ಬಳ್ಳಾರಿ(ಮಾ.18): ಕೊರೋನಾ ವೈರಸ್‌ ಬಿಸಿಲೂರಿನ ಜೀನ್ಸ್‌ ಉದ್ಯಮಕ್ಕೂ ಸಂಕಷ್ಟ ತಂದೊಡ್ಡಿದೆ! ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೊರೋನಾ ಸದ್ದು ಮಾಡುತ್ತಿರುವುದರಿಂದ ವಿದೇಶಗಳಿಂದ ಬರುತ್ತಿದ್ದ ಜೀನ್ಸ್‌ಗೆ ಬೇಕಾದ ಕಚ್ಚಾ ಸಾಮಾಗ್ರಿಗಳು ಸ್ಥಗಿತವಾಗಿದ್ದು ನಿತ್ಯ ಸಾವಿರಾರು ಕಾರ್ಮಿಕರು ಕಾರ್ಯ ನಿರ್ವಹಿಸುವ ಜೀನ್ಸ್‌ ವಾಷಿಂಗ್‌ ಯೂನಿಟ್‌ಗಳು ಏದುಸಿರು ಬಿಡುತ್ತಿವೆ. ಪರಿಸ್ಥಿತಿ ಹೀಗೆಯೇ ಮುಂದುವರಿದರೆ ಜೀನ್ಸ್‌ ಯೂನಿಟ್‌ಗಳನ್ನು ಮುಚ್ಚುವ ಹಂತ ತಲುಪಲಿದೆ ಎಂದು ಉದ್ಯಮಿಗಳು ಆತಂಕ ವ್ಯಕ್ತಪಡಿಸುತ್ತಾರೆ.

ಕೊರೋನಾ ಹಿನ್ನೆಲೆ: ಬೇಲೂರು ಚನ್ನಕೇಶವ ರಥೋತ್ಸವ ರದ್ದು

ಗುಣಮಟ್ಟ ಹಾಗೂ ಹೊಲಿಗೆಯಿಂದಾಗಿ ಬಳ್ಳಾರಿ ಜೀನ್ಸ್‌ ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದೆ. ನಗರದ ಹೊರ ವಲಯದಲ್ಲಿ 60ಕ್ಕೂ ಹೆಚ್ಚು ಜೀನ್ಸ್‌ ವಾಷಿಂಗ್‌ ಯೂನಿಟ್‌ಗಳಿವೆ. 750ಕ್ಕೂ ಹೆಚ್ಚು ಜೀನ್ಸ್‌ ಮಿಷನ್‌ಗಳು ಹಗಲಿರುಳನ್ನದೆ ಕಾರ್ಯನಿರ್ವಹಿಸುತ್ತವೆ. ಜೀನ್ಸ್‌ ಉದ್ಯಮದ ಮೇಲೆಯೇ ನಗರ ಹಾಗೂ ಸುತ್ತಮುತ್ತಲ ಗ್ರಾಮೀಣ ಭಾಗದ ಸುಮಾರು 2 ಲಕ್ಷ ಜನರು ಆಶ್ರಯಿಸಿದ್ದಾರೆ. ಜೀನ್ಸ್‌ ಉದ್ಯಮವನ್ನೇ ಆಶ್ರಯಿಸಿಕೊಂಡಿರುವ ಅನೇಕ ಉದ್ಯಮಿಗಳು ಇದ್ದಾರೆ. ಆದರೆ, ಕೊರೋನಾ ವೈರಸ್‌ನಿಂದಾಗಿ ಚೀನಾ, ಪಾಕಿಸ್ತಾನ, ದುಬೈನಿಂದ ಬರುತ್ತಿದ್ದ ಜೀನ್ಸ್‌ ಬಳಕೆಯ ಕಚ್ಚಾ ಸಾಮಾಗ್ರಿಗಳು ಹಾಗೂ ಕಲ​ರ್ಸ್‌ಗಳ ಆಮದು, ರಫ್ತು ಸ್ಥಗಿತಗೊಂಡಿದೆ.

ಕಚ್ಚಾ ವಸ್ತುಗಳಿಲ್ಲದೆ ಜೀನ್ಸ್‌ ವಾಷಿಂಗ್‌ ಕೆಲಸ ಮುಂದುವರಿಸಲು ಸಾಧ್ಯವೇ ಇಲ್ಲ. ಸೌದಿ ಅರೇಬಿಯಾ, ಇರಾನ್‌ ಸೇರಿದಂತೆ ಅನೇಕ ದೇಶಗಳು ಹಾಗೂ ದೇಶದ ನಾನಾ ರಾಜ್ಯಗಳಿಂದ ಸಾಕಷ್ಟುಪ್ರಮಾಣದ ಜೀನ್ಸ್‌ ಪ್ಯಾಂಟ್‌, ಶರ್ಟ್‌ಗಳ ಬೇಡಿಕೆ ಇದೆಯಾದರೂ ಆಮದು ಹಾಗೂ ರಫ್ತು ಬಂದ್‌ ಆಗಿರುವುದರಿಂದ ಸಾಕಷ್ಟುಸಮಸ್ಯೆ ಎದುರಿಸುವಂತಾಗಿದೆ ಎಂದು ಉದ್ಯಮಿಗಳು ಬೇಸರ ವ್ಯಕ್ತಪಡಿಸುತ್ತಾರೆ. ಜೀನ್ಸ್‌ ಉದ್ಯಮಕ್ಕೆ ನಾನಾ ವಿಘ್ನಗಳು ಎದುರಾಗುತ್ತಲೇ ಇವೆ. ಕಳೆದ ವರ್ಷ ನೀರಿನ ಸಮಸ್ಯೆಯಿಂದ ಜೀನ್ಸ್‌ ಉದ್ಯಮ ಸಾಕಷ್ಟುಸಮಸ್ಯೆ ಎದುರಿಸುವಂತಾಯಿತು. ಬೇಸಿಗೆಯಲ್ಲಿ ನೀರಿಲ್ಲದೆ ಅನೇಕ ಜೀನ್ಸ್‌ ಯೂನಿಟ್‌ಗಳನ್ನು ಸ್ಥಗಿತಗೊಳಿಸಲಾಯಿತು. 

ತೀವ್ರ ಸ್ವರೂಪದ ಲಾಕ್‌ಡೌನ್‌ಗೆ ಸರ್ಕಾರ ಚಿಂತನೆ..!

ಈ ಬಾರಿ ಕೊರೋನಾ ವೈರಸ್‌ನಿಂದಾಗಿಯೇ ಜೀನ್ಸ್‌ ಉದ್ಯಮ ತತ್ತರಿಸಿ ಹೋಗಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಆಮದು ಹಾಗೂ ರಫ್ತು ಸರಾಗವಾಗಿ ನಡೆಯುವವರೆಗೆ ಈ ಸಮಸ್ಯೆ ತಪ್ಪಿದ್ದಲ್ಲ. ಜೀನ್ಸ್‌ ಉದ್ಯಮದ ಮೇಲಾಗಿರುವ ದುಷ್ಪರಿಣಾಮದಿಂದ ಬರೀ ಉದ್ಯಮಿಗಳು ಮಾತ್ರ ಸಮಸ್ಯೆ ಎದುರಿಸುತ್ತಿಲ್ಲ. ಸುಮಾರು 2 ಲಕ್ಷ ಕಾರ್ಮಿಕರು ಸಂಕಷ್ಟ ಅನುಭವಿಸುತ್ತಿದ್ದಾರೆ ಎಂದು ಜೀನ್ಸ್‌ ಉದ್ಯಮಿಗಳು ಹೇಳುತ್ತಾರೆ.

ಕೊರೋನಾ ವೈರಸ್‌ನಿಂದಾಗಿ ಅಂತಾರಾಷ್ಟ್ರೀಯ ಮಟ್ಟದ ವ್ಯಾಪಾರ, ವಹಿವಾಟು ಸ್ಥಗಿತಗೊಂಡಿದೆ. ಜೀನ್ಸ್‌ಗೆ ಬೇಕಾದ ಕಚ್ಚಾ ಸಾಮಾಗ್ರಿಗಳು ಆಮದು ಮಾಡಿಕೊಳ್ಳಲು ಆಗುತ್ತಿಲ್ಲ. ಇದರಿಂದ ಉದ್ಯಮಕ್ಕೆ ದೊಡ್ಡ ಪೆಟ್ಟು ಬಿದ್ದಿದೆ ಎಂದು ಬಳ್ಳಾರಿ ಜೀನ್ಸ್‌ ವ್ಯಾಪಾರಿ ಶಶಿಕುಮಾರ್‌ ಗೌಡ ಹೇಳಿದ್ದಾರೆ.