Asianet Suvarna News Asianet Suvarna News

 ಕೆ.ಆರ್ . ನಗರ : ನ. 3 ರಿಂದ ಶುಕ್ರವಾರದ ಸಂತೆ ಪುನಾರಂಭ

ಕಳೆದ ಮೂರು ವರ್ಷಗಳಿಂದ ಸ್ಥಗಿತಗೊಂಡಿರುವ ಪಟ್ಟಣದ ಶುಕ್ರವಾರದ ಸಂತೆಯನ್ನು ನ. 3 ರಿಂದ ಪುನರಾರಂಭ ಮಾಡಲು ತೀರ್ಮಾನಿಸಿತು.

K.R. Nagar   Sante Reopen on Nov 3  Friday  snr
Author
First Published Oct 13, 2023, 10:52 AM IST

 ಕೆ.ಆರ್ . ನಗರ  :  ಕಳೆದ ಮೂರು ವರ್ಷಗಳಿಂದ ಸ್ಥಗಿತಗೊಂಡಿರುವ ಪಟ್ಟಣದ ಶುಕ್ರವಾರದ ಸಂತೆಯನ್ನು ನ. 3 ರಿಂದ ಪುನರಾರಂಭ ಮಾಡಲು ತೀರ್ಮಾನಿಸಿತು.

ತಾಲೂಕು ಕಚೇರಿ ಸಭಾಂಗಣದಲ್ಲಿ ಶಾಸಕ ಡಿ. ರವಿಶಂಕರ್ ಅವರ ಅಧ್ಯಕ್ಷತೆಯಲ್ಲಿ ನಡೆದ ತಾಲೂಕು ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಈ ನಿರ್ಧಾರಕ್ಕೆ ಬರಲಾಯಿತು.

ಸಂತೆ ಆರಂಭವಾಗುತ್ತಿರುವ ಬಗ್ಗೆ ಕ್ಷೇತ್ರಾದ್ಯಂತ ವ್ಯಾಪಕವಾಗಿ ಕಂದಾಯ ಇಲಾಖೆಯ ಅಧಿಕಾರಿಗಳು ಪ್ರಚಾರ ಕೈಗೊಳ್ಳಬೇಕೆಂದು ಸೂಚನೆ ನೀಡಿದ ಶಾಸಕರು, ಇದರ ಜತೆಗೆ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು ಕೈಜೋಡಿಸಬೇಕೆಂದು ತಿಳಿಸಿದರು.

ಎಪಿಎಂಸಿ ಆವರಣದಲ್ಲಿ ಶುಕ್ರವಾರದ ಸಂತೆ ನಡೆಯುವ ದಿನಗಳಲ್ಲಿ ಕೆ.ಆರ್. ನಗರ ಪಟ್ಟಣದಲ್ಲಿ ತರಕಾರಿ ವ್ಯಾಪಾರ ಮಾಡದಂತೆ ನಿರ್ಬಂಧ ಹೇರಬೇಕೆಂದು ಪುರಸಭೆ ಮುಖ್ಯ ಅಧಿಕಾರಿಗೆ ಆದೇಶ ನೀಡಿದರು. ಸಂತೆ ಆರಂಭವಾದರೆ ಎಲ್ಲ ವಸ್ತುಗಳು ಸಾರ್ವಜನಿಕರಿಗೆ ಒಂದೇ ಸ್ಥಳದಲ್ಲಿ ದೊರೆಯುತ್ತದೆಯಲ್ಲದೆ, ರೈತರು ತಾವು ಬೆಳೆದ ತರಕಾರಿ, ಹೂವು ಮತ್ತು ಇತರೆ ಪದಾರ್ಥಗಳನ್ನು ನೇರವಾಗಿ ಗ್ರಾಹಕರಿಗೆ ಮಾರಾಟ ಮಾಡಲು ಅನುಕೂಲವಾಗಲಿದೆ ಎಂದು ಅವರು ತಿಳಿಸಿದರು.

ಈ ಸಂಬಂಧ ನಾಳೆಯಿಂದಲೆ ತಹಸೀಲ್ದಾರ್ ಮತ್ತು ಎಪಿಎಂಸಿ ಕಾರ್ಯದರ್ಶಿ ಅಗತ್ಯ ಪೂರ್ವ ಸಿದ್ಧತೆ ಕೈಗೊಂಡು ಕರಪತ್ರ ಮುದ್ರಿಸಿ ಎಲ್ಲ 34 ಗ್ರಾಪಂ ವ್ಯಾಪ್ತಿಯ ಗ್ರಾಮಗಳಿಗೆ ವಿತರಣೆ ಮಾಡಿ ನನಗೆ ವರದಿ ನೀಡಬೇಕೆಂದು ತಾಕೀತು ಮಾಡಿದರು.

ಎಲ್ಲ ಇಲಾಖೆಯ ಅಧಿಕಾರಿಗಳು ಕಚೇರಿಗೆ ಬರುವ ಸಾರ್ವಜನಿಕರಿಗೆ ಸಂತೆ ಪುನರಾರಂಭ ಆಗುತ್ತಿರುವ ಬಗ್ಗೆ ಮಾಹಿತಿ ನೀಡಬೇಕೆಂದು ಸಲಹೆ ನೀಡಿದ ಅವರು, ಈ ಹಿಂದಿನಂತೆಯೆ ಉತ್ತಮವಾಗಿ ಶುಕ್ರವಾರದ ಸಂತೆ ನಡೆಯಲು ಸರ್ವರು ಸಹಕಾರ ನೀಡಬೇಕೆಂದು ಕೋರಿದರು.

ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ತಮ್ಮ ಪಂಚಾಯಿತಿ ವ್ಯಾಪ್ತಿಯ ಎಲ್ಲ ಗ್ರಾಮಗಳಲ್ಲಿಯೂ ಧ್ವನಿವರ್ಧಕದ ಮೂಲಕ ಈ ವಿಚಾರವನ್ನು ವ್ಯಾಪಕವಾಗಿ ಪ್ರಚಾರ ಮಾಡಬೇಕೆಂದು ಹೇಳಿದರು.

ತಹಸೀಲ್ದಾರ್ ಸಿ.ಎಸ್. ಪೂರ್ಣಿಮಾ, ಎಪಿಎಂಸಿ ಕಾರ್ಯದರ್ಶಿ ಮಹೇಶ್, ಬಿಇಒ ಕೃಷ್ಣಪ್ಪ, ಪುರಸಭೆ ಮುಖ್ಯಾಧಿಕಾರಿ ಜಯಣ್ಣ, ಪುರಸಭೆ ಮಾಜಿ ಅಧ್ಯಕ್ಷ ನರಸಿಂಹರಾಜು, ತಾಲೂಕು ಕುರುಬರ ಸಂಘದ ಅಧ್ಯಕ್ಷ ಜೆ ಶಿವಣ್ಣ ಇದ್ದರು.

ಜಾನುವಾರು ಸಂತೆ ಆರಂಭ

ಹಾವೇರಿ (ಫೆ.3) : ಜಾನುವಾರುಗಳಲ್ಲಿ ಚರ್ಮ ಗಂಟು ರೋಗ ತಡೆಗಟ್ಟಲು ಕಳೆದ ಸೆಪ್ಟೆಂಬರ್‌ನಿಂದ ಜಿಲ್ಲೆಯಲ್ಲಿ ಜಾನುವಾರು ಸಂತೆ, ಜಾತ್ರೆ, ಸಾಗಾಣಿಕೆ ನಿಷೇಧಿಸಿ ಹೊರಡಿಸಿದ್ದ ನಿಷೇಧಾಜ್ಞೆಯನ್ನು ಜಿಲ್ಲಾಡಳಿ ಹಿಂದಕ್ಕೆ ಪಡೆದಿದೆ. ಇದರಿಂದ 5 ತಿಂಗಳ ಬಳಿಕ ಜಾನುವಾರು ಸಂತೆ ಆರಂಭಗೊಂಡಿದ್ದು, ದನಕರುಗಳ ಖರೀದಿ ಮತ್ತು ವ್ಯಾಪಾರಕ್ಕೆ ಅವಕಾಶ ಸಿಕ್ಕಿದ್ದಕ್ಕೆ ರೈತರು ಸಂತಸಗೊಂಡಿದ್ದಾರೆ.

ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಮುಂಗಾರು ಮತ್ತು ಹಿಂಗಾರು ಬೆಳೆ ಹಾನಿ ಅನುಭವಿಸಿದ್ದರ ನಡುವೆಯೇ ರೈತರು ಜಾನುವಾರುಗಳನ್ನು ಕಳೆದುಕೊಂಡು ತೀವ್ರ ಸಂಕಷ್ಟಅನುಭವಿಸಿದ್ದಾರೆ. ಲಕ್ಷಾಂತರ ರು. ಮೌಲ್ಯದ ಖಿಲಾರಿ ತಳಿಯ ಉಳುಮೆ ಎತ್ತುಗಳು, ಹತ್ತಾರು ಲೀಟರ್‌ ಹಾಲು ಹಿಂಡುತ್ತಿದ್ದ ಆಕಳುಗಳು, ಕರುಗಳು ಸೇರಿದಂತೆ ಚರ್ಮ ಗಂಟು ರೋಗದಿಂದ 3000 ಜಾನುವಾರುಗಳು ಮೃತಪಟ್ಟಿವೆ. ಜಾನುವಾರುಗಳ ಮೈಮೇಲೆ ಗಂಟು ಗಂಟಾಗಿ, ಅದರಿಂದ ರಕ್ತ ಸೋರುತ್ತಿದ್ದವು. ಮೇವು, ನೀರು ಬಿಟ್ಟು ಜಾನುವಾರುಗಳು ಮಲಗಿದಲ್ಲಿಂದ ಮೇಲೇಳುತ್ತಲೇ ಇರಲಿಲ್ಲ. ಸಾಂಕ್ರಾಮಿಕ ರೋಗವಾದ್ದರಿಂದ ಜಿಲ್ಲಾದ್ಯಂತ ವ್ಯಾಪಿಸಿ ರೈತರು ಕಂಗಾಲಾಗಿದ್ದರು. ರೋಗ ಹತೋಟಿಗೆ ತರಲೆಂದು ಕಳೆದ ಸೆಪ್ಟೆಂಬರ್‌ನಲ್ಲಿ ಜಿಲ್ಲಾಡಳಿತ ಜಾನುವಾರು ಸಂತೆ, ಜಾತ್ರೆ, ಸಾಗಾಣಿಕೆಗೆ ನಿಷೇಧಿಸಿ ಆದೇಶಿಸಿತ್ತು. ಇದೀಗ ರೋಗ ನಿಯಂತ್ರಣಕ್ಕೆ ಬಂದಿರುವುದರಿಂದ ಸಂತೆ ಪುನಾರಂಭಕ್ಕೆ ಅವಕಾಶ ನೀಡಲಾಗಿದೆ. ಇದರಿಂದ ರೈತರಲ್ಲಿ ಮಡುಗಟ್ಟಿದ್ದ ಆತಂಕ ದೂರವಾಗಿ ಎತ್ತು, ಆಕಳು ವ್ಯಾಪಾರಕ್ಕೆ ಮುಂದಾಗುತ್ತಿದ್ದಾರೆ.

625 ಗ್ರಾಮಗಳಲ್ಲಿ ಉಲ್ಬಣಿಸಿದ ರೋಗ: ಮುಂದವರೆದ ಜಾನುವಾರು ಸಂತೆ ನಿಷೇಧ

ಅತ್ಯಧಿಕ ಸಾವು

ಲಂಪಿ ಸ್ಕಿನ್‌ ತೀವ್ರಗೊಂಡ ಸಂದರ್ಭದಲ್ಲಿ ರಾಜ್ಯದಲ್ಲೇ ಅತ್ಯಧಿಕ ಜಾನುವಾರುಗಳ ಸಾವು ಜಿಲ್ಲೆಯಲ್ಲಿ ಸಂಭವಿಸಿತ್ತು. ಇದುವರೆಗೆ ಸುಮಾರು 3 ಸಾವಿರ ಜಾನುವಾರುಗಳು ರೋಗದಿಂದ ಸಾವನ್ನಪ್ಪಿವೆ. ಸುಮಾರು 26 ಸಾವಿರ ಜಾನುವಾರುಗಳಲ್ಲಿ ಲಂಪಿ ಸ್ಕಿನ್‌ ರೋಗ ಕಾಣಿಸಿಕೊಂಡಿತ್ತು. ರೋಗ ನಿಯಂತ್ರಣಕ್ಕಾಗಿ

ಜಿಲ್ಲೆಯಲ್ಲಿರುವ 306982 ಜಾನುವಾರುಗಳ ಪೈಕಿ 304434 ಜಾನುವಾರುಗಳಿಗೆ ಪಶು ಪಾಲನೆ ಮತ್ತು ಪಶುವೈದ್ಯ ಇಲಾಖೆ ಲಸಿಕೆ ಹಾಕಿದೆ. ಇದರಿಂದ ಜಾನುವಾರುಗಳಲ್ಲಿ ರೋಗದ ತೀವ್ರತೆ ಕಡಿಮೆಯಾಗಿದ್ದು, ರೋಗಗ್ರಸ್ಥ ಜಾನುವಾರುಗಳು ಸಂಖ್ಯೆ ಮತ್ತು ಮರಣ ಪ್ರಮಾಣವೂ 5 ತಿಂಗಳ ಬಳಿಕ ಗಣನೀಯವಾಗಿ ಇಳಿಕೆಯಾಗಿದೆ. ಪ್ರಸ್ತುತ ಸುಮಾರು 1200 ಜಾನುವಾರುಗಳಲ್ಲಿ ಕಾಯಿಲೆಯಿದ್ದರೂ ಗುಣಮುಖವಾಗುತ್ತಿವೆ. ಮೃತ ಜಾನುವಾರುಗಳಿಗೆ ಸರ್ಕಾರದಿಂದ ಪರಿಹಾರವನ್ನು ನೀಡಲಾಗಿದೆ.

Follow Us:
Download App:
  • android
  • ios