ಮಾಗಡಿ(ಸೆ.05): ಮಾಜಿ ಸಚಿವ ಡಿ.ಕೆ.ಶಿವಕುಮಾರ್‌ ಅವರನ್ನು ಇಡಿ ಅಧಿಕಾರಿಗಳು ಬಂಧಿಸಿರುವುದನ್ನು ತಾಲೂಕು ಜೆಡಿಎಸ್‌ ಖಂಡಿಸುತ್ತದೆ ಎಂದು ಜೆಡಿಎಸ್‌ ರಾಜ್ಯ ಪ್ರಧಾನ ಕಾರ‍್ಯದರ್ಶಿ ಪೂಜಾರಿ ಪಾಳ್ಯದ ಕೃಷ್ಣಮೂರ್ತಿ ಹೇಳಿದರು.

ಪಟ್ಟಣದ ಜೆಡಿಎಸ್‌ ಕಚೇರಿಯಲ್ಲಿ ಏರ್ಪಡಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಮುಖಂಡರು ದ್ವೇಷದ ರಾಜಕಾರಣ ಮಾಡುತ್ತಿದೆ. ದುರುದ್ದೇಶಪೂರ್ವಕವಾಗಿ ಡಿ.ಕೆ. ಶಿವಕುಮಾರ್‌ ಅವರನ್ನು ಬಂಧಿಸಲಾಗಿದೆ. ಉಪ ಚುನಾವಣೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಕೆಲವು ಕ್ಷೇತ್ರದ ಜವಾಬ್ದಾರಿಯನ್ನು ತಾವು ತೆಗೆದುಕೊಂಡು ಕಾಂಗ್ರೆಸ್‌ ಅಭ್ಯರ್ಥಿಗಳನ್ನು ಗೆಲ್ಲಿಸುತ್ತೇನೆ ಎಂದು ಶಿವಕುಮಾರ್‌ ತಿಳಿಸಿದ್ದರು. ಉಪ ಚುನಾವಣೆಯಲ್ಲಿ ತಮಗೆ ಹಿನ್ನಡೆಯಾಗಬಹುದು ಎಂದು ಭೀತಿಯಿಂದ ಬಿಜೆಪಿಯವರು ಇಡಿ ಅಧಿಕಾರಿಗಳ ಮೂಲಕ ಶಿವಕುಮಾರ್‌ ಅವರನ್ನು ಬಂಧಿಸಿದ್ದಾರೆ ಎಂದು ದೂರಿದರು.

ಡಿಕೆಶಿಗೆ ನೈತಿಕ ಬೆಂಬಲ:

ಆಪರೇಷನ್‌ ಕಮಲ ನಡೆಯುವ ಸಮಯದಲ್ಲಿ ಬಿಜೆಪಿಯ ಮುಖಂಡರು ಜೆಡಿಎಸ್‌ ಶಾಸಕರಿಗೆ ಕೋಟಿ, ಕೋಟಿ ಹಣವನ್ನು ಅವರ ಮನೆಗೆ ತೆಗೆದುಕೊಂಡು ಹೋಗಿ ಕೊಟ್ಟಿದ್ದರು. ಈ ಬಗ್ಗೆ ಸದನದಲ್ಲಿಯೂ ಚರ್ಚೆಯಾಗಿತ್ತು, ಇದರ ತನಿಖೆಯನ್ನು ನಡೆಸುವುದನ್ನು ಬಿಟ್ಟು, ದುರುದ್ದೇಶಪೂರ್ವಕವಾಗಿ ಶಿವಕುಮಾರ್‌ ಅವರನ್ನು ಬಂಧಿಸಲಾಗಿದೆ. ಶಿವಕುಮಾರ್‌ ಅವರಿಗೆ ಜೆಡಿಎಸ್‌ ಪಕ್ಷದಿಂದ ನೈತಿಕವಾಗಿ ಬೆಂಬಲ ನೀಡಲಾಗುವುದು. ಅಲ್ಲದೇ ಬಂಧನವನ್ನು ಖಂಡಿಸಿ ಪ್ರತಿಭಟನೆ ನಡೆಸಲಾಗುವುದು ಎಂದು ಕೃಷ್ಣಮೂರ್ತಿ ತಿಳಿಸಿದರು.

ಜನಾರ್ಧನ ರೆಡ್ಡಿ ವಿರುದ್ಧ ಯಾವುದೇ ಕ್ರಮವಿಲ್ಲ:

ಜೆಡಿಎಸ್‌ ತಾಲೂಕು ಅಧ್ಯಕ್ಷ ಪೊಲೀಸ್‌ ರಾಮಣ್ಣ ಮಾತನಾಡಿ, ರಾಜ್ಯಗಳಲ್ಲಿ ಬಿಜೆಪಿ ಮುಖಂಡರು ಹಣದ ದುರುಪಯೋಗ ಮಾಡಿಕೊಂಡಿದ್ದಾರೆ, ಜನಾರ್ಧನ ರೆಡ್ಡಿ .500 ಕೋಟಿ ವೆಚ್ಚ ಮಾಡಿ ತಮ್ಮ ಮಗಳ ಮದುವೆ ಮಾಡಿದ್ದರೂ, ಅವರ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಡಿಕೆಶಿ ತಾಯಿ ಮೌನ​ವ್ರತ, ಮೋದಿ ಶಾ ಅಣ​ಕು​ ಶ​ವ​ಯಾತ್ರೆ

ಡಿ.ಕೆ. ಶಿವಕುಮಾರ್‌ ವಿರುದ್ಧ ಕಾನೂನು ಆಸ್ತ್ರ ಬಳಸುವುದನ್ನು ಜೆಡಿಎಸ್‌ ಖಂಡಿಸುತ್ತದೆ. ಡಿ.ಕೆ.ಶಿವಕುಮಾರ್‌ ಅವರನ್ನು ಬಿಡುಗಡೆ ಮಾಡದಿದ್ದರೆ, ಜೆಡಿಎಸ್‌ ಹಾಗೂ ಕಾಂಗ್ರೆಸ್‌ ಉಗ್ರವಾಗಿ ಪ್ರತಿಭಟನೆ ನಡೆಸಲಾಗುವುದು ಎಂದು ರಾಮಣ್ಣ ಎಚ್ಚರಿಕೆ ನೀಡಿದರು.

ತಾಪಂ ಸದಸ್ಯರಾದ ಹನುಮೇಗೌಡ, ಶಂಕರ್‌, ನರಸಿಂಹಮೂರ್ತಿ, ಪುರಸಭೆ ಮಾಜಿ ಸದಸ್ಯ ಎಂ.ಎನ್‌. ಮಂಜುನಾಥ್‌, ನಯಾಜ್‌, ತಾಪಂ ಮಾಜಿ ಅಧ್ಯಕ್ಷೆ ಅರುಂಧತಿ ಚಿಕ್ಕಣ್ಣ, ಅಶ್ವತ್‌್ಥ, ಅಶೋಕ್‌, ಅಯ್ಯಂಡಳ್ಳಿ ರಂಗಸ್ವಾಮಿ ಮತ್ತಿತರರು ಹಾಜರಿದ್ದರು.