ಹುಬ್ಬಳ್ಳಿ(ಸೆ.27) ಸುಪ್ರೀಂ ಕೋರ್ಟ್ ಉಪಚುನಾವಣೆ ಮುಂದೂಡಿ ನೀಡಿರುವ ತೀರ್ಪು ಸ್ವಾಗತಾರ್ಹವಾಗಿದ್ದು, ಮಾಜಿ ಸ್ಪೀಕರ್ ರಮೇಶ್‌ ಕುಮಾರ್ ಆದೇಶಕ್ಕೆ ಹಿನ್ನಡೆಯಾಗಿದೆ. ಅನರ್ಹ ಶಾಸಕರು ನಮ್ಮವರೇ ಆಗಿದ್ದು, ಅವರಿಗೆ ಸೂಕ್ತವಾದ ಸ್ಥಾನಮಾನ ನೀಡುವುದು ನಮ್ಮ ಕರ್ತವ್ಯ ಎಂದು ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದ್ದಾರೆ.

ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಮೇಶ್‌ ಕುಮಾರ್ ಹಿಂದೆ ನೀಡಿದ್ದ ತೀರ್ಪು ಅರೆಬರೆಯಾಗಿದ್ದು, ಸುಪ್ರೀಂ ಕೋರ್ಟ್ ಕೂಲಂಕಷವಾಗಿ ವಿಚಾರಣೆ ಮಾಡಿ ತೀರ್ಪು ನೀಡಿದೆ. ಸುಪ್ರೀಂ ಕೋರ್ಟ್ ಆದೇಶಕ್ಕೆ ಎಲ್ಲರೂ ತಲೆಬಾಗಲೇಬೇಕು. ಆದರೆ, ಈ ತೀರ್ಪಿನಿಂದ ರಮೇಶ್‌ ಕುಮಾರ್ ಭ್ರಮನಿರಸರಾಗಿದ್ದಾರೆ ಎಂದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ  

ರಾಜ್ಯದಲ್ಲಿ ಆಗುತ್ತಿರುವ ಬೆಳವಣಿಗೆಯನ್ನು ಇಡೀ ದೇಶ ಗಮನಿಸುತ್ತಿದೆ. ಮೈತ್ರಿ ಸರ್ಕಾರದಲ್ಲಿ ಒಟ್ಟಾಗಿದ್ದಂತೆ ಇದ್ದ ಎಚ್. ಡಿ.ಕುಮಾರಸ್ವಾಮಿ ಹಾಗೂ ಸಿದ್ದರಾಮಯ್ಯ ಅವರ ಒಳಬೇಗುದಿ ಈಗ ಹೊರಬರುತ್ತಿದೆ. ಮೈತ್ರಿ ಸರ್ಕಾರದಿಂದ ಹೊರಬರಲು ಶಾಸಕರು ತೆಗೆದುಕೊಂಡ ತೀರ್ಮಾನ ಸರಿಯಾಗಿದೆ ಎಂದು ಎನಿಸುತ್ತಿದೆ. ಅನರ್ಹ ಶಾಸಕರಿಗೆ ನ್ಯಾಯ ಸಿಗುವುದು ಖಚಿತವಾಗಿದ್ದು, ನಾವು ಅವರಿಗೆ ಸಿಗಬೇಕಾದ ನ್ಯಾಯಯುತ ಸ್ಥಾನಮಾನವನ್ನು ನೀಡುತ್ತೇವೆ ಎಂದು ಹೇಳಿದ್ದಾರೆ. 

ಸಿದ್ದರಾಮಯ್ಯ ಅವರಿಗೆ ಮತ್ತೊಮ್ಮೆ ಅಧಿಕಾರ ನೀಡುವ ಕುರಿತು ಮಾಜಿ ಸ್ಪೀಕರ್ ರಮೇಶ್‌ ಕುಮಾರ್ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಉತ್ತರಿಸಿದ ಈಶ್ವರಪ್ಪ, ಹಿಂದೆ ಸಿದ್ದರಾಮಯ್ಯಗೆ ಐದು ವರ್ಷ ಅಧಿಕಾರ ನೀಡಲಾಗಿತ್ತು. ಆದರೆ ತಮ್ಮ ಅವಧಿಯಲ್ಲಿ ಏನು ಮಾಡಿದ್ದಾರೆ? ಸಿದ್ದರಾಮಯ್ಯ ಪರವಾಗಿ ಮಾತನಾಡಿದರೆ ತಮಗೆ ಉತ್ತಮ ಸ್ಥಾನಮಾನ ಸಿಗಬಹುದು ಎಂಬ ಭ್ರಮೆಯಲ್ಲಿ ರಮೇಶ್‌ ಕುಮಾರ್ ಹೀಗೆ ಮಾತನಾಡಿದ್ದಾರೆ ಅಷ್ಟೇ ಎಂದು ತಿಳಿಸಿದ್ದಾರೆ. 

ಈಗಾಗಲೇ ಕಾಂಗ್ರೆಸ್‌ನಲ್ಲಿ ಭಿನ್ನಾಭಿಪ್ರಾಯ ಸ್ಫೋಟಗೊಂಡಿರುವುದು ಎಲ್ಲರಿಗೂ ತಿಳಿದಿದೆ. ಕೆ.ಎಚ್. ಮುನಿಯಪ್ಪ ಅವರ ಸೋಲಿಗೆ ರಮೇಶ್‌ ಕುಮಾರ್ ಅವರೇ ಕಾರಣ ಎಂಬ ಹೇಳಿಕೆಯೇ ಇದಕ್ಕೆ ಕಾರಣವಾಗಿದೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸೋಲು ಸೇರಿದಂತೆ ಈಚೆಗೆ ಸಿದ್ದರಾಮಯ್ಯ ಅವರ ವರ್ಚಸ್ಸು ಕಡಿಮೆಯಾಗುತ್ತಿದೆ ಎಂದು ಹೇಳಿದ್ದಾರೆ.