ಹಾಸನ (ಅ.06):  ಜೆಡಿಎಸ್‌ನಿಂದಾಗಿ ಅಧಿಕಾರ ಅನುಭವಿಸಿರುವ ಸಿದ್ದರಾಮಯ್ಯ ಅವರು ಇದೀಗ ಜೆಡಿಎಸ್‌ ಬಗ್ಗೆ ಕೀಳಾಗಿ ಮಾತನಾಡುವ ನೈತಿಕತೆ ಉಳಿಸಿಕೊಂಡಿಲ್ಲ ಎಂದು ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌.ಕೆ.ಕುಮಾರಸ್ವಾಮಿ ಪ್ರತ್ಯಸ್ತ್ರ ಬಳಸಿದ್ದಾರೆ.

ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರು ಈ ಹಿಂದೆ ಉಪ ಮುಖ್ಯಮಂತ್ರಿಯಾಗಿದ್ದು ಜೆಡಿಎಸ್‌ನಿಂದಾಗಿ. ಹಾಗಾಗಿ ಜೆಡಿಎಸ್‌ ಪಕ್ಷ ಸಿದ್ದರಾಮಯ್ಯ ಅವರನ್ನು ಹೆಗಲ ಮೇಲೆ ಹೊತ್ತು ಸಲಹಿದೆ. ಸಮ್ಮಿಶ್ರ ಸರ್ಕಾರ ರಚನೆಗೆ ಕಾಂಗ್ರೆಸ್‌ನವರೇ ಜೆಡಿಎಸ್‌ ಹತ್ತಿರ ಬಂದಿದ್ದು. ಆದರೆ, ಸರ್ಕಾರ ರಚನೆಯಾದ ನಂತರದಲ್ಲಿ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದರೂ ಸರಿಯಾಗಿ ಸರ್ಕಾರ ನಡೆಸಲು ಬಿಡಲೇ ಇಲ್ಲ. ಹೀಗೆಲ್ಲಾ ಇರುವಾಗ ಜೆಡಿಎಸ್‌ ಬಗ್ಗೆ ಟೀಕೆ ಮಾಡುವ ಯಾವ ನೈತಿಕತೆ ಸಿದ್ದರಾಮಯ್ಯ ಅವರಿಗುಳಿದಿದೆ ಎಂದು ಪ್ರಶ್ನಿಸಿದರು.

ನರೇಂದ್ರ ಮೋದಿಯೇ ಆಫರ್ ಮಾಡಿದ್ದರು: ಹೊಸ ಬಾಂಬ್ ಸಿಡಿಸಿದ ಕುಮಾರಸ್ವಾಮಿ .

ಎಚ್‌.ಡಿ.ಕುಮಾರಸ್ವಾಮಿ ಅವರು ಕಣ್ಣೀರು ಹಾಕುವ ಬಗ್ಗೆ ಪದೇಪದೇ ಟೀಕೆ ಮಾಡುವ ಸಿದ್ದರಾಮಯ್ಯ ಅವರಿಗೆ ಕುಮಾರಸ್ವಾಮಿ ಅವರ ಮಾತೃ ಹೃದಯ ಹೇಗೆ ಅರ್ಥವಾಗಬೇಕು. ಜನರ ನೋವಿಗೆ ಸ್ಪಂದಿಸುವ ಕುಮಾರಸ್ವಾಮಿ ಅವರು ಕೆಲವೊಮ್ಮೆ ಭಾವುಕತೆಗೆ ಒಳಗಾಗುತ್ತಾರೆ. ಈ ಸಂದರ್ಭದಲ್ಲಿ ಕಣ್ಣೀರು ಹಾಕುವ ಕುಮಾರಸ್ವಾಮಿಯವರ ಹೃದಯವಂತಿಕೆ ಸಿದ್ದರಾಮಯ್ಯ ಅವರಂಥ ಕಲ್ಲು ಹೃದಯದವರಿಗೆ ಹೇಗೆ ಅರ್ಥವಾಗುತ್ತದೆ ಎಂದು ಟೀಕಿಸಿದರು.

ಇದೀಗ ಕಾಂಗ್ರೆಸ್‌ ರಾಜ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್‌ ಮನೆ ಮೇಲೆ ನಡೆದಿರುವ ಸಿಬಿಐ ದಾಳಿಯ ಕಾರಣ ಗೊತ್ತಿಲ್ಲ. ಯಾವ ಕಾರಣಕ್ಕಾಗಿ ಈ ದಾಳಿ ನಡೆಸಲಾಗಿದೆ ಎನ್ನುವುದನ್ನು ಸ್ಪಷ್ಟಪಡಿಸಬೇಕು ಎಂದು ಒತ್ತಾಯಿಸಿದರು.