ತುಮಕೂರು(ಜೂ.14): ತುಮಕೂರು ಗ್ರಾಮಾಂತರ ಕ್ಷೇತ್ರದ ಹೊನ್ನೇನಹಳ್ಳಿಯಲ್ಲಿ ಬಿಜೆಪಿ ಹಾಗೂ ಜೆಡಿಎಸ್‌ ಕಾರ್ಯಕರ್ತರ ನಡುವೆ ಮಾರಾಮಾರಿ ನಡೆದು, ಜೆಡಿಎಸ್‌ ಕಾರ್ಯಕರ್ತರು ಜಿಲ್ಲಾಸ್ಪತ್ರೆಗೆ ದಾಖಲಾಗಿರುವ ಘಟನೆ ಶುಕ್ರವಾರ ತಡರಾತ್ರಿ ನಡೆದಿದೆ.

ಬಿಜೆಪಿ ಕಾರ್ಯಕರ್ತರು ಮಾರಕಾಸ್ತ್ರಗಳಿಂದ ಜೆಡಿಎಸ್‌ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ದೂರಲಾಗಿದ್ದು, ಜೆಡಿಎಸ್‌ ಕಾರ್ಯಕರ್ತರಾದ ರಾಧಾಕೃಷ್ಣ, ಸಂಜೀವಮ್ಮ, ರಂಗಸ್ವಾಮಯ್ಯ, ಶ್ರೀನಿವಾಸ್‌ ಗಾಯಗೊಂಡಿದ್ದು, ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ರಾಧಾಕೃಷ್ಣ ಗಂಭೀರವಾಗಿ ಗಾಯಗೊಂಡಿದ್ದಾರೆ ಎನ್ನಲಾಗಿದೆ.

ಮುಂಬೈ: ಕೋವಿಡ್‌ ಆಸ್ಪತ್ರೆಗಳ ಶೇ.99 ಬೆಡ್‌ಗಳು ಭರ್ತಿ!

ಗ್ರಾಪಂ ಅಧ್ಯಕ್ಷ, ಬಿಜೆಪಿ ಮುಖಂಡರಾದ ವೆಂಕಟೇಶ್‌ ವಿರುದ್ಧ ಹೆಬ್ಬೂರು ಪೊಲೀಸ್‌ ಠಾಣೆಯಲ್ಲಿ ಏ.22ರಂದು ಮಹಿಳೆಯೊಬ್ಬರನ್ನು ಎಳೆದಾಡಿದ ಹಾಗೂ ಅತ್ಯಾಚಾರ ಯತ್ನ, ಲೈಂಗಿಕ ಕಿರುಕುಳ ದೂರು ದಾಖಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಜೆಡಿಎಸ್‌ ಕಾರ್ಯಕರ್ತ ರಾಧಾಕೃಷ್ಣ ಹಾಗೂ ಇತರರು ಪ್ರತ್ಯಕ್ಷ ಸಾಕ್ಷಿಯಾಗಿದ್ದರು ಎನ್ನಲಾಗಿದೆ. ಸಾಕ್ಷಿಯಿಂದ ಹಿಂದೆ ಸರಿಯುವಂತೆ ವೆಂಕಟೇಶ್‌, ರಾಧಾಕೃಷ್ಣಗೆ ನಿರಂತರ ಒತ್ತಡ ಹೇರಿದ್ದರು ಎನ್ನಲಾಗಿದೆ. ರಾಧಾಕೃಷ್ಣ ಹಾಗೂ ಇತರರು ಇದಕ್ಕೆ ಒಪ್ಪದೆ ಹೋದ ಪರಿಣಾಮ, ಶುಕ್ರವಾರ ತಡರಾತ್ರಿ ಗ್ರಾಪಂ ಅಧ್ಯಕ್ಷ ವೆಂಕಟೇಶ್‌ ಹಾಗೂ ಬೆಂಬಲಿಗರಾದ ಶಂಕರ, ಮಂಡಲ್‌ ರವಿ, ಯೋಗೇಶ್‌, ಸ್ವಾಮಿ, ಮಂಜ, ಎಂ.ಎಚ್‌. ರಂಗಸ್ವಾಮಿ ಏಕಾಏಕಿ ಜೆಡಿಎಸ್‌ ಕಾರ್ಯಕರ್ತರಾದ ರಾಧಾಕೃಷ್ಣ ಮತ್ತಿತರ ಮೇಲೆ ಮಚ್ಚು, ದೊಣ್ಣೆಗಳಿಂದ ಹಲ್ಲೆ ನಡೆಸಿದ್ದಾರೆ ಎಂದು ದೂರಲಾಗಿದೆ.

ಶಾಸಕ ಗೌರಿಶಂಕರ್‌ ಭೇಟಿ:

ಹೊನ್ನೇನಹಳ್ಳಿ ಗ್ರಾಮಕ್ಕೆ ಭೇಟಿ ನೀಡಿದ ಗ್ರಾಮಾಂತರ ಶಾಸಕ ಡಿ.ಸಿ.ಗೌರಿಶಂಕರ್‌ ಅವರು, ಹಲ್ಲೆಗೊಳಗಾದ ಕುಟುಂಬಸ್ಥರಿಗೆ ಸಾಂತ್ವನ ಹೇಳಿ, ಧೈರ್ಯ ತುಂಬಿದ್ದಾರೆ. ಅಲ್ಲದೆ ಗಾಯಾಳುಗಳು ದಾಖಲಾಗಿರುವ ತುಮಕೂರು ಜಿಲ್ಲಾಸ್ಪತ್ರೆಗೂ ಭೇಟಿ ನೀಡಿ ಹಲ್ಲೆಗೊಳಗಾಗಿ ಚಿಕಿತ್ಸೆ ಪಡೆಯುತ್ತಿರುವ ಜೆಡಿಎಸ್‌ ಕಾರ್ಯಕರ್ತರನ್ನು ಭೇಟಿ ಮಾಡಿ, ಸಾಂತ್ವನ ಹೇಳಿ, 25 ಸಾವಿರ ರು. ನೀಡಿ ಉತ್ತಮ ಚಿಕಿತ್ಸೆ ಕೊಡುವಂತೆ ಜಿಲ್ಲಾ ಶಸ್ತ್ರ ಚಿಕಿತ್ಸಕರಿಗೆ ಸೂಚಿಸಿದ್ದಾರೆ.

ಆರೋಪಿಗಳನ್ನು ಬಂಧಿಸಿ:

ಜೆಡಿಎಸ್‌ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಿರುವ ಆರೋಪಿಗಳು ಬೆಂಗಳೂರು ಗ್ರಾಮಾಂತರದ ನೆಲಮಂಗಲ ಮತ್ತು ದೊಡ್ಡಬಳ್ಳಾಪುರ ತಾಲೂಕಿನಲ್ಲಿ ವಿವಿಧ ರೌಡಿಶೀಟರ್‌ಗಳಾಗಿದ್ದು, ಕೂಡಲೇ ಆರೋಪಿಗಳನ್ನು ಬಂಧಿಸಿ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

ಸಿಪಿಐ, ಎಸ್‌ಐ ಅಮಾನತಿಗೆ ಆಗ್ರಹಿಸಿ ಧರಣಿ

ಕಳೆದ ಎರಡು ವರ್ಷಗಳಿಂದ ಕ್ಷೇತ್ರದಲ್ಲಿ ಇಂತಹ ಅಹಿತಕರ ಘಟನೆ ನಡೆದಿರಲಿಲ್ಲ. ಈಗ ಬಿಜೆಪಿ ಕಾರ್ಯಕರ್ತರು ಹಳೆಯ ದ್ವೇಷದಿಂದ ಈ ರೀತಿ ಹಗೆತನ ಸಾಧಿಸುತ್ತಿದ್ದಾರೆ. ಇದಕ್ಕೆ ಪೊಲೀಸ್‌ ಇನ್‌್ಪಸೆಕ್ಟರ್‌ ಮತ್ತು ಸಬ್‌ಇನ್ಸ್‌ಪೆಕ್ಟರ್‌ ಕುಮ್ಮಕ್ಕಿದ್ದು, ಇವರಿಬ್ಬರೂ ಪಕ್ಷಪಾತಿಗಳಾಗಿದ್ದಾರೆ. ಪೊಲೀಸ್‌ ಕೆಲಸ ಮಾಡುವ ಬದಲು ಗೂಂಡಾಗಿರಿಗೆ ಕುಮ್ಮಕ್ಕು ನೀಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಜೊತೆಗೆ ಜೂ.16 ರ ಮಂಗಳವಾರದಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳ ಕಚೇರಿ ಮುಂದೆ ಬೃಹತ್‌ ಪ್ರತಿಭಟನೆ ನಡೆಸಿ, ಪಿಎಸ್‌ಐ ಮತ್ತು ಸಿಪಿಐ ಅಮಾನತಿಗೆ ಆಗ್ರಹಿಸುವುದಾಗಿಯೂ ತಿಳಿಸಿದ್ದಾರೆ.