Asianet Suvarna News Asianet Suvarna News

ಶಿಗ್ಗಾಂವಿ-ಸವಣೂರು ಕ್ಷೇತ್ರ: ಬೊಮ್ಮಾಯಿ ವಿರುದ್ಧ ತೊಡೆ ತಟ್ಟುವ ಕಲಿಗಳು ಯಾರು?

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ತವರು ಕ್ಷೇತ್ರ ಶಿಗ್ಗಾಂವಿ-ಸವಣೂರಿನಲ್ಲಿ ಚುನಾವಣಾ ರಾಜಕೀಯ ಗರಿಗೆದರಿದೆ. ಬೊಮ್ಮಾಯಿ ಪುನಃ ಸ್ಪರ್ಧಿಸುವುದು ಖಚಿತ ಆಗುತ್ತಿದ್ದಂತೆ ಅವರೆದುರು ಸ್ಪರ್ಧಿಸಲು ಕಾಂಗ್ರೆಸ್‌ನಲ್ಲಿ ಸಾಲು ಸಾಲು ಲೀಡರ್‌ಗಳು ರೆಡಿಯಾಗಿದ್ದಾರೆ.

karnataka assembly election Who will compete against Bommai at haveri rav
Author
First Published Dec 2, 2022, 11:34 AM IST

ನಾರಾಯಣ ಹೆಗಡೆ

ಹಾವೇರಿ (ಡಿ.2) : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ತವರು ಕ್ಷೇತ್ರ ಶಿಗ್ಗಾಂವಿ-ಸವಣೂರಿನಲ್ಲಿ ಚುನಾವಣಾ ರಾಜಕೀಯ ಗರಿಗೆದರಿದೆ. ಬೊಮ್ಮಾಯಿ ಪುನಃ ಸ್ಪರ್ಧಿಸುವುದು ಖಚಿತ ಆಗುತ್ತಿದ್ದಂತೆ ಅವರೆದುರು ಸ್ಪರ್ಧಿಸಲು ಕಾಂಗ್ರೆಸ್‌ನಲ್ಲಿ ಸಾಲು ಸಾಲು ಲೀಡರ್‌ಗಳು ರೆಡಿಯಾಗಿದ್ದಾರೆ.

ರಾಜ್ಯಕ್ಕೆ ಇಬ್ಬರು ಮುಖ್ಯಮಂತ್ರಿಗಳನ್ನು ನೀಡಿದ ಕ್ಷೇತ್ರ ಎಂಬ ಹಿರಿಮೆ ಶಿಗ್ಗಾಂವಿ- ಸವಣೂರಿಗೆ ಸಲ್ಲುತ್ತದೆ. ಈ ಹಿಂದೆ ಎಸ್‌. ನಿಜಲಿಂಗಪ್ಪ ಅವರು ಇದೇ ಕ್ಷೇತ್ರದಿಂದ ಅವಿರೋಧವಾಗಿ ಆಯ್ಕೆಯಾಗಿದ್ದರು. ಈ ಕ್ಷೇತ್ರವನ್ನು ಪ್ರತಿನಿಧಿಸುವ ಬಸವರಾಜ ಬೊಮ್ಮಾಯಿ ನಾಡಿನ ಮುಖ್ಯಮಂತ್ರಿಯಾದ ಮೇಲೆ ನಾಡಿನ ರಾಜಕೀಯ ತಜ್ಞರ ಗಮನ ಶಿಗ್ಗಾಂವಿ ಕ್ಷೇತ್ರದತ್ತ ನೆಟ್ಟಿದೆ.

ನಾವು ರೌಡಿಗಳಿಗೆ ಅವಕಾಶ ನೀಡಲ್ಲ: ಸಿಎಂ ಬೊಮ್ಮಾಯಿ

ಬೊಮ್ಮಾಯಿ ಶಿಗ್ಗಾಂವಿ ಕ್ಷೇತ್ರಕ್ಕೆ ಬಂದಂದಿನಿಂದ ಅವರ ರಾಜಕೀಯ ಭವಿಷ್ಯ ಏರುಗತಿಯಲ್ಲೇ ಸಾಗಿದೆ. ಹನಿ ನೀರಾವರಿ ಯೋಜನೆಯನ್ನು ಅನುಷ್ಠಾನಗೊಳಿಸಿ, ಕ್ಷೇತ್ರದೆಲ್ಲೆಡೆ ಕೆರೆ ತುಂಬಿಸುವ ಯೋಜನೆ ಕಾರ್ಯರೂಪಕ್ಕೆ ತಂದು ಆಧುನಿಕ ಭಗೀರಥ ಎನಿಸಿಕೊಂಡಿರುವ ಬಸವರಾಜ ಬೊಮ್ಮಾಯಿ ಅವರಿಗೆ ಮುಂಬರುವ ಚುನಾವಣೆಯಲ್ಲಿ ಟಕ್ಕರ್‌ ಕೊಡಲು ಕಾಂಗ್ರೆಸ್‌ ರಣತಂತ್ರ ರೂಪಿಸುತ್ತಿದ್ದು, ಮುಖ್ಯಮಂತ್ರಿಗಳ ವಿರುದ್ಧ ಸ್ಪರ್ಧೆಗೆ ಕೈ ಪಡೆಯಲ್ಲಿ ಹಲವರು ಸಜ್ಜಾಗಿ ನಿಂತಿದ್ದಾರೆ.

ಬೊಮ್ಮಾಯಿ ವರ್ಸಸ್‌ ಖಾದ್ರಿ

2008ರಲ್ಲಿ ಮೊದಲ ಬಾರಿಗೆ ಬಿಜೆಪಿಯಿಂದ ಶಿಗ್ಗಾಂವಿ ಕ್ಷೇತ್ರದಿಂದ ಸ್ಪರ್ಧಿಸಿದ ಬಸವರಾಜ ಬೊಮ್ಮಾಯಿ ಅವರಿಗೆ ಕಾಂಗ್ರೆಸ್‌ನ ಮಾಜಿ ಶಾಸಕ ಅಜ್ಜಂಪೀರ್‌ ಖಾದ್ರಿ ನೇರ ಪೈಪೋಟಿ ನೀಡಿದ್ದರು. ಗುರು ಶಿಷ್ಯರ ಕಾಳಗ ಎಂದೇ ಕರೆಯಲ್ಪಟ್ಟಿತ್ತು. ಯಡಿಯೂರಪ್ಪ ಪರ ಅಲೆ ಜೋರಾಗಿತ್ತು. ಇದರಿಂದ ಬಸವರಾಜ ಬೊಮ್ಮಾಯಿ ಅನಾಯಾಸವಾಗಿ ಗೆಲುವು ಸಾಧಿಸಿದರು. ಮುಂದೆ ಯಡಿಯೂರಪ್ಪ ಸರ್ಕಾರದಲ್ಲಿ ಜಲಸಂಪನ್ಮೂಲ ಸಚಿವರಾದರು. ರಾಜ್ಯ ರಾಜಕೀಯದಲ್ಲಿ ಮತ್ತು ಸರ್ಕಾರದ ಮಟ್ಟದಲ್ಲಿ ಪ್ರಭಾವ ಹೆಚ್ಚಿಸಿಕೊಂಡ ಬೊಮ್ಮಾಯಿ, ಕ್ಷೇತ್ರದಲ್ಲೂ ಹಿಡಿತ ಸಾಧಿಸಿದರು.

2013ರಲ್ಲಿ ಯಡಿಯೂರಪ್ಪ ಕೆಜೆಪಿ ಕಟ್ಟಿದಾಗ ಅವರನ್ನು ಬೊಮ್ಮಾಯಿ ಹಿಂಬಾಲಿಸುತ್ತಾರೆ ಎಂದೇ ಎಲ್ಲರೂ ಅಂದುಕೊಂಡಿದ್ದರು. ಆದರೆ, ಬಿಜೆಪಿಯಲ್ಲೇ ಉಳಿದು ಚುನಾವಣೆ ಎದುರಿಸಿದರು. ಆಗಲೂ ನೇರ ಪೈಪೋಟಿ ನೀಡಿದ್ದು ಕಾಂಗ್ರೆಸ್‌ನ ಅಜ್ಜಂಪೀರ ಖಾದ್ರಿ. ತೀವ್ರ ಜಿದ್ದಾಜಿದ್ದಿ ಏರ್ಪಟ್ಟಿದ್ದ ಚುನಾವಣೆಯಲ್ಲಿ ಬೊಮ್ಮಾಯಿ ಅವರು ಗೆದ್ದು ತಮ್ಮ ಸಾಮರ್ಥ್ಯ ಸಾಬೀತುಪಡಿಸಿದರು.

2018ರಲ್ಲಿ ಮತ್ತದೇ ಹಳೆ ಜೋಡಿಗಳ ನಡುವೆಯೇ ಕದನ ಏರ್ಪಟ್ಟಿತ್ತು. ಬಿಜೆಪಿಯಿಂದ ಬೊಮ್ಮಾಯಿ, ಕಾಂಗ್ರೆಸ್‌ನಿಂದ ಖಾದ್ರಿ ಕಣಕ್ಕಿಳಿದಿದ್ದರು. ಸತತ ಮೂರು ಬಾರಿ ಸೋತಿದ್ದ ಖಾದ್ರಿ ಅವರಿಗೆ ಅನುಕಂಪದ ಅಲೆಯಿತ್ತು. ಮೇಲಾಗಿ ಬೊಮ್ಮಾಯಿ ಅವರೊಂದಿಗಿದ್ದ ಪಂಚಮಸಾಲಿ ಮುಖಂಡ ಸೋಮಣ್ಣ ಬೇವಿನಮರದ ಪಕ್ಷೇತರರಾಗಿ ಕಣದಲ್ಲಿದ್ದರು. ಆದರೆ ಇದ್ಯಾವುದೂ ವರ್ಕೌಟ್‌ ಆಗಲಿಲ್ಲ. ಬೊಮ್ಮಾಯಿ ಅವರು ಹ್ಯಾಟ್ರಿಕ್‌ ಗೆಲುವು ಸಾಧಿಸಿ ತಮ್ಮನ್ನು ಸೋಲಿಸುವುದು ಸುಲಭವಲ್ಲ ಎಂಬ ಸಂದೇಶ ರವಾನಿಸಿದರು. ಆನಂತರ ಯಡಿಯೂರಪ್ಪ ಸರ್ಕಾರದಲ್ಲಿ ಗೃಹ ಸಚಿವರಾಗಿದ್ದ ಬೊಮ್ಮಾಯಿ ಅವರಿಗೆ ಅದೃಷ್ಟದ ಬಾಗಿಲು ತೆರೆದು ನಿಂತಿತ್ತು. ಬದಲಾದ ರಾಜಕೀಯ ಬೆಳವಣಿಗೆಯಲ್ಲಿ ಮುಖ್ಯಮಂತ್ರಿ ಹುದ್ದೆಗೇರುವ ಮೂಲಕ ಶಿಗ್ಗಾಂವಿ ಕ್ಷೇತ್ರದ ಜನತೆ ಹೆಮ್ಮೆ ಪಡುವಂತಾಯಿತು.

ಕಾಂಗ್ರೆಸ್ಸಿನ ಹಲವರ ಕಸರತ್ತು

ಮುಸ್ಲಿಂ ಬಾಹುಳ್ಯ ಇರುವ ಈ ಕ್ಷೇತ್ರದಲ್ಲಿ ಹಿಂದಿನ ಮೂರು ಚುನಾವಣೆಗಳಲ್ಲಿ ಬಸವರಾಜ ಬೊಮ್ಮಾಯಿ ಹ್ಯಾಟ್ರಿಕ್‌ ಗೆಲುವು ದಾಖಲಿಸಿದ್ದರು. ಈ ಸಲ ಅವರಿಗೆ ಟಕ್ಕರ್‌ ಕೊಡಲು ಕಾಂಗ್ರೆಸ್‌ನಿಂದ 14 ಮಂದಿ ಟಿಕೆಟ್‌ಗಾಗಿ ಅರ್ಜಿ ಸಲ್ಲಿಸಿದ್ದಾರೆ.

ಅಜ್ಜಂಪೀರ್‌ ಖಾದ್ರಿ ಮತ್ತೊಮ್ಮೆ ಕಣಕ್ಕಿಳಿಯಲು ಸಿದ್ಧತೆ ನಡೆಸಿದ್ದಾರೆ. ಜತೆಗೆ ಷಣ್ಮುಖ ಶಿವಳ್ಳಿ, ಸೋಮಣ್ಣ ಬೇವಿನಮರದ, ಸಂಜೀವಕುಮಾರ ನೀರಲಗಿ, ಯಾಸೀರ್‌ಖಾನ್‌ ಪಠಾಣ, ರಾಜೇಶ್ವರಿ ಪಾಟೀಲ, ಶಾಕೀರ ಸನದಿ, ಶಶಿಧರ ಯಲಿಗಾರ, ನೂರಮ್ಮದ್‌ ಮಳಗಿ, ಎಫ್‌.ಜಿ. ಪಾಟೀಲ, ಎಸ್‌.ವಿ. ಪಾಟೀಲ ಸೇರಿದಂತೆ 14 ಅಭ್ಯರ್ಥಿಗಳು ಕೈ ಟಿಕೆಟ್‌ ಆಕಾಂಕ್ಷಿಗಳಾಗಿದ್ದಾರೆ. ಮಾಜಿ ಸಂಸದ ಮಂಜುನಾಥ ಕುನ್ನೂರ ಕಾದು ನೋಡುವ ತಂತ್ರ ಅನುಸರಿಸಿದ್ದಾರೆ.

ಮುಸ್ಲಿಂ ಮತ ಪ್ರಾಬಲ್ಯ ಇರುವ ಕ್ಷೇತ್ರದಲ್ಲಿ ಖಾದ್ರಿ ಅವರನ್ನು ಬಿಟ್ಟು ಚುನಾವಣೆ ಎದುರಿಸುವ ಪರಿಸ್ಥಿತಿ ಕಾಂಗ್ರೆಸ್‌ಗಿಲ್ಲ. ಆದರೆ, ನಾಲ್ಕು ಬಾರಿ ಪರಾಭವಗೊಂಡಿರುವ ಅವರಿಗೆ ಟಿಕೆಟ್‌ ನೀಡಲು ಅನೇಕರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಖಾದ್ರಿ ಅವರಿಗೆ ಕೈ ಟಿಕೆಟ್‌ ತಪ್ಪಿದರೆ ಮುಸ್ಲಿಂ ಮತಗಳು ಕಾಂಗ್ರೆಸ್‌ ಕೈತಪ್ಪುವುದು ನಿಶ್ಚಿತ. ಬೇರೆ ಅಭ್ಯರ್ಥಿಗೆ ಕೈ ಟಿಕೆಟ್‌ ನೀಡಿದರೆ, ಖಾದ್ರಿ ಪಕ್ಷೇತರರಾಗಿ ನಿಂತರೂ ಕಾಂಗ್ರೆಸ್‌ಗೇ ಸಮಸ್ಯೆ. ಕಾಂಗ್ರೆಸ್‌ನ ಒಳಜಗಳ ಬಸವರಾಜ ಬೊಮ್ಮಾಯಿ ಅವರಿಗೆ ವರವಾಗಿ ಪರಿಣಮಿಸಿದೆ.

ಮಹಾರಾಷ್ಟ್ರದ ಗಡಿ ಅರ್ಜಿ ವಿಚಾರಣೆಗೆ ಯೋಗ್ಯವಲ್ಲ: ಸಿಎಂ ಬೊಮ್ಮಾಯಿ

ಕ್ಷೇತ್ರದಲ್ಲಿ ಪಂಚಮಸಾಲಿ ಹಾಗೂ ಮುಸ್ಲಿಂ ಮತಗಳು ನಿರ್ಣಾಯಕವಾಗಿವೆ. ಪಂಚಮಸಾಲಿಯ 65 ಸಾವಿರ ಮತಗಳಿದ್ದರೆ, 50 ಸಾವಿರ ಮುಸ್ಲಿಂ ಮತಗಳಿವೆ. ಎಸ್ಸಿ 20 ಸಾವಿರ, ಎಸ್ಟಿ17 ಸಾವಿರ, ಕುರುಬ 20 ಸಾವಿರ ಮತಗಳಿವೆ.

Follow Us:
Download App:
  • android
  • ios