ಬಿಜೆಪಿಯ ಚುಕ್ಕಾಣಿ ಹಿಡಿದಿದ್ದ ಬಿ.ಎಸ್‌.ಯಡಿಯೂರಪ್ಪನವರ ಹಿಂದೆಯೇ ಬಿಜೆಪಿಯೂ ಹೋಯ್ತು. ಜೈಲು ಮತ್ತು ಬೇಲು ಇಲ್ಲದವರೆಂದರೆ ಅದು ಜೆಡಿಎಸ್‌ನವರು ಮಾತ್ರ. ಹಾಗಾಗಿ ರಾಜ್ಯದ ಜನರ ಆಶಾಕಿರಣವಾಗಿರುವುದು ಜೆಡಿಎಸ್‌ ಮಾತ್ರ ಎಂದು ರಾಜ್ಯ ಜೆಡಿಎಸ್‌ನ ಅಧ್ಯಕ್ಷ ಸಿ.ಎಂ.ಇಬ್ರಾಹಿಂ ಹೇಳಿದರು.

ತುರುವೇಕೆರೆ : ಬಿಜೆಪಿಯ ಚುಕ್ಕಾಣಿ ಹಿಡಿದಿದ್ದ ಬಿ.ಎಸ್‌.ಯಡಿಯೂರಪ್ಪನವರ ಹಿಂದೆಯೇ ಬಿಜೆಪಿಯೂ ಹೋಯ್ತು. ಜೈಲು ಮತ್ತು ಬೇಲು ಇಲ್ಲದವರೆಂದರೆ ಅದು ಜೆಡಿಎಸ್‌ನವರು ಮಾತ್ರ. ಹಾಗಾಗಿ ರಾಜ್ಯದ ಜನರ ಆಶಾಕಿರಣವಾಗಿರುವುದು ಜೆಡಿಎಸ್‌ ಮಾತ್ರ ಎಂದು ರಾಜ್ಯ ಜೆಡಿಎಸ್‌ನ ಅಧ್ಯಕ್ಷ ಸಿ.ಎಂ.ಇಬ್ರಾಹಿಂ ಹೇಳಿದರು.

ಪಟ್ಟಣದ ಗುರುಭವನ ಆವರಣದಲ್ಲಿ ನಡೆದ ತಾಲೂಕು ಜೆಡಿಎಸ್‌ ಅಲ್ಪಸಂಖ್ಯಾತರ ಘಟಕದ ಸಮಾವೇಶದಲ್ಲಿ ಮಾತನಾಡಿದರು.

ಕುಮಾರಸ್ವಾಮಿಯವರು ಹಮ್ಮಿಕೊಂಡಿರುವ ಪಂಚರತ್ನ ಯೋಜನೆಯ ರೀತಿ ಐವತ್ತು ವರ್ಷಗಳ ಕಾಲ ಆಡಳಿತ ನಡೆಸಿದ ಕಾಂಗ್ರೆಸ್‌ ಮಾಡಲು ಏಕೆ ಆಗಲಿಲ್ಲ. ಈಗ ಮನೆಗೆ 200 ಯುನಿಟ್‌ ವಿದ್ಯುತ್‌ ಫ್ರೀ, ಮನೆ ಯಜಮಾನಿಗೆ 2000 ರು. ಫ್ರೀ ಅಂತ ಹೇಳ್ತಾ ಇದ್ದಾರೆ. ಇದು ಮನೆಯಲ್ಲಿ ಜಗಳ ತಂದಿಡುವ ಸ್ಕೀಂ. ಕಾಂಗ್ರೆಸ್‌ನವರ ಸ್ಕೀಂನಿಂದ ಮನೆ ಮುರಿಯುತ್ತದೆ. ಆದರೆ ಕುಮಾರಸ್ವಾಮಿ ಸ್ಕೀಂನಿಂದ ಮನೆ, ಊರು ಎಲ್ಲವೂ ತಣ್ಣಗಿರುತ್ತದೆ ಎಂದು ಹೇಳಿದರು.

ರಾಜ್ಯಾದ್ಯಂತ ಜೆಡಿಎಸ್‌ ಅಲೆ ಇದೆ. ಹಾಗಾಗಿ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್‌ ನಿಚ್ಚಳ ಬಹುಮತ ಪಡೆದು ಎಚ್‌.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿ ಆಗುವುದು ನೂರಕ್ಕೆ ನೂರು ಖಚಿತ. ರಾಜ್ಯದ ಜನತೆ ಬಿಜೆಪಿ ಮತ್ತು ಕಾಂಗ್ರೆಸ್‌ ಸರ್ಕಾರದ ಸಾಧನೆಯನ್ನು ನೋಡಿ ಸಾಕಾಗಿ ಹೋಗಿದ್ದಾರೆ. ಐದು ವರ್ಷಗಳ ಕಾಲ ಜೆಡಿಎಸ್‌ಗೆ ಅಧಿಕಾರ ನೀಡಿದರೆ ರಾಜ್ಯದ ಸರ್ವಾಂಗೀಣ ಅಭಿವೃದ್ಧಿ ಸಾಧ್ಯವಾಗಲಿದೆ ಎಂದರು.

ಜೆಡಿಎಸ್‌ನಲ್ಲಿದ್ದು ನಂತರ ಕಾಂಗ್ರೆಸ್‌ಗೆ ಹೋದ ಬೆಮಲ್‌ ಕಾಂತರಾಜ್‌ರವರ ಮಾತು ಕೇಳಿ ಗುಬ್ಬಿ ಶಾಸಕ ಶ್ರೀನಿವಾಸ್‌ರವರು ತಮ್ಮ ರಾಜಕೀಯ ಜೀವನವನ್ನು ಹಾಳು ಮಾಡಿಕೊಂಡರು. ಈಗ ಜೆಡಿಎಸ್‌ನಲ್ಲೂ ಇಲ್ಲದೇ ಅತ್ತ ಕಾಂಗ್ರೆಸ್‌ಗೂ ಸೇರಲಾಗದೇ ಅತಂತ್ರರಾಗಿದ್ದಾರೆಂದು ಹೇಳಿದರು.

ಬಿಜೆಪಿಯ ಬಿ ಟೀಂ ಕಾಂಗ್ರೆಸ್‌ ಎಂದು ರಾಜ್ಯ ಜೆಡಿಎಸ್‌ನ ಅಲ್ಪಸಂಖ್ಯಾತರ ಮಹಿಳಾ ಘಟಕದ ಉಪಾಧ್ಯಕ್ಷೆ ನಜ್ಮಾ ನಜೀರ್‌ ಹೇಳಿದರು. ಇದುವರೆಗೂ ಕಾಂಗ್ರೆಸ್‌ನವರು ಬಿಜೆಪಿಯನ್ನು ವಿರೋಧಿಸುವ ನಾಟಕವಾಡಿದರು. ಕಾಂಗ್ರೆಸ್‌ನ ಶಾಸಕರನ್ನೇ ಬಿಜೆಪಿಗೆ ಸೇರುವಂತೆ ಮಾಡಿ ಬಿಜೆಪಿ ಸರ್ಕಾರ ಬರಲು ಕಾರಣೀಭೂತರಾದರು. ಈಗ ಬಿಜೆಪಿಯ ಬಗ್ಗೆ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ. ಬಿಜೆಪಿ ಅಲ್ಪಸಂಖ್ಯಾತರನ್ನು ಕಿತ್ತು ತಿನ್ನುವ ಪಕ್ಷವಾಗಿದೆ. ಮುಸ್ಲಿಂ ಸಮುದಾಯ ಕಾಂಗ್ರೆಸ್‌ ಗೆ ಮತ ನೀಡಿದರೆ ಬಿಜೆಪಿ ಗೆಲುವಿಗೆ ಕಾರಣವಾಗಲಿದೆ ಎಂದರು.

ಮಾಜಿ ಶಾಸಕ ಎಂ.ಟಿ.ಕೃಷ್ಣಪ್ಪ ಮಾತನಾಡಿ, ಈ ಕ್ಷೇತ್ರದಲ್ಲಿ ಕಾಂಗ್ರೆಸ್‌ಗೆ ಭವಿಷ್ಯವಿಲ್ಲ. ಮುಸ್ಲಿಂ ಸಮುದಾಯ ಕಾಂಗ್ರೆಸ್‌ಗೆ ಮತ ನೀಡಿದರೆ ನಿಮ್ಮ ವಿರೋಧಿ ಬಿಜೆಪಿ ಗೆಲುವಿಗೆ ಸಹಕಾರಿಯಾಗಲಿದೆ ಎಂದರು.

ಸಮಾರಂಭದಲ್ಲಿ ಜಿಲ್ಲಾಧ್ಯಕ್ಷ ಆಂಜನಪ್ಪ, ತಾಲೂಕು ಜೆಡಿಎಸ್‌ ಅಧ್ಯಕ್ಷ ಸ್ವಾಮಿ, ರಾಜ್ಯ ಯುವ ಜೆಡಿಎಸ್‌ ಪ್ರಧಾನ ಕಾರ್ಯದರ್ಶಿ ದೊಡ್ಡಾಘಟ್ಟಚಂದ್ರೇಶ್‌, ತಾಲೂಕು ಯುವ ಜೆಡಿಎಸ್‌ ಅಧ್ಯಕ್ಷ ಬಾಣಸಂದ್ರ ರಮೇಶ್‌, ಮುಸ್ಲಿಂ ಮುಖಂಡರಾದ ಜಫ್ರುಲ್ಲಾ ಖಾನ್‌, ಟಿಂಬರ್‌ ನಯಾಜ್‌, ಅಸ್ಲಾಂ, ರಫೀಕ್‌, ಯೂಸೀನ್‌, ಶಾಹಿರಾಬ್‌, ಮಲ್ಲಿಗೆರೆ ಮುದಾಸಿರ್‌, ಶಬ್ಬೀರ್‌ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.

ರಾಜ್ಯದಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಉತ್ತಮ ಕಾರ್ಯಗಳನ್ನು ಮಾಡಿದ್ದರೆ ಮೋದಿಯವರ ಯಾತ್ರೆ ಬೇಕಿರಲಿಲ್ಲ. ಯುಡಿಯೂರಪ್ಪರ ಕಥೆ ಪಕ್ಷದಲ್ಲಿ ಮುಗಿದ ಅಧ್ಯಾಯ. ಬೊಮ್ಮಾಯಿ ಬೊಂಬೆಯಂತಾಗಿದ್ದಾರೆ. ಬಿಜೆಪಿಗೆ ಭವಿಷ್ಯವಿಲ್ಲ. ಹಾಗಾಗಿ ಎಲ್ಲ ಅಲ್ಪಸಂಖ್ಯಾತರು ಜೆಡಿಎಸ್‌ನ್ನು ಬೆಂಬಲಿಸಬೇಕು. ಜೆಡಿಎಸ್‌ ಒಂದೇ ಅಲ್ಪಸಂಖ್ಯಾತರಿಗೆ ಇರುವ ಏಕೈಕ ಪಕ್ಷ.

ಸಿ.ಎಂ.ಇಬ್ರಾಹಿಂ ಜೆಡಿಎಸ್‌ ರಾಜ್ಯಾಧ್ಯಕ್ಷ