Asianet Suvarna News Asianet Suvarna News

ಕನ್ನಡ ರಾಜ್ಯೋತ್ಸವ: 5 ಲಕ್ಷ ಕಂಠಗಳಲ್ಲಿ ಮೊಳಗಿತು ಕನ್ನಡ ಗೀತೆಗಳ ಗಾಯನ

ಕನ್ನಡಕ್ಕಾಗಿ ನಾವು ಅಭಿಯಾನದ ಅಂಗವಾಗಿ, 'ಮಾತಾಡ್ ಮಾತಾಡ್ ಕನ್ನಡ' ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ‌ ಬೊಮ್ಮಾಯಿ ಕನ್ನಡ ಹಾಡು ಹಾಡಿ ಸಂಭ್ರಮಿಸಿದರು. ಲಕ್ಷಕಂಠ ಸಿರಿಯಲ್ಲಿ 'ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು' ಹಾಡು ಅನುರಣಿಸಿತು.

Kananda Rajyotsava 2021 singing of Kannada songs in 5 lakhs peoples
Author
Bangalore, First Published Oct 28, 2021, 7:52 PM IST
  • Facebook
  • Twitter
  • Whatsapp

ಬೆಂಗಳೂರು (ಅ.28): ನವೆಂಬರ್ 1 ಕನ್ನಡ ರಾಜ್ಯೋತ್ಸವ (Kananda Rajyotsava ) ದಿನಗಣನೆ ಆರಂಭವಾಗಿದೆ. ಮತ್ತೊಂದೆಡೆ ಹಿಂದೆಂದೂ ನಡೆದಿರದ ಅಭೂತಪೂರ್ವ ಕನ್ನಡ (Kananda) ಉತ್ಸವ ಅದ್ದೂರಿಯಾಗಿ ರಾಜ್ಯದಲ್ಲಿ ನಡೆದಿದೆ. ಕನ್ನಡಕ್ಕಾಗಿ ನಾವು ಅಭಿಯಾನದ ಅಂಗವಾಗಿ ಇಂದು ನಡೆದ ಲಕ್ಷ ಕಂಠಗಳ ಕನ್ನಡ ಗೀತಗಾಯನ (Kannada Song) ಕಾರ್ಯಕ್ರಮ ಅಸಾಧಾರಣ ರೀತಿಯಲ್ಲಿ ಯಶಸ್ವಿಯಾಗಿದೆ. 

ಕನ್ನಡ ರಾಜ್ಯೋತ್ಸವದ ಅಂಗವಾಗಿ 3 ಗೀತೆಗಳ ಸಮೂಹ ಗಾಯನವನ್ನು ಕರ್ನಾಟಕ ಸರ್ಕಾರದಿಂದ ವಿಭಿನ್ನ ಅಭಿಯಾನ  ಆಯೋಜಿಸಲಾಗಿತ್ತು. ಬೆಳಗ್ಗೆ 11 ಗಂಟೆಗೆ ಸಿಎಂ ಬಸವರಾಜ ಬೊಮ್ಮಾಯಿ (Basavaraj Bommai) ಅವರು ಚಾಲನೆ ನೀಡಿದರು. 'ಮಾತಾಡ್ ಮಾತಾಡ್ ಕನ್ನಡ' ಈ ಘೋ‍ಷ ವಾಕ್ಯದಡಿ ರಾಜ್ಯ ಅಂತರಾಜ್ಯ, ವಿದೇಶದ 5 ಲಕ್ಷಕ್ಕೂ ಹೆಚ್ಚು ಕನ್ನಡಿಗರು ಗಾಯನದಲ್ಲಿ ಭಾಗಿಯಾಗಿದ್ದರು. 'ಬಾರಿಸು ಕನ್ನಡ ದಿಂಡಿಮವ', 'ಜೋಗದ ಸಿರಿ ಬೆಳಕಿನಲ್ಲಿ', 'ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು' ಹಾಡುಗಳ ಗಾಯನ ವಿಧಾನಸೌಧ ಮೆಟ್ಟಿಲು, ಹೈಕೋರ್ಟ್, ವಿಮಾನ ನಿಲ್ದಾಣ, ಮೆಟ್ರೋ, ಬಸ್ ನಿಲ್ದಾಣ, ಮಾರುಕಟ್ಟೆ, ಐತಿಹಾಸಿಕ ಸ್ಮಾರಕ, ಸೇರಿದಂತೆ ರಾಜ್ಯದ ಸಾವಿರ ಸ್ಥಳಗಳಲ್ಲಿ 5 ಲಕ್ಷಕ್ಕೂ ಅಧಿಕ ಮಂದಿ ಈ ಗೀತಗಾಯನದಲ್ಲಿ ಭಾಗವಹಿಸಿದ್ದರು.

"

ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ. ಸುನಿಲ್ ಕುಮಾರ್ (Sunil Kumar) ವಿಧಾನಸೌಧದ ಮುಂಭಾಗದಲ್ಲಿ 'ಜಯ ಭಾರತ ಜನನಿಯ ತನುಜಾತೆ' ಕನ್ನಡ ಹಾಡನ್ನು ಅಲ್ಲಿ ನೆರೆದಿದ್ದವರ ಜೊತೆ ಹಾಡಿದರು. ಜೊತೆಗೆ 'ಕನ್ನಡ ನಾಡಿನ ಜವಾಬ್ದಾರಿಯುತ ಪ್ರಜೆಯಾಗಿ, ನಾನು ಕನ್ನಡದಲ್ಲೇ ಮಾತನಾಡುತ್ತೇನೆ, ಕನ್ನಡದಲ್ಲೇ ಬರೆಯುತ್ತೇನೆ, ನಿತ್ಯ ವ್ಯವಹಾರದಲ್ಲಿ ಕನ್ನಡವನ್ನೇ ಬಳಸುತ್ತೇನೆ ಎಂಬ ಪಣ ತೊಡುತ್ತೇನೆ. ಕನ್ನಡ ನಾಡಿನಲ್ಲಿ ವಾಸವಾಗಿರುವ ಕನ್ನಡೇತರ ಬಂಧುಗಳಿಗೆ ಪ್ರೀತಿಯಿಂದ ಕನ್ನಡ ಕಲಿಸುತ್ತೇನೆ. ಕನ್ನಡ ನಾಡು, ನುಡಿ, ಸಂಸ್ಕೃತಿ ಹಾಗೂ ಪರಂಪರೆಯನ್ನು ಉಳಿಸಲು ಕಟಿ ಬದ್ಧನಾಗಿರುತ್ತೇನೆ ಎಂಬ ಸಂಕಲ್ಪವನ್ನು ಭೋಧಿಸಿದರು.

'ಕನ್ನಡಕ್ಕಾಗಿ ನಾವು' ಅಭಿಯಾನ ಶುರು: ‘ಮಾತಾಡ್‌ ಮಾತಾಡ್‌ ಕನ್ನಡ’ ಘೋಷ!

ಇನ್ನು ಹುಬ್ಬಳ್ಳಿಯಲ್ಲಿ ನಡೆದ 'ಮಾತಾಡ್ ಮಾತಾಡ್ ಕನ್ನಡ' ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ‌ ಬೊಮ್ಮಾಯಿ ಕನ್ನಡ ಹಾಡು ಹಾಡಿ ಸಂಭ್ರಮಿಸಿದರು. ಲಕ್ಷಕಂಠ ಸಿರಿಯಲ್ಲಿ 'ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು' ಹಾಡು ಅನುರಣಿಸಿತು.

ವಿಮಾನ ನಿಲ್ದಾಣಗಳಲ್ಲಿ ಮೊಳಗಿತು ಕನ್ನಡದ ಗಾಯನ
ಈ ಅಭಿಯಾನದ ಅಂಗವಾಗಿ ವಿಶೇಷವಾಗಿ ಕರ್ನಾಟಕದ ವಿಮಾನ ನಿಲ್ದಾಣಗಳಲ್ಲಿ ಸಹ ಈ ಕನ್ನಡದ ಗೀತಗಾಯನ ಅನುರುಣಿಸಿತು. ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ, ಮಂಗಳೂರು ಹಾಗೂ ಹುಬ್ಬಳ್ಳಿ ವಿಮಾನ ನಿಲ್ದಾಣಗಳಲ್ಲಿಯೂ ಸಹ ಸಾವಿರರು ಜನ ಒಟ್ಟಿಗೆ ನಿಂತು ಈ ಕನ್ನಡ ಗೀತೆಗಳ ಗಾಯನ ಮಾಡಿದರು.

"

ಮೆಟ್ರೋದಲ್ಲಿ ಮೊಳಗಿತು ಕನ್ನಡ ಕಂಠ
ಬೆಂಗಳೂರು ಮೆಟ್ರೋದಲ್ಲಿ ಕನ್ನಡಮಯ ವಾತಾವರಣ ಉಂಟುಮಾಡಲು ಇಂದು ಬೆಂಗಳೂರು ಮೆಟ್ರೋದ ಎಲ್ಲಾ ರೈಲುಗಳಲ್ಲೂ ಸುಗಮ ಸಂಗೀತ ಗಾಯನ ತಂಡಗಳು ಈ ಮೂರು ಗೀತೆಗಳನ್ನು ಹಾಡಿದರು. ಮೆಟ್ರೋದ ಎಲ್ಲಾ 51 ನಿಲ್ದಾಣಗಳಲ್ಲಿ ಈ ಕನ್ನಡ ಗೀತೆಗಳ ಗಾಯನ ಧ್ವನಿವರ್ಧಕಗಳ ಮೂಲಕ ಪ್ರಸಾರವಾಯಿತು. ಅದರ ಜೊತೆಗೆ ಅತ್ಯಂತ ಜನ ನಿಬಿಡವಾದ 5 ಮೆಟ್ರೋ ನಿಲ್ದಾಣಗಳಲ್ಲಿ ಸಮೂಹ ಗೀತಗಾಯನ ನಡೆಯಿತು. 

ಕನ್ನಡಮಯ ಬೆಂಗಳೂರು 
ಬೆಂಗಳೂರಿನ ಎಲ್ಲಾ 28 ವಿಧಾನಸಭಾ ಕ್ಷೇತ್ರಗಳು ಹಾಗೂ 198 ವಾರ್ಡ್‌ಗಳಲ್ಲಿ ಸ್ಥಳೀಯ ಶಾಸಕರು ಮತ್ತು ನಗರ ಸಭಾ ಸದಸ್ಯರ ಸಹಯೋಗದೊಂದಿಗೆ ಈ ಗೀತಗಾಯನದ ಜೊತೆಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಬೆಂಗಳೂರಿನ ಎಲ್ಲಾ ಮಾಹಿತಿ ಮತ್ತು ತಂತ್ರಜ್ಞಾನ /ಜೈವಿಕ ತಂತ್ರಜ್ಞಾನ ಸಂಸ್ಥೆಗಳ ಮುಂಭಾಗದ ಆವರಣಗಳಲ್ಲಿ ಸಾವಿರ ಸಾವಿರ ಸಂಖ್ಯೆಯ ಮಾಹಿತಿ ಮತ್ತು ತಂತ್ರಜ್ಞಾನ /ಜೈವಿಕ ತಂತ್ರಜ್ಞಾನದ ಉದ್ಯೋಗಿಗಳು, ಆಡಳಿತ ಮಂಡಳಿಯ ಸದಸ್ಯರು ಹಾಗೂ ಎಲ್ಲಾ ಆಸಕ್ತ ಸಾರ್ವಜನಿಕರು ಒಂದಾಗಿ ಸೇರಿ ಕನ್ನಡದ ಈ ಮೂರು ಗೀತೆಗಳನ್ನು ಹಾಡುವ ಮೂಲಕ ತಮ್ಮ ಕನ್ನಡ ಪ್ರೇಮ ಮೆರೆದರು. ಬೆಂಗಳೂರಿನ ಎಲ್ಲಾ ಕೈಗಾರಿಕಾ ಪ್ರದೇಶಗಳು, ಬಸ್ಸು ಮತ್ತು ಆಟೋ ನಿಲ್ದಾಣಗಳು ಈ ಕನ್ನಡ ಗೀತಗಾಯನಕ್ಕೆ ಸಾಕ್ಷಿಯಾದವು.

"

ಬಹಳ ಮುಖ್ಯವಾಗಿ ರಾಜಧಾನಿ ಬೆಂಗಳೂರಿನ ವಿಧಾನಸೌಧದ ಮೆಟ್ಟಿಲುಗಳ ಮೇಲೆ ಸನ್ಮಾನ್ಯ ಮುಖ್ಯಮಂತ್ರಿಗಳು ಹಾಗೂ ಮುಖ್ಯಕಾರ್ಯದರ್ಶಿಗಳ ಜೊತೆ ಸ್ವತಃ ತಾವೇ ಸಾವಿರಾರು ಸಂಖ್ಯೆಯ ಅಧಿಕಾರಿ / ಸಿಬ್ಬಂದಿ ಹಾಗೂ ಸಾರ್ವಜನಿಕರ ಜೊತೆ ಈ ಗೀತಗಾಯನ ಕಾರ್ಯಕ್ರಮದಲ್ಲಿಸಚಿವ ಸುನಿಲ್ ಕುಮಾರ್ ಭಾಗಿಯಾಗಿದ್ದರು. ವಿಕಾಸಸೌಧ, ವಿಧಾನಸೌಧದ ಮಧ್ಯೆ ಇರುವ ಗಾಂಧಿ ಪ್ರತಿಮೆಯ ಮುಂಭಾಗದಲ್ಲಿಯೂ ಈ ಗೀತಗಾಯನ ಆಯೋಜಿಸಿದ್ದು, ಎಲ್ಲಾ ಐಎಎಸ್, ಕೆಎಎಸ್ ಅಧಿಕಾರಿಗಳು ಸಚಿವಾಲಯದ ಅಧಿಕಾರಿ / ಸಿಬ್ಬಂದಿ, ವಿಧಾನಮಂಡಲದ ಅಧಿಕಾರಿ/ಸಿಬ್ಬಂದಿಗಳು ಈ ಗೀತಗಾಯನದಲ್ಲಿ ಭಾಗವಹಿಸಿ ವಿಧಾನಸೌಧದ ಆವರಣದಲ್ಲಿ ಕನ್ನಡ ಕಂಠದ ಅನುರುಣನಕ್ಕೆ ಸಾಕ್ಷಿಯಾದರು. ರಾಜ್ಯ ಉಚ್ಛ ನ್ಯಾಯಾಲಯ ಮುಂಭಾಗದಲ್ಲಿಯೂ ಸಹ ಈ ಗೀತಗಾಯನದ ಸಂಭ್ರಮ ಅನಾವರಣಗೊಂಡಿತು.

ವಿವಿಧ ಜಿಲ್ಲೆಗಳಲ್ಲಿ ಗೀತಗಾಯನ ನಡೆದ ಪ್ರಮುಖ ತಾಣಗಳು 
• ಜೋಗದ ಮುಂದೆ ಜೋಗದ ಸಿರಿ ಬೆಳಕಿನಲ್ಲಿ, ಈ ಗೀತಗಾಯನದ ಸಂದರ್ಭದಲ್ಲಿ ಶಿವಮೊಗ್ಗ ಜಿಲ್ಲೆಯ ಜೋಗದ ಜಲಪಾತದ ಮುಂದೆ ಸಾವಿರ ಜನರ ಕಂಠದಲ್ಲಿ ಈ ಕನ್ನಡ ಗೀತೆಗಳನ್ನು ಹಾಡಲು ಯೋಜಿಸಲಾಗಿತ್ತು. ಹಾಗೆಯೇ ರಾಷ್ಟ್ರಕವಿ ಕುವೆಂಪು ಅವರ ಕುಪ್ಪಳಿಯ ಕವಿಶೈಲದಲ್ಲಿ ಈ ಗೀತೆಗಳು ಮೊಳಗಿತು.
• ಚಿತ್ರದುರ್ಗದ ಸುಪ್ರಸಿದ್ಧ ಕೋಟೆಯ ಮುಂಭಾಗದಲ್ಲಿ 
• ಮಂಗಳೂರು ಸಮುದ್ರತೀರ,
• ಉಡುಪಿಯ ಶ್ರೀ ಕೃಷ್ಣದೇಗುಲದ ಮುಂಭಾಗದಲ್ಲಿ ಕೂಡ ಈ ಗೀತಗಾಯನ ಕಾರ್ಯಕ್ರಮ ನಡೆಯಿತು.
• ಮೂಡಬಿದರೆಯ ಸಾವಿರ ಕಂಬದ ಬಸದಿ ಹಾಗೂ ಮಂಗಳೂರು ಬಂದರಿನ ಮೀನುಗಾರರ ಮಧ್ಯೆ ಈ ಗೀತೆಗಾಯನ ನಡೆಯಿತು.
• ಮೈಸೂರಿನ ಅರಮನೆ ಮುಂಭಾಗ ಹಾಗೂ ಮೈಸೂರಿನ ಪ್ರಮುಖ ಪ್ರವಾಸಿ ತಾಣಗಳಲ್ಲಿ ಗಾಯನ ತಂಡಗಳು ಈ ಗೀತೆಗಳನ್ನು ಹಾಡಿದರು. 
• ಬೆಳಗಾವಿಯ ಸುವರ್ಣಸೌಧದ ಮುಂದೆ ಹಾಗೂ ಬೆಳಗಾವಿ ಗಡಿ ಪ್ರದೇಶಗಳಲ್ಲಿ, 
• ಹಂಪಿಯ ವಿರೂಪಾಕ್ಷ ದೇಗುಲದ ಮುಂದೆ, ಮಹಾನವಮಿ ದಿಬ್ಬ, ವಿಜಯವಿಠ್ಠಲ ದೇವಸ್ಥಾನದ ಆವರಣ, ಕಲ್ಲಿನ ರಥದ ಮುಂಭಾಗ,
• ತುಮಕೂರಿನ ಸಿದ್ಧಗಂಗಾ ಮಠದ ಆವರಣದಲ್ಲಿ ಒಂಭತ್ತು ಸಾವಿರ ವಿದ್ಯಾರ್ಥಿಗಳು ಈ ಗೀತಗಾಯನದಲ್ಲಿ ಪಾಲ್ಗೊಂಡಿದ್ದರು.
• ಶ್ರೀರಂಗಪಟ್ಟಣದ ಶ್ರೀರಂಗನಾಥ ಸ್ವಾಮಿ ದೇಗುಲದ ಮುಂಭಾಗ, 
• ಕೊಡಗಿನ ಭಾಗಮಂಡಲ ಹಾಗೂ ಇತರ ಪ್ರವಾಸಿ ತಾಣಗಳ ಮುಂದೆ
• ಹಾಸನದ ಬೇಲೂರು, ಹಳೇಬೀಡು, ಶ್ರವಣಬೆಳಗೊಳ ಹಾಗೂ ಕನ್ನಡದ ಪ್ರಥಮ ಶಾಸನ ದೊರೆತ ಹಲ್ಮಿಡಿ ಗ್ರಾಮದಲ್ಲಿ ಈ ಗೀತಗಾಯನದ ಕಂಪು ಪಸರಿಸಿತು. 
• ಚಿಕ್ಕಬಳ್ಳಾಪುರದ ಭೋಗ ನಂದೀಶ್ವರ ದೇವಸ್ಥಾನದ ಮುಂಭಾಗ
• ಯಾದಗಿರಿಯ ಬಂದೀಖಾನೆ ಮುಂಭಾಗ
• ಹಾವೇರಿಯ ಸುಪ್ರಸಿದ್ಧ ಕಾಗಿನೆಲೆ, ಶಿಶುನಾಳ, ಗೊಟಗೋಡಿಯ ಜಾನಪದ ವಿಶ್ವವಿದ್ಯಾಲಯ ಹಾಗೂ ಕನಕದಾಸರ ಜನ್ಮಸ್ಥಳ ಬಾಡಾದಲ್ಲಿ ಈ ಗೀತಗಾಯನ ಮೊಳಗಿತು.
• ವಿಜಯಪುರದ ಅಕ್ಕಮಹಾದೇವಿ ಕರ್ನಾಟಕ ರಾಜ್ಯ ಮಹಿಳಾ ವಿಶ್ವವಿದ್ಯಾಲಯದ ಆವರಣ ಹಾಗೂ ಗಡಿಭಾಗಗಳಲ್ಲಿ.
• ರಾಯಚೂರಿನ ಹಟ್ಟಿ ಚಿನ್ನದಗಣಿ ಆವರಣ, ಆರ್.ಟಿ.ಪಿ.ಎಸ್. ವಿದ್ಯುತ್ ಉತ್ಪಾದನಾ ಘಟಕದ ಮುಂಭಾಗದಲ್ಲಿಯೂ ಕನ್ನಡ ಗೀತೆಯ ಗಾಯನ ಗಂಗೆ ಪ್ರವಹಿಸಿತು.

"

ಒಟ್ಟಾರೆಯಾಗಿ ಕನ್ನಡಕ್ಕಾಗಿ ನಾವು ಅಭಿಯಾನದ ಈ ಗೀತಗಾಯನ ಕಾರ್ಯಕ್ರಮದ ಮೂಲಕ ಕನ್ನಡದ ಉದ್ಘೋಷ ಒಂದೇ ಭಾರಿಗೆ ಇಡೀ ವಿಶ್ವದಲ್ಲಿ ಮೊಳಗಬೇಕು ಎಂಬ ಮಹದಾಶಯದೊಂದಿಗೆ ಈ ಯೋಜನೆ ರೂಪಿಸಲಾಗಿತ್ತು.

Follow Us:
Download App:
  • android
  • ios