ಹುಬ್ಬಳ್ಳಿ (ಡಿ.13):  ಕರ್ನಾಟಕ ಬ್ರಾಹ್ಮಣ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ, ನಿವೃತ್ತ ಶಿಕ್ಷಕ, ಇಲ್ಲಿನ ಅರವಿಂದ ನಗರದ ನಿವಾಸಿ ಮುಕುಂದ ಬಿ. ನಾತು (74) ಶನಿವಾರ ಸಂಜೆ ನಿಧನರಾದರು.

ಇಲ್ಲಿನ ವಿದ್ಯಾನಗರದ ರುದ್ರಭೂಮಿಯಲ್ಲಿ ಶನಿವಾರ ರಾತ್ರಿ ಅಂತ್ಯಕ್ರಿಯೆ ನೆರವೇರಿತು.

ಮೃತರಿಗೆ ಪತ್ನಿ, ಇಬ್ಬರು ಪುತ್ರರು, ಸೊಸೆಯಂದಿರು ಸೇರಿದಂತೆ ಅಪಾರ ಬಂಧು ಬಳಗವಿದೆ. ಏಷ್ಯಾ ನೆಟ್‌ ಸುವರ್ಣ ನ್ಯೂಸ್‌ನ ವಿಶೇಷ ವರದಿಗಾರ ಪ್ರಶಾಂತ ನಾತು ಮೃತರ ಪುತ್ರರಲ್ಲೊಬ್ಬರು.

ನಾತು ಅವರು ಇಲ್ಲಿನ ನ್ಯೂ ಇಂಗ್ಲಿಷ್‌ ಶಾಲೆಯ ಶಿಕ್ಷಕರಾಗಿ, ಲ್ಯಾಮಿಂಗಟನ್‌ ಸ್ಕೂಲ್‌ನ ಆಡಳಿತಾಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದರು. ಧಾರವಾಡ ಜಿಲ್ಲಾ ಬ್ರಾಹ್ಮಣ ಸೇವಾ ಸಂಘದ ಅಧ್ಯಕ್ಷರೂ ಆಗಿದ್ದರು. ಇಲ್ಲಿನ ಈಶ್ವರ ದೇವಸ್ಥಾನದ ಟ್ರಸ್ಟಿಗಳಲ್ಲಿ ಒಬ್ಬರಾಗಿದ್ದರು.

ಸಂತಾಪ:  ಮುಕುಂದ ನಾತು ಅವರು ನಿಧನರಾಗಿದ್ದಕ್ಕೆ ಸಚಿವರಾದ ಜಗದೀಶ ಶೆಟ್ಟರ್‌, ಪ್ರಹ್ಲಾದ ಜೋಶಿ, ವಿಧಾನಪರಿಷತ್‌ ಸದಸ್ಯ ಬಸವರಾಜ ಹೊರಟ್ಟಿಸೇರಿದಂತೆ ಹಲವರು ಸಂತಾಪ ವ್ಯಕ್ತಪಡಿಸಿದ್ದಾರೆ. ಮೃತರ ಆತ್ಮಕ್ಕೆ ಭಗವಂತ ಶಾಂತಿ ನೀಡಲಿ, ಮೃತರ ಅಗಲುವಿಕೆಯ ದುಃಖವನ್ನು ಭರಿಸುವ ಶಕ್ತಿ ಕುಟುಂಬ ವರ್ಗಕ್ಕೆ ನೀಡಲಿ ಎಂದು ಪ್ರಾರ್ಥಿಸಿದ್ದಾರೆ.

ಸಿಎಂ ಸಂತಾಪ : ಬ್ರಾಹ್ಮಣ ಅಭಿವೃದ್ಧಿ ನಿಗಮದ ನಿರ್ದೇಶಕ ಮುಕುಂದ ನಾತು ಅವರ ನಿಧನಕ್ಕೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಸಂತಾಪ ವ್ಯಕ್ತಪಡಿಸಿದ್ದಾರೆ.

ಬ್ರಾಹ್ಮಣ ಸಮುದಾಯದ ಮುಖಂಡರಾಗಿ ಅವರ ಸೇವೆ ಅನುಪಮವಾದುದು. ಭಗವಂತನು ಅವರ ಆತ್ಮಕ್ಕೆ ಶಾಂತಿ ನೀಡಲಿ ಹಾಗೂ ಅವರ ಕುಟುಂಬಕ್ಕೆ ಅಗಲಿಕೆಯ ನೋವನ್ನು ಸಹಿಸುವ ಶಕ್ತಿಯನ್ನು ನೀಡಲಿ ಎಂದು ಪ್ರಾರ್ಥಿಸುವುದಾಗಿ ಮುಖ್ಯಮಂತ್ರಿಗಳು ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.