ಬೆಳಗಾವಿ(ಜ.02): ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅಂಗಪಕ್ಷಗಳ ಉದ್ಭವ ಮೂರ್ತಿಯಾಗಿದ್ದಾರೆ. ಉದ್ಧವ್ ಠಾಕ್ರೆ ಎಷ್ಟು ದಿವಸ ಸಿಎಂ ಆಗಿ ಇರ್ತಾರೋ ಗೊತ್ತಿಲ್ಲ, ಬೆಳಗಾವಿ ಗಡಿವಿವಾದ ಕೆಣಕಿ ಸಿಎಂ ಸ್ಥಾನ ಕಳೆದುಕೊಳ್ಳಬೇಡಿ, ನ್ಯಾಯವಾಗಿ ಬದುಕೋದನ್ನು ಕಲಿಯಿರಿ ಎಂದು ಕರವೇ ರಾಜ್ಯಾಧ್ಯಕ್ಷ ನಾರಾಯಣಗೌಡ ಉದ್ಧವ್ ಠಾಕ್ರೆಗೆ ಎಚ್ಚರಿಕೆ ನೀಡಿದ್ದಾರೆ. 

ಗಡಿ ವಿವಾದವನ್ನು ಉದ್ಧವ್ ಠಾಕ್ರೆ ಪದೇ ಪದೇ ಕೆಣಕುತ್ತಿರುವ ವಿಚಾರದ ಬಗ್ಗೆ ಮಾಧ್ಯಮದವರ ಜತೆ ಮಾತನಾಡಿದ ಅವರು, ಗಡಿ ವಿಚಾರದಲ್ಲಿ ಓರ್ವ ಮಂತ್ರಿ ನೇಮಿಸಲು ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರಿಗೆ ಒತ್ತಾಯಿಸುವೆ. ಮಹಾರಾಷ್ಟ್ರ ಸರ್ಕಾರಕ್ಕೆ ಸರಿಯಾಗಿ ಉತ್ತರ ಕೊಡಿ ಎಂದು ಹೇಳಿದ್ದಾರೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಬೆಳಗಾವಿ ಗ್ರಾಮೀಣ ಕ್ಷೇತ್ರ ಮರಾಠಿಗರ ಹಕ್ಕು ಎಂಬ ರಮೇಶ್ ಜಾರಕಿಹೊಳಿ‌ ಹೇಳಿಕೆ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ರಮೇಶ್‌ಗೆ ತಕ್ಕ ಉತ್ತರ ಕೊಡಲು ಬುಧವಾರ ಗೋಕಾಕ್‌ಗೆ ಹೋಗಿದ್ದೆ, ನಾನು ಕನ್ನಡ ವಿರೋಧಿ ಹೇಳಿಕೆ ಕೊಟ್ಟಿಲ್ಲ ಅಂತ ರಮೇಶ್ ಹೇಳಿದ್ದಾರೆ. ನಾನು ಅದೇ ವೇದಿಕೆಯಲ್ಲಿಯೇ ರಮೇಶ್ ಜಾರಕಿಹೊಳಿಗೆ ಹೇಳಿದ್ದೇನೆ, ಬೆಳಗಾವಿ ರಾಜಕಾರಣಿಗಳು ಕನ್ನಡಿಗರ ಧ್ವನಿಯಾಗಿ ಒಟ್ಟಿಗೆ ಕೆಲಸ ಮಾಡಬೇಕು. ಎಂಇಎಸ್‌ನವರ ನೀಚತನ ನಾವು ಕಂಡಿದ್ದೇವೆ, ಪೊಲೀಸರಿಗೆ ಗೊತ್ತು, ಅವರು ನಮ್ಮ ಕರ್ನಾಟಕ ಪೊಲೀಸರಿಗೆ ಉಪದೇಶ ಮಾಡುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ. 

ಕರ್ನಾಟಕ ರಕ್ಷಣಾ ವೇದಿಕೆ ರಾಜಕೀಯ ಪಕ್ಷ ಸ್ಥಾಪಿಸುವ ವಿಚಾರದ ಬಗ್ಗೆ ಮಾತನಾಡಿದ ಅವರು, ವೇದಿಕೆ ರಾಜಕೀಯ ಪಕ್ಷ ಸ್ಥಾಪಿಸುವ ಬಗ್ಗೆ ಯೋಚನೆ ಮಾಡುತ್ತಿದ್ದು ಈ ಬಗ್ಗೆ ಚರ್ಚೆ ನಡೀತಿದೆ, ಜನರ ಭಾವನೆಗಳನ್ನು ನೋಡಿಕೊಂಡು ಈ ಬಗ್ಗೆ ತೀರ್ಮಾನಿಸುತ್ತೇವೆ ಎಂದು ಹೇಳಿದ್ದಾರೆ.