ಕೆರಳಿದ ಕಲ್ಯಾಣ: ಸರ್ಕಾರದ ಬಳಿಗೆ ನಿಯೋಗಕ್ಕೆ ನಿರ್ಧಾರ
ಸಾಲು ಸಾಲು ಕೇಂದ್ರ ಯೋಜನೆಗಳು ಕೈಬಿಟ್ಟು ಹೋಗುತ್ತಿರೋದಕ್ಕೆ ಅಸಮಾಧಾನ| ಬೆಂಗಳೂರು, ದಿಲ್ಲಿಗೆ ನಿಯೋಗ| ನಿಯೋಗ ಭೇಟಿಯ ನಂತರವೂ ಫಲ ನೀಡದಿದ್ದರೆ ಗುಲ್ಬರ್ಗಾ ಬಂದ್| ಕಲ್ಯಾಣ ಕರ್ನಾಟಕ ಬಂದ್ ಸೇರಿದಂತೆ ಹಂತ ಹಂತದ ಹೋರಾಟ ಪ್ರದರ್ಶಿಸಲು ತೀರ್ಮಾನ|
ಕಲಬುರಗಿ(ಫೆ.14): ಸಾಲು ಸಾಲು ಕೇಂದ್ರದ ಯೋಜನೆಗಳು ಕೈಬಿಟ್ಟು ಹೋಗುತ್ತಿರೋದು ಹಾಗೂ ಹಿಂದುಳಿದ ಭಾಗದ ಪ್ರಗತಿಗೆ ದೊರಕದ ಆದ್ಯತೆಯಿಂದಾಗಿ ಕೆರಳಿರುವ ಕಲ್ಯಾಣದ ಜನತೆ ಬೆಂಗಳೂರು ಹಾಗೂ ದಿಲ್ಲಿಗೆ ನಿಯೋಗ ಹೋಗಿ ನಾಯಕರಿಗೆ ಮನವರಿಕೆ ಮಾಡಿಕೊಡಲು ಮುಂದಾಗಿದ್ದಾರೆ.
ಹೈ-ಕ ಜನಪರ ಸಂಘರ್ಷ ಸಮಿತಿಯ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ. ಕಲ್ಯಾಣ ಕರ್ನಾಟಕದ ರಚನಾತ್ಮಕ ಪ್ರಗತಿಯ ಬಗ್ಗೆ ಅಭಿಯಾನ ಸಾಗಬೇಕು ಎಂದು ಸರ್ವ ಪಕ್ಷ ಸಭೆಯಲ್ಲಿ ತೀರ್ಮಾನಿಸಲಾಯ್ತು. ಕಲ್ಯಾಣ ಕರ್ನಾಟಕದ ರಚನಾತ್ಮಕ ಪ್ರಗತಿಯ ಬಗ್ಗೆ ಸರ್ಕಾರಗಳಿಗೆ ಪಕ್ಷಾತೀತವಾಗಿ ಒತ್ತಡ ತರಲು ಸರ್ವ ಪಕ್ಷಗಳ ನಿಯೋಗ ಮುಖ್ಯಮಂತ್ರಿ ಮತ್ತು ಕೇಂದ್ರ ಸರ್ಕಾರದ ಆಯಾ ಮಂತ್ರಿಗಳಿಗೆ ಭೇಟಿಯಾಗಲು ಸರ್ವಾನುಮತದಿಂದ ನಿರ್ಣಯಿಸಲಾಯಿತು. ಇದರ ನೇತೃತ್ವವನ್ನು ಜಿಲ್ಲಾ ಬಿಜೆಪಿ ವಹಿಸಿಕೊಂಡು ಎಲ್ಲಾ ಸಿದ್ಧತೆಗಳನ್ನು ಕಾಲಮಿತಿಯಲ್ಲಿ ಕೈಗೊಳ್ಳುವುದರ ಬಗ್ಗೆ ನಿರ್ಣಯಿಸಲಾಯಿತು.
ಲಕ್ಷಣ ದಸ್ತಿ, ಕಾಂಗ್ರೆಸ್ ಮುಖಂಡರಾದ ಸೋಮಶೇಖರ ಹಿರೇಮಠ, ಜೆಡಿಎಸ್ ಪಕ್ಷದ ಮುಖಂಡರಾದ ಶಾಮರಾವ ಸುರನ್, ಎಡಪಕ್ಷಗಳ ಮುಖಂಡರಾದ (ಸಿಪಿಐ) ಭೀಮಾಶಂಕರ ಮಾಡ್ಯಾಳ, ಎಐಎಂಐ ಪಕ್ಷದ ಮುಖಂಡರಾದ ರಹೀಂ ಮಿರ್ಚಿ ಸೇರಿದಂತೆ ಅನೇಕರು ಮಾತನಾಡಿ, ಪಕ್ಷದ ಮುಖಂಡರು ಕಲಬುರಗಿ ಮತ್ತು ಕಲ್ಯಾಣ ಕರ್ನಾಟಕದ ಅಭಿವೃದ್ಧಿಯ ಬಗ್ಗೆ ಆಗಾಗ್ಗೆ ಈ ತರಹದ ಸರ್ವ ಪಕ್ಷಗಳ ಸಭೆ ಸಮಿತಿ ನಿಯೋಜನೆ ಮಾಡಬೇಕೆಂದು ಅಭಿಪ್ರಾಯಪಟ್ಟರು.
ನಿಯೋಗ ಭೇಟಿಯ ನಂತರವೂ ಫಲ ನೀಡದಿದ್ದರೆ ಗುಲ್ಬರ್ಗಾ ಬಂದ್, ಕಲ್ಯಾಣ ಕರ್ನಾಟಕ ಬಂದ್ ಸೇರಿದಂತೆ ಹಂತ ಹಂತದ ಹೋರಾಟ ಪ್ರದರ್ಶಿಸೋಣ ಎಂದು ತೀರ್ಮಾನಿಸಿದರು.
ಕಲಬುರಗಿ ಮಂದಿ ಕೈತಪ್ಪಿದ ಏಮ್ಸ್: ಕಲ್ಯಾಣ ಕರ್ನಾಟಕಕ್ಕೆ ಮತ್ತೆ ದೋಖಾ..!
ಸಭೆಯಲ್ಲಿ ಮುಖಂಡರಾದ ಮನೀಷ ಜಾಜು, ಲಿಂಗರಾಜ ಸಿರಗಾಪೂರ, ಭದ್ರಶೆಟ್ಟಿ, ಅಸ್ಲಂ ಚೌಂಗೆ, ಎಚ್.ಎಂ.ಹಾಜಿ, ಜ್ಞಾನಮಿತ್ರ ಸ್ಯಾಮ್ಯುವೆಲ್, ಶಾಂತಪ್ಪ ಕಾರಭಾಸಗಿ, ಮಲ್ಲಿನಾಥ ಸಂಗಶೆಟ್ಟಿ, ಬಸವರಾಜ ರಾವೂರ, ಲಿಂಗಣ್ಣ ಉದನೂರ, ಬಾಬುರಾವ ಗಂವಾರ ಭಾಗವಹಿಸಿದ್ದರು.
ಬೇಡಿಕೆಗಳು
1.ಕಲ್ಯಾಣ ಕರ್ನಾಟಕ ವಿಭಾಗೀಯ ಕೇಂದ್ರ, ಕಲಬುರಗಿಗೆ ಏಮ್ಸ್ ಬರಲೇಬೇಕು
2.ಕಲ್ಯಾಣ ಕರ್ನಾಟಕ ವಿಬಾಗೀಯ ಕೇಂದ್ರ, ಕಲಬುರಗಿಯಲ್ಲಿ ರೈಲ್ವೆ ವಿಭಾಗೀಯ ಕಚೇರಿ ಸ್ಥಾಪನೆಗೆ ಆಗ್ರಹ
3.ಕಲಬುರಗಿ ಸಿಯುಕೆಯಿಂದ ಬೆಂಗಳೂರಿಗೆ ಸ್ಥಳಾಂತರವಾಗಿರುವ ಸಂಶೋಧನಾ ಕೇಂದ್ರ ಪುನಃ ಕಲಬುರಗಿಗೆ ಬರಲೇಬೇಕು
4.ಈಗಾಗಲೇ ತಾತ್ವಿಕ ಒಪ್ಪಿಗೆ ಮತ್ತು ಅನುಮೋದನೆ ಪಡೆದಿರುವ ಕಲಬುರಗಿಯ 2ನೇ ರಿಂಗ್ ರಸ್ತೆಗೆ ಬಜೆಟ್ ಮಂಜೂರಾತಿ ಸಿಗಬೇಕು
5.ಸಂವಿಧಾನದ 371ನೇ ಕಲಂ ಪರಿಣಾಮಕಾರಿ ಅನುಷ್ಠಾನಕ್ಕೆ ಪ್ರತ್ಯೇಕ ಸಚಿವಾಲಯ ಸ್ಥಾಪನೆಯಾಗಬೇಕು
6. ಕಲಬುರಗಿ-ಬೀದರ್‌ನಲ್ಲಿ ನಿಮ್ಜ್ ಸ್ಥಾಪನೆಗೆ ಕೇಂದ್ರದ ಅನುಮೊದನೆಯಂತೆ ರಾಜ್ಯ ಸರ್ಕಾರದಿಂದ ಪ್ರಸ್ತಾವನೆ ಸಲ್ಲಿಸಬೇಕು
7. ಕಲ್ಯಾಣ ಕರ್ನಾಟಕ ಪ್ರದೇಶದ ಕಾಲಮಿತಿಯ ಅಭಿವೃದ್ಧಿಗೆ ಸಮರ್ಪಕ ಅನುದಾನಕ್ಕಾಗಿ ಒತ್ತಡ
8. ಕಲ್ಯಾಣ ನಾಡಿನ ಸರ್ಕಾರಿ ಕಚೇರಿಗಳು, ಕೇಂದ್ರಗಳು ಬೇರೆಡೆ ಸ್ಥಳಾಂತರವಾಗದಂತೆ ನೋಡಿಕೊಳ್ಳಬೇಕು