ಸಾಗರ [ಅ.02]:  ತಾಲೂಕಿನ ಬರೂರು ಗ್ರಾಪಂ ವ್ಯಾಪ್ತಿಯಲ್ಲಿ ಕೈಗೊಳ್ಳಲು ಉದ್ದೇಶಿಸಲಾಗಿದ್ದ ಕಲ್ಲೊಡ್ಡು ಹಳ್ಳ ಹೊಸಕೆರೆ ಯೋಜನೆ ಶಿಕಾರಿಪುರ ತಾಲೂಕಿಗೆ ಸ್ಥಳಾಂತರಿಸಲಾಗಿದೆ. ಈ ಸಂಬಂಧ ಪರ್ಯಾಯ ಯೋಜನಾ ವರದಿ ತಯಾರಿಸುವಂತೆ ಮುಖ್ಯಮಂತ್ರಿಗಳು ಉನ್ನತ ಅಧಿಕಾರಿಗಳಿಗೆ ತಿಳಿಸಿದ್ದಾರೆ ಎಂದು ಶಾಸಕ ಎಚ್‌.ಹಾಲಪ್ಪ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಲ್ಲೊಡ್ಡುಹಳ್ಳ ಯೋಜನೆಯಿಂದ ಬರೂರು ಗ್ರಾಪಂ ವ್ಯಾಪ್ತಿಯ ಹತ್ತಕ್ಕೂ ಹೆಚ್ಚು ಹಳ್ಳಿಗಳು ಮುಳುಗುತ್ತದೆ. ಜಮೀನು ನೀರು ಪಾಲಾಗುತ್ತದೆ, ಅರಣ್ಯನಾಶವಾಗುತ್ತದೆ ಎನ್ನುವ ಆತಂಕ ದೂರವಾಗಿದೆ. ಯೋಜನೆಯನ್ನು ತಾಲೂಕಿನ ಗಡಿ ದಾಟಿಸಲಾಗಿದ್ದು, ರೈತರು ಆತಂಕಪಡುವ ಅಗತ್ಯವಿಲ್ಲ ಎಂದು ಹೇಳಿದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಶಿಕಾರಿಪುರದಲ್ಲಿ ಮಂಗಳವಾರ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಕಲ್ಲೊಡ್ಡುಹಳ್ಳ ಯೋಜನೆ ಕುರಿತು ಮನವರಿಕೆ ಮಾಡಿಕೊಡಲಾಗಿದೆ. ಸಹಜವಾಗಿ ರೈತರ ಸ್ಥಿತಿಗತಿ ಅರಿತಿರುವ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಉನ್ನತ ಮಟ್ಟದ ಅಧಿಕಾರಿಗಳ ಸಭೆ ನಡೆಸಿ ಶಿಕಾರಿಪುರ ತಾಲೂಕಿನಲ್ಲಿ ಆಣೆಕಟ್ಟು ನಿರ್ಮಾಣ ಮಾಡಲು ಪರ್ಯಾಯ ಯೋಜನಾ ವರದಿ ತಯಾರಿಸಲು ಸೂಚನೆ ನೀಡಿದ್ದಾರೆ. ಇದರಿಂದ ನಮ್ಮ ತಾಲೂಕಿನಲ್ಲಿ ಮತ್ತೊಮ್ಮೆ ಮುಳುಗಡೆಯಾಗುವುದು ತಪ್ಪಿದೆ. ನಮ್ಮ ಭಾಗದ ನೀರನ್ನು ಶಿಕಾರಿಪುರ ತಾಲೂಕಿನ ಜನರು ಉಪಯೋಗಿಸಿಕೊಳ್ಳಬಹುದು. ಆದರೆ ನಮ್ಮಲ್ಲಿ ನೀರು ಸಂಗ್ರಹಕ್ಕಾಗಿ ಆಣೆಕಟ್ಟು ನಿರ್ಮಾಣ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಮುಂದಿನ ಒಂದು ತಿಂಗಳಿನಲ್ಲಿ ಪರ್ಯಾಯ ಯೋಜನಾ ವರದಿ ತಯಾರಿಸಲಾಗುತ್ತಿದ್ದು, ಶಿಕಾರಿಪುರ ತಾಲೂಕಿನಲ್ಲಿಯೂ ಹೆಚ್ಚಿನ ಮುಳುಗಡೆಯಾಗದಂತೆ ಯೋಜನೆ ತಯಾರಿಸಲು ಮುಖ್ಯಮಂತ್ರಿಗಳು ಸೂಚನೆ ನೀಡಿದ್ದಾರೆ. ಮುಳುಗಡೆಯ ಸಮಸ್ಯೆ ಅರಿವಿದ್ದ ನನಗೆ ಇದರಿಂದ ಆಗುವ ಅನಾಹುತ ಗೊತ್ತಿದ್ದರಿಂದ ಸ್ಥಳಕ್ಕೆ ಭೇಟಿ ನೀಡಿರಲಿಲ್ಲ. ಆದರೆ ಶಿಕಾರಿಪುರದಲ್ಲಿಯೆ ಆಣೆಕಟ್ಟು ನಿರ್ಮಾಣ ಮಾಡುವಂತೆ ಮುಖ್ಯಮಂತ್ರಿಗಳ ಮನವೊಲಿಸುತ್ತೇನೆ ಎನ್ನುವ ವಿಶ್ವಾಸ ನನಗೆ ಇತ್ತು. ಈ ಹಿನ್ನೆಲೆಯಲ್ಲಿ ಸ್ಥಳಕ್ಕೆ ಭೇಟಿ ನೀಡಿರಲಿಲ್ಲ. ರೈತರ ಸಮಸ್ಯೆಗೆ ಸ್ಪಂದಿಸಿದ ಮುಖ್ಯಮಂತ್ರಿಗಳಿಗೆ ವೈಯಕ್ತಿಕವಾಗಿ ಹಾಗೂ ಬರೂರು ಗ್ರಾಮ ಪಂಚಾಯ್ತಿ ಗ್ರಾಮಸ್ಥರ ಪರವಾಗಿ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಹೇಳಿದರು.

ಗಣಪತಿ ಕೆರೆ ಅಭಿವೃದ್ಧಿಗೆ ಮುಖ್ಯಮಂತ್ರಿಗಳು 2 ಕೋಟಿ ರು. ಮಂಜೂರು ಮಾಡಿದ್ದಾರೆ. ಈಗಾಗಲೆ ನಗರಸಭೆಯಿಂದ 2 ಕೋಟಿ ರು. ಕೆರೆ ಅಭಿವೃದ್ಧಿಗೆ ತೆಗೆದಿರಿಸಲಾಗಿತ್ತು. ಸುಮಾರು 4 ಕೋಟಿ ರು. ವೆಚ್ಚದಲ್ಲಿ ಕೆರೆ ಸುತ್ತಲ ಪ್ರದೇಶವನ್ನು ಮಾರಿಜಾತ್ರೆಯೊಳಗೆ ಅಭಿವೃದ್ಧಿಪಡಿಸಲಾಗುತ್ತದೆ. ಜೊತೆಗೆ ಗಣಪತಿಕೆರೆ ಕೆಳಭಾಗದ ಕೊಪ್ಪಲಗದ್ದೆಯ 74 ಎಕರೆ ಪ್ರದೇಶವನ್ನು ನಗರಸಭೆ ವತಿಯಿಂದ ಭೂಸ್ವಾಧೀನ ಮಾಡಿಕೊಳ್ಳಲು ಜಿಲ್ಲಾಧಿಕಾರಿಗಳು ಅಧಿಸೂಚನೆ ಹೊರಡಿಸಿದ್ದಾರೆ. ಇದಕ್ಕಾಗಿ 5 ಕೋಟಿ ರು. ಬಿಡುಗಡೆ ಮಾಡಲಾಗಿದೆ. ಸೊರಬ ರಸ್ತೆ ಅಗಲೀಕರಣಕ್ಕೆ ಪರಿಹಾರಧನವೇ 100 ಕೋಟಿ ರು. ಬೇಕಾಗುತ್ತದೆ. ಸ್ಥಳೀಯ ನಿವಾಸಿಗಳು ರಸ್ತೆ ಅಗಲೀಕರಣಕ್ಕೆ ಬೆಂಬಲ ನೀಡಿದರೆ ಕಾಮಗಾರಿಯನ್ನು ಮಾರಿಜಾತ್ರೆ ನಂತರ ಕೈಗೆತ್ತಿಕೊಳ್ಳಲಾಗುತ್ತದೆ ಎಂದು ತಿಳಿಸಿದರು.

ಅಂಬಾರಗೋಡ್ಲು-ಕಳಸವಳ್ಳಿ ಸೇತುವೆ ನಿರ್ಮಾಣ ಕಾರ್ಯ ಶೀಘ್ರದಲ್ಲಿಯೇ ಪ್ರಾರಂಭಗೊಳ್ಳಲಿದೆ. ಈಗಾಗಲೆ ಕಳಸವಳ್ಳಿ ಮತ್ತು ಅಂಬಾರಗೋಡ್ಲು ದಡದಲ್ಲಿ ನಿರ್ಮಾಣ ಸಾಮಗ್ರಿಗಳನ್ನು ಸಂಗ್ರಹಿಸಲು ಸ್ಥಳ ಗುರುತಿಸಲಾಗುತ್ತಿದೆ. ಸೇತುವೆ ನಿರ್ಮಾಣ ಗುತ್ತಿಗೆ ಹಿಡಿದ ಕಂಪನಿ ನಿರ್ಮಾಣಕ್ಕೆ ಸಂಬಂಧಪಟ್ಟಂತೆ ಪೂರ್ವಸಿದ್ಧತೆ ಮಾಡಿಕೊಳ್ಳುತ್ತಿದೆ. ಹಸಿರುಮಕ್ಕಿ ಸೇತುವೆ ನಿರ್ಮಾಣ ಗುತ್ತಿಗೆ ಹಿಡಿದ ಕಂಪನಿ ಖಾಸಗಿ ಜಾಗದಲ್ಲಿ ಸಾಮಗ್ರಿಗಳನ್ನು ಸಂಗ್ರಹಿಸುವ ಬದಲು ಹತ್ತಾರು ಎಕರೆ ಅರಣ್ಯನಾಶ ಮಾಡಿದೆ ಎಂದು ದೂರಿದರು.

ಪ್ರಮುಖರಾದ ಕೆ.ಆರ್‌.ಗಣೇಶಪ್ರಸಾದ್‌, ವಿ.ಮಹೇಶ್‌, ಸವಿತಾ ನಟರಾಜ್‌, ಶಿವಪ್ಪ, ಮಂಜುನಾಥ್‌, ಬಿ.ಟಿ.ರವೀಂದ್ರ, ಕೆ.ಟಿ.ಗಣಪತಿ, ಗೋಲಿ ಅರುಣ, ಅರುಣ ಕುಗ್ವೆ ಉಪಸ್ಥಿತರಿದ್ದರು.