ಕಲಬುರಗಿ, [ಆ.12] : ಭಾನುವಾರ ಭೀಮಾ ನದಿ ಪ್ರವಾಹಕ್ಕೆ ಕೊಚ್ಚಿಕೊಂಡು ಹೋಗಿದ್ದ ಜೇವರ್ಗಿ ತಾಲೂಕಿನ ಕೋಳಕೂರ ನಿವಾಸಿ ಬಸಣ್ಣ ದೊಡಮನಿ (62) ಅವರ ಶವ ಸೋಮವಾರದಂದು ಸೇನಾ ಪಡೆ  ಪತ್ತೆ  ಮಾಡಿದೆ.

ಭಾನುವಾರ ಬೆಳಿಗ್ಗೆ 11 ಗಂಟೆಗೆ ದನ ಮೇಯಿಸಲು ಹೋಗಿ ಬರುವುದಾಗಿ ಹೇಳಿ ಮನೆಯಿಂದ ಹೊರಟ ಬಸಣ್ಣ ದೊಡಮನಿ ಭೀಮಾ ನದಿಯಲ್ಲಿ ಆಕಳಿಗೆ ನೀರು ಕುಡಿಸಲು ಹೋದಾಗ ಕಾಲು ಜಾರಿ ಭೀಮಾ ಪ್ರವಾಹಕ್ಕೆ ಕೊಚ್ಚಿ ಹೋಗಿದ್ದರು. ಸಾಯಂಕಾಲವಾದರು ಮನೆಗೆ ಬಾರದಿದ್ದಕ್ಕೆ ಅನುಮಾನಗೊಂಡ ಕುಟುಂಬಸ್ಥರು ನದಿ ದಂಡೆಗೆ ಹೋಗಿ ನೋಡಿದಾಗ ಬಸಣ್ಣನವರ ಪಾದರಕ್ಷೆಗಳನ್ನು ಗಮನಿಸಿದರು. ಇದರಿಂದ ಅತಂಕಕೊಂಡು ಪೊಲೀಸರಿಗೆ ಮಾಹಿತಿ ನೀಡಿದ್ದರು.

ಕರ್ನಾಟಕ ಪ್ರವಾಹದ ಹೆಚ್ಚಿನ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ತಕ್ಷಣ ಕಾರ್ಯಪ್ರವೃತ್ತಗೊಂಡ ಸಿಕಂದ್ರಾಬಾದಿನ 202 ಇಂಜಿನೀಯರ್ ರೆಜಮೆಂಟ್ ನ ಮೇಜರ್ ನಮನ ನರೂಲ್ ನೇತೃತ್ವದ 12 ಜನರೊನ್ನಗೊಳಗೊಂಡ ಸೇನಾ ಪಡೆ ತಡರಾತ್ರಿ 11 ಗಂಟೆ ವರೆಗೂ ಕಾರ್ಯಚರಣೆ ನಡೆಸಿತ್ತಾದರೂ ನೀರಿನ ರಭಸ ಹೆಚ್ಚಿದ ಕಾರಣ ಯಶ ಕಾಣಲಿಲ್ಲ. 

ಸೋಮವಾರ ಬೆಳಿಗ್ಗೆ ಮತ್ತೆ 5.30 ಗಂಟೆಗೆ ಕಾರ್ಯಚರಣೆಗೆ ಇಳಿಯಲು ಸೇನಾ ಪಡೆ ಸಜ್ಜಾಗಿತ್ತಾದರು ನೀರಿನ ಹರಿವು ಹೆಚ್ಚಿರುವುದರಿಂದ ಅದು ಸಾಧ್ಯವಾಗಿಲ್ಲ. ಪುನ 9 ಗಂಟೆಗೆ ಕಾರ್ಯಾಚರಣೆ ನಡೆಸಲು ನದಿಗೆ ಇಳಿದ ಮೇಜರ್ ನಮನ ನರೂಲ್, ಜೆಸಿಓ ಜಿಜಿನ್ ಜೋಸೆಫ್, ಕಮಾಂಡೋ ಅನೀಲ ಕುಮಾರ ಅವರು ಬಸಣ್ಣ ದೊಡಮನಿ ಅವರ ಮೃತದೇಹವನ್ನು ಪತ್ತೆ ಹಚ್ಚಿ ಹಗ್ಗದ ಸಹಾಯದಿಂದ ಶವವನ್ನು ಹೊರತೆಗೆದರು.

ಈ ಸಂದರ್ಭದಲ್ಲಿ ಜೇವರ್ಗಿ ತಹಶೀಲ್ದಾರ್ ಸಿದ್ಧರಾಯ ಭೋಸಗಿ, ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ, ಜಿಲ್ಲಾ ಪಂಚಾಯತಿಯ ಕೃಷಿ ಮತ್ತು ಕೈಗಾರಿಕೆ ಸ್ಥಾಯಿ ಸಮಿತಿ ಅಧ್ಯಕ್ಷ ಶಿವರಾಜ ಪಾಟೀಲ ರದ್ದೆವಾಡಗಿ, ಡಿವೈಎಸ್ಪಿ ಎಸ್.ಎಸ್.ಹುಲ್ಲೂರ, ಸಿಪಿಐ ಬಿ.ಡಿ.ಪಾಟೀಲ, ಪಿ.ಎಸ್.ಐ ಶಿವಕುಮಾರ ಸಾಹು ಸೇರಿದಂತೆ ಇನ್ನಿತರು ಇದ್ದರು.