ಬೀದರ್‌(ಜ.18): ರಾಜ್ಯದ ನೆಲ, ಜಲ ಹಾಗೂ ಭಾಷೆಯ ಉಳಿವಿಗಾಗಿ ಕಳೆದ 2 ದಶಕದಲ್ಲಿ ರಾಜ್ಯದ ವಿವಿಧ ಜೈಲುಗಳನ್ನು ಕಂಡಿದ್ದೇನೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ ಹೇಳಿದ್ದಾರೆ.

ಅವರು ಶುಕ್ರವಾರ ನಗರದ ರಂಗಮಂದಿರದಲ್ಲಿ ಡಾ.ಲಿಂ.ಚನ್ನಬಸವ ಪಟ್ಟದ್ದೇವರ 130ನೇ ಜಯಂತಿ ಹಾಗೂ ಕರ್ನಾಟಕ ಏಕಿಕರಣ ಪ್ರಶಸ್ತಿ ಪುರಸ್ಕೃತರಾದ ಡಾ. ಭೀಮಣ್ಣ ಖಂಡ್ರೆ ಅವರ ಅಭಿನಂದನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ಬೆಂಗಳೂರು ಭಾಷಾ ಅಲ್ಪಸಂಖ್ಯಾತರ ಕೊಂಪೆಯಾಗಿತ್ತು. ಅದರಿಂದ ಮುಕ್ಕಗೊಳಿಸಿದ್ದೇನೆ. 1999ರಲ್ಲಿ ಕೇವಲ 22 ಜನರೊಂದಿಗೆ ಕನ್ನಡ ಭಾಷಾ ಉಳಿವಿಗಾಗಿ ಆರಂಭಿಸಲಾದ ಕರವೇ ಹೋರಾಟಕ್ಕೆ ಇಂದು ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಸುಮಾರು 65 ಲಕ್ಷ ಜನ ಕಾರ್ಯಕರ್ತರಿದ್ದಾರೆ ಎಂದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ನನ್ನಂತಹ ಹೋರಾಟಗಾರನಿಗೆ ಸರ್ಕಾರಗಳು ಬಹುತೇಕ ಜಿಲ್ಲೆಯ ಜೈಲುಗಳನ್ನು ತೋರಿಸಿದ್ದಾರೆ. ಈ ಹಿಂದೆ ದೇವೇಗೌಡ ಮುಖ್ಯಮಂತ್ರಿಯಾಗಿದ್ದಾಗ 20 ದಿನ ಜೈಲು ಸೇರಿದ್ದರೆ, ಅತಿ ಹೆಚ್ಚು ಜೈಲು ಸೇರಿದ್ದು ಎಸ್‌ಎಂ ಕೃಷ್ಣ ಅವರ ಅವಧಿಯಲ್ಲಿ. ಬೆಳಗಾವಿಯಲ್ಲಿ ಕಳೆದ 25 ವರ್ಷಗಳಿಂದ ಕನ್ನಡದವರು ಮೇಯರ್‌ ಆಗಿರಲಿಲ್ಲ. ನಮ್ಮ ಕರವೇಯಿಂದ ಒಬ್ಬ ಕನ್ನಡತಿಯನ್ನು ಮೇಯರ್‌ ಪಟ್ಟಕ್ಕೇರಿಸಿತ್ತು. ಬೀದರ್‌ ಜಿಲ್ಲೆಯಲ್ಲಿ ಕೂಡ ಎಂಇಎಸ್‌ ತನ್ನ ಬೇರೂರುವ ಪ್ರಯತ್ನ ಮಾಡಿತ್ತು. ಆದರೆ ಇಲ್ಲಿನ ಪೂಜ್ಯರು, ಭೀಮಣ್ಣ ಖಂಡ್ರೆ ಅವರಂತಹ ಹೋರಾಟಗಾರದಿಂದ ಇದು ಸಾಧ್ಯವಾಗಿದೆ ಎಂದು ಹೇಳಿದರು.

ನೆರೆ ರಾಜ್ಯಗಳಿಂದ ಕ್ಯಾತೆ:

ಈ ಹಿಂದೆ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದ ಸಮಯದಲ್ಲಿ ನಮ್ಮ ಹೋರಾಟಕ್ಕೆ ಸ್ಫೂರ್ತಿ ತುಂಬಿದ್ದರು. ಅವರ ಸಮಯದಲ್ಲಿಯೇ ಕನ್ನಡಕ್ಕೆ ಶಕ್ತಿ ಸಿಕ್ಕಿತ್ತು. ನಮ್ಮ ಸುತ್ತಮುತ್ತ ಪಂಚಭೂತ ರಾಜ್ಯಗಳಿದ್ದು ಎಲ್ಲದರೊಂದಿಗೆ ಒಂದೊಂದು ವಿಷಯಗಳ ಬಗ್ಗೆ ಕ್ಯಾತೆ ನಡೆಸುತ್ತಿವೆ. ಮಹಾರಾಷ್ಟ್ರ ಗಡಿ ವಿಷಯ, ಗೋವಾ ಮಹಾದಾಯಿ, ತಮಿಳನಾಡು ಕಾವೇರಿ ವಿಷಯ, ಕೇರಳ ಕಾಸರಗೂಡು ಹೀಗೆ ಒಂದಲ್ಲ ಒಂದು ಕಾರಣಗಳಿಂದ ನಮ್ಮೊಂದಿಗೆ ಕ್ಯಾತೆ ತೆಗೆಯುತ್ತಲೆ ಇವೆ. ನಾವು ಒಳ್ಳೆಯವರಿಗೆ ಒಳ್ಳೆಯವರಾಗಿದ್ದೇವೆ. ನಮ್ಮನ್ನು ಕೇಣಕಿದರೆ ಯಮ ರೂಪಿಯಂತೆ ಎರಗುತ್ತೇವೆ ಎಂದು ಎಚ್ಚರಿಸಿದರು.

ಕನ್ನಡದ ಗಟ್ಟಿತನ ತಿಳಿಸಬೇಕಿದೆ:

ಸುಮಾರು 2 ಸಾವಿರಕ್ಕೂ ಹೆಚ್ಚು ವರ್ಷಗಳ ಇತಿಹಾಸವುಳ್ಳ ಕನ್ನಡ ಅತೀ ಹೆಚ್ಚು ಜ್ಞಾನಪೀಠ ಪ್ರಶಸ್ತಿ ಪಡೆದ ಭಾಷೆಯಾಗಿದೆ. 50 ಕೋಟಿಗೂ ಹೆಚ್ಚು ಹಿಂದಿ ಮಾತಾಡುವವರಿಗೆ 6 ಜ್ಞಾನಪೀಠ ಪ್ರಶಸ್ತಿ ಸಿಕ್ಕಿವೆ ಎಂದರೆ ಕನ್ನಡ ಭಾಷೆಯ ಗಟ್ಟಿತನ ಬಗ್ಗೆ ತಿಳಿಯಬೇಕಾಗಿದೆ. ವಚನ ಸಾಹಿತ್ಯ, ದಾಸ ಸಾಹಿತ್ಯ, ಜಾನಪದ ಸಾಹಿತ್ಯ ಹೀಗೆ ನಾವು ಭಾಷೆಯನ್ನು ಬೆಳೆಸುತ್ತೇವೆ ಎಂಬುದಕ್ಕಿಂತ ಅದನ್ನು ಬಳಸುವತ್ತ ಜಾಗೃತರಾಗಬೇಕಾಗಿದೆ. ಪಕ್ಕದ ರಾಜ್ಯಗಳಲ್ಲಿ ಅಲ್ಲಿನ ಸರ್ಕಾರಗಳು ಪ್ರಾದೇಶಿಕ ವಿಷಯಗಳ ಬಗ್ಗೆ ಚಿಂತನೆ ಮಾಡುತ್ತೇವೆ ಅದರಂತೆ ಕರ್ನಾಟಕದಲ್ಲಿಯು ಪ್ರಾದೇಶಿಕ ಚಿಂತನೆಗಳು ನಡೆಯಬೇಕಾಗಿದೆ ಎಂದರು.

ಕನ್ನಡಿಗರಿಗೆ ಮಾತ್ರ ಹುದ್ದೆ ನೀಡಿ:

ಬೆಂಗಳೂರು ಮಹಾನಗರ ಪಾಲಿಕೆಗೆ ಬಿಜೆಪಿಯವರು ರಾಜಸ್ಥಾನದಿಂದ ಬಂದಿದ್ದ ಮಾರವಾಡಿ ಸಮಾಜಕ್ಕೆ ಸೇರಿದವರನ್ನು ಮೇಯರ್‌ನ್ನಾಗಿ ಮಾಡಿದ್ದಾರೆ. ಕಾಂಗ್ರೆಸ್‌ ಪಕ್ಷದವರು ಕನ್ನಡಕ್ಕೆ ಸಾರ್ವಭೌಮತ್ವ ನೀಡಬೇಕು ಎಂದು ಹಾಜರಿದ್ದ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಅವರಿಗೆ ತಿಳಿಸಿದರು.

ಈ ಹಿಂದೆ ನಡೆದ ಕರವೇ ಕಾರ್ಯಕರ್ತರ ಸಭೆಯಲ್ಲಿ ತೆಗೆದುಕೊಂಡ ನಿರ್ಣಯದಂತೆ ಕಲಬುರಗಿ ವಿಮಾನ ನಿಲ್ದಾಣಕ್ಕೆ ಬಸವೇಶ್ವರ, ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಸಂಗೋಳ್ಳಿ ರಾಯಣ್ಣ, ಬೆಳಗಾವಿ ನಿಲ್ದಾಣಕ್ಕೆ ಕಿತ್ತೂರ ರಾಣಿ ಚೆನ್ನಮ್ಮ, ಮಂಗಳೂರು ವಿಮಾನ ನಿಲ್ದಾಣಕ್ಕೆ ರಾಣಿ ಅಬ್ಬಕ್ಕ, ಮೈಸೂರು ವಿಮಾನ ನಿಲ್ದಾಣಕ್ಕೆ ನಾಲ್ವಡಿ ಕೃಷ್ಣರಾಜ ಅದರಂತೆ ಈಗ ಬೀದರ್‌ನಲ್ಲಿ ಆರಂಭವಾಗಲಿರುವ ವಿಮಾನ ನಿಲ್ದಾಣಕ್ಕೆ ಡಾ. ಚನ್ನಬಸವ ಪಟ್ಟದ್ದೇವರ ಹೆಸರಿಡಬೇಕೆಂಬ ಒತ್ತಾಸೆ ಇದೆ ಎಂದು ನಾರಾಯಣಗೌಡರು ಹೇಳಿದರು.

ಫೆ.5 ಮತ್ತು 6ಕ್ಕೆ ದೆಹಲಿಯಲ್ಲಿ ಪ್ರತಿಭಟನೆ:

ಮಹಾದಾಯಿ ವಿಷಯದಲ್ಲಿ ನಮಗೆ ಆದ ಅನ್ಯಾಯವನ್ನು ಸರಿಪಡಿಸಬೇಕೆಂದು ಆಗ್ರಹಿಸಿ ಕರವೇ ವತಿಯಿಂದ ಫೆ.5 ಮತ್ತು 6 ರಂದು ದೆಹಲಿಯ ಜಂತರ ಮಂತರ ಬಳಿ ಹೋರಾಟ ನಡೆಯಲಿದೆ. ಈ ಹಿಂದೆ ಕಾವೇರಿ ನದಿ ನೀರಿನ ವಿಷಯಕ್ಕೆ ಸಂಬಂಧಿಸಿದಂತೆ 10 ಸಾವಿರ ಜನರೊಂದಿಗೆ ದೆಹಲಿಯಲ್ಲಿ ಹೋರಾಟ ನಡೆಸಿದ್ದೆ. ಅದರಂತೆ ಮಹಾದಾಯಿ ವಿಷಯ ಕುರಿತು ಕೇಂದ್ರಕ್ಕೆ ಪಾಠ ಕಲಿಸಲು ರಾಜ್ಯದ ಸೇರಿದಂತೆ ಎಲ್ಲ ಜಿಲ್ಲೆಯಿಂದ ಕರವೇ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ತಿಳಿಸಿದರು.

ಸಮಾರಂಭದಲ್ಲಿ ಡಾ.ಬಸವಲಿಂಗ ಪಟ್ಟದ್ದೇವರು, ಗುರುಬಸವ ಪಟ್ಟದ್ದೇವರು, ಡಾ.ಗಂಗಾಂಬಿಕೆ ಪಾಟೀಲ್‌, ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ, ಶಾಸಕರಾದ ಬಿ.ನಾರಾಯಣರಾವ, ರಹೀಂಖಾನ್‌, ಕಾಶಪ್ಪ ಧನ್ನೂರ, ಚಿತ್ರನಟ ಭರತ ಸಾಗರ, ಅಶ್ವಿನಿಗೌಡ, ಸೋಮನಾಥ ಮುಧೋಳಕರ, ಸುರೇಶ ಚನ್ನಶೆಟ್ಟಿ, ಜಗದೀಶ ಬಿರಾದಾರ, ವೀರಪಾಕ್ಷ ಗಾದಗಿ ಸೇರಿದಂತೆ ಇನ್ನಿತರರು ಇದ್ದರು.

ಚನ್ನಬಸವ ಪಟ್ಟದ್ದೇವರು ಹಚ್ಚಿದ ದೀಪ ದೇಶದಲ್ಲಿ ಬೆಳಗಿಸಿ

ನಾನು ಹುಟ್ಟಿನಿಂದ ಲಿಂ.ಡಾ.ಚನ್ನಬಸವ ಪಟ್ಟದ್ದೇವರೊಂದಿಗೆ ಇದ್ದೆ. ಅದೇ ರೀತಿ ನನ್ನ ಕುಟುಂಬ ಕೂಡ ಅವರ ಮಾರ್ಗದರ್ಶನ ಮೇಲೆ ಬೆಳೆದಿದೆ ಎಂದು ಕರ್ನಾಟಕ ಏಕೀಕರಣ ಪ್ರಶಸ್ತಿ ಪುರಸ್ಕೃತರಾದ ಮಾಜಿ ಸಚಿವ ಭೀಮಣ್ಣ ಖಂಡ್ರೆ ನುಡಿದರು.

ಅಭಿನಂದನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಭಾಲ್ಕಿ ಪಟ್ಟದ್ದೇವರ ಪಟ್ಟಾಭಿಷೇಕ ಆದ ನಂತರ ನಮ್ಮ ತಂದೆಯವರಾದ ಶಿವಲಿಂಗಪ್ಪನವರು ಪೂಜ್ಯರಿಗೆ ಶಿವಲಿಂಗ ಮಂದಿರಕ್ಕೆ ಕಳುಹಿಸಿದರು. ಸಾಮಾಜಿಕ ಕೆಲಸವು ಕೂಡ ಚನ್ನಬಸವ ಪಟ್ಟದ್ದೇವರಿಂದ ನಡೆದಿದೆ. ಮುಂದೆ ಏನೇ ಕೆಲಸ ಇದ್ದರೂ ಪಟ್ಟದ್ದೇವರು ತೋರಿಸಿದ ಹಾದಿಯಲ್ಲಿ ನಡೆಯಬೇಕು. ಅವರು ಹಚ್ಚಿದ ದೀಪವನ್ನು ದೇಶದಲ್ಲಿ ಬೆಳಗಿಸಬೇಕು. ಬಸವಣ್ಣನವರು ಹೇಳಿದಂತೆ ಏನಗಿಂತ ಕಿರಿಯರಿಲ್ಲ. ಶಿವಭಕ್ತರಿಗಿಂತ ಹಿರಿಯರಿಲ್ಲ ಎಂಬಂತೆ ನಾನು ನಿಜ ಜೀವನದಲ್ಲಿ ಮಾಡಿದ್ದೇನೆ. ಕಳೆದ 70-80 ವರ್ಷಗಳಿಂದ ಕಾಯ, ವಾಚ ಮನಸ್ಸಿನಿಂದ ಕೆಲಸ ಮಾಡಿದ್ದೇನೆ. ಇದಕ್ಕೆ ಇಲ್ಲಿನ ಜನರ ಶಕ್ತಿಯೇ ಮುಖ್ಯ ಎಂದು ಹೇಳಿದರು.