ಮಂಡ್ಯ(ಫೆ.05): ಮಳವಳ್ಳಿ ಪಟ್ಟಣದ ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್‌ ಆಡಳಿತ ಮಂಡಳಿ ಚುನಾವಣೆ ಫಲಿತಾಂಶ ಪ್ರಕಟಗೊಂಡಿದೆ. ಜೆಡಿಎಸ್‌ನ ಬೆಂಬಲಿತ 9 ಮಂದಿ ನಿರ್ದೇಶಕರಾಗಿ ಆಯ್ಕೆಯಾಗುವ ಮೂಲಕ ಪಿಎಲ್‌ಡಿ ಬ್ಯಾಂಕ್‌ ಅಧಿಕಾರ ಹಿಡಿದಿದೆ. ಕಾಂಗ್ರೆಸ್‌ ಬೆಂಬಲಿತ 5 ನಿರ್ದೆಶಕರು ಆಯ್ಕೆಯಾಗಿದ್ದಾರೆ.

ಪಟ್ಟಣದ ಸರ್ಕಾರಿ ಪದವಿ ಕಾಲೇಜಿನಲ್ಲಿ ನಡೆದ ಚುನಾವಣೆಯಲ್ಲಿ ಸಾಲಗಾರರ ಕ್ಷೇತ್ರದಿಂದ ಮಳವಳ್ಳಿ ಟೌನ್‌-1ರಲ್ಲಿ ಬಸವರಾಜು, ಮಳವಳ್ಳಿ ಟೌನ್‌-2ರಲ್ಲಿ ರಮೇಶ, ಕಸಬಾ ಮಹಿಳಾ ಮೀಸಲು ಕ್ಷೇತ್ರದಲ್ಲಿ ಶೋಭ, ಕಸಬಾ-2ರಲ್ಲಿ ದೊಡ್ಡಮಾದೇಗೌಡ, ಕಸಬಾ-3ರ ಮಹಿಳಾ ಕ್ಷೇತ್ರದಲ್ಲಿ ರತ್ನಮ್ಮ, ಕಿರುಗಾವಲು-1ರಲ್ಲಿ ಶಿವಮಾದೇಗೌಡ, ಕಿರುಗಾವಲು-3ರಲ್ಲಿ ಪ್ರಸನ್ನ, ಹಲಗೂರು-1ರಲ್ಲಿ ರಮ್ಯ, ಹಲಗೂರು-3ರಲ್ಲಿ ಶಿವಮಲ್ಲಪ್ಪ, ಬಿ.ಜಿ.ಪುರ ಮೀಸಲು ಕ್ಷೇತ್ರದಲ್ಲಿ ಶಿವರಾಜು, ಬಿ.ಜಿ.ಪುರ-2ರಲ್ಲಿ ಸುರೇಶ ಜಯಗಳಿಸಿದರು. ಜಿದ್ದಾಜಿದ್ದಿನಿಂದ ಕೂಡಿದ ಸಾಲಗಾರರಲ್ಲದ ಕ್ಷೇತ್ರದಿಂದ ಮಾಜಿ ಅಧ್ಯಕ್ಷ ಮಾಯಣ್ಣ ತಮ್ಮ ಪ್ರತಿಸ್ಪರ್ಧಿ ಚೌಡಯ್ಯ ವಿರುದ್ದ 362 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.

ಚುನಾವಣಾಧಿಕಾರಿಯಾಗಿ, ತಾಪಂ ಇಒ ಬಿ.ಎಸ್‌. ಸತೀಶ್‌ ಮಾತನಾಡಿ, ತಾಲೂಕಿನಾಧ್ಯಂತ ಬಹಳ ಕುತುಹಲ ಕೆರಳಿಸಿದ ಪಿಎಲ್‌ ಡಿ ಬ್ಯಾಂಕ್‌ ಚುನಾವಣೆ ಯಾವುದೇ ಅಹಿತಕರ ಘಟನೆಗಳಿಗೆ ಅವಕಾಶವಿಲ್ಲದೇ ಶಾಂತಿಯುತವಾಗಿ ನಡೆದಿದೆ. ಚುನಾವಣೆ ಯಶಸ್ವಿಗೆ ಶ್ರಮಿಸಿದ ಸಿಬ್ಬಂದಿಗಳಿಗೆ ಹಾಗೂ ಶಾಂತಿಯುತವಾಗಿ ನಡೆದುಕೊಂಡ ಮತದಾರರು ಹಾಗೂ ಸಾರ್ವಜನಿಕರಿಗೆ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದ್ದಾರೆ.