* ಕೋವಿಡ್‌ ಮಹಾಮಾರಿಯಿಂದಾಗಿ ಆರ್ಥಿಕ ಸಂಕಷ್ಟದಲ್ಲಿರುವ ರಾಜ್ಯದ ಜನತೆ * ಜನರ ಕುಂದು ಕೊರತೆ ಆಲಿಸಿ ನೆರವಾಗುವುದು ನಮ್ಮ ಕರ್ತವ್ಯ* ಕ್ಷೇತ್ರದ ಅಭಿವೃದ್ಧಿ ವಿಚಾರವಾಗಿ ಕೆಲವರಿಂದ ರಾಜಕೀಯ  

ಕಂಪ್ಲಿ(ಜು.26): ಬಿಜೆಪಿ ಸರ್ಕಾರದಿಂದ ಜನ ಸಾಮಾನ್ಯರು ರೋಸಿ ಹೋಗಿದ್ದು ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ ಎಂದು ಶಾಸಕ ಜೆ.ಎನ್‌.ಗಣೇಶ್‌ ತಿಳಿಸಿದ್ದಾರೆ. 

ತಾಲೂಕಿನ ದೇವಲಾಪುರ ಗ್ರಾಮದಲ್ಲಿ ಇತ್ತೀಚೆಗೆ ಎಚ್‌ಕೆಆರ್‌ಡಿ ಯೋಜನೆಯಡಿ 12.48 ಲಕ್ಷ ವೆಚ್ಚದ ಸಿಸಿ ರಸ್ತೆ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು. ಕೋವಿಡ್‌ ಮಹಾಮಾರಿಯಿಂದಾಗಿ ರಾಜ್ಯದ ಜನತೆ ಆರ್ಥಿಕ ಸಂಕಷ್ಟದಲ್ಲಿದ್ದಾರೆ. ಇಂತಹ ಸಂದಿಗ್ದ ಪರಿಸ್ಥಿಯಲ್ಲಿ ಸರ್ಕಾರ ಪೆಟ್ರೋಲ್‌, ಡೀಸೆಲ್‌, ಅಡುಗೆ ಎಣ್ಣೆ, ದಿನಸಿ ಸಾಮಾನುಗಳ ಬೆಲೆ ಏರಿಕೆಗೊಳಿಸಿದ್ದು ಜನ ಸಾಮಾನ್ಯರಿಗೆ ದೊಡ್ಡ ತಲೆನೋವಾಗಿದೆ. ಕ್ಷೇತ್ರದ ಅಭಿವೃದ್ಧಿ ವಿಚಾರವಾಗಿ ಕೆಲವರು ರಾಜಕೀಯ ಮಾಡುತ್ತಿದ್ದು, ಅಭಿವೃದ್ಧಿ ವಿಚಾರ ಬಂದಾಗ ರಾಜಕೀಯ ತೊರೆದು ಎಲ್ಲರು ಸಹಕರಿಸಬೇಕು. ಜನರ ಕುಂದು ಕೊರತೆ ಆಲಿಸಿ ಅವರಿಗೆ ನೆರವಾಗುವುದು ನಮ್ಮ ಕರ್ತವ್ಯವಾಗಿದೆ. ಮುಂದಿನದಿನಗಳಲ್ಲಿ ಕ್ಷೇತ್ರದ ಅಭಿವೃದ್ಧಿಗೆ ಸರ್ಕಾರದ ಗಮನಸೆಳೆದು ಹೆಚ್ಚು ಅನುದಾನ ಬಿಡುಗಡೆಗೊಳಿಸಲು ಶ್ರಮಿಸುವೆ ಎಂದರು.

'ಸಿಎಂ ಯಡಿಯೂರಪ್ಪ ಹಿಟ್ಲರ್‌ನಂತೆ ತೀರ್ಮಾನ ತೆಗೆದುಕೊಂಡಿದ್ದಾರೆ'

ಸಿಎಂ ಬದಲಾವಣೆ ವಿಚಾರವಾಗಿ ವರದಿಗಾರರ ಪ್ರಶ್ನೆಗೆ ಉತ್ತರಿಸಿ ಅದು ಬಿಜೆಪಿ ವೈಯಕ್ತಿಕ ವಿಚಾರವಾಗಿದೆ. ಈ ಕುರಿತು ಕಾಂಗ್ರೆಸ್‌ನ ಹಲವು ಮುಖಂಡರು ಪ್ರತಿಕ್ರಿಯಿಸಿರುವುದು ಅವರ ವೈಯಕ್ತಿಕ ಎಂದು ಪ್ರತಿಕ್ರಿಯಿಸಿದರು.
ಲೋಕೋಪಯೋಗಿ ಇಲಾಖೆಯ ಎಚ್‌ಕೆಆರ್‌ಡಿ ಯೋಜನೆಯಡಿ ಕಣವಿತಿಮ್ಮಲಾಪುರ ಗ್ರಾಮದಲ್ಲಿ 8.48 ವೆಚ್ಚದ, ಮೆಟ್ರಿಯಲ್ಲಿ 12 ಲಕ್ಷ ವೆಚ್ಚದ, ಉಪ್ಪಾರಹಳ್ಳಿ ಗ್ರಾಮದಲ್ಲಿ 21 ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ಸಿಸಿ ರಸ್ತೆ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸುವ ಮೂಲಕ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಮೆಟ್ರಿ ಗ್ರಾಪಂ ಅಧ್ಯಕ್ಷ ತಿಮ್ಮಪ್ಪ, ಉಪಾಧ್ಯಕ್ಷೆ ಜಯಲಕ್ಷ್ಮೀ, ಸದಸ್ಯರಾದ ಗಂಗಾಧರ, ಮಲ್ಲಿಕಾರ್ಜುನ, ಬಸವರಾಜ್‌, ದೇವಲಾಪುರ ಗ್ರಾಪಂ ಉಪಾಧ್ಯಕ್ಷೆ ಈರಮ್ಮ, ಸದಸ್ಯರಾದ ವಿರುಪಾಕ್ಷಿ, ಬಿ. ರವಿ, ಮುಖಂಡರಾದ ಉಮೇಶ್‌ಗೌಡ, ಸುರೇಶ್‌ಗೌಡ, ಗೌಡರ ಅಂಜಿನಪ್ಪ, ಬುಡುಗಣ್ಣ ಗೌಡ, ರಮೇಶ್‌, ಲಿಂಗನಗೌಡ, ಎಚ್‌.ಜಗದೀಶ್‌, ಶಂಕರಪ್ಪ, ಜನಾರ್ಧನಗೌಡ, ಹೊಸಕೋಟೆ ಜಗದೀಶ್‌ ಸೇರಿದಂತೆ ಹಲವರು ಉಪಸ್ಥಿತರಿದ್ದರು.