ಹದಿನೈದು ವರ್ಷಗಳ ಕಾಲ ವೀರಶೈವ ಸಮುದಾಯವನ್ನು ವಿರೋಧಿಸುತ್ತಲೇ ಬಂದಿದ್ದ ಜೆಡಿಎಸ್‌ ತಾಲೂಕಿನ ನಾಯಕರಿಗೆ ಈಗ ವೀರಶೈವರ ಮೇಲೆ ಎಲ್ಲಿಲ್ಲದ ಪ್ರೀತಿ ಬಂದಿದೆ ಎಂದು ತಾಲೂಕು ಬಿಜೆಪಿ ಸಂಘಟನಾ ಕಾರ್ಯದರ್ಶಿ ವಿ.ಬಿ.ಸುರೇಶ್‌ ವ್ಯಂಗ್ಯವಾಡಿದ್ದಾರೆ.

 ತುರುವೇಕೆರೆ: ಹದಿನೈದು ವರ್ಷಗಳ ಕಾಲ ವೀರಶೈವ ಸಮುದಾಯವನ್ನು ವಿರೋಧಿಸುತ್ತಲೇ ಬಂದಿದ್ದ ಜೆಡಿಎಸ್‌ ತಾಲೂಕಿನ ನಾಯಕರಿಗೆ ಈಗ ವೀರಶೈವರ ಮೇಲೆ ಎಲ್ಲಿಲ್ಲದ ಪ್ರೀತಿ ಬಂದಿದೆ ಎಂದು ತಾಲೂಕು ಬಿಜೆಪಿ ಸಂಘಟನಾ ಕಾರ್ಯದರ್ಶಿ ವಿ.ಬಿ.ಸುರೇಶ್‌ ವ್ಯಂಗ್ಯವಾಡಿದ್ದಾರೆ.

ಪತ್ರಕರ್ತರೊಂದಿಗೆ ಮಾತನಾಡಿದ ಅವರು ಹದಿನೈದು ವರ್ಷಗಳ ಕಾಲ ಜೆಡಿಎಸ್‌ ನಿಂದ ಶಾಸಕರಾಗಿದ್ದ ಎಂ.ಟಿ.ಕೃಷ್ಣಪ್ಪನವರು ತಮ್ಮ ಅವಧಿಯಲ್ಲಿ ವೀರಶೈವ ಸಮುದಾಯಕ್ಕೆ ಅನ್ಯಾಯವನ್ನೇ ಮಾಡಿಕೊಂಡು ಬಂದರು. ಮಲತಾಯಿ ಧೋರಣೆಯನ್ನೇ ಮಾಡಿದರು. ವೀರಶೈವ ಸಮುದಾಯ ಇರುವ ದಂಡಿನಶಿವರ ಮತ್ತು ಕಸಬಾ ಹೋಬಳಿಗೆ ಯಾವುದೇ ಅಭಿವೃದ್ಧಿ ಕಾರ್ಯ ಮಾಡಲಿಲ್ಲ. ಕನಿಷ್ಠ ಮೂಲಭೂತ ಸೌಲಭ್ಯವನ್ನೂ ಸಹ ನೀಡಲಿಲ್ಲ ಎಂದು ದೂರಿದರು.

ಶಾಸಕರಾಗಿದ್ದ ಎಂ.ಟಿ.ಕೃಷ್ಣಪ್ಪನವರನ್ನು ವೀರಶೈವ ಸಮುದಾಯದವರು ಭೇಟಿ ಮಾಡಿ, ತಮ್ಮ ಗ್ರಾಮಕ್ಕೆ ಆಗಬೇಕಿರುವ ಅಭಿವೃದ್ಧಿ ಕಾರ್ಯಗಳ ಬಗ್ಗೆ ಕೇಳಿದ ವೇಳೆ ಮುಖಕ್ಕೆ ಹೊಡೆದಂತೆ ಹೇಳಿ ಕಳಿಸಿದ್ದಾರೆ. ಅಲ್ಲದೇ ತಮಗೆ ಮತ ನೀಡದೇ ಇರುವ ಕಾರಣ ಕಾಮಗಾರಿ ಮಾಡಲು ಸಾಧ್ಯವಿಲ್ಲ ಎಂದು ನೇರವಾಗಿ ಹೇಳಿ ಕಳಿಸಿರುವ ಉದಾಹರಣೆಗಳೂ ಇವೆ ಎಂದು ವಿ.ಬಿ.ಸುರೇಶ್‌ ಆರೋಪಿಸಿದರು.

ವಿಧಿ ಇಲ್ಲ: ಬರುವ ಚುನಾವಣೆಯಲ್ಲಿ ಜೆಡಿಎಸ್‌ ಕೇವಲ ಒಕ್ಕಲಿಗರ ಮತವನ್ನೇ ನಂಬಿಕೊಂಡಿತ್ತು. ಆದರೆ, ಬಹುಪಾಲು ಒಕ್ಕಲಿಗರು ಬಿಜೆಪಿ ಮತ್ತು ಕಾಂಗ್ರೆಸ್‌ ಕಡೆ ಒಲವು ತೋರಿದ್ಧಾರೆ. ಅದನ್ನು ಸರಿದೂಗಿಸಿಕೊಳ್ಳಲು ಈಗ ವೀರಶೈವರ ಪರ ಮಾತನಾಡುತ್ತಿದ್ದಾರೆ. ಓಲೈಸಿಕೊಳ್ಳಲು ಇಲ್ಲದ ಕಸರತ್ತು ಮಾಡುತ್ತಿದ್ದಾರೆ. ಅಧಿಕಾರ ಇದ್ದಾಗ ವೀರಶೈವರಿಗೆ ಯಾವುದೇ ಸೌಲಭ್ಯ ನೀಡದ ಮಾಜಿ ಶಾಸಕ ಎಂ.ಟಿ.ಕೃಷ್ಣಪ್ಪನವರಾಗಲಿ, ಅವರ ಬೆಂಬಲಿಗರಾಗಲೀ ವೀರಶೈವರ ಅನುಕಂಪಗಳಿಸಲು ಸಾಧ್ಯವಿಲ್ಲ. ಬಹುಪಾಲು ವೀರಶೈವ ಸಮುದಾಯ ಬಿಜೆಪಿ ಪರವೇ ಇದೆ. ಅದನ್ನು ಭಂಗ ಮಾಡಲು ಯಾರಿಂದಲೂ ಸಾಧ್ಯವಿಲ್ಲ ಎಂದು ವಿ.ಬಿ.ಸುರೇಶ್‌ ಹೇಳಿದರು.

ಹಾಲಿ ಶಾಸಕ ಮಸಾಲಾ ಜಯರಾಮ್‌, ಜಾತಿ ಬೇಧವಿಲ್ಲದೇ ಎಲ್ಲ ಸಮುದಾಯಕ್ಕೂ ನ್ಯಾಯ ಒದಗಿಸಿದ್ದಾರೆ. ಕಳೆದ ಹದಿನೈದು ವರ್ಷಗಳಿಂದ ತುಳಿತಕ್ಕೆ ಒಳಗಾಗಿದ್ದ ದಂಡಿನಶಿವರ ಮತ್ತು ಕಸಬಾ ಹೋಬಳಿಗೆ ಇದ್ದ ಶಾಪ ವಿಮೋಚನೆ ಮಾಡಿದ್ದಾರೆ. ವೀರಶೈವ ಸಮುದಾಯ ಸಾರಾಸಗಟಾಗಿ ಬಿಜೆಪಿ ಕಡೆ ವಾಲಿರುವುದರಿಂದ ತಮಗೆ ಸೋಲು ಕಟ್ಟಿಟ್ಟಬುಟ್ಟಿಎಂಬ ಭಯದಿಂದ ವೀರಶೈವರ ಒಗ್ಗಟ್ಟನ್ನು ಒಡೆಯಲು ಹೊಂಚು ಹಾಕುತ್ತಿದ್ದಾರೆ ಎಂದು ವಿ.ಬಿ.ಸುರೇಶ್‌ ದೂರಿದರು.

ಗೆಲುವು ನಿಶ್ಚಿತ: ಹರಿಕಾರನಹಳ್ಳಿ ಹಾಲು ಸಹಕಾರ ಸಂಘದ ಮಾಜಿ ಅಧ್ಯಕ್ಷ ಪ್ರಸಾದ್‌ ಮಾತನಾಡಿ, ಜೆಡಿಎಸ್‌ನ ಮಾಜಿ ಶಾಸಕರಾಗಿರುವ ಎಂ.ಟಿ.ಕೃಷ್ಣಪ್ಪನವರು ಎಂದೆಂದೂ ವೀರಶೈವರ ವಿರೋಧಿಯೇ, ವೀರಶೈವ ಸಮುದಾಯಕ್ಕೆ ಮಾಡಿದ ಅನ್ಯಾಯ ಬಹಿರಂಗ ಚರ್ಚಿಸಲು ಸಿದ್ಧವೆಂದು ಸವಾಲು ಹಾಕಿದರು.

ಜೆಡಿಎಸ್‌ ನವರು ಏನೇ ಕುತಂತ್ರ ಮಾಡಿದರೂ ಮುಂಬರುವ ಚುನಾವಣೆಯಲ್ಲಿ ಎಂದಿನಂತೆ ವೀರಶೈವ ಸಮುದಾಯ ಬಿಜಿಪಿಯ ಪರ ನಿಲ್ಲುವುದು. ಸಹಜವಾಗೇ ಬಿಜೆಪಿಯ ಅಭ್ಯರ್ಥಿಯಾಗಲಿರುವ ಮಸಾಲಾ ಜಯರಾಮ್‌ ಗೆಲುವು ಸಹ ನಿಶ್ಚಿತ ಎಂದರು.

ಭ್ರಮನಿರಸನ: ತಾಲೂಕು ಬಿಜೆಪಿ ಅಧ್ಯಕ್ಷ ಕಲ್ಕೆರೆ ಮೃತ್ಯುಂಜಯ ಮಾತನಾಡಿ, ಜೆಡಿಎಸ್‌ಗೆ ತಮ್ಮ ಸೋಲು ನಿಶ್ಚಿತ ಎಂಬ ಭಯ ಆರಂಭವಾಗಿದೆ. ಹಾಗಾಗಿ, ಬಿಜೆಪಿಯ ಬಗ್ಗೆ ಇಲ್ಲದ ಅಪಪ್ರಚಾರ ಮಾಡುತ್ತಿದ್ದಾರೆ. ಹಾಲಿ ಶಾಸಕರಾಗಿರುವ ಮಸಾಲಾ ಜಯರಾಮ್‌ ರವರು ಎಲ್ಲ ಸಮುದಾಯಕ್ಕೆ ಬೇಕಾಗಿರುವ ವ್ಯಕ್ತಿಯಾಗಿದ್ದಾರೆ. ಎಲ್ಲ ಸಮುದಾಯಕ್ಕೂ ನ್ಯಾಯ ಒದಗಿಸಿದ್ದಾರೆ. ಎಲ್ಲರನ್ನೂ ಬಹಳ ಗೌರವದಿಂದ ಕಾಣುತ್ತಾರೆ. ಮಾತನಾಡಿಸುತ್ತಾರೆ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡಿದ್ದಾರೆ. ಕಳೆದ ಬಾರಿಗಿಂತ ಈ ಬಾರಿ ಹೆಚ್ಚು ಮತ ಪಡೆಯುವ ಮೂಲಕ ಜಯಗಳಿಸಲಿದ್ದಾರೆ ಎಂದು ಮೃತ್ಯುಂಜಯ ಭವಿಷ್ಯ ನುಡಿದರು.

ತಾಲೂಕು ಯುವ ಮೋರ್ಚಾ ಅಧ್ಯಕ್ಷ ಹಟ್ಟಿಹಳ್ಳಿ ಗೌರೀಶ್‌, ಪ್ರ.ಕಾ. ನಿಂಗರಾಜ್‌ಗೌಡ, ಅಮ್ಮಸಂದ್ರ ಭರತ್‌, ನಾಗಲಾಪುರ ಮಂಜುನಾಥ್‌, ಹರಿಕಾರನಹಳ್ಳಿ ಸಿದ್ದಪ್ಪಾಜಿ, ಯಾದವ ಮುಖಂಡ ದೊಂಬರನಹಳ್ಳಿ ಬಸವರಾಜು, ಮಾದಿಹಳ್ಳಿ ಗ್ರಾ.ಪಂ. ಮಾಜಿ ಅಧ್ಯಕ್ಷ ಬೊಮ್ಮಲಿಂಗಯ್ಯ, ಕೊಡಿಗೇಹಳ್ಳಿ ಗ್ರಾ.ಪಂ. ಸದಸ್ಯ ಆದಿತ್ಯ, ದಯಾನಂದ್‌, ತೀರ್ಥಕುಮಾರ್‌, ಪ.ಪಂ. ಮಾಜಿ ಅಧ್ಯಕ್ಷ ಆಂಜನ್‌ ಕುಮಾರ್‌ ಸೇರಿದಂತೆ ಹಲವಾರು ಮುಖಂಡರು ಉಪಸ್ಥಿತರಿದ್ದರು.