ಕಾಡುಗೊಲ್ಲರು ರಾಜಕೀಯವಾಗಿ ಗುರುತಿಸಿಕೊಳ್ಳಬೇಕಿದೆ
ಕಾಡುಗೊಲ್ಲರು ಒಗ್ಗಟ್ಟಾಗಿ ಸಂಘಟನೆ ಆಗುವ ಮೂಲಕ ರಾಜಕೀಯ ಶಕ್ತಿಯಾಗಿ ಬದಲಾಗಬೇಕಿದೆ ಸಮಾಜ ಅಭಿವೃದ್ಧಿಗೆ ಇದು ಅನಿವಾರ್ಯ ಎಂದು ಚಿಕ್ಕಣ್ಣ ಸ್ವಾಮಿ ಕ್ಷೇತ್ರದ ಧರ್ಮದರ್ಶಿಗಳು ಹಾಗೂ ತಾಲೂಕು ಕಾಡುಗೊಲ್ಲರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಪಾಪಣ್ಣ ತಿಳಿಸಿದರು.
ಕುಣಿಗಲ್ : ಕಾಡುಗೊಲ್ಲರು ಒಗ್ಗಟ್ಟಾಗಿ ಸಂಘಟನೆ ಆಗುವ ಮೂಲಕ ರಾಜಕೀಯ ಶಕ್ತಿಯಾಗಿ ಬದಲಾಗಬೇಕಿದೆ ಸಮಾಜ ಅಭಿವೃದ್ಧಿಗೆ ಇದು ಅನಿವಾರ್ಯ ಎಂದು ಚಿಕ್ಕಣ್ಣ ಸ್ವಾಮಿ ಕ್ಷೇತ್ರದ ಧರ್ಮದರ್ಶಿಗಳು ಹಾಗೂ ತಾಲೂಕು ಕಾಡುಗೊಲ್ಲರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಪಾಪಣ್ಣ ತಿಳಿಸಿದರು.
ಪಟ್ಟಣದ ಎಸ್ ಎಸ್ ಪಾರ್ಟಿ ಹಾಲ್ ನಲ್ಲಿ ತಾಲೂಕು ಆಡಳಿತ ಹಾಗೂ ತಾಲೂಕು ಕಾಡುಗೊಲ್ಲ ಕ್ಷೇಮಾಭಿವೃದ್ಧಿ ಸಂಘ ಹಾಗೂ ವಿವಿಧ ಸಂಘ-ಸಂಸ್ಥೆಗಳ ಸಹಯೋಗದೊಂದಿಗೆ ನಡೆದ ಶ್ರೀ ಕೃಷ್ಣ ಜನ್ಮಾಷ್ಟಮಿ ಜಯಂತಿ ಹಾಗೂ ಪ್ರತಿಭಾ ಪುರಸ್ಕಾರ ಅಭಿನಂದನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕಾಡುಗೊಲ್ಲ ತೀರ ಹಿಂದುಳಿದ ತಳ ಸಮುದಾಯದ ಒಂದು ವ್ಯವಸ್ಥೆಯಾಗಿದ್ದು ರಾಜಕಾರಣಿಗಳು, ಅಧಿಕಾರಿಗಳು ನಮ್ಮ ಕಾರ್ಯಕ್ರಮ ಸಭೆ ಸಮಾರಂಭ ಜಯಂತಿಗಳಿಗೆ ಹಾಜರಾಗದೆ ತಾತ್ಸಾರದಿಂದ ಕಾಣುತ್ತಾರೆ. ಆದ್ದರಿಂದ ಪ್ರತಿಯೊಬ್ಬರೂ ಜಾಗೃತರಾಗಿ ಒಗ್ಗಟ್ಟಿನಿಂದ ರಾಜಕೀಯ ಶಕ್ತಿ ಪ್ರದರ್ಶನಕ್ಕೆ ತಯಾರಾಗಬೇಕೆಂದು ಕರೆ ನೀಡಿದರು.
ತುಮಕೂರಿನಲ್ಲಿ ಹಿಂದುಳಿದ ವರ್ಗಗಳ ಬೃಹತ್ ಸಭೆ ಆಯೋಜಿಸುವ ಮೂಲಕ ಬರುವ ದಿನಗಳಲ್ಲಿ ಶಕ್ತಿ ಪ್ರದರ್ಶನ ನಡೆಸಲಾಗುವುದು, ಸಮುದಾಯದ ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಬೇಕು. ಈ ಸಮುದಾಯದ ಮಕ್ಕಳು ವಿದ್ಯಾವಂತರಾಗಲು ಸಮಾಜಕ್ಕೆ ಒಂದು ವಿದ್ಯಾರ್ಥಿ ನಿಲಯ ನಿರ್ಮಿಸಲು ಪುರಸಭೆ ಹಾಗೂ ತಾಲೂಕು ಆಡಳಿತಕ್ಕೆ ನಿವೇಶನ ಕೇಳಿದರೆ ಇಲ್ಲ ಎಂದು ಹೇಳುತ್ತಾರೆ. ಸಮಾಜದ ಹಿರಿಯರ ಸಹಕಾರಿದಿಂದ ಹಣ ನೀಡಿ, ವಿದ್ಯಾರ್ಥಿ ನಿಲಯದ ಸ್ಥಾಪಿಸಿ ಮಕ್ಕಳ ಭವಿಷ್ಯಕ್ಕೆ ನಾಂದಿ ಮಾಡಬೇಕಾಗಿದೆ. ಸಮುದಾಯ ಭವನ ನಿರ್ಮಿಸಲು ಚಿಂತಿಸಲಾಗುವುದು ಎಂದು ತಿಳಿಸಿದರು.
ಮಾಜಿ ಪುರಸಭಾ ಅಧ್ಯಕ್ಷ ಹಾಗೂ ತಾಲೂಕು ಅಹಿಂದ ಅಧ್ಯಕ್ಷ ರಂಗಸ್ವಾಮಿ, ಕಂದಾಯ ಇಲಾಖೆಯ ಶಿರಸ್ತೆದಾರ್ ಲೀಲಾವತಿ,ಅಟ್ಟಿ ಲಕ್ಕಮ್ಮ ದೇವಸ್ಥಾನದ ಧರ್ಮದರ್ಶಿಗಳಾದ ಗೋಪಾಲಸ್ವಾಮಿ,ಹರೀಶ ರಾಜಣ್ಣ, ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಶ್ವೇತಾ ರಾಜಣ್ಣ,ತಾಲೂಕು ಕಾಡುಗೊಲ್ಲ ಕ್ಷೇಮಾಭಿವೃದ್ಧಿ ಸಂಘದ ಪ್ರಧಾನ ಕಾರ್ಯದರ್ಶಿ ಹಾಗೂ ತಾಪಂ ಮಾಜಿ ಸದಸ್ಯ ಕೃಷ್ಣಪ್ಪ,ಉಪನ್ಯಾಸಕ ಶಿವಣ್ಣ,ಶಿಕ್ಷಕ ಉಮೇಶ್, ಶಿವಣ್ಣ ಪಾಂಡು ಕುಮಾರ, ಸಣ್ಣಪ್ಪ,ಈರಣ್ಣ, ನರಸಿಂಹಮೂರ್ತಿ, ನಡೆಮಾವನಪುರ ಕೃಷ್ಣ, ದಲಿತ ಮುಖಂಡರಾದ ಕೃಷ್ಣರಾಜು,ವರದರಾಜು, ಮಡಿವಾಳ ಸಂಘದ ರಾಜಣ್ಣ, ಉಪಸ್ಥಿತರಿದ್ದು ಇದೇ ಸಂದರ್ಭದಲ್ಲಿ ಜನಾಂಗದ ವಿದ್ಯಾರ್ಥಿಗಳು ಎಸ್ ಎಸ್ ಎಲ್ ಸಿ ಹಾಗು ಪಿ ಯು ಸಿ ಪರೀಕ್ಷೆಗಳಲ್ಲಿ ಹೆಚ್ಚು ಅಂಕಗಳಿಸಿದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.