ಮಯೂರ ಹೆಗಡೆ

ಹುಬ್ಬಳ್ಳಿ(ನ.29): ಸಿನಿಮಾ, ವೆಬ್‌ ಸಿರೀಸ್‌ಗಳನ್ನು ಒಟಿಟಿಯಲ್ಲಿ ನೋಡಿ ಆನಂದಿಸಿದ ಜನರಿಗೆ ಇದೀಗ ನಾಟಕ ಪ್ರದರ್ಶನವನ್ನು ವೀಕ್ಷಿಸುವ ಸಮಯ ಬಂದಿದೆ. ಹೌದು, ಅಂತಹ ಒಂದು ನಾಟಕವನ್ನು ರಚಿಸಿರುವುದು ಹುಬ್ಬಳ್ಳಿ-ಧಾರವಾಡದಲ್ಲಿರುವ ಗುರು ಇನ್‌ಸ್ಟಿಟ್ಯೂಟ್‌ ಆದಿರಂಗ ಥೇಟರ್‌ ಸಂಸ್ಥೆ. ಪ್ರಮೋದ ಶಿಗ್ಗಾಂವ್‌ ನಿರ್ದೇಶನದ ‘ಬೆಪ್ಪುತಕ್ಕಡಿ ಬೋಳೆಶಂಕರ’ ನಾಟಕದ ಚಿತ್ರೀಕರಣ ಶನಿವಾರ ಪೂರ್ಣಗೊಂಡಿದ್ದು, ಶೀಘ್ರದಲ್ಲಿಯೇ ಪ್ರಗುಣಿ ಒಟಿಟಿಯಲ್ಲಿ ಪ್ರದರ್ಶನಗೊಳ್ಳಲಿದೆ.

ಉತ್ತರ ಕರ್ನಾಟಕದ ಮೊದಲ ಥೇಟರ್‌ ಎಂಬ ಹೆಗ್ಗಳಿಕೆಯ ಯಶವಂತ ಸರದೇಶಪಾಂಡೆ ಅವರ ಗುರು ಇನ್‌ಸ್ಟಿಟ್ಯೂಟ್‌ ಆದಿರಂಗ ಥೇಟರ್‌ ವಾಣಿಜ್ಯ ನಗರಿಯಲ್ಲಿ ಸಾಂಸ್ಕೃತಿಕ ಬಣ್ಣ ಪಸರಿಸುತ್ತಿದೆ. ಕೊರೋನಾ ಲಾಕ್‌ಡೌನ್‌ ವೇಳೆ ವಿದೇಶಿ ವಾಸಿಗಳಿಗೆ ಆನ್‌ಲೈನ್‌ ನಾಟಕ ಪ್ರದರ್ಶಿಸುತ್ತ, ಸಂವಾದ ಏರ್ಪಡಿಸುತ್ತ ಕ್ರಿಯಾಶೀಲತೆ ಕಾಯ್ದಿದ್ದ ಯಶವಂತ ಸರದೇಶಪಾಂಡೆ ಅವರೀಗ ಇಲ್ಲಿ ಹೊಸ ಪ್ರಯೋಗ ನಡೆಸಿದ್ದಾರೆ.

ಆಲೋಚನೆ ಹೇಗೆ?:

ಈ ಬಗ್ಗೆ ಯಶವಂತ ಸರದೇಶಪಾಂಡೆ ಮಾಹಿತಿ ನೀಡಿದ್ದಾರೆ. ಆದಿರಂಗದ ಕಾರ್ಯಚಟುವಟಿಕೆ ಗಮನಿಸಿ ತಮಿಳುನಾಡಿನಲ್ಲಿರುವ ಎನ್‌ಎಲ್‌ಸಿ (ನೈವೇಲಿ ಲಿಗ್ನೈಟ್‌ ಕಾರ್ಪೋರೇಶನ್‌ ಲಿ. ) ಕಂಪನಿ ಸಿಎಸ್‌ಆರ್‌ ಅನುದಾನ ಒದಗಿಸಿತ್ತು. ಅದರಡಿ ಜನಪದೀಯ ನಾಟಕ ರೂಪಿಸಿ ಪ್ರದರ್ಶಿಸುವ ಉದ್ದೇಶವಿತ್ತು. ಆದರೆ, ಪ್ರದರ್ಶನಕ್ಕೆ ಕೊರೋನಾ ಕೊಕ್ಕೆ ಹಾಕಿದೆ. ಇದನ್ನು ಹೊಸ ಅವಕಾಶವಾಗಿ ಬಳಸಿಕೊಳ್ಳುವ ಮನಸ್ಸು ಮಾಡಿದೆವು. ಅದರ ಪರಿಣಾಮವಾಗಿ ಒಟಿಟಿ ಪ್ಲಾಟ್‌ ಫಾರ್ಮ್‌ಗೆ ನಾಟಕ ನಿರ್ಮಿಸುವ ಉದ್ದೇಶ ಮೊಳೆಯಿತು ಎಂದು ಮಾಹಿತಿ ನೀಡಿದ್ದಾರೆ.

ಒಟಿಟಿ ಪ್ಲಾಟ್‌ಫಾರಂಗೆ ಅಂಕುಶ: ಕೇಂದ್ರಕ್ಕೆ ಹ್ಯಾಟ್ಸಾಫ್‌

‘1886ರಲ್ಲಿ ಪ್ರಕಟವಾದ ರಷ್ಯಾದ ತತ್ವಜ್ಞಾನಿ ಲಿಯೋ ಟಾಲ್ಸ್‌ಟಾಯ್‌ ಅವರ ‘ಐವಾನ್‌ ದಿ ಫäಲ್‌’ ಕಿರು ಕತೆಯೆ ಈ ನಾಟಕದ ಹಂದರ. ಕನ್ನಡದಲ್ಲಿ ‘ಬೆಪ್ಪುತಕ್ಕಡಿ ಬೋಳೆಶಂಕರ’ ಎಂದು ಹೆಸರಿಟ್ಟಿದ್ದೇವೆ. ದುಷ್ಟತನ ಮತ್ತು ಒಳ್ಳೆಯತನದ ನಡುವಿನ ಸಂಘರ್ಷದ ಕತೆಯಿದು. ಕಳೆದ ಅ.15ರಿಂದ ನಾಟಕದ ತಾಲೀಮು ನಡೆಸಿದ್ದೇವೆ. ಇದರಲ್ಲಿ 40 ಕಲಾವಿದರು, 20 ತಂತ್ರಜ್ಞರು ಸೇರಿದ್ದೇವೆ. ಚಿಕ್ಕವರು, ಯುವಕರು ಹಾಗೂ ವಯಸ್ಕರು ಹೀಗೆ ಮೂರು ಹಂತದ ವಯೋಮಾನದ ಕಲಾವಿದರನ್ನು ಇದು ಒಳಗೊಂಡಿದೆ. ಸಂಕಲನ, ಬೆಳಕು, ಚಿತ್ರೀಕರಣ ಹೀಗೆ ಎಲ್ಲ ಕಾರ್ಯಕ್ಕೂ ಸ್ಥಳೀಯರಿಗೆ ತರಬೇತಿ ನೀಡಿ ಮಾಡಿಸುತ್ತಿದ್ದೇವೆ. 80-90 ನಿಮಿಷದ ನಾಟಕ ಇದಾಗಿದೆ’ ಎಂದು ಸರದೇಶಪಾಂಡೆ ವಿವರಿಸಿದ್ದಾರೆ.
ನಿರ್ದೇಶನದ ಹೊಣೆಯನ್ನು ಪ್ರಮೋದ ಶಿಗ್ಗಾಂವ್‌ ಹೊತ್ತಿದ್ದರೆ, ಸಂಗೀತ ನಿರ್ದೇಶನವನ್ನು ಶ್ರೀನಿವಾಸ ಜೋಶಿ ನಿರ್ವಹಿಸುತ್ತಿದ್ದಾರೆ. ಸಂಜನಾ ಕುಲಕರ್ಣಿ, ಅಮೋದಿನಿ ಮಹಾಲೆ, ಗೋಪಾಲ ಜೋಶಿ ಮೇಳದಲ್ಲಿದ್ದಾರೆ.

ಡಿ.15ರ ವೇಳೆಗೆ ಪ್ರಸಾರ

ಕನ್ನಡದ ನೂತನ ಒಟಿಟಿ ಪ್ಲಾಟ್‌ಫಾರ್ಮ್‌ ಪ್ರಗುಣಿಯಲ್ಲಿ ಈ ನಾಟಕ ಪ್ರದರ್ಶನವಾಗಲಿದೆ. ಒಟಿಟಿ ಪ್ಲಾಟ್‌ಫಾಮ್‌ರ್‍ಗಾಗಿ ನಾಟಕ ರೂಪಿಸಿ ನೀಡುವುದು ಹೊಸ ಸಾಹಸ. ಬಹುತೇಕ ಡಿ. 15ರ ಆಸುಪಾಸಲ್ಲಿ ನಾಟಕ ಪ್ರಸಾರ ಆಗಬಹುದು. ಹುಬ್ಬಳ್ಳಿಯಲ್ಲಿ ಸುಸಜ್ಜಿತ ಕಲಾವಿದರು, ತಂತ್ರಜ್ಞರನ್ನು ರೂಪಿಸುವ ಆದಿರಂಗದ ಉದ್ದೇಶ ಫಲ ನೀಡುತ್ತಿದೆ ಎಂದು ಗುರು ಇನ್‌ಸ್ಟಿಟ್ಯೂಟ್‌ ಆದಿರಂಗ ಥೇಟರ್‌ ಅಧ್ಯಕ್ಷ ಯಶವಂತ ಸರದೇಶಪಾಂಡೆ ತಿಳಿಸಿದ್ದಾರೆ.