ಕಪಿಲಾ ನದಿ ದಿಕ್ಕು ತಪ್ಪಿ ಹರಿದಿದ್ದು ಇದರಿಂದ ಸಾವಿರಾರು ಜನರ ಬದುಕು ಅತಂತ್ರವಾಗಿದೆ. ಸಾವಿರಾರು ಎಕರೆ ಕೃಷಿ ಭೂಮಿ ಮುಳುಗಿದೆ. 

ಸುತ್ತೂರು [ಸೆ.18]:  ನಂಜನಗೂಡು ತಾಲೂಕು ಬೊಕ್ಕಹಳ್ಳಿ ಗ್ರಾಮದಲ್ಲಿ ಕೃಷಿ ಭೂಮಿಗೆ ಕಳೆದ ಕೆಲದಿನಗಳ ಹಿಂದೆ ಉಕ್ಕಿ ಹರಿದ ಪರಿಣಾಮ ಗ್ರಾಮಕ್ಕೆ ಸೇರಿದ ನೂರಾರು ಎಕರೆ ಕೃಷಿ ಭೂಮಿಯಲ್ಲಿ ಸಾವಿರಾರು ವರ್ಷಗಳಿಂದ ರೈತರ ಜಮೀನಿನಲ್ಲಿ ಫಲವತ್ತಾದ ಮಣ್ಣನ್ನು ಹೊಂದಿತ್ತು. ಆದರೆ ಪ್ರತಿ ಜಮೀನಿನಲ್ಲಿ ಈ ಪ್ರವಾಹದ ವೇಳೆ 1 ರಿಂದ 2 ಅಡಿಯಷ್ಟು ಮಣ್ಣು ಕೊಚ್ಚಿ ಹೋಗಿದ್ದು, ಈಗ ಕಲ್ಲು ಮಿಶ್ರಿತ ಮರಳುನಿಂದ ಜಮೀನುಗಳು ಕೂಡಿದ್ದು, ಈಗ ರೈತರು ಕೃಷಿ ಚಟುವಟಿಕೆ ಮಾಡಲು ಸಾಧ್ಯವಿಲ್ಲದಂತಾಗಿದ್ದು, ಈ ಜಮೀನುಗಳನ್ನು ಹಸನುಗೊಳಿಸಲು ಜಮೀನಿನಲ್ಲಿ ಮರಳು ತುಂಬಿರುವ ಕಾರಣ ಸರ್ಕಾರದ ಅನುಮತಿಯ ಅಗತ್ಯವಿದೆ.

ಇದರ ಬಗ್ಗೆ ವರದಿ ನೀಡುವಂತೆ ಕ್ಷೇತ್ರದ ಶಾಸಕ ಡಾ. ಯತೀಂದ್ರ ಸಿದ್ದರಾಮಯ್ಯ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಮಾಜಿ ಸಂಸದ ಆರ್‌. ಧ್ರುವನಾರಾಯಣ್‌, ಮಾಜಿ ಸಚಿವ ಡಾ.ಎಚ್‌.ಸಿ. ಮಹದೇವಪ್ಪ ಅವರು ಸ್ಥಳಕ್ಕೆ ಭೇಟಿ ನೀಡಿ ಗ್ರಾಮದ ರೈತರ ಅಹವಾಲುಗಳನ್ನು ಸ್ವೀಕರಿಸಿ, ರೈತರ ಜಮೀನಿನಲ್ಲಿರುವ ಮರಳನ್ನು ಅವರೇ ತೆರವುಗೊಳಿಸಲು ಅನುಮತಿ ನೀಡಿ ಎಂದು ಅಧಿಕಾರಿಗಳಿಗೆ ಸೂಚಿಸಿದ್ದರೂ ಇದುವರೆವಿಗೂ ಸರ್ಕಾರದ ಯಾವುದೇ ಇಲಾಖೆಯ ಅಧಿಕಾರಿಗಳು ಇತ್ತ ಗಮನ ಹರಿಸದೇ ನಿರ್ಲಕ್ಷ್ಯ ವಹಿಸಿದ್ದಾರೆಂದು ರೈತರು ದೂರಿದ್ದಾರೆ.

ಅಲ್ಲದೇ ದಿಕ್ಕು ತಪ್ಪಿ ಕೃಷಿ ಭೂಮಿಯ ಕಡೆ ತನ್ನ ಹರಿವನ್ನು ಪ್ರಾರಂಭಿಸಿರುವ ಕಪಿಲಾ ನದಿಯು ದಿಕ್ಕು ಬದಲಿಸದಂತೆ ಕ್ರಮ ಕೈಗೊಳ್ಳಲು ನದಿಯ ಇಕ್ಕೆಲಗಳಲ್ಲೂ ಬಿದಿರು ಜಾತಿ ಹಾಗೂ ವಿವಿಧ ಗಿಡ ಮರಗಳನ್ನು ಬೆಳೆಸಲು ಅರಣ್ಯ ಇಲಾಖೆಯವರು ಕ್ರಮ ಕೈಗೊಳ್ಳಬೇಕೆಂದು ತಾಲೂಕು ರೈತ ಸಂಘದ ಅಧ್ಯಕ್ಷ ಬೊಕ್ಕಹಳ್ಳಿ ನಂಜುಂಡಸ್ವಾಮಿಯವರು ಸರ್ಕಾರಕ್ಕೆ ಹಾಗೂ ಜನಪ್ರತಿನಿಧಿಗಳಿಗೆ ಮನವಿ ಮಾಡಿದ್ದಾರೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಹುಳಿಮಾವು ಗ್ರಾಪಂ ಸದಸ್ಯರಾದ ಸೋಮಸುಂದರ್‌, ಮಾದಪ್ಪ, ದಸಂಸ ಅಧ್ಯಕ್ಷ ಲಿಂಗಯ್ಯ, ವಿಜಯ್‌ಕುಮಾರ್‌ ಅವರು ಮಾತನಾಡಿ, ಗ್ರಾಪಂ ವತಿಯಿಂದ ನದಿಯಿಂದ ಹಾನಿಯಾಗಿರುವ ಜಮೀನುಗಳನ್ನು ಸರ್ವೆ ಮಾಡಿ ಅಧಿಕಾರಿಗಳಿಗೆ ವರದಿ ನೀಡಿದ್ದೇವೆ, ಶೀಘ್ರದಲ್ಲೆ ಮರಳು ತೆರವು ಮಾಡಿ ಕೃಷಿ ಚಟುವಟಿಕೆ ನಡೆಸಲು ಅನುಮತಿ ನೀಡಬೇಕೆಂದು ಶಾಸಕರಾದ ಡಾ. ಯತೀಂದ್ರ ಸಿದ್ದರಾಮಯ್ಯ ಹಾಗೂ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.