ಕಲಬುರಗಿ(ಫೆ.05): ನಗರದಲ್ಲಿ ನಡೆಯುತ್ತಿರುವ 85 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರು ದೀಪ ಬೆಳಗಿಸುವ ಮೂಲಕ ಉದ್ಘಾಟನೆ ಮಾಡಿದ್ದಾರೆ. 

ನಗರದ ಗುಲಬರ್ಗಾ ವಿಶ್ವವಿದ್ಯಾಲಯದ ಮೈದಾನದ ಶ್ರೀ ವಿಜಯ ಪ್ರಧಾನ ವೇದಿಕೆಯಲ್ಲಿ ಮೂರು ದಿನಗಳ ಸಮ್ಮೇಳನಕ್ಕೆ ಸಿಎಂ ಚಾಲನೆ ನೀಡಿದ್ದಾರೆ. ಕನ್ನಡದ ಮೊದಲ ಕೃತಿ ಕವಿರಾಜಮಾರ್ಗ ಲೇಖಕ ಶ್ರೀ ವಿಜಯನ ಹೆಸರಿನ ಭವ್ಯ ವೇದಿಕೆಯಲ್ಲಿ ಕಾರ್ಯಕ್ರಮಕ್ಕೆ ವಿದ್ಯುಕ್ತ ಚಾಲನೆ ಸಿಕ್ಕಿದೆ. ಈ ಮೂಲಕ ರಾಷ್ಟ್ರಕೂಟರಾಳಿದ ನೆಲದಲ್ಲಿ  ಕನ್ನಡ ಕಹಳೆ ಮೊಳಗುತ್ತಿದೆ. 

ಬೆಂಗಳೂರಲ್ಲಿ ಕನ್ನಡ ಹುಡುಕುವ ಪರಿಸ್ಥಿತಿ ಇದೆ: ಗೋವಿಂದ ಕಾರಜೋಳ

ಸಮ್ಮೇಳನಾಧ್ಯಕ್ಷ ಹೆಚ್.ಎಸ್.ವೆಂಕಟೇಶ ಮೂರ್ತಿ 6 ಕಿಲೋ ಮೀಟರ್ ಮೆರವಣಿಗೆಯ ಮೂಲಕ ಮೂಲ ವೇದಿಕೆಗೆ ಆಗಮಿಸಿದ್ದಾರೆ. ಈ ವೇಳೆ ಕರ್ನಾಟಕ ಸಾಹಿತ್ಯ ಅಧ್ಯಕ್ಷ ಮನು ಬಳಿಗಾರ, ಡಿಸಿಎಂ ಗೋವಿಂದ ಕಾರಜೋಳ, ಸಚಿವ ಸಿ.ಟಿ ರವಿ, ಸಂಸದ ಉಮೇಶ ಜಾಧವ್ ಸೇರಿದಂತೆ ಜಿಲ್ಲೆಯ ಎಲ್ಲ ಶಾಸಕರು, ಜನಪ್ರತಿನಿಧಿಗಳು ಉಪಸ್ಥಿತಿ ವಹಿಸಿದ್ದಾರೆ. ಮೊದಲ ದಿನದ ಸಮ್ಮೇಳನದಲ್ಲಿಯೇ ಒಂದು ಲಕ್ಷಕ್ಕೂ ಹೆಚ್ಚು ಜನ ಭಾಗಿಯಾಗಿದ್ದಾರೆ. 

ಆದರೆ, ಸಾಹಿತ್ಯ ಸಮ್ಮೇಳನದ ಸಾರಿಗೆ ಸಮಿತಿ ಅಧ್ಯಕ್ಷರೂ ಆಗಿರುವ ಶಾಸಕ ಪ್ರಿಯಾಂಕ್‌ ಖರ್ಗೆ ಅವರು ಸಮ್ಮೆಳನದ ಉದ್ಘಾಟನಾ ಸಮಾರಂಭದಿಂದ ದೂರ ಉಳಿದಿದ್ದಾರೆ.