Asianet Suvarna News Asianet Suvarna News

ಮಂಗಳೂರಿಗೆ ಮೆರುಗು ತುಂಬಿದ್ದ ಕಲಶ ಮರುಸ್ಥಾಪನೆ

ಮಂಗಳೂರು ನಗರದ ಮುಕುಟಮಣಿ ಎನಿಸಿದ ಬೃಹತ್‌ ಕಲಶವನ್ನು ಮರು ಸ್ಥಾಪಿಸಲು ಸಿದ್ಧತೆ ನಡೆದಿದೆ. ನಗರದ ಪಂಪ್‌ವೆಲ್‌ನ ಮಹಾವೀರ ವೃತ್ತದಲ್ಲಿ ವಿರಾಜಮಾನವಾಗಿದ್ದ ಈ ಕಲಶವನ್ನು ಮೇಲ್ಸೇತುವೆ ಕಾಮಗಾರಿಗಾಗಿ ನಾಲ್ಕು ವರ್ಷ ಹಿಂದೆ ತೆರವುಗೊಳಿಸಲಾಗಿತ್ತು.

 

Kalasha at Pumpwell Mahaveer circle to be reinstalled
Author
Bangalore, First Published Feb 25, 2020, 9:24 AM IST

ಮಂಗಳೂರು(ಫೆ.25): ಮಂಗಳೂರು ನಗರದ ಮುಕುಟಮಣಿ ಎನಿಸಿದ ಬೃಹತ್‌ ಕಲಶವನ್ನು ಮರು ಸ್ಥಾಪಿಸಲು ಸಿದ್ಧತೆ ನಡೆದಿದೆ. ನಗರದ ಪಂಪ್‌ವೆಲ್‌ನ ಮಹಾವೀರ ವೃತ್ತದಲ್ಲಿ ವಿರಾಜಮಾನವಾಗಿದ್ದ ಈ ಕಲಶವನ್ನು ಮೇಲ್ಸೇತುವೆ ಕಾಮಗಾರಿಗಾಗಿ ನಾಲ್ಕು ವರ್ಷ ಹಿಂದೆ ತೆರವುಗೊಳಿಸಲಾಗಿತ್ತು.

ನಾಲ್ಕು ರಸ್ತೆ ಸಂಧಿಸುವ ಸ್ಥಳ ಪಂಪ್‌ವೆಲ್‌ನಲ್ಲಿ ಕಲಶ ಸ್ಥಾಪಿಸುವ ಮೂಲಕ ಈ ವೃತ್ತಕ್ಕೆ ಮಹಾವೀರ ಸರ್ಕಲ್‌ ಎಂದು ನಾಮಕರಣ ಮಾಡಲಾಗಿತ್ತು. ಇದು ಸರ್ಕಾರದ ಗಜೆಟ್‌ನಲ್ಲೂ ಪ್ರಕಟವಾಗಿತ್ತು. ಈ ವೃತ್ತದಲ್ಲಿ ಮಂಗಳೂರು ನಗರ, ರಾಷ್ಟ್ರೀಯ ಹೆದ್ದಾರಿ 66ರಲ್ಲಿ ನಂತೂರು-ಉಳ್ಳಾಲ ಸಂಪರ್ಕ ಹಾಗೂ ಪಡೀಲು ಸಂಪರ್ಕದ ರಸ್ತೆಗಳು ಸೇರುತ್ತವೆ. ಆದರೆ ಮೇಲ್ಸೇತುವೆ ಕಾಮಗಾರಿ ವೇಳೆ ವೃತ್ತದ ಜೊತೆಗೆ ಕಲಶವನ್ನೂ ತೆರವುಗೊಳಿಸಿ ಸಮೀಪಕ್ಕೆ ಸ್ಥಳಾಂತರಿಸಲಾಗಿತ್ತು.

ಕಲಶ ಮರುಸ್ಥಾಪನೆ ಎಲ್ಲಿ?:

2016 ಮಾಚ್‌ರ್‍ 21ರಂದು ಕ್ರೇನ್‌ ಮೂಲಕ ಬೃಹತ್‌ ಕಲಶವನ್ನು ತೆರವುಗೊಳಿಸಲಾಗಿತ್ತು. ಈಗ ಮೇಲ್ಸೇತುವೆ ಕಾಮಗಾರಿ ಮುಕ್ತಾಯಗೊಂಡಿದೆ. ಆದರೆ ಕಲಶ ಮರುಸ್ಥಾಪನೆ ಕಾರ್ಯ ಮಾತ್ರ ಬಾಕಿ ಉಳಿದಿದೆ. ಸದ್ಯಕ್ಕೆ ಈ ಕಲಶ ಸಮೀಪದ ಪೊಲೀಸ್‌ ಚೌಕಿಯ ಎದುರು ಇದೆ. ಈ ಕಲಶವನ್ನು ಎಲ್ಲಿ ಮರುಸ್ಥಾಪಿಸುವುದು ಎಂಬ ವಿಚಾರ ನಿರ್ಧಾರವಾಗದೆ ಬಾಕಿಯಾಗಿದೆ.

ಹಳೆ ಶಾಲೆಗಳ ರೂಪ ಬದಲಿಸಿ ಹೊಸ ಖದರ್ ಕೊಟ್ಟ ಗುರು ಟೀಂ

ಮೇಲ್ಸೇತುವೆ ಕಾಮಗಾರಿ ಉಸ್ತುವಾರಿ ವಹಿಸಿಕೊಂಡ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ(ಎನ್‌ಎಚ್‌ಐಎ) ಮೇಲ್ಸೇತುವೆ ಕೆಳಭಾಗದಲ್ಲಿ ಹೊಸದಾಗಿ ವೃತ್ತವನ್ನು ರಚಿಸಿದೆ. ಈ ವೃತ್ತದಲ್ಲಿ ಕಲಶ ಮರುಸ್ಥಾಪನೆ ಸಾಧ್ಯತೆ ಎಂಬ ಬಗ್ಗೆ ಮಂಗಳೂರಿನ ಜೈನ್‌ ಸೊಸೈಟಿ ಹಾಗೂ ಜನಪ್ರತಿನಿಧಿಗಳು ಚಿಂತನೆ ನಡೆಸುತ್ತಿದ್ದಾರೆ. ವಾಸ್ತವದಲ್ಲಿ ಈ ವೃತ್ತವನ್ನು ವಾಹನ ತಿರುವಿಗಾಗಿ ಯೋಜನೆ ಪ್ರಕಾರ ರಚಿಸಲಾಗಿದೆ. ಇದು ಸಣ್ಣ ಪ್ರಮಾಣದ ವೃತ್ತವಾಗಿರುವುದರಿಂದ ಬೃಹತ್‌ ಕಲಶವನ್ನು ಸ್ಥಾಪಿಸಲು ಸಾಧ್ಯವೇ ಎಂದು ಜನಪ್ರತಿನಿಧಿಗಳು ಮತ್ತು ಜೈನ್‌ ಸೊಸೈಟಿ ಸದಸ್ಯರು ಪರಿಶೀಲಿಸಲಿದ್ದಾರೆ.

ಹಾಲಿ ಜಾಗದಲ್ಲಿ ಸ್ಥಾಪನೆ ಸಂಭವ:

ಮೇಲ್ಸೇತುವೆ ಕೆಳಗೆ ಈಗ ರಚಿಸಿದ ವೃತ್ತ ಸಣ್ಣದಾಗಿದೆ. ಅಲ್ಲಿ ಬೃಹತ್‌ ಕಲಶ ಸ್ಥಾಪನೆ ಸುಲಭವಲ್ಲ. ಆದ್ದರಿಂದ ಈಗ ಕಲಶವನ್ನು ಇರಿಸಿದ ಪೊಲೀಸ್‌ ಚೌಕಿ ಜಾಗದಲ್ಲೇ ವ್ಯವಸ್ಥಿತ ರೀತಿಯಲ್ಲಿ ಕಲಶ ಸ್ಥಾಪಿಸಿದರೆ ಉತ್ತಮ ಎಂಬ ಸಲಹೆಯನ್ನು ಜೈನ್‌ ಸೊಸೈಟಿ ಪದಾಧಿಕಾರಿಗಳು ಹೇಳುತ್ತಾರೆ.

ಹಿಂದೆ ಪಂಪ್‌ವೆಲ್‌ ವೃತ್ತ ಮಧ್ಯಭಾಗದ 40 ಸೆಂಟ್ಸ್‌ ಜಾಗದಲ್ಲಿ ಈ ಕಲಶ ಇರಿಸಲಾಗಿತ್ತು. ಈಗ ಅಲ್ಲಿ ಮೇಲ್ಸೇತುವೆ ತಲೆಎತ್ತಿರುವುದರಿಂದ ಕಲಶಕ್ಕೆ ಪರ್ಯಾಯ ಸ್ಥಳ ಹುಡುಕಬೇಕಾಗಿದೆ. ಈ ಹಿನ್ನೆಲೆಯಲ್ಲಿ ಹಾಲಿ ಕಲಶ ಇರಿಸಿರುವ ಸ್ಥಳದ ಬಳಿ ಖಾಲಿ ಸ್ಥಳ ಇರುವುದರಿಂದ ಅಲ್ಲಿಯೇ ಕಲಶ ಮರು ಸ್ಥಾಪನೆ ಯೋಗ್ಯ ಎಂಬ ಚರ್ಚೆ ನಡೆಯುತ್ತಿದೆ. ಯಾವುದಕ್ಕೂ ಸ್ಥಳವನ್ನು ಅಂತಿಮಗೊಳಿಸಿಲ್ಲ.

 

26 ಅಡಿ ಎತ್ತರ, 22 ಟನ್‌ ತೂಕ!

ಜಗತ್ತಿಗೆ ಶಾಂತಿ ಸಂದೇಶ ಸಾರಿದ ಭಗವಾನ್‌ ಮಹಾವೀರನ ಶತಮಾನೋತ್ಸವ ಆಚರಣೆ ಸಂದರ್ಭ ಪಂಪ್‌ವೆಲ್‌ ವೃತ್ತದಲ್ಲಿ ಶುಭ ಸಂಕೇತವಾಗಿ ಬೃಹತ್‌ ಗಾತ್ರದ ಕಲಶವನ್ನು ರಚಿಸಿ ಸ್ಥಾಪಿಸಲಾಗಿತ್ತು. 2003ರಲ್ಲಿ ಇದರ ಸ್ಥಾಪನೆಯಾಗಿದ್ದು, ಮೇಲ್ಸೇತುವೆ ಕಾಮಗಾರಿ ಕಾರಣಕ್ಕೆ 2016ರಲ್ಲಿ ಕಲಶವನ್ನು ತೆರವುಗೊಳಿಸಲಾಗಿತ್ತು.

ಈ ಕಲಶ 26 ಅಡಿ ಎತ್ತರವಿದ್ದು, 22 ಟನ್‌ ತೂಕವಿದೆ. ಪಂಪ್‌ವೆಲ್‌ ವೃತ್ತಕ್ಕೆ ಮುಕಟಪ್ರಾಯದಂತೆ ಈ ಕಲಶ ಕಂಗೊಳಿಸುತ್ತಿತ್ತು. ಈ ಕಲಶ ರಚನೆಗೆ ಸುಮಾರು 13 ಲಕ್ಷ ರು. ವೆಚ್ಚವಾಗಿತ್ತು.

ವಿಶ್ವ ಸುಂದರಿ ಸ್ಪರ್ಧೆಗೆ ಮಂಗಳೂರು ಬೆಡಗಿ!

ಮೇಲ್ಸೇತುವೆ ನಿರ್ಮಾಣಕ್ಕಾಗಿ ಕಲಶವನ್ನು ತೆರವುಗೊಳಿಸಲಾಗಿತ್ತು. ಇದನ್ನು ಸೂಕ್ತ ಜಾಗದಲ್ಲಿ ಮರುಸ್ಥಾಪಿಸಲು ಪರಿಶೀಲನೆ ನಡೆಸಲಾಗುವುದು. ಅಲ್ಲದೆ ಮಹಾವೀರ ವೃತ್ತ ಎಂದು ಫಲಕ ಅಳವಡಿಸಬೇಕಾಗಿದೆ ಎಂದು ಮಂಗಳೂರು ಜೈನ್‌ ಸೊಸೈಟಿ ಕಾರ್ಯದರ್ಶಿ ಪುಷ್ಪರಾಜ್‌ ಜೈನ್‌ ಹೇಳಿದ್ದಾರೆ.

ಮಹಾನಗರ ಪಾಲಿಕೆ ಆಡಳಿತ ಅಸ್ತಿತ್ವಕ್ಕೆ ಬಂದ ಬಳಿಕ ಸಾಮಾನ್ಯ ಸಭೆಯಲ್ಲಿ ಕಲಶ ಮರುಸ್ಥಾಪನೆ ಕುರಿತು ಒಮ್ಮತದ ತೀರ್ಮಾನ ಕೈಗೊಳ್ಳಲಾಗುವುದು. ಅದಕ್ಕೂ ಮೊದಲು ಕಲಶ ಮರು ಸ್ಥಾಪನೆಯ ಜಾಗವನ್ನು ಗುರುತಿಸಲಾಗುವುದು ಎಂದು ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್‌ ಹೇಳಿದ್ದಾರೆ.

-ಆತ್ಮಭೂಷಣ್‌ ಮಂಗಳೂರು

Follow Us:
Download App:
  • android
  • ios