Asianet Suvarna News Asianet Suvarna News

ಬದಲಾದ ಕಳಸಾ-ಬಂಡೂರಿ ಯೋಜನೆ; ಹೊಸ ಡಿಪಿಆರ್ ಪರ-ವಿರೋಧ

  • ಕಳಸಾ-ಬಂಡೂರಿ ಯೋಜನೆ ಬದಲು; ಚರ್ಚೆಗೆ ಗ್ರಾಸ
  • ಹೊಸ ಡಿಪಿಆರ್‌ಗೆ ಪರ-ವಿರೋಧ ಅಭಿಪ್ರಾಯ
  • ಹಳೆಯ ಯೋಜನೆ ಅವೈಜ್ಞಾನಿಕವಾಗಿತ್ತು ಎಂದಿರುವ ರೈತಸೇನೆ
KalasaBanduri Scheme New DPR is up for discussion hubballi
Author
First Published Oct 8, 2022, 3:27 PM IST

ಶಿವಾನಂದ ಗೊಂಬಿ, ಕನ್ನಡಪ್ರಭ

ಹುಬ್ಬಳ್ಳಿ (ಅ.8) :
 ಬಹುದಶಕಗಳ ಬೇಡಿಕೆಯಾಗಿದ್ದ ಕಳಸಾ-ಬಂಡೂರಿ ಯೋಜನೆಗೆ ಕೇಂದ್ರ ಸರ್ಕಾರದ ಜಲಶಕ್ತಿ ಸಚಿವಾಲಯ ಇತ್ತೀಚಿಗೆ ಅನುಮೋದನೆ ನೀಡಿದೆ. ಆದರೆ ಯೋಜನೆಯ ಮೂಲಸ್ವರೂಪದಲ್ಲಿ ಬದಲಾವಣೆ ಮಾಡಿದೆ. ಇದರಿಂದಾಗಿ ಅನುಮೋದನೆ ದೊರೆಯಲು ಸಲೀಸಾಯಿತು. ಆದರೆ ಈ ವಿಷಯವಾಗಿ ಇದೀಗ ಪರ-ವಿರೋಧ ಚರ್ಚೆಗಳು ಆರಂಭಗೊಂಡಿವೆ.

ಮಹದಾಯಿ ಯೋಜನೆಗೆ ಕೇಂದ್ರ ಸರ್ಕಾರ ಅಸ್ತು: ದಸರಾ ಬಳಿಕ ಕಾಮಗಾರಿಗೆ ಚಾಲನೆ ಸಾಧ್ಯತೆ

ಯೋಜನೆಗೆ ಬೇಕಾದ ಅರಣ್ಯ ಪ್ರದೇಶವನ್ನು ಕಡಿತಗೊಳಿಸಿ ಹೊಸ ಡಿಪಿಆರ್‌ ಸಿದ್ಧಪಡಿಸಿ ಕೇಂದ್ರದಿಂದ ಅನುಮೋದನೆ ಪಡೆದಿದೆ. ಯೋಜನೆಯನ್ನು ಬದಲು ಮಾಡಿ ಹೊಸ ಡಿಪಿಆರ್‌ ಸಿದ್ಧಪಡಿಸಿರುವುದಕ್ಕೆ ಮಹದಾಯಿ ರೈತಪರ ಹೋರಾಟಗಾರರ ಸಮಿತಿ ಆಕ್ಷೇಪ ವ್ಯಕ್ತಪಡಿಸಿದೆ. ಆದರೆ ರೈತಸೇನೆ ಕರ್ನಾಟಕದ ಹಿಂದಿನದು ಅವೈಜ್ಞಾನಿಕ ಯೋಜನೆಯಾಗಿತ್ತು. ಯೋಜನೆ ಬದಲಿಸಿರುವುದು ಸೂಕ್ತ ಎಂದು ತಿಳಿಸುತ್ತಿದೆ.

ಹಳೆ -ಹೊಸ ಯೋಜನೆ:

2021-22ರಲ್ಲಿ ಕೇಂದ್ರ ಜಲ ಆಯೋಗಕ್ಕೆ ಸಲ್ಲಿಸಿದ ವರದಿಯಲ್ಲಿ 499 ಹೆಕ್ಟೇರ್‌ ಪ್ರದೇಶ ಅಗತ್ಯವಿದೆ ಎಂದು ತಿಳಿಸಲಾಗಿತ್ತು. ಆದರೆ ಇದು ಅವೈಜ್ಞಾನಿಕವಾಗಿತ್ತು. ಕಸ್ತೂರಿ ರಂಗನ್‌ ವರದಿ ಪ್ರಕಾರ ಪಶ್ಚಿಮ ಘಟ್ಟದಲ್ಲಿ ಶೇ. 30ರಷ್ಟುಅರಣ್ಯ ಪ್ರದೇಶ ಮಾತ್ರ ಮಾನವನ ಅನುಕೂಲಕ್ಕಾಗಿ ಬಳಸಿಕೊಳ್ಳಬಹುದಾಗಿದೆ. ಆದರೆ ಡಿಪಿಆರ್‌ನಲ್ಲಿ ಅದಕ್ಕಿಂತ ಹೆಚ್ಚಿನ ಜಾಗ ಕೇಳಿದ್ದರಿಂದ ಯೋಜನೆಗೆ ಹಸಿರು ನಿಶಾನೆ ಕೊಡಲು ಕೇಂದ್ರ ಹಿಂದೇಟು ಹಾಕಿತ್ತು. ಬಳಿಕ ಈಗ ನ್ಯಾಯಾಧಿಕರಣ ಕರ್ನಾಟಕಕ್ಕೆ ಕುಡಿಯುವ ನೀರಿಗಾಗಿ ಕೊಟ್ಟಿರುವುದು ಬರೀ 3.90 ಟಿಎಂಸಿ ಮಾತ್ರ. ಅದಕ್ಕೆ 28 ಅಡಿ ಎತ್ತರ ಡ್ಯಾಂ ಕಟ್ಟುವ ಅಗತ್ಯವಿಲ್ಲ. ಬದಲಿಗೆ 10-15 ಅಡಿ ಎತ್ತರ ಡ್ಯಾಂ ಕಟ್ಟಿದರೆ 499 ಹೆಕ್ಟೇರ್‌ ಬದಲು 59 ಹೆಕ್ಟೇರ್‌ ಅರಣ್ಯ ಮಾತ್ರ ಬಳಸಿಕೊಳ್ಳಬಹುದಾಗಿದೆ. ನಮಗೆ ಕೊಟ್ಟಿರುವ ನೀರನ್ನು ಬಳಸಿಕೊಳ್ಳಬಹುದಾಗಿದೆ ಎಂದು ಹೋರಾಟಗಾರರೇ ಸಲಹೆ ಮಾಡಿದ್ದರು.

ಅದರಂತೆ ರಾಜ್ಯ ಸರ್ಕಾರ ಹೊಸ ಡಿಪಿಆರ್‌ ಸಿದ್ಧಪಡಿಸಿ ಕಳುಹಿಸಿತ್ತು. ಹೊಸ ಯೋಜನೆಯಲ್ಲಿ 28 ಅಡಿ ಎತ್ತರ ಡ್ಯಾಂನ್ನು 11 ಅಡಿಗೆ ಸೀಮಿತಗೊಳಿಸಲಾಗಿತ್ತು. ತಿರುವು ನಾಲೆ ಮೂಲಕ ನೀರು ಹರಿಸಲು ಅರಣ್ಯ ಭೂಮಿ ಸ್ವಾಧೀನಪಡಿಸಿಕೊಳ್ಳುವುದನ್ನು ಕೈಬಿಡಲಾಗಿತ್ತು. ಅಗತ್ಯವಿರುವ ಕಡೆಗಳಲ್ಲಿ ಮಾತ್ರವೇ ಕಾಲುವೆ ನಿರ್ಮಿಸಿ, ಉಳಿದ ಕಡೆ ಬೃಹತ್‌ ಪೈಪ್‌ಗಳ ಮೂಲಕ ನೀರು ಕೊಂಡೊಯ್ಯುವ ಪ್ರಸ್ತಾಪವನ್ನು ಪರಿಷ್ಕೃತ ಡಿಪಿಆರ್‌ನಲ್ಲಿ ಸೇರಿಸಲಾಗಿದೆ. ಅದಕ್ಕೆ ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದೆ.

ಇದರಿಂದಾಗಿ ಯೋಜನೆಯ ಗಾತ್ರವೂ ಕಡಿತವಾಗಿದೆ. 2021-22ರಲ್ಲಿ ಜಲ ಆಯೋಗಕ್ಕೆ ಸಲ್ಲಿಸಿದ ಡಿಪಿಆರ್‌ . 1677 ಕೋಟಿ ವೆಚ್ಚದಾಗಿತ್ತು. ಇದೀಗ ಹೊಸ ಡಿಪಿಆರ್‌ನ್ನು . 1300 ಕೋಟಿಗೆ ಇಳಿಸಲಾಗಿದೆ ಎಂದು ಮೂಲಗಳು ತಿಳಿಸುತ್ತವೆ.

ವಿರೋಧವೇಕೆ?:

ಮೂಲ ಯೋಜನೆಯಲ್ಲಿ ನೈಸರ್ಗಿಕವಾಗಿಯೇ ನೀರು ಹರಿದು ಮಲಪ್ರಭಾ ನದಿ ಸೇರುತ್ತಿತ್ತು. ಆದರೆ ಇದೀಗ ಪಂಪ್‌ಸೆಟ್‌ ಮೂಲಕ ನೀರನ್ನು ಲಿಫ್‌್ಟಮಾಡಿಕೊಳ್ಳುವ ಯೋಜನೆ ಸಿದ್ಧಪಡಿಸಲಾಗಿದೆ. ಇದರಿಂದ ಉತ್ತರ ಕರ್ನಾಟಕ ಭಾಗದ ಜನರಿಗೆ ಅನ್ಯಾಯವಾಗಲಿದೆ. ಆದಕಾರಣ ಮೊದಲಿನಂತೆ ಯೋಜನೆಯನ್ನು ಕೈಗೆತ್ತಿಕೊಳ್ಳಬೇಕು ಎಂಬ ಬೇಡಿಕೆ ಮಹದಾಯಿ ಹೋರಾಟಗಾರರದು.

ಕಳಸಾ-ಬಂಡೂರಿ ಯೋಜನೆ ಬದಲಿಸಿರುವುದಕ್ಕೆ ಪರ-ವಿರೋಧ ಅಭಿಪ್ರಾಯ ವ್ಯಕ್ತವಾಗುತ್ತಿದ್ದು, ಜನರಲ್ಲಿ ಗೊಂದಲವನ್ನುಂಟು ಮಾಡಿದೆ. ಈ ಬಗ್ಗೆ ತಜ್ಞರು, ಎಂಜಿನಿಯರ್‌ರು ಹೋರಾಟಗಾರರಲ್ಲಿ ಅರಿವು ಮೂಡಿಸುವ ಕೆಲಸ ಮಾಡಬೇಕಿದೆ.\

ಕಳಸಾ ನೀರು ಸಿಗುವವರೆಗೆ ಬ್ಯಾಂಕ್‌ ಸಾಲ ತೀರಿಸದೆ ಇರಲು ರೈತರ ಅಭಿಯಾನ

ಹಳೆ ಯೋಜನೆ ಅವೈಜ್ಞಾನಿಕವಾಗಿತ್ತು. ಕೃಷಿಗಾಗಿ ನಮಗೆ ನೀರು ಬಿಡುಗಡೆಯಾಗಿದ್ದರೆ ಅದಕ್ಕಾಗಿ ನಾವು ದೊಡ್ಡ ಡ್ಯಾಂ ಕಟ್ಟಿಕೊಳ್ಳಬಹುದಿತ್ತು. ಈಗ ನ್ಯಾಯಾಧಿಕರಣದಿಂದ ನಮಗೆ ಸಿಕ್ಕಿರುವುದು 3.90 ಟಿಎಂಸಿ ಅಡಿ ಮಾತ್ರ. ಇದಕ್ಕೆ ಈಗಿನ ಹೊಸ ಯೋಜನೆ ಸರಿಯಾಗಿದೆ. ಇದರಿಂದ ಅರಣ್ಯ ಪ್ರದೇಶವೂ ಹೆಚ್ಚಿನ ಪ್ರಮಾಣದಲ್ಲಿ ಹಾನಿಯಾಗುವುದಿಲ್ಲ. ನಮ್ಮ ಪಾಲಿನ ನೀರು ಸಿಗುತ್ತದೆ.

ವೀರೇಶ ಸೊಬರದಮಠ, ಅಧ್ಯಕ್ಷರು, ರೈತಸೇನೆ ಕರ್ನಾಟಕ

ಕಳಸಾ-ಬಂಡೂರಿ ಯೋಜನೆ ಮೂಲಸ್ವರೂಪ ಬದಲಿಸಿರುವುದು ಸರಿಯಲ್ಲ. ನೈಸರ್ಗಿಕವಾಗಿ ನೀರು ಹರಿದು ಬರಲು ಅವಕಾಶವಿದ್ದಾಗ ಪಂಪ್‌ ಮೂಲಕ ತೆಗೆದುಕೊಳ್ಳುವ ಅಗತ್ಯವೇನು? ಹೊಸ ಡಿಪಿಆರ್‌ನಿಂದ ಉತ್ತರ ಕರ್ನಾಟಕದ ಜನತೆಗೆ ಅನ್ಯಾಯವಾಗಲಿದೆ. ಈ ನಿಟ್ಟಿನಲ್ಲಿ ಜಾಗೃತಿ ಮೂಡಿಸಲು, ಸಾಧಕ-ಬಾಧಕ ಚರ್ಚಿಸಲು ಕಾರ್ಯಾಗಾರಗಳನ್ನು ಏರ್ಪಡಿಸಲಾಗುವುದು.

ಎನ್‌.ಎಚ್‌. ಕೋನರಡ್ಡಿ, ಅಧ್ಯಕ್ಷರು, ಮಹದಾಯಿ ರೈತಪರ ಹೋರಾಟಗಾರರ ಸಮಿತಿ

Follow Us:
Download App:
  • android
  • ios