ಉತ್ತರಕನ್ನಡ: ಕದಂಬೋತ್ಸವಕ್ಕೆ ಅದ್ಧೂರಿ ತೆರೆ

ಎರಡು ದಿನಗಳ ಕಾಲ ನಡೆದ ವಿವಿಧ ಕಾರ್ಯಕ್ರಮಗಳು ರಾಜ್ಯ ಹಾಗೂ ಹೊರ ರಾಜ್ಯಗಳಿಂದ ಬಂದಂತಹ ಜನರ ಮನಸೂರೆಗೊಂಡಿದೆ. 

Kadambotsava  Conclusion at Banavasi in Uttara Kannada grg

ಭರತ್‌ ರಾಜ್‌‌‌ ಕಲ್ಲಡ್ಕ, ಏಷಿಯಾನೆಟ್ ಸುವರ್ಣ ನ್ಯೂಸ್, ಕಾರವಾರ

ಉತ್ತರಕನ್ನಡ(ಮಾ.02):  ಕದಂಬರ ರಾಜಧಾನಿ ಪ್ರಸಿದ್ಧ ಬನವಾಸಿಯಲ್ಲಿ ನಡೆದ ಎರಡು ದಿನಗಳ ಕದಂಬೋತ್ಸವ ಅದ್ಧೂರಿ ತೆರೆ ಕಂಡಿದೆ. ಮಂಗಳವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕದಂಬೋತ್ಸವಕ್ಕೆ ಚಾಲನೆ‌ ನೀಡಿದ್ದರು. ಎರಡು ದಿನಗಳಲ್ಲಿ ವಿವಿಧ ಕಲಾತಂಡಗಳ ಪ್ರತಿಭಾ ಪ್ರದರ್ಶನ, ಖ್ಯಾತ ಸಂಗೀತ ನಿರ್ದೇಶಕರಿಂದ ರಸಮಂಜರಿ, ಸಾಹಿತಿಗಳಿಂದ ಗೋಷ್ಠಿ ಕದಂಬೋತ್ಸವಕ್ಕೆ ಇನ್ನಷ್ಟು ಮೆರುಗು ನೀಡಿತ್ತು. ಈ ಕುರಿತ ಒಂದು ಸ್ಟೋರಿ ಇಲ್ಲಿದೆ ನೋಡಿ....

ಕೊರೋನಾ‌ ಕಾರಣದಿಂದ ಎರಡು ವರ್ಷಗಳ ಕಾಲ‌ ಸ್ಥಗಿತಗೊಂಡಿದ್ದ ಕದಂಬೋತ್ಸವ ಈ ಬಾರಿ 25ನೇ ವರ್ಷದ ಸಂಭ್ರಮದೊಂದಿಗೆ ಉತ್ತರಕನ್ನಡ ಜಿಲ್ಲೆಯ ಬನವಾಸಿಯಲ್ಲಿ ಅದ್ಧೂರಿಯಾಗಿ ನಡೆದಿದೆ. ಹೆಲಿಕಾಪ್ಟರ್ ಮೂಲಕ ಬನವಾಸಿಗೆ ಬಂದಿದ್ದ‌ ಸಿಎಂ ಬಸವರಾಜ ಬೊಮ್ಮಾಯಿ ಎರಡು ದಿನಗಳ ಕಾಲ ನಡೆಯುವ ಕದಂಬೋತ್ಸವಕ್ಕೆ ಚಾಲನೆ ನೀಡಿದ್ದರು. ಈ ವೇಳೆ ಮಧುಕೇಶ್ವರ ದೇವರ ರಥದ ಉದ್ಘಾಟನೆ ಕೂಡಾ ಅವರು ನೆರವೇರಿಸಿದ್ದರು. 

ಪಂಪನ ಕನಸಿನಂತೆ ಬನವಾಸಿ ಅಭಿವೃದ್ಧಿಗೆ ಬದ್ಧ: ಸಿಎಂ ಬಸವರಾಜ ಬೊಮ್ಮಾಯಿ

ಬಸವರಾಜ ಹೊರಟ್ಟಿ, ಗೋವಿಂದ ಕಾರಜೋಳ, ವಿಶ್ವೇಶ್ವರ ಹೆಗಡೆ ಕಾಗೇರಿ, ಶಿವರಾಮ ಹೆಬ್ಬಾರ್, ದಿನಕರ ಶೆಟ್ಟಿ, ರೂಪಾಲಿ ನಾಯ್ಕ್, ಸಾಹಿತಿ ಡಾ. ಬಾಬು ಕೃಷ್ಣಮೂರ್ತಿ ಹಾಗೂ ಜಿಲ್ಲಾಮಟ್ಟದ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ‌ ಉತ್ಸವದಲ್ಲಿ ಸಾಹಿತಿ ಡಾ. ಬಾಬು ಕೃಷ್ಣಮೂರ್ತಿ ಸೇರಿದಂತೆ ಮೂವರಿಗೆ ಪಂಪಾ ಪ್ರಶಸ್ತಿ ನೀಡಲಾಗಿತ್ತು. ಬಳಿಕ ಜಿಲ್ಲೆ ಹಾಗೂ ಹೊರ ಜಿಲ್ಲೆಯ ಪ್ರತಿಭೆಗಳಿಂದ ಶಾಸ್ತ್ರೀಯ ಸಂಗೀತ, ವಿದುಷಿ ಮಾನಸಿ ಸುಧೀರ್ ತಂಡದಿಂದ ಭರತನಾಟ್ಯ, ವೆಸ್ಟರ್ನ್ ಡ್ಯಾನ್ಸ್ ಹಾಗೂ ಖ್ಯಾತ ಸಂಗೀತ ನಿರ್ದೇಶಕ ಗುರು ಕಿರಣ್ ಅವರ ತಂಡದಿಂದ ಸಿನಿಗೀತೆಗಳ ರಸಮಂಜರಿ ಭರ್ಜರಿಯಾಗಿ ನಡೆದಿದ್ದು, ಜನಮನ ಸೂರೆಗೊಂಡಿತ್ತು. 

ಎರಡನೇ ದಿನ ಗೋಷ್ಠಿ ಹಾಗೂ ವಿವಿಧ ಕಾರ್ಯಕ್ರಮಗಳ ಬಳಿಕ ಕದಂಬೋತ್ಸವ ಸಮಾರೋಪ ಕಂಡಿದ್ದು, ಹಂಪಿ ಕನ್ನಡ ವಿಶ್ವ ವಿದ್ಯಾಲಯದ ಕುಲಪತಿ ಡಾ. ವಿಜಯ ಪೊಣಚ್ಚ ತಂಬಂಡ, ಪಂಪ ಕೇವಲ ಕರ್ನಾಟಕಕ್ಕಲ್ಲ, ಭಾರತಕ್ಕೇ ಹೆಮ್ಮೆ. ಹಲ್ಮಿಡಿ ಶಾಸನ ಕನ್ನಡದ ಮೊದಲ ಶಾಸನ. ಬನವಾಸಿ ನಮ್ಮ ಸಂಸ್ಕೃತಿಯ ಕುರುಹು ಎಂದು ಹಾಡಿ ಹೊಗಳಿದರು. ಸಮಾರೋಪ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಚಿವ ಶಿವರಾಮ ಹೆಬ್ಬಾರ್ ವಹಿಸಿದ್ದರು.

ರಾಮಾಯಣದಿಂದ ಪುರುಷಾರ್ಥ ಪ್ರಾಪ್ತಿ: ರಾಘವೇಶ್ವರ ಸ್ವಾಮೀಜಿ

ಇನ್ನು ಸಮಾರೋಪದ ಮುನ್ನ ಹುಬ್ಬಳ್ಳಿಯ ಕಲೆ ಮತ್ತು ಸಾಂಸ್ಕೃತಿಕ ನಿರ್ವಹಣೆ ಹಾಗೂ ಸಂಶೋಧನಾ ಕೇಂದ್ರದಿಂದ ಜಾನಪದ ನೆರಳು, ಚಿತ್ರದುರ್ಗ ಲಾಸಿಕಾ ಫೌಂಡೇಶನ್ ಅವರ ಭರತನಾಟ್ಯ, ಸಿದ್ದಪೂರ ರವಿ ಮುರೂರು ಇವರ ಸಂಗೀತ ಕಾರ್ಯಕ್ರಮ, ಬಾಗಲಕೋಟೆಯ ಶ್ರೇಯಾ ಪ್ರಹ್ಲಾದ್ ಕುಲಕರ್ಣಿ ಅವರ ಭರತನಾಟ್ಯ, ಬೆಂಗಳೂರು ಅಮೋಘವರ್ಷ ಫುಝನ್ ಸಂಗೀತ, ಶಿರಸಿಯ ನವ್ಯಾ ಭಟ್ ಹಾಗೂ ಬನವಾಸಿಯ ತನುಜಾ ನಾಯ್ಕ್ ಅವರಿಂದ ಭರತನಾಟ್ಯ, ಪುತ್ತೂರಿನ ನೃತ್ಯೋಪಾಸನ ಕಲಾ ಕೇಂದ್ರದ ವಿದುಷಿ ಶಾಲಿನಿ ಆತ್ಮ ಭೂಷಣ್ ಅವರ ನೃತ್ಯರೂಪಕ, ಶಿರಸಿ ಸ್ಮಾರ್ಟ್ ಗ್ರೂಪ್ ನಿಂದ ಆಧುನಿಕ ಡ್ಯಾನ್ಸ್ ಹಾಗೂ ಮೆಗಾ ಮ್ಯಾಜಿಕ್ ಸ್ಟಾರ್ ಕುದ್ರೋಳಿ ಗಣೇಶ ಅವರ ಜಾದು ಪ್ರದರ್ಶನ ನಡೆಯಿತು. ರಾತ್ರಿ ಮ್ಯೂಸಿಕ್‌ ಮಾಂತ್ರಿಕ ಅರ್ಜುನ್ ಜನ್ಯ ಮತ್ತು ಸಂಗಡಿಗರಿಂದ ರಸಮಂಜರಿ ಕಾರ್ಯಕ್ರಮ ನಡೆದಿದ್ದು, ಸಾವಿರಾರು ಪ್ರೇಕ್ಷಕರು ಕಾರ್ಯಕ್ರಮಕ್ಕೆ ಸಾಕ್ಷಿಯಾದರು.

ಒಟ್ಟಿನಲ್ಲಿ‌ 25ನೇ ವರ್ಷದ ಕದಂಬೋತ್ಸವ ಕಾರ್ಯಕ್ರಮ ಅದ್ಧೂರಿ ತೆರೆಕಂಡಿದೆ‌. ಎರಡು ದಿನಗಳ ಕಾಲ ನಡೆದ ವಿವಿಧ ಕಾರ್ಯಕ್ರಮಗಳು ರಾಜ್ಯ ಹಾಗೂ ಹೊರ ರಾಜ್ಯಗಳಿಂದ ಬಂದಂತಹ ಜನರ ಮನಸೂರೆಗೊಳಿಸಿರುವುದರಲ್ಲಿ ಎರಡು ಮಾತಿಲ್ಲ. 

Latest Videos
Follow Us:
Download App:
  • android
  • ios