ಆಗಸ್ಟ್‌ನಲ್ಲಿ ತುಮಕೂರಿನಲ್ಲಿ ಉದ್ಯೋಗ ಮೇಳ: ಡೀಸಿ
ಜಿಲ್ಲೆಯಲ್ಲಿ ಆಗಸ್ಟ್ ಮಾಹೆಯಲ್ಲಿ ಉದ್ಯೋಗ ಮೇಳ ಹಮ್ಮಿಕೊಳ್ಳಲು ಉದ್ದೇಶಿಸಲಾಗಿದೆ ಎಂದು ಜಿಲ್ಲಾಧಿಕಾರಿ ಶ್ರೀನಿವಾಸ ಕೆ. ತಿಳಿಸಿದರು.
ತುಮಕೂರು : ಜಿಲ್ಲೆಯಲ್ಲಿ ಆಗಸ್ಟ್ ಮಾಹೆಯಲ್ಲಿ ಉದ್ಯೋಗ ಮೇಳ ಹಮ್ಮಿಕೊಳ್ಳಲು ಉದ್ದೇಶಿಸಲಾಗಿದೆ ಎಂದು ಜಿಲ್ಲಾಧಿಕಾರಿ ಶ್ರೀನಿವಾಸ ಕೆ. ತಿಳಿಸಿದರು.
ಜಿಲ್ಲಾಧಿಕಾರಿಗಳ ಕಚೇರಿಯ ಕೆಸ್ವಾನ್ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ವೀಡಿಯೋ ಕಾನ್ಫರೆನ್ಸ್ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಉದ್ಯೋಗ ಮೇಳದಲ್ಲಿ ಅರ್ಹ ಯುವಕ/ಯುವತಿಯರಿಗೆ ಸ್ಥಳದಲ್ಲೇ ಉದ್ಯೋಗಾವಕಾಶ ನೀಡಲಾಗುವುದು. ಎಸ್.ಎಸ್.ಎಲ್.ಸಿ ಉತ್ತೀರ್ಣ ಆಥವಾ ಅನುತ್ತೀರ್ಣರಾದವರು ಸೇರಿದಂತೆ ಉನ್ನತ ಶಿಕ್ಷಣ ಪಡೆದ ಪ್ರತಿಯೊಬ್ಬರು ಸದುಪಯೋಗ ಪಡಿಸಿಕೊಳ್ಳಬೇಕು, ಜಿಲ್ಲೆಯಲ್ಲಿರುವ ಬೃಹತ್, ಮಧ್ಯಮ, ಸಣ್ಣ ಪ್ರಮಾಣದ ಕ್ಯೆಗಾರಿಕೆಗಳ ಮಾಹಿತಿ ಪಡೆದ ಜಿಲ್ಲಾಧಿಕಾರಿಗಳು, ಸೆಪ್ಟಂಬರ್-2023ರ ಮಾಹೆಯಲ್ಲಿ ಜಿಲ್ಲೆಯ ಕ್ಯೆಗಾರಿಕೋದ್ಯಮಿಗಳ ಸಮಾವೇಶ ನಡೆಸಲು ಅಗತ್ಯ ಸಿದ್ಧತೆ ಮಾಡಿಕೊಳ್ಳುವಂತೆ, ಜಿಲ್ಲಾ ಕೈಗಾರಿಕಾ ಇಲಾಖೆಯ ಜಂಟಿ ನಿರ್ದೇಶಕರಿಗೆ ಸೂಚಿಸಿದರು.
ಬಾಪೂಜಿ ಕೇಂದ್ರಗಳು ಸೇರಿದಂತೆ ಜಿಲ್ಲೆಯ ಜಿಲ್ಲೆಯ ಎಲ್ಲಾ ಸೇವಾ ಕೇಂದ್ರಗಳು ಸಾರ್ವಜನಿಕರಿಗೆ ಅನುಕೂಲವಾಗುವಂತೆ ವ್ಯವಸ್ಥಿತವಾಗಿ ಕಾರ್ಯನಿರ್ವಹಿಸಬೇಕು, ಸೇವಾ ಕೇಂದ್ರಗಳ ಅವಶ್ಯಕತೆ ಇದ್ದಲ್ಲಿ ಸ್ಥಳೀಯ ಹಾಗೂ ನಗರ ಸಂಸ್ಥೆಗಳ ವರದಿ ಸಲ್ಲಿಸಬೇಕು, ಗೃಹಲಕ್ಷ್ಮೀ ನೋಂದಣಿಯಲ್ಲಿ ಶೇ.70ರಷ್ಟುಪ್ರಗತಿ ಸಾಧಿಸಲಾಗಿದ್ದು, ಮುಂದಿನ ವಾರದೊಳಗೆ ಗೃಹಲಕ್ಷ್ಮೀ ನೋಂದಣಿಯಲ್ಲಿ ಜಿಲ್ಲೆಯು ರಾಜ್ಯಮಟ್ಟದಲ್ಲಿ ಮೊದಲನೇ ಸ್ಥಾನಕ್ಕೇರುವಂತೆ ಶ್ರಮಿಸುವಂತೆ ಸೂಚಿಸಿದರು.
ಜಿಲ್ಲೆಯ ಪ್ರತಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಆಶ್ರಯ ಯೋಜನೆಯ ಅನುಷ್ಠಾನಕ್ಕಾಗಿ 5 ಎಕರೆ ಜಾಗವನ್ನು ಗುರ್ತಿಸಿ ವರದಿ ಸಲ್ಲಿಸುವಂತೆ ಎಲ್ಲಾ ತಹಸೀಲ್ದಾರ್‌ಗಳಿಗೆ ಸೂಚಿಸಲಾಗಿತ್ತು. ಇನ್ನೂ ಹಲವು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಜಾಗ ಗುರ್ತಿಸುವುದು ಬಾಕಿ ಇದ್ದು, ಮುಂದಿನ ಸಭೆಯಷ್ಟರಲ್ಲಿ ಜಾಗ ಗುರ್ತಿಸಿ ಕಡತದಲ್ಲಿ ಸಲ್ಲಿಸುವಂತೆ ಸೂಚಿಸಿದರು.
ತಿಪಟೂರು, ಗುಬ್ಬಿ, ಚಿ.ನಾ.ಹಳ್ಳಿ ತಾಲೂಕುಗಳ ವ್ಯಾಪ್ತಿಯ ಮೈನಿಂಗ್ ಫಂಡ್‌ನ್ನು ಸಾರ್ವಜನಿಕರಿಗೆ ಉಪಯೋಗವಾಗುವಂತೆ ಸದ್ಬಳಕೆ ಮಾಡಬೇಕು, ಈ ತಾಲೂಕುಗಳಲ್ಲಿ ಗೃಹ ನಿರ್ಮಾಣ ಮಾಡಲು ಜಾಗ ಗುರ್ತಿಸಿದರೆ, ರಾಜೀವ್ ಗಾಂಧಿ ವಸತಿ ನಿಗಮದಿಂದ ಎಲ್ಲರಿಗೂ ಶೇ. 100ರಷ್ಟು ವಸತಿ ಸೌಲಭ್ಯ ದೊರಕುತ್ತದೆ. ಜಿಲ್ಲೆಯ ಕೆಲವು ಸರ್ಕಾರಿ ಶಾಲೆ, ಕಾಲೇಜು ಸೇರಿದಂತೆ ಸರ್ಕಾರಿ ಸಂಸ್ಥೆಗಳ ಆಸ್ತಿಗಳಿಗೆ ಖಾತೆ ಮಾಡಿಸದೆ ಇರುವುದು ಕಂಡು ಬಂದಿದ್ದು, ಶೀಘ್ರವಾಗಿ ತಹಸೀಲ್ದಾರ್‌ಗಳು, ಕಾರ್ಯನಿರ್ವಹಣಾಧಿಕಾರಿಗಳು ಸರ್ಕಾರಿ ಜಾಗಗಳ 11ಬಿ ಖಾತೆ ಮಾಡಿಸಿ ವರದಿ ಸಲ್ಲಿಸಬೇಕು, ಒತ್ತುವರಿಯಾಗಿರುವು ಕೆರೆಗಳ ಜಾಗವನ್ನು ತೆರವುಗೊಳಿಸುವಂತೆ ತಿಳಿಸಿದರು.
ಈಗಾಗಲೇ ಇ-ಆಫೀಸ್ ಅನುಷ್ಠಾನಗೊಂಡಿರುವ ಕಚೇರಿಗಳು, ಇ-ಆಫೀಸ್ ಮೂಲಕ ಕಡತಗಳ ಕಡ್ಡಾಯವಾಗಿ ಸಲ್ಲಿಸಬೇಕು. ಇದರಿಂದ ನಿಗದಿತ ಸಮಯದಲ್ಲಿ ಕಡತಗಳು ಇತ್ಯರ್ಥವಾಗಿ ಅನುಕೂಲವಾಗಲಿದೆ. ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ಬಾಕಿ ಇರುವ ಭೂಮಿಗೆ ಸಂಬಂಧಿಸಿದ ಪ್ರಕರಣಗಳಿಗೆ ಶೀಘ್ರ ಪರಿಹಾರ ಒದಗಿಸಿ, ವಿಲೇವಾರಿ ಮಾಡಬೇಕು, ಗೃಹ ನಿರ್ಮಾಣದ ಹಂತಗಳಲ್ಲಿ ಬಾಕಿ ಇರುವ ಜಿ.ಪಿ.ಎಸ್.ನ್ನು ಪೂರ್ಣಗೊಳಿಸಬೇಕು, ಭೌತಿಕ ವರದಿ ಸಲ್ಲಿಸುವಂತೆ ಅಪರ ಜಿಲ್ಲಾಧಿಕಾರಿ ಶಿವಾನಂದ ಬಿ. ಕರಾಳೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ.ಪ್ರಭು ಮಾತನಾಡಿ, ಜಿಲ್ಲಾ ವ್ಯಾಪ್ತಿಯಲ್ಲಿ ಆಶ್ರಯ ಯೋಜನೆಯಡಿ ಪ್ರತಿ ತಾಲೂಕು ವ್ಯಾಪ್ತಿಯಲ್ಲಿ ಕನಿಷ್ಠ 5000 ಮನೆಗಳ ನಿರ್ಮಿಸಲಾಗುವುದು, ತಹಸೀಲ್ದಾರ್ ಹಾಗೂ ಕಾರ್ಯನಿರ್ವಹಣಾಧಿಕಾರಿಗಳು ಇನ್ನೂ ಒಂದು ತಿಂಗಳೊಳಗೆ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಜಾಗ ಗುರುತಿಸಬೇಕು ಎಂದು ಸೂಚಿಸಿದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಶ್ರೀಧರ್, ಜಿಲ್ಲಾ ಕಾರ್ಮಿಕಾಧಿಕಾರಿ ರಮೇಶ್, ಎಡಿಎಲ್‌ಆರ್ ಶಿವಶಂಕರ್, ಶಿರಸ್ತೇದಾರ ಎನ್.ನರಸಿಂಹರಾಜು ಸೇರಿದಂತೆ ಜಿಲ್ಲೆಯ ಎಲ್ಲಾ ಉಪವಿಭಾಗಾಧಿಕಾರಿಗಳು, ತಹಸೀಲ್ದಾರ್‌ಗಳು, ಕಾರ್ಯನಿರ್ವಹಣಾಧಿಕಾರಿಗಳು, ಭೂಸ್ವಾಧೀನಾಧಿಕಾರಿಗಳು, ಜಿಲ್ಲಾ ಮತ್ತು ತಾಲೂಕು ಮಟ್ಟದ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.