ಕಲಬುರಗಿ(ಜು.15): ಜಯದೇವ ಹೃದ್ರೋಗ ವಿಜ್ಞಾನಿಗಳ ಸಂಸ್ಥೆಯ ಕಲಬುರಗಿ ಶಾಖೆಯಲ್ಲಿರುವ ಐವರು ಹೃದ್ರೋಗ ತಜ್ಞರು ಸೇರಿದಂತೆ ಆಸ್ಪತ್ರೆಯ ವಿವಿಧ ಹಂತದಲ್ಲಿ ಕೆಲಸ ಮಾಡುತ್ತಿರುವ 21 ಮಂದಿಗೆ ಕೊರೋನಾ ಸೋಂಕು ಧೃಢಪಟ್ಟಿರೋದರಿಂದ ಇಡೀ ಆಸ್ಪತ್ರೆಯನ್ನು ಸೀಲ್‍ಡೌನ್ ಮಾಡಲಾಗಿದೆ.

ಇಲ್ಲಿನ ಸರಕಾರಿ ಆಸ್ಪತ್ರೆಯ ಕಟ್ಟಡದಲ್ಲೇ ಕಾರ್ಯನಿರ್ವಹಿಸುತ್ತಿರುವ ಜಯದೇವ ಸಂಸ್ಥೆಗೆ ಕಳೆದ ವಾರ ಸೇಡಂನಿಂದ ಆಗಮಿಸಿದ್ದ ಹೃದ್ರೋಗಿ ಸರಿದಂತೆ ಇಬ್ಬರು ಹೃದ್ರೋಗಿಗಳು ತಾವು ಕೋವಿಡ್- 19 ಪರೀಕ್ಷೆಗೆ ಗಂಟಲು ದ್ರವ ನೀಡಿರೋ ಸಂಗತಿಯನ್ನ ಮರೆಮಾಚಿದ್ದರಿಂದ ಎಡವಟ್ಟಾಗಿದ್ದು ಇದೀಗ ಇಡೀ ಆಸ್ಪತ್ರೆಯೇ ಸಂಕಷ್ಟಕ್ಕೆ ಸಿಲುಕುವಂತಾಗಿದೆ.

ಪ್ರವಾಹದ ನೀರಿಗಿಳಿದು ನೂರಾರು ಜೀವ ರಕ್ಷಿಸಿದ ಬಿಜೆಪಿ ಶಾಸಕ

ಕಳೆದ ವಾರ ಸೇಡಂನಿಂದ ರೋಗಿಯೋರ್ವ ಹೃದಯ ಸಮಸ್ಯೆ ಎಂದು ನರಳುತ್ತ ಜಯದೇವಕ್ಕೆ ಬಂದಾಗ ಇಲ್ಲಿನ ವೈದ್ಯರು ತಕ್ಷಣ ಆತನಿಗೆ ಚಿಕಿತ್ಸೆ ನೀಡಿದ್ದಾರೆ. ಆದರೆ ಈತ ಅಷ್ಟೊತ್ತಿಗಾಗಲೇ ತನ್ನ ಗಂಟಲು ದ್ರವ ಕೋವಿಡ್ ಪರೀಕ್ಷೆಗೆ ನೀಡಿದ್ದ. ಆದರೆ ಈ ವಿಚಾರ ವೈದ್ಯರೆದುರು ಮುಚ್ಚಿಟ್ಟಿದ್ದ. ಶಸ್ತ್ರ ಚಿಕಿತ್ಸೆ ನಂತರವೇ ಈತನ ಕೋವಿಡ್- 19 ವರದಿ ಪಾಸಿಟಿವ್ ಬಂದಾಗ ಆತಂಕ ಕಾಡಿತ್ತು.

ಆಗಲೇ ಈತನಿಗೆ ಚಿಕಿತ್ಸೆ ನೀಡಿದ್ದ ಐವರು ಹೃದ್ರೋಗಿಗಳು ಸೇರಿದಂತೆ 31 ಮಂದಿ ಸೆಲ್ಫ್ ಕ್ವಾರಂಟೈನ್ ಆಗಿದ್ದರು. ಇವರೆಲ್ಲರ ಗಟಲು ದ್ರವ ಸಂಗ್ರಹಿಸಿ ನಡೆಸಿರುವ ಪರೀಕ್ಷೆಯಲ್ಲಿ ಈ ಪೈಕಿ 5 ವೈದ್ಯರು ಸೇರಿದಂತೆ 21 ಮಂದಿಗೆ ಸೋಂಕು ತಗುಲಿರೋದು ಧೃಢವಾಗಿದೆ.

ಈ ರಾಜ್ಯದ ಬಿಜೆಪಿ ಅಧ್ಯಕ್ಷರಿಗೆ ಕೊರೋನಾ, ಕುಟುಂಬ ಸದಸ್ಯರಿಗೂ ಸೋಂಕು!

ಇದಲ್ಲದೆ ನಾಲ್ಕು ದಿನದ ಹಿಂದಷ್ಟೆ ಮತ್ತೋರ್ವ ರೋಗಿ ಇದೇ ರೀತಿ ಕೋವಿಡ್ ಪರೀಕ್ಷೆಯ ವಿಷಯ ಮುಚ್ಚಿಟ್ಟು ಎದೆ ನೋವಿಗೆ ಚಿಕಿತ್ಸೆ ಪಡೆಯಲು ಮುಂದಾದಾದ ಶಂಕೆಯಿಂದ ಇಲ್ಲಿನ ವೈದ್ಯರೇ ಈತನ ಕೋವಿಡ್ ಪರೀಕ್ಷೆ ಮಾಡಿಸಿದಾಗ ಆತನಲ್ಲೂ ಸೋಂಕು ಪತ್ತೆಯಾಗಿದೆ. ಇವೆರಡೂ ಪ್ರಕರಣಗಲಿಂದಾಗಿಯೇ ಸೋಂಕು ಹೃದ್ರೋಗ ಆಸ್ಪತ್ರೆ ಹೊಕ್ಕಂತಾಗಿದೆ.

ಸಂಸ್ಥೆಯ ಅನೇಕ ವೈದ್ಯರು ಹಾಗೂ ಸಿಬ್ಬಂದಿ 2 ನೇ ಕೋವಿಡ್ ರೋಗಿಯ ಸಂಪರ್ಕಕ್ಕೆ ಬಂದಿದ್ದಾರೆ. ಅವೆರಲ್ಲರ ಗಂಟಲು ದ್ರವ ಪರೀಕ್ಷೆ ನಡೆಸಲಾಗುತ್ತಿದೆ. ಹೀಗಾಗಿ ಬರುವ ದಿನಗಳಲ್ಲಿ ಆಸ್ಪತ್ರೆಯ ಇನ್ನಷ್ಟು ಸಿಬ್ಬಂದಿಗೆ ಸೋಂಕು ಧೃಢವಾಗುವ ಸಾಧ್ಯತೆಗಳಿವೆ ಎನ್ನಲಾಗುತ್ತಿದೆ. ರೋಗಿಗಳಿಬ್ಬರು ತಮಗೆ ಗೊತ್ತಿದ್ದೋ, ಗೊತ್ತಿಲ್ಲದೆಯೋ ಹುಟ್ಟು ಹಾಕಿರುವ ಇವೆರಡೂ ಪೇಚಿನ ಪ್ರಸಂಗಗಳಿಂದಾಗಿ ಜಯದೇವದಲ್ಲಿ ವೈದ್ಯರು- ಆರೋಗ್ಯ ಸಿಬ್ಬಂದಿ, ದಾದಿಯರ ವಲಯದಲ್ಲಿ ಆತಂಕ ಸೃಷ್ಟಿಯಾಗಿದೆ.

ಜಯದೇವ ಹೃದ್ರೋಗ ಆಸ್ಪತ್ರೆ ಕಲ್ಯಾಣ ನಾಡಿನಲ್ಲೇ ಹೆಸರುವಾಸಿಯಾಗಿದ್ದು ನಿತ್ಯ  ನೂರಾರು ರೋಗಿಗಳು ಬಂದು ಹೋಗವ ಆಸ್ಪತ್ರೆಯೇ ಸೀಲ್‍ಡೌನ್ ಮಾಡಿದ್ದರಿಂದ ಇತರೆ ರೋಗಿಗಳ ಪರದಾಟ ಹೆಚ್ಚಿದೆ. ಇದಲ್ಲದೆ ಆಸ್ಪತ್ರೆಯ ಸಿಬ್ಬಂದಿಗಳು ಸಂಕಷ್ಟಕ್ಕೆ ಸಿಲುಕಿದಂತಾಗಿದೆ.

ಇದುವರೆಗೆ ಐವರು ವೈದ್ಯರು ಸೇರಿದಂತೆ  21 ಜನ ಸಿಬ್ಬಂದಿಗೆ ಸೋಂಕು ದೃಢಪಟ್ಟಿದೆ. ಮತ್ತಷ್ಟು ಸಿಬ್ಬಂದಿಗೆ ಸೋಂಕು ದೃಢಪಡುವ ಸಾಧ್ಯತೆಗಳಿವೆ. ರೋಗಿಗಳು ಈ ರೀತಿ ಮಾಹಿತಿಯನ್ನು ಮುಚ್ಚಿಟ್ಟರೆ ನಾವಾದರೂ ಏನು ಮಾಡುವುದು ಹೇಳಿ?  ಇದರಿಂದಾಗಿ ನಮ್ಮ ಸಿಬ್ಬಂದಿಗೂ ತೊಂದರೆಯಾಗುವ ಜೊತೆಗೆ, ಇತರೆ ಸಾಮಾನ್ಯ ಹೃದ್ರೋಗಿಗಳಿಗೂ ಸಕಾಲಕ್ಕೆ ಚಿಕಿತ್ಸೆ ಸಿಗದೆ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಜಯದೇವ ಹೃದ್ರೋಗ ವಿಜ್ಞಾನಿಗಳ ಸಂಸ್ಥೆ, ಕಲಬುರಗಿ ಶಾಖೆ ನಿರ್ದೇಶಕ ಡಾ.  ಬಾಬುರಾವ್ ಹುಡಗೀಕರ್ ತಿಳಿಸಿದ್ದಾರೆ.