ಗದಗ [ಡಿ.31]: ಬೆಳಗಾವಿಯಲ್ಲಿ ಮರಾಠಿಗರು ಒಂದಾಗಬೇಕೆನ್ನುವ ಗೋಕಾಕ್ ಶಾಸಕ ರಮೇಶ್ ಜಾರಕಿಹೊಳಿ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. 

ಉಪ ಚುನಾವಣೆಯಲ್ಲಿ ಗೆದ್ದು ಸಚಿವ ಸ್ಥಾನದ ಆಕಾಂಕ್ಷಿಯಾಗಿರುವ ರಮೇಶ್ ಜಾರಕಿಹೊಳಿ ಕನ್ನಡಕ್ಕೆ ಅಪಮಾನ ಮಾಡಿದ್ದು, ರಾಜೀನಾಮೆ ನೀಡಿ ಹೋಗಬೇಕು ಎಂದು ಗದಗ ನಗರದ ಗಾಂಧಿ ವೃತ್ತದಲ್ಲಿ ಕರವೇ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ. 

ಗೋಕಾಕ್ ಶಾಸಕ ರಮೇಶ್ ಜಾರಕಿಹೊಳಿ ಪ್ರತಿಕೃತಿ ದಹಿಸಿ ಪ್ರತಿಭನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದು, ಕನ್ನಡ ವಿರೋಧಿ ಹೇಳಿಕೆಗಳನ್ನು ನೀಡುತ್ತಿರುವ ರಮೇಶ್ ಜಾರಕಿಹೊಳಿ ಅವರನ್ನು ತಕ್ಷಣ ವಜಾಗೊಳಿಸಬೇಕು ಎಂದಿದ್ದಾರೆ.  

ಗದಗ ನಗರದ ಗಾಂಧಿ ವೃತ್ತದಿಂದ ಗದಗ ತಹಸೀಲ್ದಾರ್ ಕಚೇರಿವರೆಗೂ ಜಾರಕಿಹೊಳಿ ಹೇಳಿಕೆ ವಿರೋಧಿಸಿ ಪ್ರತಿಭಟನಾ ಮೆರವಣಿಗೆ ನಡೆಸಿ ಜಾರಕಿಹೊಳಿ ವಜಾಗೊಳಿಸಬೇಕು ಎಂದು ತಹಸೀಲ್ದಾರ್ ಮೂಲಕ ಮುಖ್ಯಮಂತ್ರಿಗೆ ಮನವಿ ಮಾಡಿದ್ದಾರೆ. 

ಮತ್ತೊಂದಿಷ್ಟು ಮಂದಿ ಬಿಜೆಪಿಯತ್ತ : ಸುಳಿವು ನೀಡಿದ ಶಾಸಕ...

ಗೋಕಾಕ್ ಕ್ಷೇತ್ರದ ಶಾಸಕರಾದ ರಮೇಶ್ ಜಾರಕಿಹೊಳಿ ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ನಡೆದ ಕಾರ್ಯಕ್ರಮ ಒಂದರಲ್ಲಿ ಮಾತನಾಡುತ್ತಾ ಇಲ್ಲಿ ಮರಾಠಿಗ ನಾಯಕರೆಲ್ಲರೂ ಒಂದಾಗಬೇಕು ಎಂದಿದ್ದಲ್ಲೇ ತಾವು ಬೆಂಬಲ ನೀಡುವ ಕುರಿತು ಹೇಳಿದ್ದರು. ಈ ನಿಟ್ಟಿನಲ್ಲಿ ಜಾರಕಿಹೊಳಿ ವಿರುದ್ಧ ತೀವ್ರ ಆಕ್ರೊಶ ವ್ಯಕ್ತವಾಗಿದೆ. 

ಗೋಕಾಕ್ ಕ್ಷೇತ್ರದ ಕಾಂಗ್ರೆಸ್ ಶಾಸಕರಾಗಿದ್ದ ರಮೇಶ್ ಜಾರಕಿಹೊಳಿ ಬಳಿಕ ರಾಜೀನಾಮೆ ನೀಡಿ ಮತ್ತೆ ಇದೇ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿ ಗೆಲುವು ಸಾಧಿಸಿದ್ದರು.