ತಾಳಿಕೋಟೆ: ಮಹಿಳೆಗೆ ವಂಚಿಸಿ 4 ಲಕ್ಷ ಮೌಲ್ಯದ ಚಿನ್ನಾಭರಣ ಕದ್ದೊಯ್ದ ಖದೀಮರು!
4 ಲಕ್ಷ ಮೌಲ್ಯದ ಚಿನ್ನಾಭರಣ ಪಂಗನಾಮ| ಚಿನ್ನಾಭರಣ ತೊಳೆದು ಸ್ವಚ್ಛ ಮಾಡುತ್ತೇವೆಂದು ಮಹಿಳೆಯರನ್ನು ನಂಬಿಸಿ ವಂಚನೆ ಮಾಡಿದ ಖದೀಮರು| ಜಿಲ್ಲೆಯ ತಾಳಿಕೋಟೆ ಪಟ್ಟಣದಲ್ಲಿ ನಡೆದ ಘಟನೆ| ಅನ್ನಪೂರ್ಣಾ ವಂಚನೆಗೊಳಗಾದ ಮಹಿಳೆ|
ತಾಳಿಕೋಟೆ(ಜ.02): ಚಿನ್ನಾಭರಣವನ್ನು ಹೊಳೆಯುವಂತೆ ಸ್ವಚ್ಛ ಮಾಡಿಕೊಡುತ್ತೇವೆ ಎಂದು ಮಹಿಳೆಯರನ್ನು ನಂಬಿಸಿ 4.07 ಲಕ್ಷ ಮೌಲ್ಯದ ಸುಮಾರು 11 ತೊಲೆ ಚಿನ್ನಾಭರಣ ದೋಚಿ ಕುಟುಂಬವೊಂದಕ್ಕೆ ಪಂಗನಾಮ ಹಾಕಿದ ಘಟನೆ ಪಟ್ಟಣದಲ್ಲಿ ಮಂಗಳವಾರ ನಡೆದಿದ್ದು, ಪಟ್ಟಣದ ಜನರು ಭೀತಿಗೊಂಡಿದ್ದಾರೆ.
ಪಟ್ಟಣದ ನಾಗರಕಲ್ಲ ಬಡಾವಣೆಯ ಅನ್ನಪೂರ್ಣಾ ಲೋಕರೆ ಎಂಬಾತರ ಮನೆಯಲ್ಲಿ ಈ ಘಟನೆ ನಡೆದಿದೆ. 2.50 ಲಕ್ಷ ಕಿಮ್ಮತ್ತಿನ 7 ತೊಲೆಯ ಎರಡು ಪಾಟ್ಲಿ ಬಳೆಗಳು, 1.48 ಲಕ್ಷ ಮೌಲ್ಯದ 4 ತೊಲೆಯ ಬಂಗಾರದ ತಾಳಿಸರ ಸೇರಿ ಒಟ್ಟು 4.07 ಲಕ್ಷ ಮೌಲ್ಯದ 11 ತೊಲೆ ಚಿನ್ನಾಭರಣವನ್ನು ಯಾಮಾರಿಸಿದ್ದಾರೆ.
ವಂಚನೆ ಮಾಡಿದ್ದು ಹೇಗೆ?:
ಪಟ್ಟಣದ ನಾಗರಕಲ್ಲ ಬಡಾವಣೆಯ ಅನ್ನಪೂರ್ಣಾ ಲೋಕರೆ ಎಂಬಾತರ ಮನೆಗೆ ಆಗಮಿಸಿದ ಕನ್ನಡ ಮಾತನಾಡುವ ಇಬ್ಬರು ಆರೋಪಿಗಳು, ತಾವು ಕಂಪನಿಯೊಂದರಿಂದ ಜಾಹೀರಾತಿಗಾಗಿ ಬಂದಿದ್ದೇವೆ. ಚಿನ್ನಾಭರಣ ಸ್ವಚ್ಛ ಮಾಡಿಕೊಡುತ್ತೇವೆ ಎಂದು ನಂಬಿಸಿದ್ದಾರೆ. ಚಿನ್ನಾಭರಣವನ್ನು ಮನೆಯಲ್ಲಿ ಕುಕ್ಕರನಲ್ಲಿ ಹಾಕಿಸಿ ಅದನ್ನು ಗ್ಯಾಸಿನ ಮೇಲೆ ಕಾಯಿಸಿಕೊಂಡು ಬರಲು ಹೇಳಿದ್ದಾರೆ. ಅದರಂತೆ ಅನ್ನಪೂರ್ಣಾ ಹಾಗೂ ಅವರ ಸೊಸೆ ಅನಿತಾ ಗ್ಯಾಸಿನ ಮೇಲೆ ಕಾಯಿಸಲಿಕ್ಕೆ ಇಟ್ಟಿದ್ದಾರೆ.
ಅನ್ನಪೂರ್ಣಾ ಅಡುಗೆ ಮನೆಯಿಂದ ಹೊರಬಂದು ನೋಡುವಷ್ಟರಲ್ಲಿ ಆರೋಪಿಗಳು ಅಲ್ಲಿಂದ ಕಾಲ್ಕಿತ್ತಿದ್ದಾರೆ. ಗಾಬರಿಗೊಂಡ ಅನ್ನಪೂರ್ಣಾ ಅಡುಗೆ ಮನೆಗೆ ಹೋಗಿ ಗ್ಯಾಸಿನ ಮೇಲಿನ ಕುಕ್ಕರ ತೆಗೆದು ನೋಡಿದರೆ ಚಿನ್ನಾಭರಣವೇ ಇಲ್ಲ. ಇದರಿಂದ ಚೀರಾಟ ನಡೆಸಿದ್ದಾರೆ. ಮಗ ಶ್ರೀನಿವಾಸನನ್ನು ಮನೆಗೆ ಕರೆಸಿ ಬೈಕ್ ಮೇಲೆ ಊರೆಲ್ಲ ಸುತ್ತಿದರೂ ಆರೋಪಿಗಳ ಸುಳಿವೇ ಸಿಕ್ಕಿಲ್ಲ. ಈ ಕುರಿತು ತಾಳಿಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪಿಎಸೈ ವಸಂತ ಬಂಡಗಾರ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಹೆಚ್ಚಿನ ಮಾಹಿತಿ ಪಡೆದು ತನಿಖೆ ಕೈಗೊಂಡಿದ್ದಾರೆ.
ಈ ಬಗ್ಗೆ ಮಾತನಾಡಿದ ತಾಳಿಕೋಟೆ ಪಿಎಸೈ ವಸಂತ ಬಂಡಗಾರ ಅವರು, ಅಪರಾಧ ತಡೆಯಲು ಸಾಕಷ್ಟು ತಿಳಿವಳಿಕೆ ನೀಡುತ್ತಿದ್ದರೂ ಮೋಸಕ್ಕೆ ಒಳಗಾಗುತ್ತಿರುವುದು ವಿಷಾದಕರ. ಈ ವಂಚನೆ ಪ್ರಕರಣಕ್ಕೆ ಸಂಬಂಧಿಸಿದ ಆರೋಪಿಗಳ ಪತ್ತೆಗಾಗಿ ತನಿಖೆ ಚುರುಕುಗೊಳಿಸಿದ್ದೇವೆ ಎಂದು ತಿಳಿಸಿದ್ದಾರೆ.