*  ದಾಸರಹಳ್ಳಿ ವಲಯದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿ*  45 ದಿನ ಕಾಲಾವಕಾಶ ಕೇಳಿದ ಬಿಬಿಎಂಪಿ ಪರ ವಕೀಲ *  ವಿಚಾರಣೆಯನ್ನು ನಾಲ್ಕು ವಾರ ಮುಂದೂಡಿದ ನ್ಯಾಯಾಲಯ  

ಬೆಂಗಳೂರು(ಜು.03): ನಗರದ ದಾಸರಹಳ್ಳಿ ವಲಯದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗಳನ್ನು ಜು. 31 ರೊಳಗೆ ಪೂರ್ಣಗೊಳಿಸುವಂತೆ ಬಿಬಿಎಂಪಿಗೆ ಹೈಕೋರ್ಟ್‌ ಶುಕ್ರವಾರ ನಿರ್ದೇಶಿಸಿದೆ.

ದಾಸರಹಳ್ಳಿ ವಲಯದಲ್ಲಿ ಹದಗೆಟ್ಟ ರಸ್ತೆಗಳ ದುರಸ್ತಿಗೆ ಕ್ರಮ ಕೈಗೊಳ್ಳಲು ಬಿಬಿಎಂಪಿ ಹಾಗೂ ಸರ್ಕಾರಕ್ಕೆ ನಿರ್ದೇಶಿಸುವಂತೆ ಕೋರಿ ವಕೀಲ ಅಶ್ವತ್ಥ್‌ ನಾರಾಯಣ ಚೌಧರಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ, ಮುಖ್ಯ ನ್ಯಾಯಮೂರ್ತಿ ರಿತುರಾಜ್‌ ಅವಸ್ಥಿ ಅವರ ನೇತೃತ್ವದ ವಿಭಾಗೀಯ ಪೀಠದ ಮುಂದೆ ಶುಕ್ರವಾರ ವಿಚಾರಣೆಗೆ ಬಂದಿತ್ತು.

Bengaluru: ರಸ್ತೆ ಗುಂಡಿ ಮುಚ್ಚಲು ಮಿಲಿಟರಿಗೆ ವಹಿಸ್ತೀವಿ: ಹೈಕೋರ್ಟ್‌ ಸಿಡಿಮಿಡಿ

ವಿಚಾರಣೆ ವೇಳೆ ಬಿಬಿಎಂಪಿ ಪರ ವಕೀಲ ವಿ. ಶ್ರೀನಿಧಿ ಹಾಜರಾಗಿ, ದಾಸರಹಳ್ಳಿ ವಲಯದಲ್ಲಿ ಕೆಟ್ಟಸ್ಥಿತಿಯಲ್ಲಿರುವ ರಸ್ತೆಗಳ ಅಭಿವೃದ್ಧಿಗೆ ಕಾರ್ಯ ಯೋಜನೆ ರೂಪಿಸಲಾಗಿದೆ. ಅದರ ಪ್ರಕಾರ ಮೇ 30ರೊಳಗೆ ಕಾಮಗಾರಿಗಳು ಪೂರ್ಣಗೊಳ್ಳಬೇಕಿತ್ತು. ಆದರೆ, ಮಳೆ ಮತ್ತಿತರ ಕಾರಣಗಳಿಂದ ಕೆಲಸಗಳನ್ನು ಸಂಪೂರ್ಣವಾಗಿ ಮುಗಿಸಲು ಸಾಧ್ಯವಾಗಿಲ್ಲ. ಕಾಮಗಾರಿಗಳು ಪ್ರಗತಿಯಲ್ಲಿದ್ದು, ಪೂರ್ಣಗೊಳಿಸಲು 45 ದಿನ ಕಾಲಾವಕಾಶ ನೀಡಬೇಕು ಎಂದು ನ್ಯಾಯಪೀಠವನ್ನು ಕೋರಿದರು.

ಅದಕ್ಕೆ ನ್ಯಾಯಪೀಠ, ಅಷ್ಟು ಸಮಯಾವಕಾಶ ನೀಡಲು ಸಾಧ್ಯವಿಲ್ಲ. ಒಂದು ತಿಂಗಳು ಕಾಲಾವಕಾಶ ನೀಡಲಾಗುವುದಷ್ಟೇ. ಜು.31ರೊಳಗೆ ರಸ್ತೆ ಅಭಿವೃದ್ಧಿ ಕಾಮಗಾರಿ ಮುಗಿಸಿ ನ್ಯಾಯಾಲಯಕ್ಕೆ ವರದಿ ಸಲ್ಲಿಸಬೇಕು ಎಂದು ಬಿಬಿಎಂಪಿಗೆ ನಿರ್ದೇಶಿಸಿ, ವಿಚಾರಣೆಯನ್ನು ನಾಲ್ಕು ವಾರ ಮುಂದೂಡಿತು.