ಧರ್ಮಯಾತ್ರೆಗಳಿಗೆ ಜೆಡಿಎಸ್‌ ವರಿಷ್ಠರಿಂದ ಬ್ರೇಕ್‌ !

ಮುಂಬರುವ ವಿಧಾನಸಭಾ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಮಂಡ್ಯ ವಿಧಾನಸಭಾ ಕ್ಷೇತ್ರದ ಟಿಕೆಟ್‌ ಆಕಾಂಕ್ಷಿಗಳು ಪ್ರತ್ಯೇಕವಾಗಿ ನಡೆಸುತ್ತಿದ್ದ ಧರ್ಮಯಾತ್ರೆಗಳಿಗೆ ದಳಪತಿಗಳು ಬ್ರೇಕ್‌ ಹಾಕಿದ್ದಾರೆ.

JDS Supremo s Break for Dharma Yatra snr

  ಮಂಡ್ಯ (ನ.06):  ಮುಂಬರುವ ವಿಧಾನಸಭಾ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಮಂಡ್ಯ ವಿಧಾನಸಭಾ ಕ್ಷೇತ್ರದ ಟಿಕೆಟ್‌ ಆಕಾಂಕ್ಷಿಗಳು ಪ್ರತ್ಯೇಕವಾಗಿ ನಡೆಸುತ್ತಿದ್ದ ಧರ್ಮಯಾತ್ರೆಗಳಿಗೆ ದಳಪತಿಗಳು ಬ್ರೇಕ್‌ ಹಾಕಿದ್ದಾರೆ.

ಈಗಿಂದೀಗಲೇ ಕ್ಷೇತ್ರದಲ್ಲಿ ನಡೆಸುತ್ತಿರುವ ಧರ್ಮಯಾತ್ರೆಗಳನ್ನು ನಿಲ್ಲಿಸಬೇಕು. ಪ್ರತ್ಯೇಕವಾಗಿ ಯಾರೂ ಯಾವುದೇ ಕಾರ್ಯಕ್ರಮಗಳನ್ನು ಮಾಡಬಾರದು. ಅನಗತ್ಯವಾಗಿ ಪಕ್ಷದ ಕಾರ್ಯಕರ್ತರಲ್ಲಿ ಗೊಂದಲ ಸೃಷ್ಟಿಸದೆ ಎಲ್ಲರೂ ಒಟ್ಟಾಗಿ ಪಕ್ಷ ಸಂಘಟನೆಯಲ್ಲಿ ತೊಡಗುವಂತೆ ವರಿಷ್ಠರು ಕಟ್ಟುನಿಟ್ಟಾಗಿ ಸೂಚಿಸಿದ್ದಾರೆ.

ಜೆಡಿಎಸ್‌ (JDS)  ಜಿಲ್ಲಾಧ್ಯಕ್ಷ ಡಿ.ರಮೇಶ್‌ ಅವರ ನಿವಾಸಕ್ಕೆ ಜೆಡಿಎಸ್‌ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್‌ ಕುಮಾರಸ್ವಾಮಿ (Nikhil Kumaraswamy ) ಭೇಟಿ ನೀಡಿದ್ದ ಸಮಯದಲ್ಲಿ ಮಂಡ್ಯ ವಿಧಾನಸಭಾ ಕ್ಷೇತ್ರದ ಟಿಕೆಟ್‌ ಆಕಾಂಕ್ಷಿಗಳಾದ ಬಿ.ಆರ್‌.ರಾಮಚಂದ್ರು, ಹೆಚ್‌.ಎನ್‌.ಯೋಗೇಶ್‌ ಮತ್ತು ಕೆ.ಎಸ್‌.ವಿಜಯಾನಂದ ಅವರನ್ನು ಕರೆಸಿಕೊಂಡು ಎಲ್ಲರೂ ಒಗ್ಗಟ್ಟಾಗಿರುವಂತೆ ತಿಳಿಸಿದ್ದಾರೆ. ಜನರನ್ನು ಯಾತ್ರೆಗೆ ಕರೆದುಕೊಂಡು ಹೋಗುವುದರಿಂದ ಅವರ ವಿಶ್ವಾಸ ಗಳಿಸಲಾಗುವುದಿಲ್ಲ. ಸುಮ್ಮನೆ ಹಣ ಖರ್ಚಾಗುವುದೇ ವಿನಃ ಅದರಿಂದ ಪ್ರಯೋಜನವಾಗುವುದಿಲ್ಲ ಎಂದು ಕಿವಿಮಾತು ಹೇಳಿದ್ದಾರೆ.

ಧರ್ಮಯಾತ್ರೆಯಂತಹ ಕಾರ್ಯಕ್ರಮಗಳ ಬದಲು ಜೆಡಿಎಸ್‌ ಸರ್ಕಾರದ ಅವಧಿಯಲ್ಲಿ ಜಾರಿಗೊಳಿಸಿದ ಜನಪರ ಯೋಜನೆಗಳು, ಪಕ್ಷಕ್ಕೆ ಅನುಕೂಲವಾಗುವಂತಹ ಸಮಾಜಮುಖಿ ಕಾರ್ಯಕ್ರಮಗಳು, ಪಂಚರತ್ನ ರಥಯಾತ್ರೆಗೆ ಸಿದ್ಧತೆ, ಜೆಡಿಎಸ್‌ ಯುವ ಘಟಕಗಳ ಸಮಾವೇಶಗಳನ್ನು ಕ್ಷೇತ್ರದೊಳಗೆ ನಡೆಸುವುದರೊಂದಿಗೆ ಜನರ ಮನಸ್ಸನ್ನು ಪಕ್ಷದ ಕಡೆಗೆ ಸೆಳೆಯಬೇಕು. ಎಲ್ಲರೂ ಒಟ್ಟಾಗಿ ಇಂತಹ ಕಾರ್ಯಕ್ರಮಗಳನ್ನು ಆಯೋಜನೆ ಮಾಡುವುದರಿಂದ ಪಕ್ಷ ಸಂಘಟನೆಗೊಳ್ಳುತ್ತದೆ. ಈ ಯಾತ್ರೆಗಳಿಂದ ಆಕಾಂಕ್ಷಿಗಳಿಗೂ ಪ್ರಯೋಜನ ವಾಗುವುದಿಲ್ಲವೆಂದು ಸ್ಪಷ್ಟವಾಗಿ ತಿಳಿಸಿದ್ದಾರೆ.

ಮಂಡ್ಯ ವಿಧಾನಸಭಾ ಕ್ಷೇತ್ರದಿಂದ ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಎಂ.ಶ್ರೀನಿವಾಸ್‌ ಅವರು ಪಕ್ಷದ ದೊಡ್ಡ ಶಕ್ತಿಯಾಗಿದ್ದಾರೆ. ಅವರನ್ನು ಬಿಟ್ಟು ಯಾವುದೇ ನಿರ್ಧಾರವನ್ನು ಕೈಗೊಳ್ಳುವುದಿಲ್ಲ. ಅವರನ್ನು ವಿಶ್ವಾಸದಲ್ಲಿಟ್ಟುಕೊಂಡೇ ಮುಂದಿನ ಚುನಾವಣೆಯ ನಿರ್ಧಾರಗಳನ್ನು ಮಾಡಲಾಗುವುದು. ಅವರನ್ನೂ ಜೊತೆಗೂಡಿಸಿಕೊಂಡು ಕಾರ್ಯಕ್ರಮಗಳನ್ನು ರೂಪಿಸುವಂತೆ ತಿಳಿಸಿದ್ದಾರೆ ಎನ್ನಲಾಗಿದೆ.

ಆಕಾಂಕ್ಷಿಗಳ ನಾಗಾಲೋಟಕ್ಕೆ ಮೂಗುದಾರ !

ಜೆಡಿಎಸ್‌ನ ಪ್ರಭಾವಿ ಟಿಕೆಟ್‌ ಆಕಾಂಕ್ಷಿಯಾಗಿರುವ ಬಿ.ಆರ್‌.ರಾಮಚಂದ್ರು ಅವರ ಮೊಟ್ಟಮೊದಲ ಬಾರಿಗೆ ಕ್ಷೇತ್ರದಲ್ಲಿ ಧರ್ಮಯಾತ್ರೆಗೆ ಚಾಲನೆ ಕೊಟ್ಟರು. ಅದಕ್ಕೆ ಕ್ಷೇತ್ರದ ಜನರಿಂದ ಭಾರೀ ಬೇಡಿಕೆ ಸೃಷ್ಟಿಯಾಯಿತು. ಧರ್ಮಯಾತ್ರೆ ರಾಮಚಂದ್ರುಗೆ ಜನಪ್ರಿಯತೆ ತಂದುಕೊಟ್ಟಿದ್ದನ್ನು ಕಂಡ ಶಾಸಕ ಎಂ.ಶ್ರೀನಿವಾಸ್‌ ಅಳಿಯ ಹೆಚ್‌.ಎನ್‌.ಯೋಗೇಶ್‌ ಕೂಡ ಧರ್ಮಯಾತ್ರೆಗೆ ಚಾಲನೆ ನೀಡಿದರು. ಇದರ ನಡುವೆ ಮತ್ತೋರ್ವ ಟಿಕೆಟ್‌ ಆಕಾಂಕ್ಷಿಪಿಇಟಿ ಟ್ರಸ್ಟ್‌ ಅಧ್ಯಕ್ಷ ಕೆ.ಎಸ್‌.ವಿಜಯಾನಂದ ಇಂತಹ ಯಾವುದೇ ಯಾತ್ರೆಗಳಿಗೆ ಮುಂದಾಗದೆ ಮೌನವಾಗಿದ್ದರು. ಜೊತೆಗೆ ಮುದ್ದನಘಟ್ಟಮಹಾಲಿಂಗೇಗೌಡ ಅವರೂ ಕೂಡ ಟಿಕೆಟ್‌ ಆಕಾಂಕ್ಷಿತರಲ್ಲೊಬ್ಬರಾಗಿದ್ದು, ಅವರೂ ತಮ್ಮನ್ನು ಕ್ಷೇತ್ರದಲ್ಲಿ ಗುರುತಿಸಿಕೊಳ್ಳುವ ನಿಟ್ಟಿನಲ್ಲಿ ನಾನಾ ರೀತಿಯ ಪ್ರಯತ್ನಗಳು, ಕಸರತ್ತು ನಡೆಸುತ್ತಿದ್ದಾರೆ. ಇದರ ನಡುವೆ ಮುಂದಿನ ಚುನಾವಣೆಯಲ್ಲಿ ಜೆಡಿಎಸ್‌ ಪಕ್ಷದಿಂದ ಮಂಡ್ಯ ಕ್ಷೇತ್ರವನ್ನು ಪ್ರತಿನಿಧಿಸುವವರು ಯಾರೆಂಬುದು ನಿಗೂಢವಾಗಿದೆ. ಒಟ್ಟಾರೆ ಪ್ರತ್ಯೇಕವಾಗಿ ಒಬ್ಬೊಬ್ಬರೇ ಯಾತ್ರೆ ಮಾಡುವುದು ಶಕ್ತಿ ಪ್ರದರ್ಶನವಲ್ಲ. ಅದರಿಂದ ಪಕ್ಷಕ್ಕೂ ಅನುಕೂಲವಾಗುವುದಿಲ್ಲ ಎಂದು ವರಿಷ್ಠರೇ ಮಂಡ್ಯ ವಿಧಾನಸಭಾ ಕ್ಷೇತ್ರದ ಜೆಡಿಎಸ್‌ ಟಿಕೆಟ್‌ ಆಕಾಂಕ್ಷಿಗಳ ನಾಗಾಲೋಟಕ್ಕೆ ಈಗ ಮೂಗುದಾರ ಹಾಕಿದ್ದಾರೆ.

ಮಂಡ್ಯ ಕ್ಷೇತ್ರದಿಂದ ಜೆಡಿಎಸ್‌ ಟಿಕೆಟ್‌ ಬಯಸಿರುವ ಆಕಾಂಕ್ಷಿಗಳೆಲ್ಲರೂ ಸಮರ್ಥರಿದ್ದಾರೆ. ಆದರೆ, ಪ್ರತ್ಯೇಕವಾಗಿ ನಡೆಸುತ್ತಿರುವ ಧರ್ಮಯಾತ್ರೆಗಳಿಂದ ಮುಖಂಡರು-ಕಾರ್ಯಕರ್ತರಲ್ಲಿ ಗೊಂದಲಗಳು ಸೃಷ್ಟಿಯಾಗುತ್ತಿವೆ. ಈ ಕಾರಣದಿಂದಾಗಿ ಧರ್ಮಯಾತ್ರೆಗಳನ್ನು ಕೈಬಿಟ್ಟು ಪಕ್ಷ ಸಂಘಟನೆಗೆ ಪೂರಕವಾದ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಎಲ್ಲರೂ ಒಟ್ಟಾಗಿ ನಡೆಸುವಂತೆ ವರಿಷ್ಠರು ಸೂಚಿಸಿದ್ದಾರೆ.

-ಡಿ.ರಮೇಶ್‌, ಅಧ್ಯಕ್ಷರು, ಜೆಡಿಎಸ್‌

 ವಿಧಾನಸಭಾ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಮಂಡ್ಯ ವಿಧಾನಸಭಾ ಕ್ಷೇತ್ರದ ಟಿಕೆಟ್‌ ಆಕಾಂಕ್ಷಿಗಳು ಪ್ರತ್ಯೇಕವಾಗಿ ನಡೆಸುತ್ತಿದ್ದ ಧರ್ಮಯಾತ್ರೆಗಳಿಗೆ ದಳಪತಿಗಳು ಬ್ರೇಕ್‌

ಈಗಿಂದೀಗಲೇ ಕ್ಷೇತ್ರದಲ್ಲಿ ನಡೆಸುತ್ತಿರುವ ಧರ್ಮಯಾತ್ರೆಗಳನ್ನು ನಿಲ್ಲಿಸಬೇಕು. ಪ್ರತ್ಯೇಕವಾಗಿ ಯಾರೂ ಯಾವುದೇ ಕಾರ್ಯಕ್ರಮಗಳನ್ನು ಮಾಡಬಾರದು ಎಂದು ಆದೇಶ

Latest Videos
Follow Us:
Download App:
  • android
  • ios