Asianet Suvarna News Asianet Suvarna News

ಹುಬ್ಬಳ್ಳಿಯಲ್ಲೊಂದು ಲವ್ ಕಹಾನಿ: ಬೇಕೇ ಬೇಕು ಅವಳೇ ಬೇಕು ಎನ್ನುತ್ತಿರುವ ಟೆಕ್ಕಿ!

ಕಡಪಾ ಟು ಹುಬ್ಬಳ್ಳಿ ಲವ್‌ ಸ್ಟೋರಿ|ಮ್ಯಾಟ್ರಿಮೋನಿಯಲ್ಲಿ ನೋಡಿದ ಯುವತಿಯನ್ನೇ ಮದುವೆಯಾಗ್ತೀನಿ ಎಂದು ಯುವಕನ ಧರಣಿ| ಪೊಲೀಸ್‌ ಠಾಣೆ ಮೆಟ್ಟಿಲೇರಿದ ಪ್ರಕರಣ|

Kadapa Based Software Engineer Held Protest for Marriage Girl
Author
Bengaluru, First Published Nov 16, 2019, 8:16 AM IST

ಹುಬ್ಬಳ್ಳಿ(ನ.16): ಇದೊಂದು ಪಾಗಲ್‌ ಪ್ರೇಮಿಯ ಕಥೆ. ಮ್ಯಾಟ್ರಿಮೋನಿಯಲ್ಲಿ ಹುಡುಗಿಯ ಭಾವಚಿತ್ರ ನೋಡಿಕೊಂಡು ಮದುವೆಯಾದರೆ ಅವಳನ್ನೇ ಆಗುತ್ತೇನೆ. ಬೇಕೇ ಬೇಕು ಅವಳೇ ಬೇಕೆಂದು ಯುವತಿಯ ಮನೆ ಎದುರು ಕಳೆದ ನಾಲ್ಕು ದಿನಗಳಿಂದ ಸಾಫ್ಟ್‌ವೇರ್‌ ಎಂಜಿನಿಯರ್‌ನೊಬ್ಬ ಧರಣಿ ನಡೆಸುತ್ತಿರುವ ವಿಚಿತ್ರ ಪ್ರಕರಣ ಬೆಳಕಿಗೆ ಬಂದಿದೆ. ಕೊನೆಗೆ ಪೊಲೀಸರು ಮಧ್ಯ ಪ್ರವೇಶಿಸಿ ಯುವಕನಿಗೆ ತಿಳಿ ಹೇಳಿ ಕಳುಹಿಸಿದ ಘಟನೆ ನಡೆದಿದೆ.

ಆಗಿದ್ದೇನು?:

ಆಂಧ್ರಪ್ರದೇಶದ ಕಡಪಾ ಜಿಲ್ಲೆಯ ಚಕ್ರವರ್ತಿ (29) ಎಂಬಾತನೇ ಈ ರೀತಿ ಧರಣಿ ನಡೆಸಿದ ಯುವಕ. ಸಾಫ್ಟ್‌ವೇರ್‌ ಎಂಜಿನಿಯರ್‌ ಆಗಿರುವ  ಈತ ಮೊದಲು ಸಿಡ್ನಿಯಲ್ಲಿ ಕೆಲಸದಲ್ಲಿದ್ದ. ಈಗ ಒಂದು ವರ್ಷದಿಂದ ಅಲ್ಲಿ ಕೆಲಸ ಮಾಡುತ್ತಿಲ್ಲ. ತನ್ನೂರಲ್ಲಿ ನೆಲೆಸಿದ್ದಾನೆ.

ಈತ ಮ್ಯಾಟ್ರಿ ಮೋನಿ ವೆಬ್‌ಸೈಟ್‌ನಲ್ಲಿ ಬೆಂಗಳೂರಲ್ಲಿ ಸಾಫ್ಟ್‌ವೇರ್‌ ಎಂಜಿನಿಯರ್‌ ಆಗಿರುವ ಹುಬ್ಬಳ್ಳಿ ಮೂಲದ ಯುವತಿಯೊಬ್ಬಳ ಭಾವಚಿತ್ರ ನೋಡಿದ್ದಾನೆ. ತಾನು ಮದುವೆಯಾಗುವ ಇಚ್ಛೆಯನ್ನು ಯುವತಿಗೆ ಆನ್‌ಲೈನ್‌ನಲ್ಲಿ ತಿಳಿಸಿದ್ದಾನೆ. ಅದಕ್ಕೆ ಅವಳು ನಮ್ಮ ಕುಟುಂಬಸ್ಥರು ಒಪ್ಪಬೇಕು ಅಂದರೆ ಮಾತ್ರ ಮದುವೆ ಎಂದು ಹೇಳಿದ್ದಾಳೆ. ಈತನ ಪ್ರಪೋಸ್‌(ಪ್ರೀತಿ ನಿವೇದನೆ)ನ್ನು ಯುವತಿ ಕುಟುಂಬಸ್ಥರು ತಿರಸ್ಕರಿಸಿದ್ದಾರೆ.ಆದರೆ, ಈತ ಮಾತ್ರ ಮದುವೆಯಾದರೆ ಆ ಯುವತಿಯನ್ನೇ ಮದುವೆಯಾಗುತ್ತೇನೆ. ಅವರ ಮನೆ ಮುಂದೆ ಧರಣಿ ನಡೆಸಿಯಾದರೂ ಕುಟುಂಬಸ್ಥರನ್ನು ಒಪ್ಪಿಸುತ್ತೇನೆ ಎಂದು ಕಡಪದಿಂದ ಹುಬ್ಬಳ್ಳಿಗೆ ಬಂದಿದ್ದಾನೆ. ಕಳೆದ ನಾಲ್ಕು ದಿನಗಳ ಹಿಂದೆ ಯುವತಿಯ ಮನೆಗೆ ತೆರಳಿ ತನ್ನ ಇಚ್ಛೆಯನ್ನು ಅವರ ಮುಂದೆ ಇಟ್ಟಿದ್ದಾನೆ. ಅದಕ್ಕೆ ಯುವತಿಯ ಮನೆಯವರು ನಮಗೆ ಇಷ್ಟವಿಲ್ಲ. ಹೀಗಾಗಿ ಮದುವೆ ಮಾಡಿಕೊಡಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಆದರೆ, ಈತ ಅಷ್ಟಕ್ಕೆ ಬಿಟ್ಟಿಲ್ಲ. ಮನೆ ಎದುರಿಗೆ ಪ್ರತಿನಿತ್ಯ ನಾಲ್ಕಾರು ಗಂಟೆ ಧರಣಿ ನಡೆಸುತ್ತಾ.. ‘ಬೇಕೇ ಬೇಕು ನೀನೇ ಬೇಕು. ನಿನ್ನನ್ನೇ ನಾ ಮದುವೆಯಾಗೋದು..’ ಎಂದು ಪೀಡಿಸಲು ಶುರು ಮಾಡಿದ್ದಾನೆ. ಮೊದ ಮೊದಲು ಯುವತಿಯ ಕುಟುಂಬಸ್ಥರು ಈತನನ್ನು ನಿರ್ಲಕ್ಷ್ಯಿಸಿ ಮನೆಗೆ ಬಾಗಿಲು ಮುಚ್ಚಿಕೊಂಡು ಒಳಗೆ ಉಳಿದಿದ್ದಾರೆ. ಆದರೆ, ಈತ ಮೂರ್ನಾಲ್ಕು ದಿನಗಳಿಂದ ಮನೆ ಎದುರಿಗೆ ಚೇರ್‌ ಹಾಕಿಕೊಂಡು ಧರಣಿ ನಡೆಸುತ್ತಿರುವುದು ಕಿರಿ ಕಿರಿಯಾಗಿ ಪೊಲೀಸರಿಗೆ ಶುಕ್ರವಾರ ತಿಳಿಸಿದ್ದಾರೆ. ಪೊಲೀಸರು ಮನೆಗೆ ತೆರಳಿ ಆತನನ್ನು ಅಲ್ಲಿಂದ ಕರೆದುಕೊಂಡು ಠಾಣೆಗೆ ಕರೆದೊಯ್ದಿದ್ದಾರೆ. ಅಲ್ಲಿ ತಿಳಿ ಹೇಳಿದ್ದಾರೆ. ಕೊನೆಗೆ ಯುವಕನ ಸಂಬಂಧಿಕರನ್ನು ಕಡಪಾದಿಂದ ಕರೆಸಿಕೊಂಡು ಆತನನ್ನು ಕಳುಹಿಸಿದ್ದಾರೆ. ಸದ್ಯ ಯುವಕನನ್ನು ಕುಟುಂಬಸ್ಥರು ಬಂದು ಕರೆದುಕೊಂಡು ಹೋಗಿದ್ದಾರೆ.

ಮಾನಸಿಕ ಅಸ್ವಸ್ಥನಾಗಿರಬಹುದು. ಈ ಕಾರಣದಿಂದಾಗಿ ಆ ರೀತಿ ಮಾಡುತ್ತಿದ್ದಾನೆ ಎಂಬ ಸಂಶಯವಿದೆ. ಆತನನ್ನು ವೈದ್ಯರಿಗೆ ತೋರಿಸುವಂತೆ ತಿಳಿಸಿ ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
 

Follow Us:
Download App:
  • android
  • ios