ಬೆಳಗಾವಿ(ಡಿ.30): ಬೆಳಗಾವಿ ಮಹಾನಗರ ಪಾಲಿಕೆ ಎದುರು ಕನ್ನಡ ಧ್ವಜಸ್ತಂಭ ಸ್ಥಾಪಿಸಿ ಕನ್ನಡ ಬಾವುಟ ಹಾರಿಸಿದ ಕನ್ನಡ ಹೋರಾಟಗಾರರು ಬಾವುಟದ ರಕ್ಷಣೆಗೆ ಸ್ವತಃ ರಾತ್ರಿ ಕೊರೆಯುವ ಚಳಿಯನ್ನೂ ಲೆಕ್ಕಿಸದೇ ಕಾವಲು ಕಾಯುತ್ತಿದ್ದಾರೆ. ಸ್ಥಳ ಬಿಟ್ಟು ಎಲ್ಲಿಯೂ ಕದಲಲಿಲ್ಲ. ಹೀಗಾಗಿ ಮೊದಲ ಬಾರಿಗೆ ಪಾಲಿಕೆ ಎದುರು ಹಾರಿಸಿದ್ದ ಕನ್ನಡ ಬಾವುಟ ಹಾರಾಡುತ್ತಿದೆ.

ಈ ನಡುವೆ ಈ ಕನ್ನಡಧ್ವಜ ತೆರವುಗೊಳಿಸುವಂತೆ ಕನ್ನಡಪರ ಹೋರಾಟಗಾರರ ಮನವೊಸಲು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಮಂಗಳವಾರ ಕರೆದಿದ್ದ ಸಂಧಾನ ಸಭೆ ಕೂಡ ವಿಫಲವಾಗಿದೆ. ಕನ್ನಡ ಧ್ವಜ ತೆರವುಗೊಳಿಸುವುದಕ್ಕೆ ಕನ್ನಡ ಹೋರಾಟಗಾರರು ಸುತಾರಾಂ ತಮ್ಮ ಒಪ್ಪಿಗೆ ನೀಡಲಿಲ್ಲ.

 

ಪಾಲಿಕೆ ಎದುರು ಹಾರಿಸಲಾಗಿರುವ ಕನ್ನಡ ಬಾವುಟವನ್ನು ಯಾವುದೇ ಕಾರಣಕ್ಕೂ ತೆರವುಗೊಳಿಸಬಾರದು. ಇದಕ್ಕೆ ಪೊಲೀಸ್‌ ರಕ್ಷಣೆ ಒದಗಿಸಬೇಕು ಎಂದು ಪಟ್ಟುಹಿಡಿದಿರುವ ಕನ್ನಡ ಹೋರಾಟಗಾರರು ಕನ್ನಡ ಧ್ವಜಸ್ತಂಭಕ್ಕೆ ರಕ್ಷಣೆ ನೀಡುವ ಬಗ್ಗೆ ಅಧಿಕಾರಿಗಳಿಂದ ಲಿಖಿತ ಭರವಸೆ ನೀಡದ ಹೊರತು ಸ್ಥಳ ಬಿಟ್ಟು ಹೋಗದಿರಲು ತೀರ್ಮಾನಿಸಿರುವುದಾಗಿ ಕನ್ನಡ ಹೋರಾಟಗಾರ್ತಿ ಕಸ್ತೂರಿ ಬಾವಿ ಹೇಳಿದ್ದಾರೆ.

ಕನ್ನಡ ಹೋರಾಟಗಾರ ಶ್ರೀನಿವಾಸ ತಾಳೂಕರ ನೇತೃತ್ವದಲ್ಲಿ ಕನ್ನಡದ ಕಾರ್ಯಕರ್ತರು ಕನ್ನಡ ಬಾವುಟಕ್ಕೆ ರಕ್ಷಣೆ ನೀಡುವ ಕಾರ್ಯ ಮುಂದುವರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ವಿವಿಧ ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ಸ್ಥಳಕ್ಕೆ ಭೇಟಿ ನೀಡಿ, ತಮ್ಮ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದರು. ಸ್ಥಳದಲ್ಲೇ ಪಟಾಕಿ ಸಿಡಿಸಿ, ಸಿಹಿ ವಿತರಿಸಿ ಸಂಭ್ರಮಿಸಿದರು. ಕನ್ನಡಧ್ವಜ ಸ್ತಂಭದ ಮೇಲೆ ರಾಷ್ಟ್ರಕವಿ ಕುವೆಂಪು ಅವರ ಭಾವಚಿತ್ರವನ್ನು ಇಟ್ಟು ಪೂಜೆ ಸಲ್ಲಿಸುವ ಮೂಲಕ ಕುವೆಂಪು ದಿನಾಚರಣೆಯನ್ನು ಕನ್ನಡ ಹೋರಾಟಗಾರರು ಆಚರಿಸಿದರು.

ಎಂದಿನಂತೆ ಎಂಇಎಸ್‌ ಕ್ಯಾತೆ

ಪಾಲಿಕೆ ಎದುರು ಕನ್ನಡ ಬಾವುಟ ಹಾರಿಸಿರುವುದಕ್ಕೆ ಮಹಾರಾಷ್ಟ್ರ ಏಕೀಕರಣ ಸಮಿತಿ ಮತ್ತೆ ಕ್ಯಾತೆ ಎತ್ತಿದೆ. ಕನ್ನಡಿಗರ ಸಂಭ್ರಮ ಸಹಿಸಿಕೊಳ್ಳದ ಭಾಷಾಂಧ ಎಂಇಎಸ್‌ ನಾಯಕರು ಪೊಲೀಸ್‌ ಆಯುಕ್ತ, ಜಿಲ್ಲಾಧಿಕಾರಿ ಮತ್ತು ಪಾಲಿಕೆ ಆಯುಕ್ತರಿಗೆ ದೂರು ನೀಡಿದ್ದಾರೆ. ಕಾನೂನು ಬಾಹಿರವಾಗಿ ಕನ್ನಡಪರ ಸಂಘಟನೆಗಳು ಪ್ರಾದೇಶಿಕ ಆಯುಕ್ತರ ಕಚೇರಿ ಎದುರು, ರೈಲ್ವೆ ನಿಲ್ದಾಣ ಮತ್ತು ಪಾಲಿಕೆ ಎದುರು ಹಳದಿ, ಕೆಂಪುಬಣ್ಣದ ಬಾವುಟ ಹಾರಿಸಿರುವುದಾಗಿ ಎಂಇಎಸ್‌ ಆರೋಪಿಸಿದ್ದು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದೆ. ಈ ವಿಚಾರವಾಗಿ ಪೊಲೀಸ್‌ ಅಧಿಕಾರಿಗಳ ಜೊತೆಗೆ ವಾಗ್ವಾದ ನಡೆಸಿ, ತಮ್ಮ ಪುಂಡಾಟಿಕೆ ಪ್ರದರ್ಶಿಸಿದ್ದಾರೆ.