ಹಿರೇಕೆರೂರ(ಡಿ.05): ಭ್ರಷ್ಟಾಚಾರ, ಜಾತೀಯತೆ ಮತ್ತು ಬರೀ ಭರವಸೆಗಳ ಸರ್ಕಾರವನ್ನು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಬೇರು ಸಮೇತ ಕಿತ್ತು ಹಾಕೋಣ ಎಂದು ವಿಧಾನಸಭಾ ಮಾಜಿ ಅಧ್ಯಕ್ಷ ಕೆ.ಬಿ. ಕೋಳಿವಾಡ ಹೇಳಿದ್ದಾರೆ.

ಹಿರೇಕೆರೂರು ಪಟ್ಟಣದ ಗುರುಭವನದಲ್ಲಿ ನಡೆದ ಹಿರೇಕೆರೂರ ವಿಧಾನಸಭಾ ಕ್ಷೇತ್ರದ ಕಾರ್ಯಕರ್ತರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ರಾಜ್ಯ ಮತ್ತು ದೇಶದಲ್ಲಿ ಇರುವುದು ಕೇವಲ ಭರವಸೆಗಳ ನೀಡುವ ಸರ್ಕಾರಗಳಾಗಿವೆ. ರೈತರ ಬಗ್ಗೆ ಕಾಳಜಿ ಇಲ್ಲದ ದರ್ಪ, ಅಧಿಕಾರ ಮತ್ತು ಜನಕಾಳಜಿ ಇಲ್ಲದ ಜನನಾಯಕರಿಂದ ಕೂಡಿವೆ. ಸಾಮಾನ್ಯ ಜನರ ಹಿತಾಸಕ್ತಿ ಕಿಂಚಿತ್ತು ಇಲ್ಲದಂತಾಗಿದೆ. ಇಂದಿನ ಯುವಕರಿಗೆ 18 ವರ್ಷಕ್ಕೆ ಮತದಾನದ ಹಕ್ಕು ನೀಡಿದ್ದು ಕಾಂಗ್ರೆಸ್‌ ಸರ್ಕಾರ ಅದ್ದರಿಂದ ಯುವಕರು ದೇಶಕ್ಕೆ ಸ್ವಾತಂತ್ರ್ಯ ತಂದು ಕೊಡುವಲ್ಲಿ ಕಾಂಗ್ರೆಸ್‌ನ ಪಾತ್ರದ ಬಗ್ಗೆ ತಿಳಿದುಕೊಳ್ಳಬೇಕು ಎಂದು ತಿಳಿಸಿದ್ದಾರೆ.

ಸದ್ಯ ಇರುವ ಬಿಜೆಪಿ ಸರ್ಕಾರ ರೈತ ವಿರೋಧಿ ಆಗಿದೆ. ಭೂಕಾಯಿದೆ ತಿದ್ದುಪಡಿ ಮಾಡುವುದರ ಮೂಲಕ ರೈತ ಸಮುದಾಯಕ್ಕೆ ಅನ್ಯಾಯ ಎಸಗುತ್ತಿದೆ. ಉಳುವವನೇ ಒಡೆಯ ಹೋಗಿ ಉಳ್ಳವನೇ ಒಡೆಯ ಎಂಬುದೇ ಬಿಜೆಪಿ ಸರ್ಕಾರದ ಧ್ಯೇಯವಾಗಿದೆ ಅಲ್ಲದೆ ಜಿಎಸ್‌ಟಿ ಜಾರಿಗೆ ತರುವ ಮೂಲಕ ದೇಶದ ಕಡು ಬಡವನಿಗೂ ಸಹ ತೆರಿಗೆ ಹೇರಿ ಅನ್ಯಾಯ ಮಾಡುತ್ತಿದೆ. ಆದರೆ ಕಾಂಗ್ರೆಸ್‌ ಪಕ್ಷ ದೇಶದ ಕಡು ಬಡವನು ಸಹ ಸೌಖ್ಯದಿಂದ ಇರಬೇಕು, ಸರ್ವರಿಗೂ ಸಮಪಾಲು ಎಂಬಂತೆ ಸಮಾಜದ ಎಲ್ಲ ವರ್ಗದವರಿಗೂ ಸಹ ಸಮ ಪಾಲು ನೀಡುವುದೇ ನಮ್ಮ ತತ್ವ ಸಿದ್ಧಾಂತ. ಗ್ರಾಪಂ ಚುನಾವಣೆಯಲ್ಲಿ ಕಾರ್ಯಕರ್ತರು ಗ್ರಾಮಗಳಲ್ಲಿ ಎಲ್ಲ ಭಿನ್ನಾಭಿಪ್ರಾಯಗಳನ್ನು ಮರೆತು ಸೂಕ್ತ ಮತ್ತು ಯೋಗ್ಯ ಕಾಂಗ್ರೆಸ್‌ ಬೆಂಬಲಿತ ವ್ಯಕ್ತಿಯನ್ನು ಆರಿಸಿ ತರಬೇಕು ದೇಶ ಮತ್ತು ರಾಜ್ಯದಲ್ಲಿ ಇರುವ ಜನವಿರೋಧಿ ಸರ್ಕಾರವನ್ನು ಕಿತ್ತೆಸೆಯಲು ಗ್ರಾಪಂ ಚುನಾವಣೆಯು ಭದ್ರ ಬುನಾದಿಯನ್ನಾಗಿ ಮಾಡಿ ಎಂದು ಕರೆ ನೀಡಿದರು.

ಸರ್ಕಾರದ ವಿರುದ್ಧ ಸೆಡ್ಡು ಹೊಡೆದ ಮತ್ತೋರ್ವ ಬಿಜೆಪಿ ಶಾಸಕ

ಹಿರೇಕೇರೂರ ಮಾಜಿ ಶಾಸಕ ಬಿ.ಎಚ್‌. ಬನ್ನಿಕೋಡ ಮಾತನಾಡಿ, ಕೃಷಿ ಸಚಿವರು ರೈತರ ಬಗ್ಗೆ ಮಾತನಾಡಿರುವದು ಖಂಡನೀಯ. ಸರ್ಕಾರ ರೈತರಿಗೆ ಮೂಲಭೂತ ಸೌಕರ್ಯ ಒದಗಿಸಿದಲ್ಲಿ ಯಾವ ರೈತರು ಆತ್ಮಹತೆಗೆ ಶರಣಾಗುವುದಿಲ್ಲ. ಆದರೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತರಿಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸುವಲ್ಲಿ ವಿಫಲವಾಗಿವೆ ಎಂದು ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಕಾರ್ಯಕ್ರಮದಲ್ಲಿ ಬ್ಯಾಡಗಿ ತಾಲೂಕು ಮಾಜಿ ಶಾಸಕ ಬಸವರಾಜ ಶಿವಣ್ಣನವರ, ಹಾವೇರಿ ಮಾಜಿ ಶಾಸಕ ರುದ್ರಪ್ಪ ಲಮಾಣಿ, ಹಾವೇರಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಏಕನಾಥ ಬಾನುವಳ್ಳಿ, ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಎಂ.ಎಂ. ಹಿರೇಮಠ, ತಾಲೂಕಿನ ಕಾಂಗ್ರೆಸ್‌ ಮುಖಂಡರಾದ ಎಸ್‌.ಕೆ. ಕರಿಯಣ್ಣನವರ, ಪ್ರಕಾಶ ಬನ್ನಿಕೋಡ, ಎಸ್‌.ಬಿ. ತಿಪ್ಪಣ್ಣನವರ, ಪಿ.ಡಿ. ಬಸನಗೌಡ್ರ, ಕುಬೇರಪ್ಪ ಕಂಬಳಿ, ಬಿ.ಎನ್‌. ಬಣಕಾರ, ದಿಗ್ವಿಜಯ ಹತ್ತಿ, ಪ್ರೇಮ ಪಾಟೀಲ, ಶಶಿಕಲಾ ಆರೀಕಟ್ಟಿಹಾಗೂ ತಾಲೂಕಿನ ಕಾಂಗ್ರೆಸ್‌ ಕಾರ್ಯಕರ್ತರು ಭಾಗವಹಿಸಿದ್ದರು.