನ್ನು ‘ಜ್ಯೋತಿ ಸಂಜೀವಿನಿ’ ಯೋಜನೆಯಡಿ ನಗದು ರಹಿತವಾಗಿ ಪಡೆಯಲು ಅವಕಾಶ ಕಲ್ಪಿಸಲಾಗಿದೆ.

2014ರಲ್ಲಿ ಜಾರಿಗೆ ಬಂದ ಜ್ಯೋತಿ ಸಂಜೀವಿನಿ ಯೋಜನೆ ಪ್ರಕಾರ ಹೃದ್ರೋಗ, ಕ್ಯಾನ್ಸರ್‌, ನರರೋಗ, ಮೂತ್ರಪಿಂಡದ ಕಾಯಿಲೆ, ಸುಟ್ಟಗಾಯ, ಗಂಭೀರ ಸ್ವರೂಪದ ಅಪಘಾತ ಮತ್ತು ಚಿಕ್ಕ ಮಕ್ಕಳ ಕಾಯಿಲೆಗಳಿಗೆ ಸಂಬಂಧಿಸಿದ ಒಟ್ಟು ಏಳು ಬಗೆಯ ತೃತೀಯ ಹಂತದ ಸಂಕೀರ್ಣ ಅನಾರೋಗ್ಯ ಸಮಸ್ಯೆಗಳ 449 ಚಿಕಿತ್ಸಾ ವಿಧಾನ ಅಥವಾ 50 ತುರ್ತು ಪ್ರಕರಣಗಳಿಗೆ ನಗದು ರಹಿತ ಚಿಕಿತ್ಸೆ ನೀಡಲಾಗುತ್ತಿತ್ತು.

2018ರ ಮಾ. 2 ರಂದು ರಾಜ್ಯದಲ್ಲಿ ಆರೋಗ್ಯ ಕರ್ನಾಟಕ ಅನುಷ್ಠಾನಗೊಂಡಿದ್ದು, ನವೆಂಬರ್‌ 15, 2018ರಂದು ಕೇಂದ್ರ ಸರ್ಕಾರದ ಆಯುಷ್ಮಾನ್‌ ಭಾರತ್‌ ಯೋಜನೆಯೊಂದಿಗೆ ಆರೋಗ್ಯ ಕರ್ನಾಟಕ ಯೋಜನೆ ಸೇರಿಕೊಂಡು ‘ಆಯುಷ್ಮಾನ್‌ ಭಾರತ್‌- ಆರೋಗ್ಯ ಕರ್ನಾಟಕ’ ಯೋಜನೆಯಾಗಿ ಬದಲಾಗಿದೆ. ಈ ಯೋಜನೆಯಲ್ಲಿ 1614 ಪ್ರಥಮ ಹಾಗೂ ದ್ವಿತೀಯ ಹಂತದ ಚಿಕಿತ್ಸಾ ವಿಧಾನ, 900 ತೃತೀಯ ಹಂತದ ಚಿಕಿತ್ಸಾ ವಿಧಾನ, 169 ತುರ್ತು ಚಿಕಿತ್ಸಾ ವಿಧಾನ ಲಭ್ಯವಿದೆ.

ಈ ಯೋಜನೆಗಳಲ್ಲಿ ಲಭ್ಯವಿರುವ ಹೆಚ್ಚುವರಿ ಚಿಕಿತ್ಸೆಗಳು ಹಾಗೂ ಮಾರ್ಪಡಿಸಿದ ದರಗಳನ್ನು ಜ್ಯೋತಿ ಸಂಜೀವಿನಿ ಯೋಜನೆಯಡಿ ಅಳವಡಿಸಿಕೊಳ್ಳಲು ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್‌ ಸಲ್ಲಿಸಿದ್ದ ಪ್ರಸ್ತಾವನೆಗೆ ಆರೋಗ್ಯ ಇಲಾಖೆ ಒಪ್ಪಿಗೆ ನೀಡಿದೆ. ಇದರಿಂದ ಇನ್ನು ಮುಂದೆ ಸರ್ಕಾರಿ ನೌಕರರಿಗೂ ಹೆಚ್ಚುವರಿ ಚಿಕಿತ್ಸಾ ವಿಧಾನಗಳಿಗೆ ಚಿಕಿತ್ಸೆ ದೊರೆಯಲಿದ್ದು, ಅನುಷ್ಠಾನದ ಬಗ್ಗೆ ಸದ್ಯದಲ್ಲೇ ನಿಯಮಗಳನ್ನು ಪ್ರಕಟಿಸಲಾಗುವುದು ಎಂದು ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್‌ ಅಧಿಕಾರಿಗಳು ‘ಕನ್ನಡಪ್ರಭ’ಕ್ಕೆ ತಿಳಿಸಿದ್ದಾರೆ.

ಫಲಾನುಭವಿಗಳು ಯಾರು?

ಯೋಜನೆಯ ಸೌಲಭ್ಯವನ್ನು ಪಡೆಯಲು ಫಲಾನುಭವಿಗಳು ರಾಜ್ಯ ಸರಕಾರದ ನೌಕರರಾಗಿರಬೇಕು ಹಾಗೂ ಸರಕಾರದ ಸೇವಾ ನಿಯಮಾವಳಿಗಳ ಅಡಿಯಲ್ಲಿ ಬರುವ ಅವರ ಕುಟುಂಬದ ಅವಲಂಬಿತ ಸದಸ್ಯರು ಈ ಯೋಜನೆಯ ವ್ಯಾಪ್ತಿಗೊಳಪಡುತ್ತಾರೆ.

ಸರಕಾರದ ನೌಕರರ ಹೆಂಡತಿ ಅಥವಾ ಗಂಡ, ತಂದೆ ಮತ್ತು ತಾಯಿ (ಮಲತಾಯಿಯನ್ನೊಳಗೊಂಡಂತೆ), ನೌಕರನ ಮಕ್ಕಳು, ದತ್ತು ಮಕ್ಕಳು ಮತ್ತು ಮಲ ಮಕ್ಕಳಾಗಿದ್ದರೆ ಇವರು ಸಂಪೂರ್ಣವಾಗಿ ನೌಕರನಿಗೆ ಅವಲಂಬಿತವಾಗಿರಬೇಕು. ಮೇಲೆ ತಿಳಿಸಿರುವ ಎಲ್ಲಾ ವಿವರಗಳು ಸರಕಾರಿ ನೌಕರನಿಂದ ದೃಢೀಕರಿಸಲ್ಪಟ್ಟಿರಬೇಕು. ಇನ್ನು ಯಾವುದೇ ನೌಕರರು ಬೇರೆ ಇನ್ನಾವುದೇ ಸರಕಾರಿ ಪ್ರಾಯೋಜಿತ ಯೋಜನೆಯ ಫಲಾನುಭವಿಯಾಗಿದ್ದಲ್ಲಿ ಈ ಯೋಜನೆಯ ಲಾಭ ಪಡೆಯಲು ಅನರ್ಹನಾಗಿರುತ್ತಾರೆ.

ವಿವಿಧ ಪ್ಯಾಕೇಜ್‌ಗಳಲ್ಲಿ ಉಚಿತ ಚಿಕಿತ್ಸೆ:

ಪ್ರತಿ ಏಳು ಚಿಕಿತ್ಸೆಗಳಿಗೂ ಪ್ರತ್ಯೇಕ ಪ್ಯಾಕೇಜ್‌ ದರವನ್ನು ಸರ್ಕಾರ ನಿಗದಿಪಡಿಸಿದ್ದು, ನೋಂದಾಯಿತ ಆಸ್ಪತ್ರೆಗಳಲ್ಲಿ ನಗದು ರಹಿತ ಚಿಕಿತ್ಸೆ ನೀಡಲಾಗುತ್ತದೆ. ಪ್ಯಾಕೇಜಿನಲ್ಲಿ ಸಮಾಲೋಚನೆ, ತಪಾಸಣೆ, ಚಿಕಿತ್ಸಾ ವೆಚ್ಚ, ಆಹಾರ, ಆಸ್ಪತ್ರೆಯ ವೆಚ್ಚ, ಔಷಧಗಳು ಮತ್ತು ನಂತರದ ಸೇವೆಗಳನ್ನು 10 ದಿನಗಳವರೆಗೆ ಒಳಗೊಂಡಿರುತ್ತದೆ. ಇಂಪ್ಲಾಂಟ್ಸ್‌, ಸ್ಟೆಂಟ್‌ ಅಳವಡಿಕೆಗಳಿಗೆ ನಿಗದಿಯಾಗಿರುವ ಗರಿಷ್ಠ ಮಿತಿಯನ್ನು ಮೀರಿದಲ್ಲಿ ವ್ಯತ್ಯಾಸದ ಮೊತ್ತವನ್ನು ಫಲಾನುಭವಿಯು ಭರಿಸಬೇಕಾಗುತ್ತದೆ ಎಂದು ಎಸ್‌ಎಎಸ್‌ಟಿ ಅಧಿಕಾರಿಗಳು ತಿಳಿಸಿದ್ದಾರೆ.